ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನರ ಬದುಕಿಗೆ ಮಾರಕವಾಗುತ್ತಿದ್ದರೆ ಅಂತಹ ಚಟುವಟಿಕೆಗಳಿಗೆ ಅವಕಾಶವಿಲ್ಲ. ಚಂದ್ರಗುತ್ತಿ ಬಸ್ತಿಕೊಪ್ಪದ ಕಲ್ಲುಕ್ವಾರೆಯನ್ನು ಸಮಗ್ರ ತನಿಖೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸೆಲ್ವಮಣಿ Shivamogga DC Selvamani ಭರವಸೆ ನೀಡಿದರು.
ಸೊರಬ ತಾಲ್ಲೂಕು ಚಂದ್ರಗುತ್ತಿ ಸಮೀಪದ ಬಸ್ತಿಕೊಪ್ಪ ಪ್ರದೇಶದಲ್ಲಿ 4 ವರ್ಷಗಳಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸಾಮಾಜಿಕ ಬದುಕಿನ ಅಧ್ವಾನಗಳಾಗಿದ್ದು, ಗ್ರಾಮ ಜನರ ಜೊತೆಗೆ ವನ್ಯ ಜೀವಿಯ ಬದುಕಿಗೆ ಆತಂಕ ತಂದಿದೆ. ಪ್ರಸಿದ್ಧ ರೇಣುಕಾಂಬಾ
ದೇವಾಲಯದ ಅಸ್ತಿತ್ವಕ್ಕೆ ಕೂಡ ಧಕ್ಕೆ ತರಲಿದೆ ಎಂದು ವೃಕ್ಷ ಲಕ್ಷ ಆಂದೋಲನ ಹಾಗೂ ಸೊರಬ ಪರಿಸರ ವೇದಿಕೆ ಕಾರ್ಯಕರ್ತರು ಚಂದ್ರಗುತ್ತಿ ಬಸ್ತಿಕೊಪ್ಪದ ಗ್ರಾಮಸ್ಥರು ಶಿವಮೊಗ್ಗದಲ್ಲಿ ಸಲ್ಲಿಸಿದ ದೂರು ಆಲಿಸಿ ಮಾತನಾಡಿದರು.
ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಮಾತನಾಡಿ, ಈಗಾಗಲೇ ಚಂದ್ರಗುತ್ತಿ ಗ್ರಾಮ ಪಂಚಾಯತಿ ಜೀವ ವೈವಿಧ್ಯ ಸಮಿತಿ ಬಸ್ತಿಕೊಪ್ಪ ಕಲ್ಲುಗಣಿಗಾರಿಕೆ ಅನಾಹುತಗಳನ್ನು ಗಮನಿಸಿ ಗಣಿಗಾರಿಕೆಗೆ ನೀಡಿರುವ ಅನುಮತಿ ಹಿಂಪಡೆಯುವ ಬಗ್ಗೆ
ಸರಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಂಡಿದೆ. ವೃಕ್ಷ ಲಕ್ಷ ಆಂದೋಲನದ ನಿಯೋಗ ಭಾರತ ಸರಕಾರದ ಅರಣ್ಯ ಪರಿಸರ ಮಂತ್ರಾಲಯದ ಗಮನ ಸೆಳೆದಿದೆ. ರಾಜ್ಯ ಅರಣ್ಯ ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದೆ ಎಂದರು.
ಸೊರಬ ತಾಲ್ಲೂಕು ಚಂದ್ರಗುತ್ತಿಯಲ್ಲಿ ಬೃಹತ್ ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ವ್ಯಾಪಕ ದುಷ್ಪರಿಣಾಮಗಳು ಹಾಗೂ ಕೃಷಿ, ಆರೋಗ್ಯ, ಅರಣ್ಯ, ಜಲಪರಿಸ್ಥಿತಿಯ ಪ್ರತ್ಯಕ್ಷ ಸಮೀಕ್ಷೆ ಅಧ್ಯಯನಕ್ಕೆ ಶಿಫಾರಸ್ಸು ಮಾಡಲಾಗಿದೆ. ಹಿಂದುಳಿದವರೇ ಇರುವ ಇಲ್ಲಿನ ರೈತರಿಗೆ ಬೆಳೆ ಇಲ್ಲವಾಗಿದೆ. ಊರು ತೊರೆಯುವ ಅನಾಥ ಪರಿಸ್ಥಿತಿ ಇದೆ. ಚಂದ್ರಗುತ್ತಿ ರೇಣುಕಾಂಬಾ ದೇವಾಲಯದ ಅಸ್ತಿತ್ವಕ್ಕೆ ಗಣಿಗಾರಿಕೆ, ಸ್ಪೋಟಗಳು ಧಕ್ಕೆ ತರಲಿವೆ. ಚಂದ್ರಗುತ್ತಿಯ ಸುತ್ತ 5000 ಎಕರೆ ಬಹು ಅಪರೂಪದ ಜಲಮೂಲದ ಕಲ್ಲು ಅರಣ್ಯ ಪ್ರದೇಶ ವಿನಾಶದ ಅಂಚಿಗೆ ಬಂದಿದೆ ಎಂದರು.
ಭೂಕುಸಿತಕ್ಕೆ ದಾರಿ:
ಗುಡ್ಡಗಳನ್ನೇ ಕೊರೆದು ಗಣಿಗಾರಿಕೆ ನಡೆಯುತ್ತಿರುವುದರಿಂದ ಭೂಕುಸಿತಕ್ಕೆ ಕಾರಣವಾಗಲಿದೆ. ಚಂದ್ರಗುತ್ತಿ ಗ್ರಾಮದ ಕಲ್ಲು ಗುಡ್ಡಗಳು ಕುಸಿಯುವ ಸಾಧ್ಯತೆ ಇದೆ. ರೇಣುಕಾಂಬಾ ದೇವಾಲಯ ಹಾಗೂ ಜನವಸತಿ ಸಂಕಷ್ಟಕ್ಕೆ ಸಿಲುಕಬಹುದಾಗಿದೆ. ಬಸ್ತಿಕೊಪ್ಪದಲ್ಲಿ ಬೇರೆ ರಾಜ್ಯದ ಗಣಿ ಕಾರ್ಮಿಕರಿದ್ದು ಅವರಿಗೆ ಯಾವ ಸುರಕ್ಷತೆಯೂ ಇಲ್ಲ. ಈಗಾಗಲೇ ಬಸ್ತಿಕೊಪ್ಪ ಗ್ರಾಮದ ಬಾವಿಗಳು, ಬೋರ್‌ವೆಲ್‌ಗಳು ಬರಿದಾಗಿವೆ. ಪಂಚಾಯತದವರ ಕುಡಿಯುವ ನೀರಿನ ಯೋಜನೆ ವಿಫಲವಾಗಿದೆ ಎಂದರು.
ಕಾಯಿದೆಗಳ ಉಲ್ಲಂಘನೆ:
ಬಸ್ತಿಕೊಪ್ಪ ಗಣಿಗಾರಿಕೆಯಿಂದ ಅರಣ್ಯ, ವನ್ಯ ಜೀವಿ ಕಾಯಿದೆ, ಗಣಿ ಕಾಯಿದೆ, ಮಾಲಿನ್ಯ ನಿಯಂತ್ರಣ ಕಾಯಿದೆ. ಪರಿಸರ ಮತ್ತುಜೀವ ವೈವಿಧ್ಯ ಸಂರಕ್ಷಣಾ ಕಾನೂನುಗಳ ತೀವ್ರ ಉಲ್ಲಂಘನೆ ಆಗಿದೆ.
ಶಿಫಾರಸ್ಸು:
ಚಂದ್ರಗುತ್ತಿ ಬಸ್ತಿಕೊಪ್ಪ ಕಲ್ಲುಗಣಿಗಾರಿಕೆ ತಾಂತ್ರಿಕವಾಗಿ ಕಿರು ಗಣಿಗಾರಿಕೆ ಎನಿಸಿಕೊಂಡರೂ ಇದು ಭಾರೀ ಗಣಿಗಾರಿಕೆಯಾಗಿ ಭಾರೀ ಅನಾಹುತಗಳ ಸರಮಾಲೆ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಇಲ್ಲಿನ ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು
ಹಿಂಪಡೆಯಬೇಕು. ಅರಣ್ಯ, ಪರಿಸರ, ಜಲ, ಭೂಗರ್ಭ ತಜ್ಞರು, ಜೀವ ವೈವಿಧ್ಯತಜ್ಞರನ್ನು ಒಳಗೊಂಡ ಪರಿಶೀಲನಾ ಸಮಿತಿಯನ್ನು ಸ್ಥಳಕ್ಕೆ ಕಳಿಸಿ ಪರಿಶೀಲಿಸಬೇಕು. ಚಂದ್ರಗುತ್ತಿ ಪ್ರದೇಶದ ಸೂಕ್ಷ್ಮ ಕಲ್ಲು ಅರಣ್ಯಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗಣಿಗಾರಿಕೆಗೆ
ನೀಡಿದ ಒಪ್ಪಿಗೆ ಹಿಂಪಡೆಯಬೇಕು. ಜಿಲ್ಲಾ ಪಂಚಾಯತ ಬಸ್ತಿಕೊಪ್ಪ ಗ್ರಾಮದ ಕೃಷಿ, ತೋಟಗಾರಿಕೆ ಪರಿಸ್ಥಿತಿ ಕುಡಿಯುವ ನೀರಿನ ಸೌಲಭ್ಯ ಯೋಜನೆ ವಿಫಲತೆ ಬಗ್ಗೆ ಸ್ಥಳ ಪರಿಶೀಲನೆ ಮಾಡಬೇಕು ಎಂದರು.
ಬಸ್ತಿಕೊಪ್ಪ ಗ್ರಾಮಸ್ಥರು ಸೇರಿದಂತೆ ಜೀವ ವೈವಿಧ್ಯ ಸಮಿತಿ ಸದಸ್ಯ ಕೆ.ವೆಂಕಟೇಶ್, ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಇದ್ದರು. ಬಹು ಅಪರೂಪದ ಕಲ್ಲು ಅರಣ್ಯಗಳು ಚಂದ್ರಗುತ್ತಿ ಸುತ್ತಲಿನ ಪ್ರದೇಶದಲ್ಲಿವೆ. ಇಲ್ಲಿನ ಸಸ್ಯ, ವನ್ಯ ಜೀವಿ ಸಂಕುಲ ಬಹಳ ಆಘಾತಕ್ಕೆ ಒಳಗಾಗಿದೆ. ಬಸ್ತಿಕೊಪ್ಪ ಗಣಿಗಾರಿಕೆ ವಿನಾಶಕಾರಿ ಆಗಿದೆ. ಅದು ಸಂಪೂರ್ಣ ನಿಲ್ಲಬೇಕು. ಚಂದ್ರಗುತ್ತಿ ಅರಣ್ಯ ಪುನಶ್ಚೇತನ ಯೋಜನೆ ಜಾರಿ ಮಾಡಬೇಕು.
-ಜೀವ ವೈವಿಧ್ಯ ತಜ್ಞ ಡಾ.ಕೇಶವ ಹೆಚ್. ಕೊರ್ಸೆಚಂದ್ರಗುತ್ತಿ ಸೇರಿದಂತೆ ವರದಾ ಜಲಾನಯನ ಪ್ರದೇಶ ಭಾರೀ ಹಾನಿಗೆ ಒಳಗಾಗಿದೆ. ಗಣಿಗಾರಿಕೆಯಿಂದ ಕಾನು ಅರಣ್ಯಗಳು ಜಲಮೂಗಳು ನಾಶವಾಗಿವೆ.
-ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ
ಗ್ರಾಮಸ್ಥರ ಅಳಲು:
ಜಿಲ್ಲಾಧಿಕಾರಿಗಳ ಭೇಟಿಗೆ ಬಂದಿದ್ದ ಬಸ್ತಿಕೊಪ್ಪ ಗ್ರಾಮಸ್ಥರು, ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶ ಜನವಸತಿ ಮನೆಗಳಿಂದ 100 ಮೀಟರ್ ದೂರದಲ್ಲಿದೆ. ಗ್ರಾಮದಲ್ಲಿ 45 ರೈತರ ಕುಟುಂಬಗಳು ಇವೆ. 300 ಜನ ಸಂಖ್ಯೆ ಇದೆ. ಗಣಿಗಾರಿಕೆ ನಡೆಯುವ ಸ್ಥಳ ಕಲ್ಲುಗುಡ್ಡ ಕುರುಚಲು ಅರಣ್ಯದಿಂದ ಕೂಡಿದೆ. ಚಂದ್ರಗುತ್ತಿಯ ಇತಿಹಾಸ ಪ್ರಸಿದ್ಧ ರೇಣುಕಾಂಬಾ ಗುಹಾದೇವಾಲಯದಿಂದ ಕೇವಲ ಒಂದು ಕಿ.ಮೀ ದೂರದಲ್ಲಿದೆ. 2 ವರ್ಷ ಹಿಂದೆ ಗಣಿಗಾರಿಕೆ ನಡೆದ ಅರ್ಧ ಕಿ.ಮೀ ವ್ಯಾಪ್ತಿಯ ಬೃಹತ್ ಗಣಿಗಾರಿಕೆ ಬಾವಿ (200 ಅಡಿ ಆಳ) ಗುಡ್ಡದ ಮೇಲೆ ಬಾಯ್ದೆರೆಂದು ನಿಂತಿದೆ. ಪಕ್ಕದಲ್ಲಿ ಇನ್ನರ್ಧ ಕಿ.ಮೀ ವ್ಯಾಪ್ತಿಯಲ್ಲಿ ಈಗ ಗಣಿ ಕಾಮಗಾರಿ ನಡೆಯುತ್ತಿದೆ.
ಗುಡ್ಡಗಳ ಮೇಲೆ ಗಣಿಗಾರಿಕೆ, ಬೃಹತ್ ಬಾವಿ, ಕೆರೆ ನಿರ್‍ಮಾಣ ನಿಷೇಧಿಸಬೇಕು. ಇಲ್ಲವಾದರೆ ಸುತ್ತಲಿನ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ಭಾರೀ ಮಳೆಗೆ ಭೂ ಕುಸಿತ ಆಗುವುದು ನಿಶ್ಚಿತ.
-ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾನ ಭೂ ಗರ್ಭ ಶಾಸ್ತ್ರಜ್ಞ ಡಾ.ಮಾರುತಿಚಂದ್ರಗುತ್ತಿ ಬಸ್ತಿಕೊಪ್ಪ ಗಣಿಗಾರಿಕೆಯಿಂದ ಆಗಿರುವ ಹಾನಿಯ ಪಾರಿಸಾರಿಕ ಮೌಲ್ಯ ಮಾಪನ ಆಗಬೇಕು ಇಡೀ ಹಳ್ಳಿ ಗಣಿಗಾರಿಕೆಯಿಂದ ವಿನಾಶದ ಅಂಚಿಗೆ ಬಂದಿದೆ.
-ಜೀವ ವೈವಿಧ್ಯ ದಾಖಲಾತಿ ತಜ್ಞ ಶ್ರೀಪಾದ ಬಿಚ್ಚುಗತ್ತಿ
Also read: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ
ಗಣಿ ಕಂಪನಿಯಿಂದ ಅರಣ್ಯ ಅತಿಕ್ರಮಣವಾಗಿದೆ. 200 ಮೀಟರ್ ಆಳದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಭಾರೀ ಯಂತ್ರಗಳು ಕಾರ್ಯಾಚರಣೆ ನಡೆಯುತ್ತಿರುವುದರಿಂದ ದಿನಕ್ಕೆ 250-300 ಲಾರಿ ಕಲ್ಲು ಸಾಗಾಟ ನಡೆಯುತ್ತಿದೆ. ಪ್ರತಿ ದಿನ ಸಂಜೆ 2 ಬಾರಿ ಭಾರೀ ಸ್ಪೋಟಕಗಳನ್ನು ಬಳಸಿ ಕಲ್ಲು ಪರ್ವತವನ್ನು ಸೀಳುತ್ತಾರೆ. ಗಣಿಗಾರಿಕೆ ನಡೆಸುತ್ತಾರೆ. ಬಾಂಬ್ ಸ್ಪೋಟಕಗಳು ಸುತ್ತಲಿನ ಹಳ್ಳಿಗಳ ಮನೆಗಳನ್ನು ಅದುರುವಂತೆ ಮಾಡುತ್ತವೆ. ಮನೆಗಳ ಗೋಡೆಗಳು ಬಿರುಕು ಬಂದಿವೆ. ಕುಟುಂಬಗಳು ಬೀಳಲಿರುವ ಮನೆ ಬಿಟ್ಟು ಬೇರೆ ಗುಡಿಸಲು ಕಟ್ಟಿಕೊಂಡಿವೆ. ಸ್ಪೋಟಕ ಸಂದರ್ಭದಲ್ಲಿ ಉಂಟಾಗುವ ಹೊಗೆ, ವಿಷಯುಕ್ತ ಧೂಳು, ಹಳ್ಳಿಗಳ ಮಕ್ಕಳು ಮಹಿಳೆಯರನ್ನು ಅನಾರೋಗ್ಯಕ್ಕೆ ತಳ್ಳಿವೆ. ಸ್ಪೋಟಕದ ನಂತರ ಹಳ್ಳಿಯ ಮಕ್ಕಳು ವಾಂತಿ ಮಾಡಿಕೊಳ್ಳುತ್ತಾರೆ. ಮಂಜು ತುಂಬಿದಂತೆ ವಿಷಯುಕ್ತ ಹೊಗೆ ಹಳ್ಳಿಗಳ ಸುತ್ತ ಹರಡುತ್ತದೆ. ಗ್ರಾಮದ ನೂರಾರು ಎಕರೆ ಕೃಷಿ ಭೂಮಿ ಕ್ರಷರ್, ಗಣಿಯ ಧೂಳಿನಿಂದ ತುಂಬಿ ಕೃಷಿಗೆ ಅಯೋಗ್ಯವಾಗಿದೆ. ಮಳೆಗಾಲದಲ್ಲಿ ಗುಡ್ಡದಿಂದ ಗಣಿಯ ಕಲ್ಲು ಪುಡಿ ಮಿಶ್ರಿತ ನೀರು ಕೃಷಿ ಭೂಮಿಗೆ ತುಂಬಿಕೊಳ್ಳುತ್ತದೆ. ಗಣಿಗಾರಿಕೆಯಿಂದ ಗ್ರಾಮದ ಮಕ್ಕಳು, ಮಹಿಳೆಯರು ವಯಸ್ಸಾದವರು ದಮ್ಮು, ಕ್ಷಯ, ಚರ್ಮರೋಗ, ಹೃದಯ ಕಾಯಿಲೆ, ಅಪೌಷ್ಠಿಕತೆ, ಮುಂತಾದ ತೀವ್ರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಉದ್ಯೋಗ, ಕೃಷಿ ಇಲ್ಲ, ರೋಗರುಜಿನ ಎಲ್ಲದಕ್ಕೆ ಗಣಿಗಾರಿಕೆ ಕಾರಣವಾಗಿದೆ. ಗಣಿಗಾರಿಕೆ ಕಲ್ಲು, ಸಾಗಾಟದಿಂದ 2 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಪ್ರವೇಶ ಅಸಾಧ್ಯವಾಗಿದೆ. ವೈದ್ಯರು ವಿವಿಧ ಇಲಾಖೆ ಅಧಿಕಾರಿಗಳು ಬರುತ್ತಿಲ್ಲ. ಮಕ್ಕಳು ಗರ್ಭಿಣಿ ಮಹಿಳೆಯರನ್ನು ಸಾಗಿಸಲು ವಾಹನ ಬರುವಂತಿಲ್ಲ. ಚಿಕ್ಕ ಸೇತುವೆ ಭಾರೀ ವಾಹನಗಳು ಓಡಾಡುವದರಿಂದ ಮುರಿದು ಬೀಳುವ ಸ್ಥಿತಿ ತಲುಪಿದೆ. ಗಣಿಪ್ರದೇಶದಿಂದ 200 ಮೀಟರ್ ದೂರದಲ್ಲಿ ಪ್ರಾಥಮಿಕ ಶಾಲೆ ಇದೆ. ಅಲ್ಲಿನ ಧೂಳಿನ ಪರಿಸ್ಥಿತಿ ಮಕ್ಕಳನ್ನು ಆತಂಕಕ್ಕೆ ತಳ್ಳಿದೆ. ಶಾಲೆ ನಿಲ್ಲಿಸಬೇಕಾದ ಸ್ಥಿತಿ ಇದೆ. ಕಲ್ಲು ಕ್ರಷರ್ ಬಳಿ ಇರುವ ಹಿಂದುಳಿದ ಮಕ್ಕಳ ಹಾಸ್ಟೇಲ್ ಹೈಸ್ಕೂಲ್ ಮಕ್ಕಳು ಧೂಳಿನಲ್ಲಿ ಮುಳುಗುವಂತಾಗಿದೆ ಎಂದು ದೂರಿದರು.
ವರದಿ: ಮಧುರಾಮ್, ಸೊರಬ
ಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post