ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಆಗಸ್ಟ್ 20 ಹಾಗೂ 21 ರಂದು ಎರಡು ದಿನಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಭಾರತದ ಹೆಸರಾಂತ ಚಿತ್ರನಟ, ಬಹುಭಾಷ ಚಲನಚಿತ್ರಗಳಲ್ಲಿ ಅಪಾರ ಜನಮನ್ನಣೆಯನ್ನು ಗಳಿಸಿರುವ ಸುಮಂತ್ ತಲ್ವಾರ್ Sumanth Thalwar ಆಗಮಿಸಲಿದ್ದಾರೆ.
ಇವರು ಕೇವಲ ಚಿತ್ರನಟರಷ್ಟೆ ಅಲ್ಲ. ಸ್ವತಃ ಕರಾಟೆ ಕ್ರೀಡೆಯಲ್ಲಿ ಬ್ಲಾಕ್ ಬೆಲ್ಟ್ ಹೊಂದಿದ್ದು, ಅತ್ಯುತ್ತಮ ಕರಾಟೆ ಪಟುವಾಗಿ ಹೊರಹೊಮ್ಮಿದ್ದಾರೆ. ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಕರಾಟೆ ಪಂದ್ಯಾವಳಿಯಲ್ಲಿ ತಮ್ಮ ಚಾಪನ್ನು ಮೂಡಿಸಿರುವ ಸುಮಂತ್ ತಲ್ವಾರ್ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಚಿತ್ರರಂಗದ ನಂಟನ್ನು ಬೆಳೆಸಿಕೊಂಡ ನಂತರವೂ ಕ್ರೀಡಾ ಕ್ಷೇತ್ರದ ಸಂಪರ್ಕವನ್ನು ಬಿಟ್ಟಿಲ್ಲ. ಈಗಲೂ ಸಹ ಹಲವು ಕರಾಟೆ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಆ ಮೂಲಕ ಕರಾಟೆ ಬಗ್ಗೆ ಇರುವ ಅಭಿಮಾನ ಹಾಗೂ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.
Also read: ಭಾರತ ಸೇವಾದಳವು ರಾಷ್ಟ್ರ ಧ್ವಜದ ಮಹತ್ವ ಸಾರುವ ಏಕೈಕ ಸಂಸ್ಥೆ: ವೈ.ಎಚ್. ನಾಗರಾಜ್
ಮೂಲತಃ ಕರ್ನಾಟಕ ರಾಜ್ಯದ ಮಂಗಳೂರಿನವರಾದ ಇವರು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಕರಾಟೆ ಬಗ್ಗೆ ಉತ್ಸಾಹವನ್ನು ತೋರಿದ್ದರು ಅದರ ಪರಿಣಾಮ ಅತ್ಯುತ್ತಮ ಕರಾಟೆಪಟುವಾಗಿ ಹೊರಹೊಮ್ಮಿದ್ದಾರೆ.
ಚಲನಚಿತ್ರರಂಗದಲ್ಲಿ ತಮ್ಮದೇ ಆದ ಹೆಸರನ್ನು ಮಾಡಿರುವ ಇವರು ಕನ್ನಡದ 30 ಚಲನಚಿತ್ರಗಳಲ್ಲಿ, ತೆಲುಗಿನ 150 ಚಿತ್ರಗಳಲ್ಲಿ, ತಮಿಳು ಭಾಷೆಯ 40 ಚಲನ ಚಿತ್ರಗಳಲ್ಲಿ, ಓರಿಸ್ಸಾ, ಹಿಂದಿ, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆ ಚಿತ್ರಗಳಲ್ಲೂ ಕೂಡ ಇವರು ಅಭಿನಯಿಸಿದ್ದಾರೆ.
ಕೊರೋನ ಸಂದರ್ಭದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವ ಮೂಲಕ ಜನ ಸೇವೆಯನ್ನು ಕೂಡಾ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾರತ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ಅಮೇರಿಕಾ ಸೇರಿದಂತೆ ವಿವಿಧ ರಾಷ್ಟ್ರ ಗಳಿಂದ 2000 ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಇಂತಹ ದೊಡ್ಡ ಮಟ್ಟದ ಕ್ರೀಡಾ ಕೂಟಕ್ಕೆ ಬಹುಭಾಷ ಚಿತ್ರನಟ ಸುಮಂತ್ ತಲ್ವಾರ್ ಆಗಮನ ಕ್ರೀಡಾಕೂಟದ ಮೆರಗನ್ನು ಮತ್ತಷ್ಟು ಹೆಚ್ಚಿಸಲಿದೆ. ವಿಶೇಷವೆಂದರೆ ಈ ಬಹುಭಾಷ ಕಲಾವಿದ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವುದು ಇದೇ ಪ್ರಥಮ ಭಾರಿಯಾಗಿದೆ.
ಶಿವಮೊಗ್ಗ ನಗರದ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ವಿವಿಧ ದೇಶಗಳಿಂದ ಬರುವಂತಹ ಕ್ರೀಡಾ ಪಟುಗಳಿಗೆ ಆತಿಥ್ಯವನ್ನು ನೀಡಲು ಈಗಗಲೇ ಎಲ್ಲಾ ರೀತಿಯ ತಯಾರಿ ಯನ್ನು ಮಾಡಿಕೊಳ್ಳಲಾಗುತ್ತಿದೆ. ಬಹುಭಾಷ ನಂಟ ಸುಮಂತ್ ತಲ್ವಾರ್ ಆಗಮನವನ್ನು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡಿ ಕಣ್‌ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post