ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ದೇಶ ಹಾಗೂ ಧರ್ಮಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸುವುದು ಅಗತ್ಯವಾಗಿದ್ದು, ಈ ರೀತಿ ಮಾತೃಭೂಮಿಗಾಗಿ ದುಡಿಯುವವರಿಗೆ ಸಹಾಯ ಮಾಡಿ ಬೆನ್ನೆಲುಬಾಗಿ ಪ್ರತಿಯೊಬ್ಬರೂ ನಿಲ್ಲಬೇಕು ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರು ಕರೆ ನೀಡಿದರು.
ಸಿದ್ದಾರೂಢ ನಗರದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದ Shri Raghavendra Swamy mutt ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಅನುಗ್ರಹ ಸಂದೇಶ ನೀಡಿದರು.
ದೇಶ ಹಾಗೂ ಧರ್ಮ ರಕ್ಷಣೆ ಅತ್ಯಂತ ಅಗತ್ಯವಾಗಿದ್ದು, ಇದಕ್ಕಾಗಿ ದುಡಿಯುವವರಿಗೆ ಪ್ರತಿಯೊಬ್ಬರೂ ಸಹಾಯ ಮಾಡಬೇಕು. ಎಲ್ಲರೂ ತನ್ನತನವನ್ನು ಬಿಟ್ಟು ಮಾತೃಭೂಮಿಗಾಗಿ ದೇಹತ್ಯಾಗ ಮಾಡಲೂ ಸಿದ್ದರಾಗಬೇಕು. ಇದನ್ನೇ ರಾಯರ ಸ್ತೋತ್ರದಲ್ಲೂ ಹೇಳಲಾಗಿದೆ. ನಮ್ಮಿಂದ ರಾಯರಿಗೆ ಆಗಬೇಕಾದ್ದು ಏನೂ ಇಲ್ಲ. ಬದಲಾಗಿ, ರಾಯರಿಂದ ನಮಗೆ ಹಾಗೂ ದೇಶಕ್ಕೆ ಅನುಕೂಲವಾಗಬೇಕಿದೆ. ಹೀಗಾಗಿ, ಅವರ ಜೀವನ ಸಂದೇಶವನ್ನು ಪಾಲಿಸಬೇಕಿದೆ ಎಂದು ಕರೆ ನೀಡಿದರು.
ಲೋಕದ ಕೈ ಹಿಡಿಯುವುದಕ್ಕಾಗಿ ತಮ್ಮ ಸಕಲನ್ನೂ ತ್ಯಾಗ ಮಾಡಿದ ಗುರು ರಾಯರ ಮುಂದೆ ಲೌಖಿಕ ಭಾವನೆ ಬದಿಗಿಟ್ಟು ಯಾರು ಪ್ರಾರ್ಥಿಸಿದರೂ ಅವರ ಅನುಗ್ರಹ ದೊರೆಯುವುದು ನಿಶ್ಚಿತ.
-ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರು
ರಾಘವೇಂದ್ರ ಸ್ವಾಮಿಗಳ ಸ್ತೋತ್ರದ `ಅಪರೋಕ್ಷಿ’ ಎಂಬುದು ಒಳಗಿನ ಸಮ್ಮಿತಿಯ ಅನುಗ್ರಹ ಎಂಬುದನ್ನು ಸಾರುತ್ತದೆ. ಸ್ವಚ್ಛ ಮನಸ್ಸಿನ ಭಕ್ತಿಯಿಂದ ಯಾರು ರಾಯರನ್ನು ಪ್ರಾರ್ಥಿಸುತ್ತಾರೋ ಅವರು ಇದ್ದಲ್ಲಿಗೇ ಬಂದು ಅನುಗ್ರಹ ಮಾಡುತ್ತಾರೆ. ದೇವರೊಂದಿಗೆ ನೇರವಾಗಿ ಸಂಭಾಷಣೆ ಮಾಡುವ ಶಕ್ತಿಯುಳ್ಳ ಗುರುರಾಯರು, ಅನುಗ್ರಹ ಮಾಡುವವರಿಗೆ ಅದನ್ನು ತೆಗೆದುಕೊಳ್ಳುವ ಶಕ್ತಿಯಿದೆಯೇ ಎಂಬುದನ್ನು ಪರೀಕ್ಷಿಸುತ್ತಾರೆ ಎಂದರು.
Also read: ಕುಸಿಯುತ್ತಿರುವ ಮಾಧ್ಯಮಗಳ ಮೌಲ್ಯ: ಎಚ್ಚರಿಕೆಯಿಂದಿರಲು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಲಹೆ
ಪಾಜಕ ಕ್ಷೇತ್ರದ ಮಾಧವ ಉಪಾಧ್ಯಾಯ ಅವರು ಮಾತನಾಡಿ, ಮಧ್ವಮತದ ಸಂದೇಶವನ್ನು ಲೋಕಕ್ಕೆ ಸಾರುವ ಉಡುಪಿಯ ಅಷ್ಠ ಮಠಗಳ ಪರಂಪರೆ, ಸಾಧನೆ ಹಾಗೂ ಘನತೆ ಅಪಾರವಾದುದು. ಅಂತಹ ಅಷ್ಠ ಮಠಗಳಲ್ಲಿ ಒಂದಾದ ಅದಮಾರು ಮಠದ ಶ್ರೀಗಳು ಇಲ್ಲಿಗೆ ಆಗಮಿಸಿ ಅನುಗ್ರಹಿಸಿರುವುದು ಎಲ್ಲರ ಪುಣ್ಯ. ಎಲ್ಲರ ಶ್ರಮದಿಂದ ಭದ್ರಾವತಿಯ ಈ ಮಠದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶ್ರದ್ಧಾ ಕೇಂದ್ರವಾಗಿ ಬೆಳೆಯಲಿ ಎಂದರು.
ಗುರುಗಳ ಆಶೀರ್ವಾದ ಪಡೆದ ಶಾಸಕರು
ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಇಂದು ಸಿದ್ಧಾರೂಢ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರ ಆಶೀರ್ವಾದ ಪಡೆದರು.
ಇಂದು ಮುಂಜಾನೆ ಮಠಕ್ಕೆ ಭೇಟಿ ನೀಡಿದ ಶಾಸಕರು ಗುರುರಾಯರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆನಂತ ಸ್ವಾಮಿಗಳ ದರ್ಶನ ಪಡೆದು, ನಮನ ಸಲ್ಲಿಸಿ, ಆಶೀರ್ವಾದ ಪಡೆದರು.
ವಕೀಲರಾದ ಕೆ.ಎಸ್. ಸುಧೀಂದ್ರ, ಪ್ರಮುಖರಾದ ನಾಗರಾಜ್, ದಯಾವತಿ ವಿಜಯೇಂದ್ರ, ರಮಾಕಾಂತ್, ಶ್ರೀಮಠದ ಪ್ರಮುಖರಾದ ಶೇಷಗಿರಿ ಆಚಾರ್ ಅವರುಗಳು ಮಠ ನಡೆದುಬಂದ ಹಾದಿಯನ್ನು ನೆನೆದು, ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಇಂದು ಮುಂಜಾನೆಯಿಂದಲೇ ವಿಶ್ವಪ್ರಿಯ ತೀರ್ಥರಿಂದ ವಿಶೇಷ ಅಭಿಷೇಕ, ಪೂಜೆ ನಡೆಯಿತು. ನಂತರ ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಿದರು. ಶ್ರೀಮಠದ ಕಾರ್ಯಗಳಿಗೆ ಸಹಕಾರ ನೀಡಿದ ಹಲವರನ್ನು ಸ್ವಾಮಿಗಳು ಅಭಿನಂದಿಸಿದರು.
ಪ್ರಮುಖರಾದ ಗೋಪಾಲಾಚಾರ್, ಶ್ರೀನಿವಾಸಾಚಾರ್, ಜಗನ್ನಾಥ, ಪ್ರಧಾನ ಅರ್ಚಕರಾದ ವೆಂಕಟೇಶ್, ಗುರುರಾಜಾಚಾರ್, ಅಡುಗೆ ವಿಜಯೇಂದ್ರ, ರಾಘವೇಂದ್ರ, ಮಧುಸೂದನ್, ಮಾಧವಮೂರ್ತಿ, ಅನಂತು, ಸುಮಾ, ಶೇಷಗಿರಿ ಸೇರಿ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post