ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಮಂಗಳವಾರ 2020-21ನೇ ಸಾಲಿನ ಮುಂಗಾರು ಹಂಗಾಮಿನ ಭತ್ತದ ಬೆಳೆಯಲ್ಲಿ ತಾಲೂಕಿಗೆ ತೃತಿಯ ಸ್ಥಾನ ಪಡೆದ ಹಿರೇಶಕುನ ನಿವಾಸಿ ಪರಶುರಾಮಪ್ಪ ಸಣ್ಣಬೈಲ್ ಅವರಿಗೆ ಕೃಷಿ ತಾಂತ್ರಿಕ ಅಧಿಕಾರಿ ಎನ್. ಕಾಂತರಾಜ್ ಅವರು ಪ್ರಶಸ್ತಿ ಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ತಾಂತ್ರಿಕ ಅಧಿಕಾರಿ ಎನ್. ಕಾಂತರಾಜ್, ರೈತರಲ್ಲಿ ಕೃಷಿಯಲ್ಲಿ ಉತ್ತೇಜಿಸುವ ಉದ್ದೇಶದಿಂದ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ತೀರ್ಪು ಸಮಿತಿಯುವರು ಅತಿ ಹೆಚ್ಚು ಇಳುವರಿ ಪಡೆದ ರೈತರ ಆಯ್ಕೆಯನ್ನು ನಡೆಸಿದ್ದು, ಅಂತೆಯೇ ಒಂದು ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚು ಭತ್ತ ಬೆಳೆದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಜಡೆ ಹೋಬಳಿಯ ಯಡಗೊಪ್ಪ ಗ್ರಾಮದ ನಿಂಗಪ್ಪ ಅವರು 83.851 ಕ್ವಿಂಟಾಲ್ ಭತ್ತ ಬೆಳೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದರೆ, ನೇರಲಗಿ ಗ್ರಾಮದ ಸತೀಶ್ ಸ್ವಾಮಿ 83.316 ಕ್ವಿಂಟಾಲ್ ಭತ್ತ ಬೆಳೆದು ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನವನ್ನು ಪರಶುರಾಮ ಸಣ್ಣಬೈಲ್ ಅವರು 80.376 ಕ್ವಿಂಟಾಲ್ ಭತ್ತ ಬೆಳೆಯುವ ಮೂಲಕ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
Also read: ಮಕ್ಕಳ ಸಹಾಯವಾಣಿ ಬಗ್ಗೆ ವ್ಯಾಪಕ ಪ್ರಚಾರ ಎಲ್ಲಾ ಇಲಾಖೆ ಜವಾಬ್ಧಾರಿ: ಗಿರೀಶ ದಿಲೀಪ್ ಬದೋಲೆ
ಪ್ರಶಸ್ತಿ ಸ್ವೀಕರಿಸಿದ ರೈತ ಪರಶುರಾಮ್ ಸಣ್ಣಬೈಲ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವ ಸಮೂಹ ಕೃಷಿಯಿಂದ ವಿಮುಖರಾಗುತ್ತಿರುವುದು ದುರ್ಧೈವದ ಸಂಗತಿಯಾಗಿದೆ. ಭೂಮಿಯನ್ನು ನಂಬಿ, ಕಾಯಕವೇ ಕೈಲಾಸ ಎಂದು ಕೃಷಿಯಲ್ಲಿ ತೊಡಗಿದಾಗ ಎಂದಿಗೂ ರೈತನಿಗೆ ಸೋಲು ಎಂಬುದು ಇಲ್ಲ. ಕೃಷಿ ಇಲಾಖೆಯಿಂದ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇಂತಹ ಪ್ರಶಸ್ತಿಗಳನ್ನು ನೀಡಿದಾಗ ರೈತರಲ್ಲೂ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು ಎನ್ನುವ ಉತ್ಸಾಹ ಹೆಚ್ಚಾಗುತ್ತದೆ ಎಂದರು.
ಕೃಷಿ ಇಲಾಖೆಯ ಕಸಬಾ ಹೋಬಳಿಯ ಕೃಷಿ ಅಧಿಕಾರಿ ಬಿ.ವಿ. ವಿಜಯಕುಮಾರ್ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post