ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಭಕ್ತಕೋಟಿಗೆ ಆರೋಗ್ಯ ನೀಡುವ ಶ್ರೀ ಧನ್ವಂತರಿ ದೇವರ ಅತಿ ದೊಡ್ಡ ಮೂರ್ತಿಗೆ ನಿತ್ಯವೂ ಸೇವೆ ನಡೆಯುವ ಕ್ಷೇತ್ರವಾಗಿ ಮೈಸೂರು ಗುರುತಿಸಿಕೊಂಡಿದೆ. ಇದು ಸತ್ಯ. ಈ ಧನ್ವಂತರಿ ದೇವ ಪ್ರತಿಷ್ಠಾಪನೆಗೊಂಡಿರುವುದು ಮೈಸೂರಿನ ಅಗ್ರಹಾರದ ಉತ್ತರಾದಿ ಮಠದಲ್ಲಿ Mysore Uttaradhi Mutt. ಎರಡು ಪುರಾತನ ಮೂಲ ವೃಂದಾವನವಿರುವ ಪವಿತ್ರ ತಾಣದಲ್ಲಿ ಧನ್ವಂತರಿ ನೆಲೆ ಇರುವುದು ಭಕ್ತಗಣದ ಯೋಗಾಯೋಗ.
ಕೈಯಲ್ಲಿ ಅಮೃತ ಕಲಶ ಹಿಡಿದು ಕ್ಷೀರ ಸಮುದ್ರ ಮಥನ ಕಾಲದಲ್ಲಿ ಮಹಾವಿಷ್ಣು ಧನ್ವಂತರಿ ಅವತಾರ ತಾಳಿದ ಎಂದು ಪುರಾಣಗಳು ವರ್ಣಿಸಿವೆ. ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿದರೆ ದೇಹ ಮತ್ತು ಮನಸ್ಸು ಚೈತನ್ಯಪೂರ್ಣವಾಗುತ್ತವೆ ಎನ್ನುತ್ತದೆ ಧನ್ವಂತರಿ ಸುಪ್ರಭಾತ. ಈತ ವಿಶ್ವದ ಮೊದಲ ವೈದ್ಯ. ಆಯುರ್ವೇದದ ಹರಿಕಾರನೂ ಹೌದು.
ದ್ವೈತಮತ ಸಿದ್ಧಾಂತಿ ಶ್ರೀಮಧ್ವರು ತಂತ್ರಸಾರ ಸಂಗ್ರಹದಲ್ಲಿ ವರ್ಣಿಸಿದಂತೆ ಏಕಶಿಲಾ ಮೂರ್ತಿಯನ್ನು ಮೈಸೂರಿನಲ್ಲಿ ಪ್ರತಿಷ್ಠಾಪಿಸಬೇಕೆಂದು ಶ್ರೀ ಸತ್ಯಾತ್ಮತೀರ್ಥರು ಮಾಡಿದ ಸಂಕಲ್ಪ 2021ರ ಜೂನ್ 20ರಂದು ನೆರವೇರಿತು. ಜ್ಯೇಷ್ಠ ಶುಕ್ಲದಶಮಿ ಪುಣ್ಯದಿನದಂದು ಪ್ರಾಣಪ್ರತಿಷ್ಠೆ ಮಾಡುವ ಸಂದರ್ಭ `ವಿಶ್ವಕ್ಕೆ ಅಂಟಿದ ಮಹಾಮಾರಿ ಕರೋನಾ ನಿರ್ಮೂಲನೆಯಾಗಲಿ’ ಎಂದು ಶ್ರೀಗಳು ಮಾಡಿದ ಪ್ರಾರ್ಥನೆ ಶೀಘ್ರ ಫಲಿಸಿದ್ದೂ ಗಮನಾರ್ಹ. ೮ ಅಡಿ ಎತ್ತರದ ಏಕಶಿಲಾಮೂರ್ತಿ ಒಂದು ಕೈಯಲ್ಲಿ ಅಮೃತ ಕಲಶ, ಇನ್ನೊಂದು ಕೈಯಲ್ಲಿ ಅಭಯಪ್ರದನಾಗಿ ಪದ್ಮಾಸನದಲ್ಲಿ ಆಸೀನವಾಗಿರುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ.
ಅನಂತ ಫಲ ಲಭ್ಯ:
ಧನ್ವಂತರಿ ದೇವರಸಹಿತ ಶ್ರೀ ಸತ್ಯಸಂಕಲ್ಪರು ಮತ್ತು ಶ್ರೀ ಸತ್ಯಸಂತುಷ್ಟ ತೀರ್ಥರ ವೃಂದಾವನ ಸನ್ನಿಧಾನಕ್ಕೆ ಪ್ರತಿನಿತ್ಯವೂ ಭಕ್ತರು 3 ಅಥವಾ 5 ಪ್ರದಕ್ಷಿಣೆ ಹಾಕುತ್ತಾರೆ. ವಾರದಲ್ಲೇ ಅವರ ಸಂಕಲ್ಪ ಸಿದ್ಧಿಸುತ್ತದೆ. ವಿವಿಧ ಕಾಯಿಲೆಗಳಿಂದ ನರಳುತ್ತಿದ್ದವರು, ತಜ್ಞರಿಂದಲೇ ವಾಸಿ ಮಾಡಲಾಗದ ವ್ಯಾಧಿಗಳಿಂದ ಬಳಲುತ್ತಿದ್ದವರು ಇಲ್ಲಿ ಬಂದು ನಮಿಸಿದ್ದರ ಫಲವಾಗಿ ಚೇತರಿಕೆಗೊಂಡಿದ್ದಾರೆ. ಪವಾಡಸದೃಶವಾಗಿ ಹಲವರು ಬದುಕುಳಿದ ಪ್ರಸಂಗಗಳೂ ಇವೆ. ಆಯುರಾರೋಗ್ಯ ಪ್ರಾಪ್ತಿಯಾಗಿ, ಹತ್ತಾರು ಕಂಟಕಗಳಿಂದ ಮುಕ್ತಿಹೊಂದಿ ಜೀವನದಲ್ಲಿ ಹೊಸ ಬೆಳಕನ್ನು ಕಂಡು ಸಂಭ್ರಮಿಸಿದವರ ಸಂಖ್ಯೆ ದೊಡ್ಡದೇ ಇದೆ. ಹೀಗೆ ಅನುಗ್ರಹೀತರಾದವರು ದೇವರಿಗೆ ಶಕ್ತ್ಯಾನುಸಾರ ಆತ್ಮಪೂರ್ವಕ ಸೇವೆಗಳನ್ನು ಸಮರ್ಪಿಸುತ್ತಾರೆಂದರೆ ಅದು ಭಕ್ತಿ ಭಾವದ ಪ್ರತೀಕವೇ ಆಗಿದೆ. ಇಲ್ಲಿ ಯಾವುದೇ ಜಾತಿ, ಮತ ತಾರತಮ್ಯವಿಲ್ಲ. ಮೇಲು- ಕೀಳು ಭೇದವಿಲ್ಲ. ಆಬಾಲವೃದ್ಧರಾಗಿ ಎಲ್ಲರೂ ಬಂದು ಸೇವೆ ಸಮರ್ಪಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಇಬ್ಬರು ಯತಿಗಳ ಸನ್ನಿಧಾನವನ್ನು ಪೂಜಿಸುವ ಯೋಗ ನನಗೆ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯವೇ ಸರಿ.
ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ ಸುಧಾ ಗ್ರಂಥ ಅಧ್ಯಯನ ಪೂರ್ಣಗೊಳಿಸಿ ಈ ಸನ್ನಿಧಾನಕ್ಕೆ ವ್ಯವಸ್ಥಾಪಕನಾಗಿ ನೇಮಕಗೊಂಡಿzನೆ. ಭಕ್ತರ ವಿಭಿನ್ನ ಅನುಭವಗಳನ್ನು ಕೇಳುವ ಪುಣ್ಯವೂ ನನಗೆ ದೊರೆತಿದೆ.
| ಪಂಡಿತ ಅನಿರುದ್ಧಾಚಾರ್ಯ, ವ್ಯವಸ್ಥಾಪಕರು

ಆಚಾರ್ಯ ಮಧ್ವರ ನೇರಪರಂಪರೆಯ ಶ್ರೀ ಸತ್ಯಸಂಕಲ್ಪ ತೀರ್ಥರು ಮತ್ತು ಶ್ರೀ ಸತ್ಯಸಂತುಷ್ಟತೀರ್ಥರ ಮೂಲ ವೃಂದಾವನಗಳು ಇಲ್ಲಿವೆ. 1830 ರಿಂದ 1842ರ ವರೆಗೆ ಶ್ರೀ ಮಧ್ವರ ಮಹಾ ಪರಂಪರೆಯ ವೇದಾಂತ ಸಾಮ್ರಾಜ್ಯವನ್ನಾಳಿದ ಸತ್ಯಸಂಕಲ್ಪ ತೀರ್ಥರು
(ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರಿನ ಶ್ರೀ ಸತ್ಯಧರ್ಮ ತೀರ್ಥರ ಶಿಷ್ಯರು) ದೇಶದೆಲ್ಲೆಡೆ ದಿಗ್ವಿಜಯ ಮಾಡಿ, ಹಲವು ಗ್ರಂಥಗಳನ್ನು ರಚಿಸಿದ ನಂತರ ಮೈಸೂರಿಗೆ ಆಗಮಿಸಿದರು. ಮಹಾಜ್ಞಾನಿಗಳೂ ಆಗಿದ್ದ ಅವರು 12 ವರ್ಷ ಕಾಲ ಜಾತಿ ಮತ ಸಂಕೋಲೆ ಮೀರಿ ಸಕಲರಿಗೂ ಅನ್ನದಾನ ಮಾಡಿದ ಮಹಾತ್ಮರು.(ಅವರ ಆಶೀರ್ವಾದದ ಫಲವಾಗಿ ಇಂದಿಗೂ ಮಠದಲ್ಲಿ ನೂರಾರು ಜನರಿಗೆ ಅನ್ನದಾನ ಸೇವೆ ನಡೆಯುತ್ತಿದೆ).
Also read: ವಿಐಎಸ್‌ಎಲ್’ನಲ್ಲಿ ಐಕಾನಿಕ್ ವೀಕ್ ಆಚರಣೆ: ಕಾರ್ಖಾನೆಗೆ ಭೇಟಿ ನೀಡಿ ಸಂಭ್ರಮಿಸಿದ ವಿದ್ಯಾರ್ಥಿಗಳು
ಮೈಸೂರಿನ ಅರಮನೆಯಲ್ಲಿ 10ನೇ ಚಾಮರಾಜ ಒಡೆಯರ್ ಪ್ರಾರ್ಥನೆಯಂತೆ ಸತ್ಯ ಸಂಕಲ್ಪರು ಮೂಲ ರಾಮದೇವರ ಪೂಜೆಯನ್ನು ವೈಭವದಿಂದ ನೆರವೇರಿಸಿದರು. ರಾಜರಿಗೆ ಧರ್ಮೋಪದೇಶ ಮಾಡಿದರು. ಮಹಾರಾಜರೇ ಖುದ್ದಾಗಿ ನಿಂತು ಅರಮನೆ ಸಮೀಪವೇ ನಿರ್ಮಿಸಿ ಕೊಟ್ಟ ಶ್ರೀ ಮಠದಲ್ಲಿ ನೆಲೆಸಿದರು. ಶ್ರೀ ಸತ್ಯಸಂತುಷ್ಟ ತೀರ್ಥರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿ ಇಲ್ಲಿಯೇ 1842ರಲ್ಲಿ ವೃಂದಾವನಸ್ಥರಾದರು. ಶ್ರೀಗಳ ಜ್ಞಾನ ಮತ್ತು ತಪೋಬಲದ ಫಲವಾಗಿ ಸರ್ವ ಕಾಲದಲ್ಲೂ ಇವರ ವೃಂದಾವನದ ಸುತ್ತ ನೀರಿನ ಹನಿಗಳು ಬರುವುದನ್ನು ಇಂದಿಗೂ ವೀಕ್ಷಿಸಬಹುದು. ಹಾಗಾಗಿ, ಇವರು `ಗಂಗಾ ಸನ್ನಿಧಾನ ಪಾತ್ರ’ರೆಂದೇ ವಿಖ್ಯಾತರಾಗಿದ್ದಾರೆ.

ವಿಶೇಷ ಸೇವಾಕಾರ್ಯಗಳು :
ಸನ್ನಿಧಾನದಲ್ಲಿ ಪ್ರತಿನಿತ್ಯವೂ ತಂತ್ರಸಾರೋಕ್ತ ಪೂಜೆಯೊಂದಿಗೆ ಭಾರತೀಯ ಸಂಪ್ರದಾಯದ ಎಲ್ಲ ಹಬ್ಬ-ಹರಿದಿನಗಳನ್ನು ಆಚರಿಸಲಾಗುತ್ತದೆ. ಪ್ರತಿ ಭಾನುವಾರ ಧನ್ವಂತರಿಗೆ ಕ್ಷೀರಾಭಿಷೇಕ, ಹೊಸ ರೇಷ್ಮೆವಸ್ತ್ರ ಸಮರ್ಪಣೆ, ಪುಷ್ಪಲಂಕಾರ, ಲೋಕ ಕಲ್ಯಾಣಕ್ಕಾಗಿ ಧನ್ವಂತರಿ ಯಾಗ, ಸಂಜೆ ರಜತ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಯುಗಾದಿ ಹಿಂದಿನ ಅಮಾವಾಸ್ಯೆ ಶ್ರೀ ಸತ್ಯಸಂತುಷ್ಟ ತೀರ್ಥರ ಆರಾಧನೆ, ರಾಮನವಮಿ ಉತ್ಸವ, ಭಾದ್ರಪದದಲ್ಲಿ 7 ದಿನ ಧನ್ವಂತರಿ ಉತ್ಸವ, ಜ್ಯೇಷ್ಠ ಶುಕ್ಲ ದಶಮಿ ಧನ್ವಂತರಿ ಪ್ರತಿಷ್ಠಾಪನೋತ್ಸವ ನಿಮಿತ್ತ 5 ದಿನಗಳ ಪಂಚರಾತ್ರೋತ್ಸವ ವಿಜೃಂಭಣೆಯಿಂದ ನೇರವೇರುತ್ತದೆ. ಭಕ್ತರು ಮೊ: 9448147459 ಸಂಪರ್ಕಿಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post