ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ಧರ್ಮಕ್ಕೆ ಚ್ಯುತಿ ಬಾರದ ಹಾಗೇ ಶಾಂತಿ ನೆಲೆಸಲಿ. ಊರಿಗೆ ದೇವಿ ಕಾಪಾಡಿದರೆ ಶಿವಮೊಗ್ಗಕ್ಕೆ ಕ್ಷೇತ್ರಪಾಲಕನಂತೆ ಈಶ್ವರಪ್ಪ Eshwarappa ಕಾಯುತ್ತಿದ್ದಾರೆ ಎಂದು ಅವಧೂತ ವಿನಯ್ ಗುರೂಜಿ Avadhootha Vinay Guruji ಅಭಿಪ್ರಾಯಪಟ್ಟರು.
ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ ಪ್ರೈ.ಲಿ. ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಸೂಕ್ತ ಹವನ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾನವೀಯತೆ ಎನ್ನುವುದು ಹೃದಯದಿಂದ ಬರಬೇಕು. ಈಶ್ವರಪ್ಪ ಅವರು ಹೃದಯದಿಂದ ಮನುಷ್ಯತ್ವ ಗೆದ್ದಿದ್ದಾರೆ. ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಮಾತೆಯರಿಗೆ ಬಾಗಿನ ಮತ್ತು ಸೀರೆಯನ್ನು ಅರ್ಪಿಸಿ ವಿಶೇಷವಾಗಿ ಭಾರತೀಯ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ, ನೇತ್ರದಾನ ಶಿಬಿರ, ಮೆಡಿಕಲ್ ಕ್ಯಾಂಪ್ ಗಳನ್ನು ಹಮ್ಮಿಕೊಳ್ಳಲಿ ಎಂಬುದು ನನ್ನ ಆಶಯ ಎಂದರು.
ಜಾತ್ರೆ ಎಂದರೆ ಎಲ್ಲರೂ ಒಟ್ಟಾಗುವ ಒಂದು ಸಂದರ್ಭ. ಜಾತ್ರೆಯಿಂದಲೇ ಭಾರತೀಯ ಸಂಸ್ಕೃತಿ ಉಳಿದಿದೆ. ಹಿಂದೂ ಎಂದರೆ ಒಂದು ಎಂಬ ಅರ್ಥವಿದೆ. ಶಿವಮೊಗ್ಗದಲ್ಲಿ ಎಲ್ಲರೂ ಸಹಿಷ್ಣುತೆಯಿಂದ ಇರಬೇಕು. ಯಾವುದೇ ಗಲಾಟೆ ಆಗಬಾರದು. ಎಲ್ಲರೂ ಒಗ್ಗಟ್ಟಾಗಿರಬೇಕು ಎನ್ನುವ ಸಂದೇಶ ಈ ಮಾರಿಕಾಂಬ ಜಾತ್ರೆ ಸಂದರ್ಭದಲ್ಲಿ ಆಗಿದೆ. ಇದಕ್ಕಾಗಿಯೇ ಸುಖ, ಸೌಭಾಗ್ಯ ನೆಮ್ಮದಿ ನೀಡುವ ಶ್ರೀ ಸೂಕ್ತ ಹವನ ಹಮ್ಮಿಕೊಳ್ಳಲಾಗಿದೆ ಎಂದರು.
ಪೋಷಕರು ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಕಾಂತೇಶ್ ಅವರು ಯಥಾ ಪಿತಾ ತಥಾ ಪುತ್ರ ಅನ್ನುವಂತೆ ತಂದೆಯ ಗುಣಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಧರ್ಮಕ್ಕೆ ವಿರುದ್ಧವಾಗಿದ್ದರೆ ಮಾರಿಯಾಗುತ್ತಾರೆ. ಧರ್ಮದಿಂದ ಇದ್ದರೆ ನಾರಿಯಾಗುತ್ತಾರೆ. ಈ ದೇಶದಲ್ಲಿ ಸಂಸ್ಕೃತಿ ಉಳಿದಿದೆ ಎಂದಾದರೆ ಅದು ನಾರಿಯರಿಂದ ಮಾತ್ರ. ಭವದಿಂದ ಭಯವನ್ನು ದಾಟಿಸುವ ತಾಯಿ ಮಾರಿಕಾಂಬೆಯಾಗಿದ್ದಾಳೆ. ಊರಿಗೆ ಬರುವ ರೋಗ ಓಡಿಸುವ ಕಾರ್ಯವನ್ನು ಮಾರಿಕಾಂಬೆ ಮಾಡುತ್ತಾಳೆ. ಮಕ್ಕಳಿಗೆ ಕಷ್ಟ ಬಂದಾಗ ತಾಯಿಯ ಮಡಿಲಿಗೆ ಮಡಿಲಕ್ಕಿ ಸಮರ್ಪಿಸಿ ತಮ್ಮ ಭಾರವನ್ನು ಕರಗಿಸುವಂತೆ ದೇವಿಗೆ ಬೇಡುತ್ತಾರೆ ಎಂದರು.
ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಜಾತ್ರೆಯ ಸಂದರ್ಭದಲ್ಲಿ ಒಂದೇ ವೇದಿಕೆಯಲ್ಲಿ ಗುರುಗಳು ಮತ್ತು ನೂರಾರು ಮಾತೆಯರು ಒಟ್ಟಿಗೆ ಕಾಣ ಸಿಗುವುದು ಬಹಳ ವಿರಳ. ನಾನು ಇಬ್ಬರು ಅಕ್ಕ, ತಂಗಿಯರನ್ನು ಕಳೆದುಕೊಂಡಿದ್ದೇನೆ. ಆದರೆ, ಹತ್ತಾರು ಸಾವಿರ ಅಕ್ಕತಂಗಿಯರು ಮತ್ತು ತಾಯಂದಿರು ಮಾರಿಕಾಂಬ ಮೈಕ್ರೋ ಫೈನಾನ್ಸ್ ಮೂಲಕ ನನಗೆ ಸಿಕ್ಕಿದ್ದಾರೆ. ನನ್ನ ಕೊನೆಯ ಉಸಿರಿರುವವರೆಗೆ ಸೀರೆ ಬಾಗಿನ ಕೊಟ್ಟೇ ಕೊಡುತ್ತೇನೆ ಎಂದರು.
Also read: ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಮುಂದುವರೆಸಿದ ಮಹಾನ್ ಚೇತನ ಧರಮ್ ಪಾಲ್: ಪ್ರೊ. ವೀರಭದ್ರಪ್ಪ ಅಭಿಪ್ರಾಯ
ವೇದಿಕೆಯಲ್ಲಿ ಆನಂದ್ ಗುರೂಜಿ, ಶ್ರೀನಾಥ್ ಗುರೂಜಿ, ಕೆ.ಇ. ಕಾಂತೇಶ್, ಜಯಲಕ್ಷ್ಮಿ ಈಶ್ವರಪ್ಪ, ಚೈತ್ರಾ ಕುಂದಾಪುರ, ಮೇಯರ್ ಸುನಿತಾ ಅಣ್ಣಪ್ಪ, ಸುವರ್ಣಾ ಶಂಕರ್, ಶಂಕರ್ ಗನ್ನಿ, ಸುರೇಖಾ ಮುರಳೀಧರ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post