ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತೀರ್ಥಹಳ್ಳಿ ಸಮೀಪದ ಶಿಂಗನಬಿದರೆ, ತಳಲೆ, ಕೀಗಡಿ ಮತ್ತು ಮಂಡಗದ್ದೆ ಗ್ರಾಮಗಳ ಸುತ್ತಮುತ್ತಲಿನ ತೋಟಗಳಲ್ಲಿ ಆನೆಗಳ ಹಾವಳಿಯಿಂದಾಗಿ ರೈತರು ಬೆಳೆದ ಅಡಿಕೆ ಗಿಡಗಳು ಹಾನಿಗೊಳಗಾಗಿದ್ದು, ಅದರ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗಜ್ಞಾನೇಂದ್ರ Home Minister Araga Gnanendra ಅವರು ಹೇಳಿದರು.
ಅವರು ಇಂದು ಆನೆಗಳಿಂದ ಹಾನಿಗೊಳಗಾದ ಕೀಗಡಿ ಗ್ರಾಮದ ರೈತರ ತೋಟಕ್ಕೆ ಅರಣ್ಯಾಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಅವರು, ಈಗಾಗಲೇ ಆನೆಗಳನ್ನು ಅರಣ್ಯಕ್ಕೆ ಹಿಂದಿರುಗಿಸಲು ಅರಣ್ಯಾಧಿಕಾರಿಗಳು ಕಳೆದ 2 ವಾರಗಳಿಂದ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆ ಆರಂಭಗೊಂಡ ನಂತರ ಆನೆಗಳು ಕಾಣದಾಗಿವೆ ಎಂದವರು ನುಡಿದರು.
ಇಲ್ಲಿನ ಬಹುತೇಕ ರೈತರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಾಗಿದ್ದು, ಅಂತಹ ರೈತರ ತೋಟಗಳೆ ಹಾನಿಗೊಳಗಾಗಿರುವುದು ನೋವಿನ ಸಂಗತಿ. ರೈತರು ಬೆಳೆದ ಪ್ರತಿಯೊಂದು ಅಡಿಕೆ ಮತ್ತಿತರ ಗಿಡಗಳ ಬೆಳವಣಿಗೆಯ ಹಿಂದಿನ ಶ್ರಮ ನಮಗೆ ಅರಿವಿದೆ. ಆದ್ದರಿಂದ ಸಂತ್ರಸ್ಥ ರೈತರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ಧನ ಬಿಡುಗಡೆ ಮಾಡುವಂತೆ ಹಾಗೂ ಪುನಃ ಆನೆಗಳ ಬರದಂತೆ ಕಂದಕ ನಿರ್ಮಿಸಲು ೨೯ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಕಂದಕ ನಿರ್ಮಾಣಕಾರ್ಯ ಆರಂಭಗೊಳ್ಳಲಿದೆ. ಇದರಿಂದಾಗಿ ಆನೆಗಳ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದ ಅವರು, ಯಾವುದೇ ರೈತರು ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ ಎಂದವರು ನುಡಿದರು.
Also read: ದೃಷ್ಟಿ ರಾಷ್ಟ್ರೀಯ ನೃತ್ಯ ಉತ್ಸವ : 19ರ ಸಂಜೆ ಚೌಡಯ್ಯ ಹಾಲ್‌ನಲ್ಲಿ ವಿಶೇಷ ನೃತ್ಯ ಸಮಾರಾಧನೆ
ಭದ್ರಾ ಅಭಯಾರಣ್ಯದಿಂದ ತುಂಗಾ ನದಿ ದಾಟಿ ಈ ಪ್ರದೇಶಕ್ಕೆ ಬಂದಿರುವ ಸಂಭವವಿದೆ. ಈ ಸಂಬಂಧ ಸಾಮಾಜಿಕ ಮತ್ತು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳಿಗೆ ಜಂಟಿಯಾಗಿ ಕಾರ್ಯಾಚರಣೆಗೆ ರೂಪುರೇಷೆಗಳನ್ನು ತಯಾರಿಸುವಂತೆ ಸೂಚಿಸಲಾಗಿದೆ ಎಂದ ಅವರು, ಅಲ್ಲದೇ ಕೀಗಡಿ ಮತ್ತು ರಿಪ್ಪನ್‌ಪೇಟೆ ಸಮೀಪದ ತಳಲೆಯಲ್ಲಿಯೂ ಸಾಕಷ್ಟು ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ. ಅರಣ್ಯ ಇಲಾಖೆಯಲ್ಲಿನ ಸಾಕಾನೆಗಳನ್ನು ಬಳಸಿಕೊಂಡು ಪುಂಡಾನೆಗಳನ್ನು ಹಿಂದಕ್ಕೆ ಕಳುಹಿಸುವ ಕಾರ್ಯ ನಡೆಸುವಂತೆಯೂ ಸೂಚಿಸಲಾಗಿದೆ ಎಂದರು.
ಇಲ್ಲಿನ ಅರಣ್ಯ ಪ್ರದೇಶ ಭೌಗೋಳಿಕವಾಗಿ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ಆನೆಗಳನ್ನು ಹುಡುಕುವುದು, ಅವುಗಳ ಇರುವನ್ನು ಗುರುತಿಸುವುದು ತಕ್ಷಣಕ್ಕೆ ಸಾಧ್ಯವಾಗುತ್ತಿಲ್ಲ ಎಂದ ಅವರು, ಆನೆಗಳ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದವರು ನುಡಿದರು.
Also read: ಅನಾರೋಗ್ಯದಿಂದ ಶಾಸಕ ಸಂಗಮೇಶ್ವರ್ ಚೇತರಿಕೆ: ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಸೀತಾರಾಮ್
ಮರಿಯಾನೆ ಮತ್ತು ಒಂದು ಹೆಣ್ಣಾನೆ ಇರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಫಸಲು ಬರುವ ಅಡಿಕೆ ಗಿಡಗಳ ಹಾನಿಗೆ ಸಂತ್ರಸ್ಥ ಬೆಳೆಗಾರರಿಗೆ ತಕ್ಷಣ ಪರಿಹಾರಧನ ವಿತರಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ದೊಡ್ಡ ಪ್ರಮಾಣದ 1.5ಕಿ.ಮೀ. ದೂರದ ಕಂದಕ ನಿರ್ಮಾಣ ಕಾರ್ಯಕ್ಕೂ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಅವರು ಮಾತನಾಡಿ, ಈಗಾಗಲೇ ಗುರುತಿಸಿದ ಆನೆಗಳನ್ನು 15 ದಿನಗಳ ಕಾರ್ಯಾಚರಣೆ ನಡೆಸಿ, ಹಿಮ್ಮೆಟ್ಟಿಸಲಾಗಿದೆ. ಹೊಸನಗರ ಸಮೀಪದ ತಳಲೆ ಗ್ರಾಮದ ಸುತ್ತಲ ಪ್ರದೇಶದಲ್ಲಿ ಆನೆಗಳು ಬೀಡು ಬಿಟ್ಟಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಅಲ್ಲಿಯೂ ಕಾರ್ಯಾಚರಣೆ ನಡೆಸಿ ಹಿಮ್ಮೆಟ್ಟಿಸಲಾಗುವುದು ಎಂದರು.
ಸುಮಾರು 395ಚದರ ಕಿ.ಮೀ. ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ಈ ಪ್ರದೇಶದಲ್ಲಿ ೧೩೦ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಜನರು ವಾಸವಾಗಿದ್ದಾರೆ. ಶೆಟ್ಟಿಹಳ್ಳಿ, ಮಲೆಶಂಕರ, ಮಂಜರಿಕೊಪ್ಪ ಮುಂತಾದ ಅನೇಕ ಗ್ರಾಮಗಳು ಅರಣ್ಯದಲ್ಲಿಯೇ ಇವೆ. ಬೇಸಿಗೆಯಲ್ಲಿ ಈ ಅರಣ್ಯ ಪ್ರದೇಶದ ಉದುರೆಲೆ ಕಾಡಾಗಿರುವುದರಿಂದ ಆಹಾರ ಕೊರತೆಯನ್ನು ನೀಗಿಸಿಕೊಳ್ಳಲು ಅಡವಿಯಲ್ಲಿನ ಆನೆಗಳು ಆಹಾರವನ್ನರಸಿ, ಪ್ರದೇಶದಿಂದ ಪ್ರದೇಶಕ್ಕೆ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಜನವಸತಿ ಪ್ರದೇಶದಲ್ಲಿನ ಜನರ ಭಯದಿಂದ ಹಾಗೂ ಸಿಡಿಮದ್ದು ಸಿಡಿಸುವುದರಿಂದ ಆನೆಗಳು ಹೆದರಿರುವ ಸಂಭವವೂ ಇಲ್ಲದಿಲ್ಲ ಎಂದ ಅವರು ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಇಲಾಖೆ ಅಗತ್ಯ ಕ್ರಮಕೈಗೊಳ್ಳಲಿದೆ ಎಂದರು.
ಆನೆಗಳ ಹಾವಳಿಯಿಂದ ಹಾನಿಗೊಳಗಾದ ಜಮೀನುಗಳ 16 ರೈತರು ಪರಿಹಾರಧನ ನೀಡುವಂತೆ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಪರಿಹಾರಧನ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿ.ಎಫ್.ಓ. ಶಂಕರ್, ಅರಣ್ಯ ಸಂರಕ್ಷಣಾಧಿಕಾರಿಗಳಾದ ಟಿ.ವೈ.ಅಕ್ಷತಾ, ಆದರ್ಶ, ಪ್ರಕಾಶ್ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ರೈತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post