ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 10 ನೇ ಸಂಸ್ಥಾಪನಾ ದಿನಾಚರಣೆಯನ್ನು ಸೆ. 26 ರಂದು ಹಾಗೂ 7ನೇ ಘಟಿಕೋತ್ಸವವನ್ನು ಸೆ. 28ರಂದು ಇರುವಕ್ಕಿಯ ಮುಖ್ಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ವಿವಿ ಕುಲಪತಿಗಳಾದ ಡಾ.ಆರ್.ಸಿ. ಜಗದೀಶ್ ತಿಳಿಸಿದರು.
ಇಂದು ನವುಲೆ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹತ್ತನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರಸ್ವಾಮಿಗಳು ವಹಿಸುವರು. ಸಂಸದರಾದ ಬಿ.ವೈ.ರಾಘವೇಂದ್ರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.

ಅಂದು ನಮ್ಮ ವಿಶ್ವವಿದ್ಯಾಲಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನೌಕರರನ್ನು ಗುರುತಿಸಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಸಂಶೋಧಕ ಪ್ರಶಸ್ತಿ, ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ, ಅತ್ಯುತ್ತಮ ಕ್ಷೇತ್ರ ಅಧೀಕ್ಷಕ ಪ್ರಶಸ್ತಿ, ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ (ಎ ಬಿ ಸಿ ಮತ್ತು ಡಿ), ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಕೈಗೊಳ್ಳಲು ಬಾಹ್ಯ ಸಂಸ್ಥೆಗಳ ಅನುದಾನ ಪಡೆದವರಿಗೆ ಪ್ರಶಂಸನಾ ಪತ್ರ, ಅತ್ಯುತ್ತಮ ಸಂಶೋಧನಾ ಪ್ರಬಂಧ ರಚನೆ ಮಾಡಿದ ವಿಜ್ಞಾನಿಗಳಿಗೆ ಪ್ರಶಸ್ತಿ/ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು ಎಂದರು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಏಳನೆಯ ಘಟಿಕೋತ್ಸವವನ್ನು ಸೆ. 28 ರಂದು ಬೆಳಿಗ್ಗೆ 11ಗಂಟೆಗೆ ಇರುವಕ್ಕಿ ಮುಖ್ಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ, ಪದವಿ ಪ್ರದಾನ ಮಾಡಿ ಮಾತನಾಡುವರು ಎಂದರು.
ಕೃಷಿ ಸಚಿವ ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಬಿ.ಸಿ. ಪಾಟೀಲ್ ಘಟಿಕೋತ್ಸವ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ. ಟ್ರಸ್ಟ್ ಫಾರ್ ಅಡ್ವಾನ್ಸ್ಮೆಂಟ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಅಧ್ಯಕ್ಷರು ಮತ್ತು ಹರಿಯಾಣದ ರೈತರ ಆಯೋಗದ ಅಧ್ಯಕ್ಷ ಡಾ. ಆರ್. ಎಸ್. ಪರೋಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಏಳನೆಯ ಘಟಿಕೋತ್ಸವ ಭಾಷಣವನ್ನು ಮಾಡುವರು ಎಂದು ಮಾಹಿತಿ ನೀಡಿದರು.

Also read: ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಸನ್ನಿಹಿತ: ಸಂಸದ ರಾಘವೇಂದ್ರ ಹೇಳಿದ್ದೇನು?
2020-21ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಐಸಿಎಆರ್-ಜೆಆರ್‌ಎಫ್ ಪರೀಕ್ಷೆಯಲ್ಲಿ ನಮ್ಮ ವಿವಿ ಯ ಒಟ್ಟು 14 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ. ಹಾಗೂ ಅಖಿಲ ಭಾರತ ಐಸಿಎಆರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 2 ವಿದ್ಯಾರ್ಥಿಗಳು ಎಸ್‌ಆರ್‌ಎಫ್ ಗಳಾಗಿ ಆಯ್ಕೆಯಾಗಿದ್ದಾರೆ. 15 ವಿದ್ಯಾರ್ಥಿಗಳು ಎನ್‌ಟಿಎಸ್(ಸ್ನಾತಕೋತ್ತರ) ಪ್ರವೇಶ ಪಡೆದುಕೊಂಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಸುಮಾರು 525.63 ಲಕ್ಷ ಅನುದಾನ ದೊರೆತಿದ್ದು 32 ಯೋಜನೆಗಳು ಅನುಷ್ಟಾನಗೊಳ್ಳಲಿವೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಇರುವಕ್ಕಿಯಲ್ಲಿ ಅನಾನಸ್ ಹಾಗೂ ಇತರ ಹಣ್ಣುಗಳು ಮತ್ತು ಶುಂಠಿಯನ್ನು ಸಂಸ್ಕರಣೆ ಮಾಡಿ ಅಭಿವೃದ್ದಿಪಡಿಸಲಾಗುತ್ತಿದೆ. ವಿಶ್ವವಿದ್ಯಾಲಯದ ಬೀಜ ಘಟಕದಿಂದ ಎಲ್ಲಾ ಸಂಶೋಧನಾ ಕೇಂದ್ರಗಳು ಮತ್ತು ಪ್ರಗತಿಪರ ರೈತರ ಕ್ಷೇತ್ರಗಳಲ್ಲಿ ಬೀಜೋತ್ಪಾದನೆ ಮತ್ತು ಸಸ್ಯೋತ್ಪಾದನೆ ಕಾರ್ಯಕ್ರಮಗಳ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಶಿಲೀಂದ್ರ ರೋಗ(ಎಲೆ ಚುಕ್ಕಿ ಇತರೆ) ನಿಯಂತ್ರಣ, ಆದಾಯಕ್ಕೆ ಪೂರಕವಾದ ಅಡಿಕೆ ಪರ್ಯಾಯ ಬೆಳೆ ಪದ್ದತಿ ಸೇರಿದಂತೆ ಅನೇಕ ಪ್ರಯೋಗ ಮತ್ತು ಸಂಶೋಧನೆಗಳ ಮುಖಾಂತರ ಕೃಷಿಕರ ಬದುಕನ್ನು ಹಸನುಗೊಳಿಸುವಂತಹ ಹಾಗೂ ಅದಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ಅಭಿವೃದ್ದಿಪಡಿಸಿ ಕೃಷಿಕರ ಸರ್ವತೋಮುಖ ಅಭಿವೃದ್ದಿಗಾಗಿ ವಿಶ್ವವಿದ್ಯಾಲಯ ಶ್ರಮಿಸುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿವಿ ಕುಲಸಚಿವರಾದ ಡಾ.ಲೋಕೇಶ್ ಹಾಜರಿದ್ದರು.










Discussion about this post