ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತ,ಯೋಧ ಮತ್ತು ಪೌರಕಾರ್ಮಿಕ ಇವರು ನಮ್ಮ ದೇಶದ ಆಸ್ತಿ. ಈ ಆಸ್ತಿಯನ್ನು ಸಂರಕ್ಷಿಸಿ ಬೆಳೆಸುವ ಹೊಣೆ ನಮ್ಮೆಲ್ಲರದಾಗಿದ್ದು, ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಮೇಯರ್ ಸುನೀತಾ ಅಣ್ಣಪ್ಪ ತಿಳಿಸಿದರು.
ಮಹಾನಗರ ಪಾಲಿಕೆ ವತಿಯಿಂದ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ-2021 ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರ ಸೇವೆ ನಮ್ಮೆಲ್ಲರಿಗೂ ಅತ್ಯಗತ್ಯವಾಗಿದ್ದು ಇವರ ಅಭ್ಯುದಯಕ್ಕಾಗಿ ನಾವೂ ಕೂಡ ಶ್ರಮಿಸಬೇಕು. ಸರ್ಕಾರ ಪೌರಕಾರ್ಮಿಕರು ಗೌರವಯುತವಾಗಿ ಬದುಕಲು ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ನೀಡಲಾಗುತ್ತಿದ್ದ ಗೌರವಧನ 3500 ರೂ.ನ್ನು ನಿನ್ನೆ 7000 ರೂ.ಗೆ ಏರಿಸಲಾಗಿದೆ. ಇದಕ್ಕೆ ಸರ್ಕಾರವನ್ನು ಹಾಗೂ ಪೌರಕಾರ್ಮಿಕರಿಗೆ ಅಭಿನಂದಿಸುತ್ತೇನೆ.
ತಾಳಿ ಭಾಗ್ಯ ಯೋಜನೆಯಡಿ ನೀಡುವ ರೂ.50,000 ಸಂಕಷ್ಟದಲ್ಲಿರುವ ಪೌರಕಾರ್ಮಿಕರ ಕುಟುಂಬದವರ ಮದುವೆಗೆ ಪಾಲಿಕೆಯ ಒಂದು ಉಡುಗೊರೆಯಾಗಿದೆ. ಹಾಗೆಯೇ ಕಾರ್ಮಿಕರ ಸಮಾರಂಭಗಳಿಗೆಂದೇ ಪ್ರತ್ಯೇಕ ಭವನ ಬೇಕೆಂದು 4 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನದ ಕಾರ್ಯ ಪ್ರಗತಿಯಲ್ಲಿದೆ. ಕಾರ್ಮಿಕರ ಆರೋಗ್ಯ ಅತಿ ಮುಖ್ಯವಾಗಿದ್ದು ನಿಯಮಿತವಾಗಿ ಆರೋಗ್ಯ ಪರೀಕ್ಷೆ ಶಿಬಿರಗಳನ್ನು ಮಾಡಲಾಗುತ್ತಿದೆ. ಬರುವ ಅ.10ರೊಳಗೆ ಎಲ್ಲ ಪೌರಕಾರ್ಮಿಕರಿಗೆ ಆರೋಗ್ಯ ಪರೀಕ್ಷೆ ನಡೆಸುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪೌರಕಾರ್ಮಿಕರು ನಮ್ಮೆಲ್ಲರ ಆರೋಗ್ಯ ರಕ್ಷಕರು. ಗಾಂಧೀಜಿಯವರು ಇವರಿಗೆ ನಿಜವಾದ ದೇವರು, ಹರಿಜನ ಎಂದಿದ್ದಾರೆ. ಇಂತಹ ಪೌರ ಕಾರ್ಮಿಕರು ಗೌರವಯುತವಾಗಿ ಬದುಕಲು ಪಕ್ಷಬೇಧ ಮರೆತು ಎಲ್ಲ ಸರ್ಕಾರಗಳು ಉತ್ತಮ ಸೌಲಭ್ಯಗಳನ್ನು ನೀಡುತ್ತಾ ಬಂದಿವೆ. ಜಗದೀಶ್ ಶೆಟ್ಟರ್’ಅವರ ಅವಧಿಯಲ್ಲಿ 2010 ನೆಯ ಸಾಲಿನಿಂದ ಪೌರಕಾರ್ಮಿಕರ ದಿನಾಚರಣೆ ಆರಂಭಿಸಿದ್ದು ನಿರಂತರವಾಗಿ ನಡೆಯುತ್ತಾ ಬಂದಿದೆ ಎಂದರು.
ಬಿದ್ದವರನ್ನು ಮೇಲೆತ್ತುವ ಸಂಸ್ಕೃತಿ ನಮ್ಮದಾಗಿದ್ದು, ಸೈನಿಕರಂತೆ ತಮ್ಮ ಪ್ರಾಣದ ಹಂಗನ್ನು ತೊರೆದು ನೈರ್ಮಲ್ಯ ಕಾರ್ಯದಲ್ಲಿ ತೊಡಗಿರುವವರ ಇವರನ್ನು ಯಾರೂ ಎಂದಿಗೂ ಕೈಬಿಡುವುದಿಲ್ಲ. ಪೌರಕಾರ್ಮಿಕರ ಸಮಸ್ಯೆಗಳು, ಬೇಡಿಕೆಗಳನ್ನು ಪರಿಶೀಲಿಸಿ ಅವುಗಳನ್ನು ಈಡೇರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಮಾತನಾಡಿ, ಸ್ವಚ್ಚತೆಗಾಗಿ ನಿತ್ಯ ಶ್ರಮಿಸುವ ಪೌರಕಾರ್ಮಿಕರಿಗೆ ಇಂದು ಸಂಭ್ರಮಾಚರಣೆಯ ದಿನವಾಗಿದ್ದು, ಕಾರ್ಮಿಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಮಾಡಿಕೊಡಲು ಆಡಳಿತ ಹಾಗೂ ವಿರೋಧ ಪಕ್ಷದವರೆಲ್ಲ ಶ್ರಮಿಸುವುದಾಗಿ ತಿಳಿಸಿದರು.
ಸದಸ್ಯ ಎಚ್.ಸಿ. ಯೋಗೀಶ್ ಮಾತನಾಡಿ, ಕೋವಿಡ್’ನಂತಹ ಸಂಕಷ್ಟದಲ್ಲಿ ಎಲ್ಲರಿಗಿಂತ ಮುಂದೆ ಬಂದು ಹೋರಾಡಿದ ಇವರಿಗೆ ಅನಂತ ಕೃತಜ್ಞತೆಗಳು. ಸಾರ್ವಜನಿಕರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ನಿಮ್ಮದಿದೆ ಎಂದ ಅವರು ಈ ದಿನಾಚರಣೆ ಹಿಂದೆ ಒಂದು ದಿನ ಇದ್ದು ಈಗ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ಚಟುವಟಿಕೆಗಳಿಂದ ಕೂಡಿ ಏಳು ದಿನಗಳವರೆಗೆ ಮಾಡುತ್ತಿರುವುದು ಸಂತಸದ ವಿಚಾರ ಎಂದರು.
ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಎಚ್. ಮಾತನಾಡಿ, ಜೀವದ ಹಂಗು ತೊರೆದು ಸಮಾಜದ ಮತ್ತು ಎಲ್ಲರ ಮನಸ್ಸನ್ನು ಸ್ವಚ್ಚಗೊಳಿಸುವ ಕೆಲಸವನ್ನು ಪೌರಕಾರ್ಮಿಕರು ಮಾಡುತ್ತಿದ್ದಾರೆ ಎಂದರು.
ಪಾಲಿಕೆ ಆಯುಕ್ತ ಚಿದಾನಂದ ಎಸ್. ವಟಾರೆ ಮಾತನಾಡಿ, ಪೌರ ಕಾರ್ಮಿಕರು ಉತ್ತಮವಾಗಿ ಜೀವನ ಸಾಗಿಸಲು ಪಾಲಿಕೆ ವತಿಯಿಂದ ಅನೇಕ ಯೋಜನೆಗಳು, ಸೌಲಭ್ಯಗಳನ್ನು ನೀಡಲಾಗುತ್ತಿದೆ. ಗೃಹಭಾಗ್ಯ ಯೋಜನೆಯಡಿ 168 ಕಾರ್ಮಿಕರಿಗೆ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಮುಂದಿನ ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. 22 ಕಾರ್ಮಿಕರಿಗೆ ಬಡ್ತಿ ಆಗಿದೆ. 2018 ರಲ್ಲಿ 38 ಕಾರ್ಮಿಕರ ನೌಕರಿ ಖಾಯಂ ಗೊಳಿಸಲಾಗಿದೆ. ಪಿಎಫ್, ಇಎಸ್‌ಐ, ಎಸ್’ಬಿಐ ಪಾಲಿಸಿ, 2016 ರಿಂದ ತಾಳಿ ಭಾಗ್ಯ ಯೋಜನೆ, ವೈದ್ಯಕೀಯ ಪರೀಕ್ಷೆ ಸೌಲಭ್ಯ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಗೋವಿಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪೌರಕಾರ್ಮಿಕರ ನೌಕರಿ ಖಾಯಂ, ಏಕ ರೀತಿಯ ವೇತನ ಸೇರಿದಂತೆ ವಿವಿಧ 11 ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯನ್ನು ಮಹಾಪೌರರಿಗೆ ಸಲ್ಲಿಸಿದರು.
ಕೊರೊನಾ ವಾರಿಯರ್ಸ್ ಕುಟುಂಬದವರಿಂದ ಉದ್ಘಾಟನೆ:
ಕಾರ್ಯಕ್ರಮದ ಉದ್ಘಾಟನೆಯನ್ನು ಕೊರೊನಾದಿಂದ ಮರಣ ಹೊಂದಿದ ಕೊರೊನಾ ವಾರಿಯರ್ಸ್ ಕುಟುಂಬದ ಸದಸ್ಯರು ನೆರವೇರಿಸಿದ್ದು ವಿಶೇಷವಾಗಿತ್ತು.
ಗೌರವ ಸಮರ್ಪಣೆ:
ಕಾರ್ಯಕ್ರಮದಲ್ಲಿ 2020-21ನೆಯ ಸಾಲಿನಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರು, ಆರೋಗ್ಯ ನಿರೀಕ್ಷಕರು, ಲಿಪಿಕ ವೃಂದ ಸೇರಿದಂತೆ ಇತರೆ ನೌಕರರನ್ನು ಹಾಗೂ ಕೋವಿಡ್ ಎರಡನೇ ಅಲೆಯಲ್ಲಿ ಮೃತ ಹೊಂದಿದ ಕೋವಿಡ್ ವಾರಿಯಸ್’ಗಳ ಕುಟುಂಬದ ಸದಸ್ಯರನ್ನು ಈ ವೇಳೆ ಗೌರವಿಸಲಾಯಿತು.
ಪಾಲಿಕೆ ಉಪ ಮಹಾಪೌರ ಕೆ. ಶಂಕರ್(ಗನ್ನಿ), ಕರ್ನಾಟಕ ರಾಜ್ಯ ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷ ಎಂ. ಮಾರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ಪೌರಕಾರ್ಮಿಕರು, ಶಾಖಾ ಸಂಘದ ಪದಾಧಿಕಾರಿಗಳು, ನಾಮ ನಿರ್ದೇಶಿತ ಸದಸ್ಯರು, ಅಧಿಕಾರಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post