ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈವಿಧ್ಯಮಯ ಸಂಸ್ಕೃತಿಗಳನ್ನು ಹೊಂದಿ ಏಕತೆಯಿಂದ ಇರುವುದು ಭಾರತದ ಹಿರಿಮೆ. ವಿಶ್ವದಲ್ಲೇ ಅತೀ ಉತ್ಕೃಷ್ಟ, ವಿಶಿಷ್ಠ, ವಿಭಿನ್ನ, ವೈಭವ ಭರಿತ ಸಂಸ್ಕೃತಿ ನಮ್ಮ ದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ. ಭಾರತದ ಸಂಸ್ಕೃತಿ, ಪಾರಂಪರಿಕತೆ, ಭಾಷೆ, ಕಲೆ, ಸಾಹಿತ್ಯ ಆಹಾರ, ಉಡುಪು, ಪ್ರತಿಯೊಂದರಲ್ಲೂ ವೈವಿಧ್ಯತೆ ಇದ್ದರೂ ಭಾವ ಕೋಶದ ಏಕತೆ ನಮ್ಮ ದೇಶದ ಹಿರಿಮೆ. ಈ ಹಿರಿಮೆಯ ಮೂಲ ಸೆಲೆ ನಮ್ಮ ದೇಶದ ಮಹಿಳೆಯರು ಎಂದು ಲೇಖಕಿ ಶ್ರೀರಂಜಿನಿ ದತ್ತಾತ್ರಿ ಅಭಿಪ್ರಾಯಪಟ್ಟರು.
ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸದಸ್ಯಿನಿಯರಿಗಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ನೇತೃತ್ವ ವಹಿಸಿ ಭಾರತದ ಸಾಂಸ್ಕೃತಿಕ ವೈಭವದ ಮೂಲ ಸೆಲೆ ಭಾರತೀಯ ಮಹಿಳೆ ಎಂಬ ವಿಚಾರವಾಗಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಪ್ರತೀ 5ಕಿಲೋ ಮೀಟರ್‌ಗೂ ವೈವಿಧ್ಯಮಯ ಸಂಸ್ಕೃತಿಯನ್ನು ಕಾಣುತ್ತೇವೆ. ಪುರಾತನ ಸಂಸ್ಕೃತಿ, ವೇದ ಕಾಲದ ಸಂಸ್ಕೃತಿ, ವೈದಿಕ, ಶೈವ, ಭೌದ್ಧ, ಜೈನ, ಸಿಖ್ ಹೀಗೆ ಯಾವುದೇ ಧರ್ಮದ, ಪ್ರಾಂತದ ಸಂಸ್ಕೃತಿಕ ಇತಿಹಾಸವನ್ನು ಸಂಶೋಧಿಸುತ್ತಾ ಸಾಗಿದರೆ ಮಹಿಳೆಯರ ಕೊಡುಗೆ ಅಪಾರವಾಗಿ ಕಂಡುಬರುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ಮತ್ತಷ್ಟು ಅಧ್ಯಯನಗಳು ನಡೆಯಬೇಕು ಎಂದರು.
Also read: ಮೇ 6ರಂದು ಅನಂತ ಪ್ರೇರಣಾ ಕೇಂದ್ರ ಲೋಕಾರ್ಪಣೆ: ತೇಜಸ್ವಿನಿ ಅನಂತಕುಮಾರ್
ಈ ದೇಶದ ಸಾಂಸ್ಕೃತಿಕ, ಧಾರ್ಮಿಕ, ಪಾರಂಪರಿಕತೆಗಳ ಜೊತೆಗೆ ಭಾಷೆ, ಕಲೆ, ಸಾಹಿತ್ಯ, ಆಹಾರ, ಉಡುಪು, ತೊಡಪು ಎಲ್ಲದರಲ್ಲೂ ಪ್ರಾಂತ ಪ್ರಾಂತಗಳಲ್ಲೂ ವಿವಿಧತೆಯೊಂದಿಗೆ, ವೈವಿಧ್ಯತೆಯನ್ನೂ ಕಾಣುತ್ತೇವೆ. ಸಂಸ್ಕೃತಿಗಳ ಮಹಾ ಪ್ರವಾಹವೇ ನಮ್ಮ ದೇಶದಲ್ಲಿದೆ. ಹೆದ್ದೆರೆಗಳೋಪಾದಿಯಲ್ಲಿ ಇರುವ ಈ ಸಂಸ್ಕೃತಿಯ ಮೇಲೆ ಸಾವಿರಾರು ವರುಷಗಳಿಂದಲೂ ಆಕ್ರಮಣಗಳು ನಡೆಯುತ್ತಾ ಬಂದರೂ ಏಕತೆಯನ್ನೂ ವೈಭವವನ್ನೂ ಉಳಿಸಿಕೊಂಡು ಸಾಗುತ್ತಿರುವುದಕ್ಕೆ ಪ್ರತೀ ಕುಟುಂಬದ ಮಹಿಳೆಯರೇ ಕಾರಣ ಎಂದರು.
ಪ್ರಸ್ತುತ ದಿನಗಳಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಅತ್ಯಂತ ಮಹತ್ವದ್ದು, ಕಾರಣ ನಾವೆಲ್ಲರೂ ಇಂದು ಒತ್ತಡ ಭರಿತ, ಸ್ವಾರ್ಥಪರ ಚಿಂತನೆಗಳ, ಆಡಂಬರದ ಆಧುನಿಕ ಜೀವನ ಕ್ರಮದಲ್ಲಿ ಬದುಕುತ್ತಿದ್ದೇವೆ. ಇಂತಹ ಜೀವನ ಕ್ರಮದಲ್ಲಿರುವ ನಮಗೆ ಬೇರೆ ದೇಶದ್ದು ಬಿಡಿ, ನಮ್ಮ ಭಾರತ ದೇಶದ ವಿವಿಧ ಸಂಸ್ಕೃತಿ, ಭಾಷೆ, ವೇಷ, ಸ್ಥಳ ಇತ್ಯಾದಿಗಳ ಅಂದ ಚೆಂದಗಳನ್ನು ಸವಿಯುವ ಮನಸ್ಥಿತಿಯನ್ನು ಕಳೆದುಕೊಂಡು ಬಿಟ್ಟಿದ್ದೇವೆ ಅಥವಾ ನಿಲ್ಲಿಸಿಬಿಟ್ಟಿದ್ದೇವೆ. ನಮ್ಮೊಳಗಿನ ಸಂಬಂಧಗಳ ಸೆಲೆಗಳು ಒತ್ತಡ, ಸ್ವಾರ್ಥ, ಲೋಭ, ಮೋಹ ಇತ್ಯಾದಿಗಳಿಂದಾಗಿ ನಶಿಸಿಯೇ ಹೋಗುತ್ತಿವೆ. ಭಾರತದ ಹಿರಿಮೆ, ಉಳಿವು, ನಲಿವುಗಳು ಉಳಿದಿರುವುದೇ ಸಂಸ್ಕೃತಿಗಳ ಹೂರಣದಲ್ಲಿ. ಈ ದಿಸೆಯಲ್ಲಿ ಸಾಂಸ್ಕೃತಿಕ ವೈಭವದಂತಹ ಕಾರ್ಯಕ್ರಮಗಳ ಅವಶ್ಯಕತೆ ಬಹಳವಿದೆ ಎಂದು ತಿಳಿಸಿದರು.
ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಶಿವಮೊಗ್ಗದ ಅಧ್ಯಕ್ಷೆ ಪುಷ್ಪಾ ಎಸ್. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರ ನಮ್ಮ ಪೂರ್ವಜರು ನಮಗೆ ನೀಡಿದ ಕೊಡುಗೆ. ಒಂದೊಂದು ರಾಜ್ಯದಲ್ಲೂ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಕಂಡು ಬರುತ್ತದೆ. ಈ ವೈಭವಗಳನ್ನು ಒಟ್ಟುಗೂಡಿಸಿದರೆ ಅದೆಷ್ಟು ಭವ್ಯ ನಮ್ಮದೇಶ ಎಂಬ ಹೆಮ್ಮೆ ನಮಗುಂಟಾಗುತ್ತದೆ. ಈ ದಿಸೆಯಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್‌ನಿಂದ ಈ ಬಾರಿ ವಿಶೇಷವಾದ ಸಾಂಸ್ಕೃತಿ ವೈಭವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ವಿವಿಧ ಸಂಸ್ಕೃತಿಗಳ ಅಪೂರ್ವ ವೈಭವ, ವಿವಿಧತೆಯಲ್ಲಿ ಏಕತೆಯನ್ನೂ ಸಾರುವುದೇ ಈ ಕಾರ್ಯಕ್ರಮದ ಉದ್ದೇಶವೂ ಆಗಿದೆ ಎಂದು ತಿಳಿಸಿದರು.
ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಶಿವಮೊಗ್ಗದ ಸದಸ್ಯನಿಯರು ತಮ್ಮ ಗುಂಪಿನ ನಾಯಕಿಯರ ನೇತೃತ್ವದಲ್ಲಿ ವಿವಿಧ ರಾಜ್ಯಗಳ ವೇಷಭೂಷಣಗಳನ್ನು ಪ್ರಸ್ತುತಪಡಿಸಿದರು. ಮಧುಮತಿ ಮಂಜುನಾಥ್ ತಂಡದ ಗೋವಾ ವೇಷಭೂಷಣ, ಶಾಂತ ಎಸ್ ಶೆಟ್ಟಿ ತಂಡ ಗುಜರಾಥಿ, ಶಾಂತ ಸುರೇಂದ್ರ ತಂಡ ಬೆಂಗಾಲಿ, ಲಲಿತಾಗುರುಮೂರ್ತಿ ತಂಡ ಕರ್ನಾಟಕ, ಉಮಾ ಚಂದ್ರಪ್ಪ ತಂಡ ಮರಾಠಿ, ವಾತ್ಯಲ್ಯ ತಂಡ ಕೊಡಗು, ಮಮತಾ ಶಿವಕುಮಾರ್ ತಂಡ ಉತ್ತರ ಕರ್ನಾಟಕ, ಎಕ್ಸಿಕ್ಯುಟಿವ್ ಕಮಿಟಿಯಿಂದ ರೆಟ್ರೋ ಸ್ಟೈಲ್, ಶ್ರೀರಂಜಿನಿ ದತ್ತಾತ್ರಿ ತಂಡ ಕೇರಳ ವೇಷ ಭೂಷಣದಲ್ಲಿ ಕಂಗೊಳಿಸಿದರು.
ವಾಣಿರತ್ನಾಕರ್ ನಿರೂಪಣೆ ನೆರವೇರಿಸಿದರು. ಸಂಪಿಗೆ ತಂಡದ ಉಷಾ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು. ಶಶಿಕಲಾ, ಪುಷ್ಪಾ ಮಂಜಪ್ಪ, ಎಂ. ಪುಷ್ಪಾವತಿ, ಮಮತಾರಾವ್, ಸುಧಾ ಮಹೇಶ್, ಸುಮಿತಾ ಮಂಜುನಾಥ್, ಸುಶ್ಮಾ ನಿರಂಜನ್, ಶಶಿಕಲಾರವರು, ಉಷಾಕುಲಕರ್ಣಿ, ಪುಷ್ಪಮಂಜಪ್ಪ, ಮಮತಾರಾವ್, ಸುಮಿತ್ರಾ ಮಂಜುನಾಥ್, ಸುರೇಖಾ ಮುರಳೀಧರ್, ಭಾರತೀ ರಾಮಕೃಷ್ಣ ಉಪಸ್ಥಿತರಿದ್ದರು.
ಮೊದಲು ಬಂದ ಇಪ್ಪತ್ತು ಸದಸ್ಯನಿಯರಿಗೆ ವಿಶೇಷ ಬಹುಮಾನ ಹಾಗೂ ಸಾಂಸ್ಕೃತಿಕ ವೈಭವದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಬಹುಮಾನ ನೀಡಿ ಗೌರವಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post