ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ರಾಜ್ಯ ಸರ್ಕಾರ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕಳೆದ ಜನವರಿ ತಿಂಗಳಿನಿಂದ ಜಾರಿಗೆ ತಂದಿರುವ ಎಚ್‌ಆರ್‌ಎಂಎಸ್ ವೇತನ ಪಾವತಿ ಪದ್ಧತಿಯನ್ನು ರದ್ಧುಪಡಿಸಬೇಕೆಂದು ಒತ್ತಾಯಿಸಿ ಕುವೆಂಪು ವಿಶ್ವವಿದ್ಯಾಲಯದ Kuvempu University ಅಧ್ಯಾಪಕೇತರ ನೌಕರರು ಗುರುವಾರ ವಿಶ್ವವಿದ್ಯಾಲಯದ ಆಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ ಊಟದ ವೇಳೆಯಲ್ಲಿ ಅಧ್ಯಾಪಕೇತರ ನೌಕರರ ಸಂಘದ ಪದಾಧಿಕಾರಿಗಳು ಮತ್ತು ನೌಕರರು ಪ್ರತಿಭಟನೆ ನಡೆಸಿ ಕುಲಸಚಿವೆ ಜಿ. ಅನುರಾಧ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಲಸಚಿವೆ ಜಿ. ಅನುರಾಧ ಮಾತನಾಡಿ, ಎಚ್‌ಆರ್‌ಎಂಎಸ್ ವೇತನ ಪಾವತಿ ಪದ್ಧತಿಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿ ತಿಂಗಳ ಆರಂಭದಲ್ಲಿಯೇ ವೇತನ ಪಾವತಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಆಡಳಿತವು ನಿರಂತರ ಪ್ರಯತ್ನ ನಡೆಸುತ್ತಿದ್ದು, ಸಂಘದ ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದರು.
Also read: ಪುಲ್ವಾಮಾದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸಿಬ್ಬಂದಿಯ ವೇತನ ಪಾವತಿಗೆ ಎಚ್‌ಆರ್‌ಎಂಎಸ್ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಪ್ರತಿ ತಿಂಗಳೂ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ ನೌಕರರ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ದುಸ್ತರವಾಗುತ್ತಿದೆ. ಇದಲ್ಲದೆ ಬ್ಯಾಂಕ್‌ಗಳಲ್ಲಿ ವೇತನಾಧಾರಿತ ಸಾಲಸೌಲಭ್ಯ ಪಡೆದಿದ್ದು, ನಿಗದಿತ ಸಮಯಕ್ಕೆ ಕಂತು ಪಾವತಿಯಾಗದೆ ಸಾಲದ ಹೊರೆ ಹೆಚ್ಚಾಗುತ್ತಿದೆ ಎಂದು ಸಂಘ ಪತ್ರದಲ್ಲಿ ಅರಿಕೆ ಮಾಡಿಕೊಂಡಿದೆ.
ಎಚ್‌ಆರ್‌ಎಂಎಸ್ ಪದ್ಧತಿ ವಿಶ್ವವಿದ್ಯಾಲಯದ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತಿದೆ. ಇದು ವಿಶ್ವವಿದ್ಯಾಲಯ ಸ್ಥಾಪನೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುತ್ತಿರುವುದಲ್ಲದೆ, ಶೈಕ್ಷಣಿಕ ಚಟುವಟಿಕೆಗಳಿಗೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆದ್ದರಿಂದ ವಿವಿಗಳಲ್ಲಿ ಹೊಸದಾಗಿ ಜಾರಿಗೆ ತಂದಿರುವ ಎಚ್‌ಆರ್‌ಎಂಎಸ್ ವೇತನ ಪಾವತಿ ಪದ್ಧತಿಯನ್ನು ರದ್ಧುಪಡಿಸುವಂತೆ ಮನವಿ ಮಾಡಿಕೊಂಡಿದೆ.
ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಅಬ್ದುಲ್ ಅಲಿ ಮತ್ತಿತರ ಪದಾಧಿಕಾರಿಗಳು, ಅಧ್ಯಾಪಕೇತರ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post