ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) 15,000 ಹುದ್ದೆಗಳಿಗೆ Exam for Teaching Post ಮೇ 21 ಮತ್ತು 22ರಂದು ನಡೆಯುವ ಪರೀಕ್ಷೆಗೆ ಶಿಕ್ಷಣ ಇಲಾಖೆ Department of Education ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಕಟ್ಟು ನಿಟ್ಟಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ Minister B C Nagesh ತಿಳಿಸಿದರು.
‘ಮಂಗಳವಾರ (ಮೇ 10) ವಿಧಾನಸೌಧದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಸಮಾಜ ವಿಜ್ಞಾನ, ಗಣಿತ, ಇಂಗ್ಲೀಷ್ ಮತ್ತು ಜೀವ ವಿಜ್ಞಾನ ಶಿಕ್ಷಕರ 15 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. 1.06 ಲಕ್ಷ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ ಒಟ್ಟು 435 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ. ಯಾವುದೇ ಲೋಪ-ದೋಷಗಳು ಉಂಟಾಗದಂತೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಇನ್ನಿತರ ಇಲಾಖೆಗಳ ಅಧಿಕಾರಿಗಳ ಜೊತೆ ವಿವಿಧ ಹಂತಗಳಲ್ಲಿ ಸಭೆ ನಡೆಸಲಾಗಿದೆ. ಮಂಗಳವಾರದಂದು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆಯು ಸಭೆ ನಡೆಸಿ ಚರ್ಚಿಸಲಾಗಿದೆ’ ಎಂದು ಸಚಿವರು ಮಾಹಿತಿ ನೀಡಿದರು.
‘ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಒಂದು ತಾಸು ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಅಭ್ಯರ್ಥಿಗಳನ್ನು ಎರಡು ಹಂತದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಒಂದು ಹಂತದಲ್ಲಿ ಪೊಲೀಸರು ಹಾಗೂ ಮತ್ತೊಂದು ಹಂತದಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ಮೊಬೈಲ್ ಫೋನ್, ಬ್ಲೂಟೂತ್, ಕೈ ಗಡಿಯಾರ, ಸ್ಮಾರ್ಟ್ ವಾಚ್, ಸ್ಮಾರ್ಟ್ ಬ್ಯಾಂಡ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಅಭ್ಯರ್ಥಿಗಳು ಸಮಯವನ್ನು ನೋಡಿಕೊಳ್ಳಲು ಎಲ್ಲ ಕೊಠಡಿಗಳಲ್ಲಿ ‘ಗೋಡೆ ಗಡಿಯಾರ’ ಹಾಕಲಾಗುತ್ತದೆ’ ಎಂದು ಸಚಿವರು ತಿಳಿಸಿದರು.
‘ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಪ್ರತಿ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ 20 ಅಭ್ಯರ್ಥಿಗಳಿರುತ್ತಾರೆ. ಅಭ್ಯರ್ಥಿಗಳು ಯಾವುದೇ ಊಹ-ಪೋಹಗಳಿಗೆ ಕಿವಿಗೊಡದೆ ನೆಮ್ಮದಿಯಿಂದ ಪರೀಕ್ಷೆ ಬರೆಯಬೇಕು’ ಎಂದು ಸಚಿವರು ಹೇಳಿದರು.
‘ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪಾಲಿಸಬೇಕಾದ ಸೂಚನೆಗಳನ್ನು ಪ್ರವೇಶಪತ್ರದಲ್ಲಿ ತಿಳಿಸಲಾಗುತ್ತದೆ. ಎಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ಇನ್ನಿತರ ನಿಷೇಧಿತ ವಸ್ತು, ಸಾಧನಗಳನ್ನು ಅಭ್ಯರ್ಥಿಗಳು ಹೊಂದಿಲ್ಲ ಎಂಬುದನ್ನು ಪತ್ತೆ ಮಾಡಲು ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಮೆಟಿಲ್ ಡಿಟೆಕ್ಟರ್ ಬಳಸಲಾಗುತ್ತದೆ’ ಎಂದು ಸಚಿವರು ತಿಳಿಸಿದರು.
‘ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ತಹಸೀಲ್ದಾರ್ ಮೇಲ್ಪಟ್ಟು ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗುತ್ತದೆ’ ಎಂದು ಸಚಿವರು ತಿಳಿಸಿದರು.
‘ಪರೀಕ್ಷಾ ಕೇಂದ್ರದ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ವಿಚಕ್ಷಣಾ ದಳಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಅಧಿಕಾರಿಗಳ ಜೊತೆಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುತ್ತದೆ’ ಎಂದು ಸಚಿವರು ತಿಳಿಸಿದರು.
Also read: ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ದಾಖಲೆಯ ಕಾಣಿಕೆ ಹಣ ಸಂಗ್ರಹ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳ ಜೊತೆ ಇತ್ತೀಚೆಗೆ ನಡೆದ ಸಭೆಯಲ್ಲೂ ಶಿಕ್ಷಕರ ನೇಮಕ ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ, ಲೋಪ-ದೋಷಗಳು ಆಗದಂತೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಮೇ 16ರಿಂದ ಕಲಿಕಾ ಚೇತರಿಕೆಯೊಂದಿಗೆ ಶಾಲೆಗಳು ಆರಂಭ:
ರಾಜ್ಯದಲ್ಲಿ ಮೇ 16ರಿಂದ ‘ಕಲಿಕಾ ಚೇತರಿಕೆ’ಯೊಂದಿಗೆ ಶಾಲೆಗಳು ಆರಂಭವಾಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ನಾಗೇಶ್ ಅವರು ತಿಳಿಸಿದರು.
ಕೋವಿಡ್ ಕಾರಣ 2 ವರ್ಷಗಳಿಂದ ಉಂಟಾಗಿರುವ ಕಲಿಕಾ ಹಿನ್ನಡೆಯಲ್ಲಿ ಸರಿದೂಗಿಸಲು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇತರ ರಾಜ್ಯಗಳಿಗೂ ಕರ್ನಾಟಕದ ಯೋಜನೆ ಮಾದರಿಯಾಗಿದೆ. ಕಲಿಕಾ ಚೇತರಿಕೆ ಯೋಜನೆಯು ವರ್ಷವಿಡೀ ನಡೆಯಲಿದೆ. ಈ ಹಿನ್ನೆಲೆಯಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಲಾಗಿದೆ ಎಂದು ಸಚಿವ ನಾಗೇಶ್ ತಿಳಿಸಿದರು.
ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಅನುಷ್ಠಾನಗೊಳಿಸಲು ಅಗತ್ಯವಾದ ಸಂಪನ್ಮೂಲಗಳನ್ನು (ವಿದ್ಯಾರ್ಥಿಗಳಿಗೆ ಕಲಿಕಾ ಹಾಳೆ ಮತ್ತು ಶಿಕ್ಷಕರ ಕೈಪಿಡಿ) ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಅಲ್ಲದೇ, ಶಿಕ್ಷಣ ಸಂಸ್ಥೆಗಳು ಬಯಸಿದರೆ ಅಗತ್ಯ ತರಬೇತಿಯನ್ನು ನೀಡಲು ಶಿಕ್ಷಣ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ’ ಎಂದು ಸಚಿವರು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಮೇ ಮೂರನೇ ವಾರದಲ್ಲಿ ಪ್ರಕಟಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post