ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮದುವೆ ಎಂಬ ಬಾಂಧವ್ಯ ಬಹಳ ಮಹತ್ವದ್ದು. ಮದುವೆ ಕುಟುಂಬದ ಸಂಬಂಧಗಳ ಬೆಳವಣಿಗೆಯ ನಿರ್ಣಾಯಕದ ಅಂಶವಾಗಿದ್ದು. ಮದುವೆಯೆಂಬ ಅನುಬಂಧದ ನೆಲೆಯಲ್ಲಿ ರೂಪಗೊಂಡ ಕುಟುಂಬಗಳು ಸಮಾಜದ ಗುಣಲಕ್ಷಣಗಳನ್ನು ಬೆಳೆಸುವಲ್ಲಿ ಪ್ರಾಮುಖ್ಯತೆ ವಹಿಸುತ್ತದೆ. ಸಮಾಜದಲ್ಲಿ ಕುಟುಂಬವು ಒಂದು ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಕುಟುಂಬದ ಸಹಕಾರ ರೂಪವೇ ಸಮಾಜದ ಬೆಳವಣಿಗೆಗೆ ಮುಖ್ಯ ತಳಹದಿ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಷಿ ಅಭಿಪ್ರಾಯಪಟ್ಟರು.
ಸೊರಬ ತಾಲ್ಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಡಾ. ವಿಶ್ವನಾಥ್ ನಾಡಿಗೇರ್ ಕುಟುಂಬದಿಂದ ಶ್ರೀ ರಾಮೇಶ್ವರ ದೇವಾಲಯಕ್ಕೆ ಹೊಂದಿಕೊಂಡಂತೆ ನಿರ್ಮಾಣವಾದ ‘ಶಿವ ಸನ್ನಿಧಿ ಕಲ್ಯಾಣ ಮಂದಿರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವ್ಯಕ್ತಿ-ಮದುವೆ-ಕುಟುಂಬ-ಸಮಾಜ ಒಂದಕ್ಕೊಂದು ಪೂರಕ ಅಂಶಗಳು. ಬಾಂಧವ್ಯ, ಪ್ರೀತಿ, ವ್ಯಕ್ತಿಯ ಅಗತ್ಯ, ಭಾವನಾತ್ಮಕ ಬೆಂಬಲ, ಸ್ವೀಕಾರ ಮನೋಭಾವ, ಅನುಭೂತಿ, ವಾತ್ಸಲ್ಯ ಇವೆಲ್ಲವೂ ಒಂದು ಕುಟುಂಬದೊಳಗಿನ ಪ್ರಮುಖ ಅಂಶಗಳು ಈ ಅಂಶಗಳಿಂದ ಕಟ್ಟಿದ ಕುಟುಂಬವು ಸಮಾಜಕ್ಕೆ ಬಹಳಷ್ಟನ್ನು ನೀಡುತ್ತದೆ. ಸ್ವಯಂ ಸಾಕ್ಷಾತ್ಕಾರದ ಮೌಲ್ಯಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಆಧುನಿಕ ಸಮಾಜದಲ್ಲಿ ಮದುವೆಯ ಮಹತ್ವ ಗೋಜಲಾಗುತ್ತಿದೆ. ಆದರೆ ಇಂತಹ ಕಾರ್ಯಗಳು ಮದುವೆಯ ಮಹತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಎರಡು ಮಾತಿಲ್ಲ. ಶಿವ ಸನ್ನಿಧಿ ಕಲ್ಯಾಣ ಮಂಟಪ ಗ್ರಾಮೀಣ ಜನರಿಗೆ ಅನುಕೂಲವಾಗಲಿ. ಈ ಭಾಗದ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಿಗೆ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.
ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಶಿವಯೋಗಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು. ಹಿರೇಮಠ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯರು, ಶಾಂತಲಿಂಗೇಶ್ವರ ಸ್ವಾಮಿಗಳ ಮಾತುಗಳನ್ನು ತಮ್ಮ ಭಾಷಣದ ಮೂಲಕ ನೆರೆದಂತಹ ಬಂಧುಗಳಿಗೆ ಆರ್ಶೀರ್ವಾದದ ಮೂಲಕ ತಿಳಿಸುತ್ತಾ, ಶಾಶ್ವತವಾದ ಕಾರ್ಯಗಳು ಸದಾ ಸಮಾಜಕ್ಕೆ ಶ್ರೇಯಸ್ಸನ್ನು ನೀಡುತ್ತದೆ. ಕಲುಶಿತಗೊಳ್ಳುತ್ತಿರುವ ಸಮಾಜವನ್ನು ಸರಿದಾರಿಗೆ ತರಲು ಮಠ, ಮಂದಿರ ಮತ್ತು ಕುಟುಂಬ ವ್ಯವಸ್ಥೆ ಅತ್ಯಂತ ಮಹತ್ತರ ಪಾತ್ರವನ್ನು ವಹಿಸುತ್ತವೆ. ಸತ್ಸಂಗ ಮತ್ತು ಸಮಾಜಮುಖಿ ಕಾರ್ಯ ನಡೆಸಲು ಶಿವ ಸನ್ನಿಧಿ ಸಹಕಾರಿಯಾಗಲಿ ಎಂದು ಹಾರೈಸಿದರು.
Also read: ಹಿಂದೂಗಳ ಮೇಲೆ ನಿರಂತರ ಹಲ್ಲೆ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಯುವ ಮೋರ್ಚಾ ಮನವಿ
ಸಂಸ್ಕಾರಗಳಲ್ಲಿ ವಿವಾಹ ಸಂಬಂಧ ಪ್ರಮುಖವಾದದ್ದು. ಬಾಲ್ಯ, ಬ್ರಹ್ಮಚರ್ಯದ ನಂತರ ಸ್ವೀಕರಿಸುವ ವಿವಾಹವೆಂಬ ಸಂಸ್ಕಾರ ಮನುಷ್ಯನ ಬದುಕನ್ನು ಪೂರ್ಣಗೊಳಿಸುತ್ತದೆ. ಈ ಅನುಬಂಧ ಸಮಾಜದ ಸಂತುಲನಕ್ಕೆ ದಾರಿ ಮಾಡಿಕೊಟ್ಟು, ಬ್ರಹ್ಮಾನಂದದತ್ತ ಕೊಂಡೊಯುತ್ತದೆ. ವಿವಾಹದಿಂದ ಆದ ಕುಟುಂಬ ವ್ಯವಸ್ಥೆಯಿಂದ ಸಮಾಜವು ಸೇವೆ, ಸ್ನೇಹ, ಸಹನೆ, ಸಂಯಮ, ಸಂಕಲ್ಪ, ಸದೃಢತೆ, ಸಹನಶೀಲತೆ, ಸಂವೇದನೆಯಂತಹ ಹಲವಾರು ವಿಚಾರಗಳನ್ನು ಕಲಿಸುತ್ತಾ ಸಾಗುತ್ತದೆ. ಎಲ್ಲರಿಗೂ ಶುಭವಾಗಲಿ ಎಂದು ಆರ್ಶೀವದಿಸಿದರು.
ಸಣ್ಣ ಕೈಗಾರೆಕೆಗಳ ನಿಗಮ ಮಂಡಳಿ ಉಪಾಧ್ಯಕ್ಷ ಎಸ್. ದತ್ತಾತ್ರಿ ಮಾತನಾಡಿ, ವ್ಯಕ್ತಿಯನ್ನು ಪರಿಪೂರ್ಣಗಿಸುವುದು ಮದುವೆ ಎಂಬ ಬಾಂಧವ್ಯ. ಮದುವೆಯ ಬಾಂಧವ್ಯವೇ ಕುಟುಂಬದ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ಈ ಕುಟುಂಬದಲ್ಲಿರುವ ಪ್ರತೀ ವ್ಯಕ್ತಿಗೂ ಮನೆಯೇ ಮೊದಲ ಪಾಠಶಾಲೆ ಆಗುತ್ತದೆ. ಮನುಷ್ಯನನ್ನು ಪರಿಪೂರ್ಣತೆಯತ್ತ ಕುಟುಂಬಗಳು ಕೊಂಡೊಯ್ಯುತ್ತವೆ. ಸುಖ, ದುಃಖಗಳಲ್ಲಿ ಕುಟುಂಬದ ಬೆಂಬಲವಿದ್ದಾಗ ವ್ಯಕ್ತಿಯ ದೃಢತೆ ಹೆಚ್ಚುತ್ತದೆ ಶಿವಸನ್ನಿಧಿ ಹೆಸರೇ ಸೂಚಿಸುವಂತೆ ಶಿವ ಪಾರ್ವತಿ ರೂಪದ ಪತಿ ಪತ್ನಿಯರು ಈ ಸಮಾಜಕ್ಕೆ ಪೂರಕವಾದ ಕೊಡುಗೆಗಳನ್ನು ನೀಡಲಿ ಎಂದು ಹಾರೈಸಿದರು.
ಶಿವಸನ್ನಿಧಿ ಕಲ್ಯಾಣ ಮಂದಿರ ಕಟ್ಟಿದ ಡಾ: ವಿಶ್ವನಾಥ್ ನಾಡಿಗೇರ್ ಮಾತನಾಡಿ, ಈ ಭಾಗದ ಜನತೆ ನೋ ಪ್ರಾಫಿಟ್ ನೋ ಲಾಸ್ ನಿಯಮದ ಅಡಿಯಲ್ಲಿ ಈ ಕಲ್ಯಾಣ ಮಂದಿರದ ಅನುಕೂಲತೆಯನ್ನು ಪಡೆಯಲಿ. ಯಾವುದೇ ಧಾರ್ಮಿಕ, ಸಾಮಾಜಿಕ, ಕೌಟುಂಬಿಕ ಕಾರ್ಯಗಳಿಗೆ ಈ ಮಂದಿರ ಉಪಯೋಗವಾಗಲಿ ಎಂದು ತಮ್ಮ ಪ್ರಾಸ್ಥಾವಿಕ ನುಡಿಗಳನ್ನು ಆಡಿದರು.
ವೇದಿಕೆಯಲ್ಲಿ ಉದ್ಯಮಿ ವಿ.ವಿ. ಕಾಮತ್, ಹಿರಿಯರು ಕೃಷಿಕರಾದ ಗಣೇಶ್ ರಾವ್ ನಾಡಿಗೇರ್, ಡಾ. ಶ್ರೀದೇವಿ ನಾಡಿಗೇರ್ ಉಪಸ್ಥಿತರಿದ್ದರು. ಶ್ರೀರಂಜಿನಿ ದತ್ತಾತ್ರಿ ಕಾರ್ಯಕ್ರಮ ನಿರೂಪಿಸಿದರು. ವಸುಂದರಾ ದೇಶಪಾಂಡೆ ಪ್ರಾರ್ಥಿಸಿ, ಶ್ರೀದೇವಿ ನಾಡಿಗೇರ್ ಸ್ವಾಗತಿಸಿ, ಡಾ. ವಿಶ್ವನಾಥ್ ನಾಡಿಗೇರ್ ಪ್ರಾಸ್ಥಾವಿಕ ನುಡಿಗಳನ್ನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post