ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ತಿಂಗಳು 23 ರಂದು ಜನಿಸಿದ ಅಪರೂಪದ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದ ಭದ್ರಾವತಿ ತಾಲೂಕು ತಡಸ ಗ್ರಾಮದ ಅಲ್ಮಾಸ್ ಬಾನು ಅವರು ಆರೋಗ್ಯವಂತ ನಾಲ್ಕೂ ಮಕ್ಕಳೊಂದಿಗೆ ಮನೆಗೆ ಮರಳುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ ಎಂದು ಡಾ. ಧನಂಜಯ ಸರ್ಜಿ Dr. Dhananjaya Sarji ತಿಳಿಸಿದ್ದಾರೆ.
ಇಂದು ಸರ್ಜಿ ಆಸ್ಪತ್ರೆಯಲ್ಲಿ ತಾಯಿ ಮತ್ತು ಮುದ್ದಾದ 4 ಮಕ್ಕಳನ್ನು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಅತ್ಯಂತ ಸಂತೋಷದಿಂದ ತಾಯಿ ಮಕ್ಕಳನ್ನು ಬೀಳ್ಕೊಟ್ಟರು.
ಮಕ್ಕಳ ತೂಕ ಕಡಿಮೆ ಹಾಗೂ ಅಲ್ಪ ಪ್ರಮಾಣದ ಉಸಿರಾಟದ ತೊಂದರೆ ಇದ್ದರಿಂದ ನವಜಾತ ಶಿಶುಗಳನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ಅಲ್ಲದೇ 2 ಶಿಶುಗಳಿಗೆ ಸಿಪ್ಯಾಪ್ ಅಳವಡಿಸಿ, ಇನ್ನೆರಡು ಶಿಶುಗಳಿಗೆ ಆಕ್ಷಿಜನ್, ಕಾಂಗೂರು ಮದರ್ ಕೇರ್ ಹಾಗೂ ಆಗಾಗ ಸೂಕ್ತ ಚಿಕಿತ್ಸೆ ನೀಡುವುದರ ಮೂಲಕ ಎದೆ ಹಾಲು ನೀಡಲಾಯಿತು. ಈಗ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.
Also read: ಪೆಸಿಟ್ ಕಾಲೇಜಿನ ಕೆ.ಎಲ್. ಚಂದ್ರಶೇಖರ್‌ಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್‍ಡಿ
ಮಕ್ಕಳು ಜನಿಸಿದ ಬಳಿಕ ಆರೋಗ್ಯದಲ್ಲಿ ಹಲವು ಸಮಸ್ಯೆಗಳು ಕಂಡು ಬಂದಿದ್ದವು. ಆ ಸಂದರ್ಭ ಶಿಶುಗಳನ್ನು ರಕ್ಷಣೆ ಮಾಡುವುದೇ ಆಸ್ಪತ್ರೆಯ ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಆದರೆ, ನಮ್ಮ ಆಸ್ಪತ್ರೆಯ ವೈದ್ಯರ ಬಳಗ ಅತ್ಯಂತ ನಿಗಾ ವಹಿಸಿ ಚಿಕಿತ್ಸೆ ನೀಡಿದೆ. ಪರಿಣಾಮ ಮುದ್ದಾದ ಆರೋಗ್ಯಪೂರ್ಣ ಮಕ್ಕಳೊಂದಿಗೆ ಅಲ್ಮಾಸ್ ಅವರು ತಮ್ಮ ಊರಿಗೆ ತೆರಳುತ್ತಿದ್ದಾರೆ. ಇದು ಆಸ್ಪತ್ರೆಯ ವೈದ್ಯ ವೃಂದದಲ್ಲಿ ಅತ್ಯಂತ ಸಂತಸವನ್ನು ಉಂಟು ಮಾಡಿದೆ. ಅಲ್ಲದೆ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಕೀಯ ನಿರ್ದೇಶಕ ಡಾ. ಧನಂಜಯ ಸರ್ಜಿ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.
ತಮ್ಮ ಸೇವಾವಧಿಯಲ್ಲಿ 4 ಮಕ್ಕಳ ಜನನವನ್ನು ನೋಡಿದ್ದು, ಇದು ಎರಡನೇ ಬಾರಿ. ಆದರೆ, ನಾಲ್ಕೂ ಮಕ್ಕಳಿಗೆ ಹೊಟ್ಟೆ ತುಂಬಾ ಎದೆ ಹಾಲು ಉಣಿಸಿದ ಮಹಾತಾಯಿ ಅಲ್ಮಾಸ್ ಭಾನು ಎಂದು ಮಕ್ಕಳ ತಜ್ಞ ವೈದ್ಯರಾದ ಡಾ .ಅನಿಲ್ ಕಲ್ಲೇಶ್ ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಅಲ್ಮಾಸ್ ಭಾನು ಅವರಿಗೆ ಹೆರಿಗೆ ಮಾಡಿಸಿದ ಪ್ರಸೂತಿ ಮತ್ತು ಹೆರಿಗೆ ತಜ್ಞ ವೈದ್ಯರಾದ ಡಾ. ಚೇತನಾ ಅವರು ಆರೋಗ್ಯವಂತ ತಾಯಿ ಮತ್ತು 4 ಮಕ್ಕಳನ್ನು ಸಂತಸದಿಂದ ಕಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ನಮಿತಾ ಸರ್ಜಿ, ವೈದ್ಯಕೀಯ ಅಧೀಕ್ಷಕರಾದ ಡಾ. ಹೆಚ್.ಎಸ್. ಸತೀಶ್, ಆಡಳಿತಾಧಿಕಾರಿ ಕೆ.ಆರ್. ಪುರುಷೋತ್ತಮ ಹಾಗೂ ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂದಿಯವರು ಸಂತೋಷದಿಂದ ತಾಯಿ ಮತ್ತು ಮಕ್ಕಳನ್ನು ಬೀಳ್ಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post