ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಾನಸಿಕ ರೋಗಿಗಳ ನೆರವಿಗಾಗಿ ರಾಜ್ಯದಲ್ಲಿ ಆರಂಭಿಸಿದ ʼಮೆಂಟಲ್ ಹೆಲ್ತ್ ಇನೀಶಿಯೇಟಿವ್ʼ ಅನ್ನು ಕೇಂದ್ರ ಸರ್ಕಾರ ಮೆಚ್ಚಿದ್ದು, ದೇಶದಾದ್ಯಂತ ಈ ಕಾರ್ಯಕ್ರಮವನ್ನು ಜಾರಿ ಮಾಡುವುದಾಗಿ ಘೋಷಿಸಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ನಿಮ್ಹಾನ್ಸ್ ಸಂಸ್ಥೆಯನ್ನು ಅಭಿನಂದಿಸುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ Minister Sudhakar ಹೇಳಿದರು.
ನಿಮ್ಹಾನ್ಸ್‌ನಲ್ಲಿ ವಿಶ್ವ ಮೆದುಳು ಆರೋಗ್ಯ ದಿನ ಹಾಗೂ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ʼಬ್ರೈನ್ ಹೆಲ್ತ್ ಕ್ಲಿನಿಕ್ʼ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ಮಾಡಿದ ವೈದ್ಯರಿದ್ದಾರೆ. ಮಾನಸಿಕ ರೋಗಿಗಳು ಇವರ ಬಳಿ ಬಂದಾಗ ಚಿಕಿತ್ಸೆ ನೀಡಲು ವಿಶೇಷ ತರಬೇತಿ ಬೇಕು. ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ನಿಮ್ಹಾನ್ಸ್‌ನ ತಜ್ಞರು ಈಗಾಗಲೇ 100 ವೈದ್ಯರಿಗೆ ತರಬೇತಿ ನೀಡಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಮಾನಸಿಕ ರೋಗಿಗಳು ನೇರವಾಗಿ ನಿಮ್ಹಾನ್ಸ್‌ಗೆ ಬರದೇ ಸ್ಥಳೀಯ ಮಟ್ಟದಲ್ಲೇ ಸೇವೆ ಪಡೆಯಬಹುದು ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುವವರು, ಅನುತ್ತೀರ್ಣರಾದವರು ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದು ಕಂಡುಬಂದಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಮೂರು ದಿನ ಮುನ್ನ ಕೌನ್ಸಿಲಿಂಗ್ ಮಾಡುವಂತೆ ಆರೋಗ್ಯ ಇಲಾಖೆಯ ಆಯುಕ್ತರಿಗೆ ಸೂಚಿಸಲಾಯಿತು. ಎಷ್ಟೋ ವಿದ್ಯಾರ್ಥಿಗಳು ಈ ಸೇವೆ ಪಡೆದಿದ್ದಾರೆ. ಇದಕ್ಕಾಗಿ ಇಲಾಖೆಯನ್ನು ಅಭಿನಂದಿಸುತ್ತೇನೆ ಎಂದರು.

Also read: ಅಣ್ಣಾಹಜಾರೆ ಹೋರಾಟ ಸಮಿತಿಯ ಅಶೋಕ್ ಯಾದವ್ ವಿಧಿವಶ
ಒಬ್ಬ ವ್ಯಕ್ತಿಗೆ ಕೇವಲ ದೈಹಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಾಲುವುದಿಲ್ಲ. ಮಾನಸಿಕ ಆರೋಗ್ಯ ಕೂಡ ಮುಖ್ಯವಾಗುತ್ತದೆ. ಮೆದುಳಿನ ಆರೋಗ್ಯ ನಮ್ಮ ನಡವಳಿಕೆ, ಅಭಿಪ್ರಾಯ ವ್ಯಕ್ತಪಡಿಸುವುದು, ನಗುವುದು, ಅಳುವುದು, ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸಲು ಮೆದುಳು ಅಗತ್ಯ. ನೆನಪು ಎನ್ನುವುದು ಸುಂದರವಾದ ಅನುಭವ. ಆ ನೆನಪನ್ನು ಹಿಡಿದಿಟ್ಟುಕೊಳ್ಳುವುದೇ ಮೆದುಳು. ನೆನಪಿನ ಶಕ್ತಿ ಇಲ್ಲದಿದ್ದರೆ ಭವಿಷ್ಯ ಸಂಪೂರ್ಣ ಮಂಕಾಗಿಬಿಡುತ್ತದೆ. ದೇಹದ ಎಲ್ಲಾ ಅಂಗಗಳು ಉತ್ತಮವಾಗಿರಲು ಮೆದುಳು ಮುಖ್ಯ. ಇದಕ್ಕಾಗಿ ಸದಾ ಕ್ರೀಯಾಶೀಲವಾಗಿರಬೇಕು. ಆಹಾರ ಸೇವನೆ, ವ್ಯಾಯಾಮ ಮೊದಲಾದವುಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕೆ ಕನಿಷ್ಠ 6-8 ಗಂಟೆ ನಿದ್ದೆ ಮಾಡಬೇಕಾಗುತ್ತದೆ. ನಿದ್ರಾಹೀನತೆ ಉಂಟಾದರೆ ಆರೋಗ್ಯವೂ ಕೆಡುತ್ತದೆ. ಈ ಬಗ್ಗೆ ಜನರಲ್ಲಿ ಅರಿವು ಅಗತ್ಯ ಎಂದರು.

ಸಚಿವರು ಹೇಳಿದ ಇತರೆ ಅಂಶಗಳು:
ನಿಮ್ಹಾನ್ಸ್ ಸಂಸ್ಥೆ ಇಡೀ ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಿದ್ದು, ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಜನರು ಕೂಡ ಇದೇ ಆಸ್ಪತ್ರೆಗೆ ಬರುತ್ತಿದ್ದಾರೆ. ಇಲ್ಲಿ ಟ್ರಾಮಾ ಸೆಂಟರ್ ಆರಂಭಿಸುವ ಕುರಿತು ಕೇಂದ್ರ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ʼನಮ್ಮ ಕ್ಲಿನಿಕ್ʼ ಮೂಲಕ ಎಲ್ಲರಿಗೂ ಪ್ರಾಥಮಿಕ ಆರೋಗ್ಯ ಸೇವೆ ನೀಡಲಿದೆ.
ಖಾಸಗಿ ಆಂಬ್ಯುಲೆನ್ಸ್ ದರ ಪರಿಷ್ಕರಣೆ ಮಾಡುವ ಅಧಿಕಾರ ಸಾರಿಗೆ ಇಲಾಖೆಗಿದೆ. ರೋಗಿಗಳಿಗೆ ದುಂದು ವೆಚ್ಚವಾದರೆ ಕಡಿವಾಣ ಹಾಕಲಾಗುವುದು. ಈ ಬಗ್ಗೆ ಸಾರಿಗೆ ಸಚಿವರು ಹಾಗೂ ಅಧಿಕಾರಿಗಳ ಬಳಿ ಚರ್ಚಿಸಲಾಗುವುದು. ಬೇಕಾಬಿಟ್ಟಿ ದರ ನಿಗದಿ ಮಾಡುವುದನ್ನು ಸರ್ಕಾರ ಒಪ್ಪುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	



 Loading ...
 Loading ... 
							



 
                
Discussion about this post