ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಭಾರತೀಯ ಪತ್ರಿಕೋದ್ಯಮ ಇಂದು ಸಂಕಷ್ಟದಲ್ಲಿದೆ. ಪತ್ರಿಕಾ ಸ್ವಾತಂತ್ರ‍್ಯ ಸಂಕಷ್ಟದಲ್ಲಿದೆ. ಪತ್ರಕರ್ತರ ಮೇಲೆ ವಿವಿಧ ಕ್ಷುಲ್ಲಕ ಕಾರಣಗಳಿಗೆ ಮೊಕದ್ದಮೆಗಳನ್ನು ದಾಖಲು ಮಾಡಲಾಗುತ್ತಿದೆ. ಅಲ್ಲದೆ ನೋಟೀಸ್ ನೀಡದೆ ಬಂಧಿಸಲಾಗುತ್ತಿದೆ ಹಾಗೂ ಬೆದರಿಸಲಾಗುತ್ತಿದೆ ಎಂದು ರೇಮನ್ ಮಾಗ್ಸಸೆ ಪ್ರಶಸ್ತಿ ವಿಜೇತ ಅಭಿವೃದ್ಧಿ ಪತ್ರಕರ್ತ ಪಿ. ಸಾಯಿನಾಥ್ ಆತಂಕ ವ್ಯಕ್ತಪಡಸಿದರು.
ಕುವೆಂಪು ವಿಶ್ವವಿದ್ಯಾಲಯದ Kuvempu University ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಏರ್ಪಡಿಸಿದ್ದ ಡಾ. ಶಾಂತಿನಾಥ ದೇಸಾಯಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, 200 ವರ್ಷಗಳ ಭಾರತೀಯ ಪತ್ರಿಕೋದ್ಯಮದ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಉಪನ್ಯಾಸ ನೀಡಿದರು.
ಭಾರತದಲ್ಲಿ ಮಾಧ್ಯಮಗಳನ್ನು ನಿಯಂತ್ರಿಸಲು 52 ಕಾಯ್ದೆಗಳು ಈಗಾಗಲೇ ಅಸ್ತಿತ್ವದಲ್ಲಿತ್ತು. ಇತ್ತೀಚೆಗೆ ಸಾಂಕ್ರಾಮಿಕ ರೋಗಗಳ ತಡೆ ಕಾಯಿದೆ ಮತ್ತು ವಿಪತ್ತು ನಿರ್ವಹಣೆ ಕುರಿತ ಕಾಯಿದೆಗಳನ್ನು ಪತ್ರಕರ್ತರ ಮೇಲೆ ದಾಖಲಿಸಿದ್ದು, ಪ್ರಸ್ತುತ ಅವುಗಳ ಸಂಖ್ಯೆ 62ರಷ್ಟಿದೆ. ಕೋವಿಡ್ ಕಾಲದಲ್ಲಿ ಉತ್ತರಪ್ರದೇಶದ ಗಂಗಾ ನದಿಯಲ್ಲಿ ಹೆಣಗಳು ತೇಲಿದ ವರದಿ ನೀಡಿದ ಮಾಧ್ಯಮಗಳಿಗೆ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಜಾಹೀರಾತು ನೀಡುವುದನ್ನು ನಿಲ್ಲಿಸಿದವು. ಆ ಮೂಲಕ ಅವುಗಳಿಗೆ ಮೂಗುದಾರ ಹಾಕಲಾಯಿತು.
ಕೋವಿಡ್‌ನ ಮೊದಲ 12 ತಿಂಗಳುಗಳಲ್ಲಿ ಭಾರತದ ಜಿ.ಡಿ.ಪಿ. ಶೇ. 7ರಷ್ಟು ಇಳಿಕೆಯಾಗಿದೆ ಎಂದು ಸರ್ಕಾರ ಹೇಳಿತು. ಆದರೆ ಇದೇ ಸಮಯದಲ್ಲಿ ಭಾರತೀಯ ಬಿಲಿಯನೇರ್‌ಗಳ ಸಂಪತ್ತಿನಲ್ಲಿ ಶೇ. 22ರಷ್ಟು ಏರಿಕೆಯಾಯಿತು. ಇವುಗಳ ತುಲನಾತ್ಮಕ ವರದಿಗಳು, ವಿಶ್ಲೇಷಣಗಳನ್ನು ಮುಖ್ಯವಾಹಿನಿ ಮಾಧ್ಯಮ ನೀಡುವುದೇ ಇಲ್ಲ ಎಂದು ಟೀಕಿಸಿದರು.
ಜಾಗತಿಕ ಪತ್ರಿಕಾ ಸ್ವಾತಂತ್ರ‍್ಯ ಸೂಚಿಯಲ್ಲಿ ಒಟ್ಟು 188 ದೇಶಗಳಲ್ಲಿ ಭಾರತ 142ನೇ ಸ್ಥಾನದಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ‍್ಯ ಅಪಾಯದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕ ಸೂಚಿಯಲ್ಲಿ 132 ಸೇರಿದಂತೆ ವಿವಿಧ ಮಾನದಂಡಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಆದರೆ ಬಿಲಿಯನೇರ್‌ಗಳ ಒಟ್ಟು ಸಂಖ್ಯೆಯಲ್ಲಿ ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದೆ. ಸಮಕಾಲೀನ ಕಾಲಘಟ್ಟದ ತಲ್ಲಣಗಳು ಮತ್ತು ಸಂಕಷ್ಟಗಳ ಪ್ರಕ್ರಿಯೆಗಳ ವರದಿಗಾರಿಕೆಯೇ ನಿಜವಾದ ಪತ್ರಿಕೋದ್ಯಮ. ಬೃಹತ್ ಪ್ರಮಾಣದಲ್ಲಿರುವ ಬೆಳೆದಿರುವ ಇಂದಿನ ಮಾಧ್ಯಮ ಆ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿಶಾದಿಸಿದರು.
Also read: ಮುಂಬರುವ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡು ಸಾಗಬೇಕು: ರಾಹುಲ್ ಗಾಂಧಿ
ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಮಹಾತ್ಮ ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್, ಬಾಲ ಗಂಗಾಧರ್ ತಿಲಕ್ ಸೇರಿದಂತೆ ಅನೇಕರು ಮಹಾನ್ ಪತ್ರಕರ್ತರಾಗಿದ್ದರು. ಪ್ರತಿದಿನವೂ ಸ್ವಾತಂತ್ರ ಹೋರಾಟ, ರಾಜಕೀಯ, ಸಾಮಾಜಿಕ ಸುಧಾರಣೆಗಳ ಕುರಿತು ಯತೇಚ್ಛವಾದ ಬರಹಗಳನ್ನು ಪ್ರಕಟಿಸುತ್ತಿದ್ದರು. ಅಂದು ಮಾಧ್ಯಮ ಬಹಳ ಸಣ್ಣ ಪ್ರಮಾಣದಲ್ಲಿತ್ತು ಆದರೆ ಅದು ಅಶಿಕ್ಷಿತರನ್ನೂ ಸೇರಿ ಎಲ್ಲರನ್ನು ತಲುಪುವ ಮೂಲಕ ಹೋರಾಟ, ಸುಧಾರಣೆಗಳಲ್ಲಿ ಭಾಗವಹಿಸಲು ಪ್ರೇರೇಪಿಸುತ್ತಿತ್ತು. ಆದರೆ ಇಂದು ಬೃಹತ್ ಅಗಿ ಬೆಳೆದಿರುವ ಮಾಧ್ಯಮ ತುಂಬಾ ಸಣ್ಣ ಪ್ರಮಾಣದಲ್ಲಿ ಸಮಾಜ ಸುಧಾರಣೆ ತರಲು ಆಗದೇ ಒದ್ದಾಡುತ್ತಿದೆ. ಸರ್ಕಾರಗಳ ತುತ್ತೂರಿಯಾಗಿದೆ. ಮಾಧ್ಯಮಗಳ ಕಾರ್ಪೋರೇಟ್ ಒಡೆತನ ಮತ್ತು ಸಂಪಾದಕ ಸ್ಥಾನಗಳಲ್ಲಿ ಕೇವಲ ಉನ್ನತ ಜಾತಿಯ ಜನರ ಏಕಸ್ವಾಮ್ಯತೆಯಿಂದಾಗಿ ಸಮಾಜದ ಜ್ವಲಂತ ಸಮಸ್ಯೆಗಳು ವರದಿಯಾಗುವುದಿಲ್ಲ. ಕೇವಲ ಶ್ರೀಮಂತರ, ಉಳ್ಳವರ ಸಂಬಂಧಿ ವಿಷಯಗಳು, ಅವರ ಅಗತ್ಯಗಳನ್ನು ಪೂರೈಸುವ ವರದಿಗಳನ್ನು ನೀಡುತ್ತಿರುವ ಮಾಧ್ಯಮಗಳು ಮ್ಯಾಕ್‌ಡೊನಾಲ್ಡೈಸೇಶನ್ ಪ್ರಕ್ರಿಯೆಗೆ ಒಳಗಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಡಾ. ನವೀನ್ ಕುಮಾರ್, ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಡಾ. ನಾಗ್ಯಾನಾಯ್ಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ. ಎನ್. ಮೋಹನ್, ವಿಭಾಗದ ಡಾ. ರೇಚಲ್ ಬಾರಿ, ಡಾ. ರಾಮ್ ಪ್ರಸಾದ್, ಡಾ. ಪೂರ್ಣಾನಂದ, ಡಾ. ವೀಣಾ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post