ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಪೊಲೀಸರ ಬಿಗಿ ಬಂದೋಬಸ್ತ್, ಯುವಕರ ಸಂಭ್ರಮೋತ್ಸವ, ಕಲಾತಂಡಗಳ ಸಡಗರಗಳ ನಡುವೆ ಶಾಂತಿಯುತವಾಗಿ ಸಾಗುತ್ತಿದ್ದು, ಮಾರ್ಗದುದ್ದಕ್ಕೂ ಅಪಾರ ಸಂಖ್ಯೆಯ ಜನ ವೀಕ್ಷಿಸಲು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ಬಜರಂಗದಳ, ವಿಶ್ವ ಹಿಂದು ಪರಿಷತ್, ಹಿಂದು ಮಹಾಸಭಾ ಸೇರಿದಂತೆ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಭಗವಾಧ್ವಜ ಹಿಡಿದು ಯುವಕರು ಜೈ ಶ್ರೀ ರಾಮ ಘೋಷಣೆ ಕೂಗುತ್ತಿದ್ದರು. ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿದೆ. ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಬಿ.ಹೆಚ್.ರಸ್ತೆ, ಅಶೋಕವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ದುರ್ಗಿಗುಡಿ, ಮಹಾವೀರ ವೃತ್ತ, ಬಾಲರಾಜ್ ಅರಸು ರಸ್ತೆ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್ ರಾರಾಜಿಸುತ್ತಿವೆ. ಪ್ರಮುಖ ವೃತ್ತಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳು ಕೇಸರಿ ಬಾವುಟಗಳನ್ನು ಕಟ್ಟಲಾಗಿದೆ.

ಗಾಂಧಿಬಜಾರ್‌ನ ಪ್ರವೇಶದ್ವಾರದಲ್ಲಿ ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ ಪರಮಾತ್ಮನ ಸಾರಥ್ಯದಲ್ಲಿ ಅರ್ಜುನ ಯುದ್ಧ ಮಾಡುತ್ತಿರುವ ಪ್ರತಿಕೃತಿಯನ್ನು ಸ್ಥಾಪಿಸಲಾಗಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ. ಕೆಜಿಎಫ್-2 ಚಿತ್ರದಲ್ಲಿ ಕಲಾ ವಿಭಾಗದಲ್ಲಿ ಕೆಲಸ ಮಾಡಿರುವ ಓತಿಘಟ್ಟದ ಜೀವನ್ ಇದನ್ನು ನಿರ್ಮಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ಈ ದೃಶ್ಯವನ್ನು ಅಪಾರ ಸಂಖ್ಯೆ ಜನಸ್ತೋಮ ಸೇರಿ ಕಣ್ತುಂಬಿಕೊಳ್ಳುತ್ತಿದ್ದುದು ಕಂಡು ಬಂತು. ಯುವಕ, ಯುವತಿಯರು ಫೋಟೋ, ಸೆಲ್ಪಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶಿವಪ್ಪನಾಯಕ ವೃತ್ತದಲ್ಲಿ ಶ್ರೀರಾಮಚಂದ್ರ, ವಿಷ್ಣು ದಶಾವತಾರ, ಆಂಜನೇಯ, ಡಾ.ಬಿ.ಆರ್. ಅಂಬೇಡ್ಕರ್ ಕಟೌಟ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಲಾಗಿದೆ.

Also read: ದಾಖಲೆಗಳಿಲ್ಲದೆ ಹಣ ಇಟ್ಟುಕೊಂಡಿದ್ದ ಮೂವರ ಬಂಧನ; 76 ಲಕ್ಷ ಹಣ, 3 ಮೊಬೈಲ್ ಸಿಸಿಬಿ ಪೋಲಿಸ್ ವಶ
ಇನ್ನು ಮೊದಲು ಡಿಜೆಗೆ ಅವಕಾಶ ನೀಡದ ಪೊಲೀಸ್ ಇಲಾಖೆ ಒತ್ತಡ ಹೆಚ್ಚಾಗಿದ್ದರಿಂದ ಡಿಜೆಗೆ ಅವಕಾಶ ಕಲ್ಪಿಸಿದ್ದು, ಗೋಪಿ ವೃತ್ತದಲ್ಲಿ ಡಿಜೆ ನೃತ್ಯಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಭದ್ರತೆಗಾಗಿ ಮೂರು ಸಾವಿರಕ್ಕೂ ಅಧಿಕ ಪೊಲೀಸರನ್ನು ಹೊರ ಜಿಲ್ಲೆಗಳಿಂದ ಕರೆಸಿಕೊಳ್ಳಲಾಗಿದೆ. ಎರಡು ಎಎಸ್ಪಿ, 19 ಡಿವೈಎಸ್ಪಿ, 40 ಪೊಲೀಸ್ ಇನ್ಸ್‌ಪೆಕ್ಟರ್, 71 ಪೊಲೀಸ್ ಸಬ್ ಇನ್ಸ್‌ಪೆಕ್ಟರ್, 1970 ಪೊಲೀಸ್ ಸಿಬ್ಬಂದಿ, 700 ಗೃಹರಕ್ಷಕ ಸಿಬ್ಬಂದಿ, 200 ಸಿಬ್ಬಂದಿಗಳನ್ನೊಳಗೊಂಡ ಆರ್‌ಎಎಫ್ ತುಕಡಿ, 15 ಕೆಎಸ್‌ಆರ್‌ಪಿ ತುಕಡಿ, 15 ಡಿ.ಎ.ಆರ್ ತುಕಡಿ, ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಮುನ್ನಚ್ಚರಿಕೆ ಕ್ರಮವಾಗಿ ನಗರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಒಟ್ಟಾರೆಯಾಗಿ ಹಿಂದೆಂದಿಗಿಂತಲೂ ಅದ್ದೂರಿಯಾಗಿ ಗಣಪತಿ ರಾಜಬೀದಿ ಉತ್ಸವ ಸಾಗುತ್ತಿದೆ.










Discussion about this post