ಕಲ್ಪ ಮೀಡಿಯಾ ಹೌಸ್
ಶತಮಾನ ಕಂಡ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಮಕ್ಕಳಿಗೆಂದೇ ಹತ್ತು ದಿನಗಳ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿತ್ತು. ರಾಜ್ಯದಲ್ಲಿಯೇ ಬಹು ಅಪರೂಪ ಮತ್ತು ವಿಭಿನ್ನವಾದ ಯತ್ನ ಇದು. ನೂರಾರು ಪ್ರಾಣಿ-ಪಕ್ಷಿಗಳ ಸಮಗ್ರ ಮಾಹಿತಿಯನ್ನು ಮಕ್ಕಳಿಗೆ ತಿಳಿಯಪಡಿಸುವುದು, ಅವುಗಳ ಹತ್ತಿರವೇ ಕರೆದೊಯ್ದು ಗುಣ-ಲಕ್ಷಣಗಳನ್ನು ತಿಳಿಸುವುದು, ಆ ಮೂಲಕ ನಿಸರ್ಗ ಪ್ರೀತಿಯನ್ನು ಎಳೆಯರಲ್ಲಿ ಬೆಳೆಸುವುದು ಇದರ ಮುಖ್ಯ ಧ್ಯೇಯ. ಈ ವಿಶಿಷ್ಠ ಸೇವೆಗಾಗಿ ಹತ್ತಾರು ಸ್ವಯಂಸೇವಕರು, ಸಂಪನ್ಮೂಲ ವ್ಯಕ್ತಿಗಳು ಮತ್ತು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಸಾಕಷ್ಟು ಶ್ರಮ ವಹಿಸಿದ್ದು ಸಾರ್ಥಕತೆ ಪಡೆದಿದೆ. ಇಂತಹಾ ಶಿಬಿರದಲ್ಲಿ ಭಾಗವಹಿಸಿದ್ದ (ಶಿವಮೊಗ್ಗ ಮೂಲದ) ಮೈಸೂರು ಕೇಂದ್ರೀಯ ವಿದ್ಯಾಲಯದ ೯ನೇ ತರಗತಿ ವಿದ್ಯಾರ್ಥಿ ಎ.ಆರ್. ಅಪ್ರಮೇಯ ತನ್ನ ಅನುಭವಗಳನ್ನು ‘ಕಲ್ಪ ಮೀಡಿಯಾ ಹೌಸ್’ಗೆ ಬರೆದುಕೊಟ್ಟಿದ್ದಾನೆ…. ಬನ್ನಿ… ಈತನ ಅನುಭವ ಕಥನ ಓದೋಣ…
ಆನೆ ಎಂದರೆ ನನಗೆ ಬಹಳ ಇಷ್ಟ. ಹಾವು ಎಂದರೆ ಅಚ್ಚರಿ. ಹುಲಿ ಸಿಂಹಗಳು ಎಂದರೆ ಅದೇನೋ ಭಯ. ಚಿಲಿಪಿಲಿ ಹಕ್ಕಿ ಪಕ್ಷಿಗಳನ್ನು ನೋಡಿದಷ್ಟೂ ಖುಷಿ. ಚಿರತೆ, ಚಿಂಪಾಂಜಿ ಗೊರಿಲ್ಲಾಗಳನ್ನು ಮೃಗಾಲಯದಲ್ಲಿ ದೂರದಿಂದಲೇ ನೋಡಿದ್ದೆ. ಆದರೆ ಅವುಗಳ ಹತ್ತಿರ ಹೋಗಿ ನಿಂತು ನೋಡಿರಲಿಲ್ಲ. ಆದರೆ ನನಗೆ ಈಗ ಅಂಥ ಒಂದು ಅವಕಾಶ ಸಿಕ್ಕಿತ್ತು. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ (ಜೂ) Mysore Zoo ಮಕ್ಕಳಿಗೆಂದೇ ಏರ್ಪಡಿಸಿದ್ದ ಹತ್ತು ದಿನಗಳ ಬೇಸಿಗೆ ಶಿಬಿರದಲ್ಲಿ ನೂರಾರು ಪ್ರಾಣಿ-ಪಕ್ಷಿಗಳ ಸಂಪೂರ್ಣ ಮಾಹಿತಿ ತಿಳಿಯಿತು. ಇದರೊಂದಿಗೆ ಬಹಳ ಹತ್ತಿರದಿಂದಲೇ ಜೂ ಪ್ರಾಣಿಗನ್ನು ನೋಡುವ, ಅವುಗಳ ಬಗ್ಗೆ ಪೂರ್ಣ ವಿವರ ತಿಳಿಯುವ ವಿಶೇಷ ಅವಕಾಶ ನೀಡಿತ್ತು.
ನಮಗೆ ತರಬೇತಿ ಹೀಗಿತ್ತು:
100 ವರ್ಷ ಕಂಡಿರುವ ಇತಿಹಾಸ ಇರುವ ಜೂ ಒಳಗೆ ಪ್ರತಿದಿನ 60 ಮಕ್ಕಳಿಗೆ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಶಿಬಿರದ ಚಟುವಟಿಕೆ ನಡೆಯುತ್ತಿದ್ದವು. ಬೆಳಗ್ಗೆ ಮೊದಲ ಎರಡು ಅವಧಿಗಳಲ್ಲಿ ಅರಣ್ಯ, ಪರಿಸರ ಪ್ರಾಣಿ- ಪಕ್ಷಿಗಳ ಬಗ್ಗೆ ಗಣ್ಯರು ಉಪನ್ಯಾಸ ನೀಡುತ್ತಿದ್ದರು. ಎಲ್‌ಸಿ ಡಿ ಮೂಲಕ ಬಣ್ಣ ಬಣ್ಣದ ಚಿತ್ರ ಮತ್ತು ವೀಡಿಯೋಗಳನ್ನೂ ತೋರಿಸುತ್ತಿದ್ದರು. ಇದನ್ನು ಕಂಡು ಅಚ್ಚರಿಯಾಗುತ್ತಿತ್ತು. ನಂತರ ತಜ್ಞರು ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಊಟ ಮಾಡಿದ ಬಳಿಕ ನಮ್ಮನ್ನು ಜೂ ರೌಂಡ್ಸ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಆನೆ ಒಂದು ದಿನಕ್ಕೆ ಎಷ್ಟು ಆಹಾರ ಪಡೆಯುತ್ತದೆ, ಅದಕ್ಕೆ ಎಷ್ಟು ಮುದ್ದೆ ತಿನ್ನಿಸುತ್ತಾರೆ, ಅವು ಹೇಗೆ ನಿದ್ರಿಸುತ್ತವೆ ಇತ್ಯಾದಿ ವಿಷಯಗಳನ್ನು ಆನೆ ಆವರಣದ ಒಳಗೇ ನಿಂತು ತಿಳಿದೆವು. ಹುಲಿ- ಸಿಂಹದ ಮರಿಗಳು ಜೂ ನಲ್ಲಿ ಹುಟ್ಟಿದ ನಂತರ ಎಲ್ಲಿ ಇರುತ್ತವೆ ? ಎಂಬ ಕುತೂಹಲ ಇತ್ತು. ಜೂ ಒಳಗೆ ಜನರು ಬಾರದಿರುವ ಜಾಗದಲ್ಲಿ ಅವುಗಳನ್ನು ವಿಶೇಷ ಸೆಲ್‌ಗಳಲ್ಲಿ ರಕ್ಷಣೆ ಮಾಡುತ್ತಾರೆ ಎಂಬುದನ್ನು ಕಂಡಾಗ ಬಹಳ ಖುಷಿ ಆಯಿತು.
ಪುಟ್ಟ ಮಕ್ಕಳಿಗೆ ಅಮ್ಮಂದಿರು ಸಿರಿಲ್ಯಾಕ್ ಕೊಡುವಂತೆ ಹುಲಿ ಮರಿಗಳಿಗೂ ವೈದ್ಯರು ಸಿರಿಲ್ಯಾಕ್ ತಿನ್ನಿಸುತ್ತಿದ್ದರು. ಆನೆ ಮರಿಗಳಿಗೆ ಬಾಟಲಿ ಹಾಲು ನೀಡುತ್ತಿದ್ದುದ್ದನ್ನು ಕಂಡೆವು. 4-5 ತಿಂಗಳ ನಂತರ ಅವುಗಳನ್ನು ಜೂ ವಿಸಿಟರ್ಸ್ ನೋಡಲು ಸಾಧ್ಯ. ಆದರೆ ಶಿಬಿರಕ್ಕೆ ಸೇರಿದ ಕಾರಣ ನಮ್ಮನ್ನು ಹುಲಿ ಮರಿ, ಹೈನಾ ಮರಿಗಳಿರುವ ಜಾಗಕ್ಕೆ ಕರೆದುಕೊಂಡು ಹೋಗಿ ನಮ್ಮ ಕುತೂಹಲಗಳಿಗೆ ಉತ್ತರ ದೊರಕಿಸಿಕೊಟ್ಟರು.
ಪ್ರಾಣಿಗಳಿಗೂ ಆಸ್ಪತ್ರೆ ಇದೆ:
ಗಾಯಗೊಂಡ ಅಥವಾ ಕಾಯಿಲೆ ಪ್ರಾಣಿ-ಪಕ್ಷಿಗಳನ್ನು ಮೃಗಾಲಯದ ಆಸ್ಪತ್ರೆಗೆ ಸೇರಿಸುತ್ತಾರೆ. ಅಲ್ಲಿ ಪ್ರಾಣಿಗಳನ್ನು ಪರೀಕ್ಷಿಸಲು ವೈದ್ಯರು, ಲ್ಯಾಬ್, ಎಕ್ಸ ರೇ, ಅಲ್ಟ್ರಾ ಸೋನಾಗ್ರಾಫಿ ರೂಂ, ಫಾರ್ಮಸಿ ಇದೆ. ಅದನ್ನೂ ನಾವು ಪರಿಚಯ ಮಾಡಿಕೊಂಡೆವು.
ಆಹಾರ ನೀಡಲೂ ಕ್ರಮ:
ಮೃಗಾಲಯದ ಪ್ರಾಣಿ ಪಕ್ಷಿಗಳಿಗೆ ಆಹಾರ ಕೊಡಲು ಒಂದು ಕ್ರಮ ಇದೆ. ಇಲ್ಲಿರುವ 148 ಜಾತಿಯ ಪ್ರಾಣಿ-ಪಕ್ಷಿಗಳಿಗೆ ‘ಜೂ ಡಯಟ್’ ಪ್ರಕಾರವೇ ಆಹಾರ ಕೊಡುವುದನ್ನು ನೋಡಿದೆವು. ಉಗ್ರಾಣದಲ್ಲಿ ಮುಂದಿನ 15 ದಿನಕ್ಕೆ ಆಗುವಷ್ಟು ಆಹಾರ ಸಂಗ್ರಹ ಇರುವುದನ್ನು ನಮಗೆ ತೋರಿಸಿದರು. ಮಾಂಸಹಾರಿ ಪ್ರಾಣಿಗಳಿಗೆ ಪ್ರತಿ ಮಂಗಳವಾರ ಉಪವಾಸ ! ಜೂ ನಿರ್ವಹಣೆಗೆ ಪ್ರತಿ ತಿಂಗಳು 2 ಕೋಟಿ ರೂ. ಖರ್ಚು ಬರುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ನಮಗೆ ವಿವರಿಸಿದರು.
ವಾಸಸ್ಥಾನ ನಿರ್ವಹಣೆ ಹೀಗಿದೆ:
ಮೃಗಾಲಯದ ಪ್ರಾಣಿ ಪಕ್ಷಿಗಳನ್ನು ಅರಣ್ಯದಿಂದ ತಂದಿರುತ್ತಾರೆ. ಹೀಗಾಗಿ ಅವುಗಳು ಅದೇ ರೀತಿ ವಾಸಸ್ಥಾನ ಬಯಸುತ್ತವೆ. ಇದಕ್ಕಾಗಿ ಮೃಗಾಲಯ ಅವುಗಳಿಗೆ ಬೇಕಾದ ರೀತಿಯನ್ನೇ ಹೋಲುವ ಪರಿಸರ ನಿರ್ಮಾಣ ಮಾಡುತ್ತದೆ. ಪ್ರತಿ ಮೂರು ಅಥವಾ ಆರು ತಿಂಗಳಿಗೆ ಒಮ್ಮೆ ಇದರಲ್ಲಿ ಕೊಂಚ ಬದಲಾವಣೆಯನ್ನೂ ಮಾಡಲಾಗುತ್ತದೆ. ಕರಡಿಗಳಿಗೆ ಗುಹೆ, ಸಿಂಹಗಳಿಗೆ ಮಲಗಲು ಇಷ್ಟವಾಗುವ ಬಂಡೆಕಲ್ಲು, ಮಂಗ-ಚಿಂಪಾಂಜಿಗಳಿಗೆ ಜೋಕಾಲಿ, ಪಕ್ಷಿಗಳಿಗೆ ಪೊಟರೆ, ಹಾವಿಗೆ ಬಿಲ ಮಾಡಿರುವುದನ್ನು ಹತ್ತಿರದಿಂದ ನೋಡಿದೆವು.
Also read: ವಿನಮ್ರತೆ ಮತ್ತು ಕಲಿಕಾ ಹಸಿವು ಯಶಸ್ಸಿಗೆ ಅತಿ ಅವಶ್ಯಕ : ಅನಿಕೇತ್ ಶೆಣೈ ಅಭಿಪ್ರಾಯ
ಲೈವ್ ಫೀಡ್ ಯೂನಿಟ್:
ಹಾವು, ಮೊಸಳೆ, ನೀರುನಾಯಿಗಳು ಬೇಟೆ ಆಡಿ ಆಹಾರ ತಿನ್ನಲು ಬಯಸುತ್ತವೆ. ಹಾಗಾಗಿ ಇಲ್ಲಿ ಮೀನು, ಇಲಿ ಮತ್ತು ಕೋಳಿಗಳನ್ನು ಮೃಗಾಲಯದ ಒಳಗೇ ಬೆಳೆಸಿ ಅವುಗಳಿಗೆ ನೀಡುತ್ತಾರೆ. ಹೊರಗಿನಿಂದ ತಂದ ಇಲಿ, ಮೀನುಗಳನ್ನು ಅವುಗಳಿಗೆ ಕೊಡುವುದಿಲ್ಲ. (ಸೋಂಕು ಮುಂಜಾಗ್ರತಾ ಕ್ರಮ ಇದು). ಇದಕ್ಕಾಗಿ ಒಂದು ಲೈವ್ ಫೀಡ್ ಯೂನಿಟ್ ಕಾರ್ಯ ನಿರ್ವಹಿಸುತ್ತಿದೆ.
ಹೊರ ಪ್ರವಾಸ:
ಶಿಬಿರದ ಕೊನೆಯ ದಿನ ನಮ್ಮನ್ನು ರಂಗನತಿಟ್ಟು ಪಕ್ಷಿಧಾಮ, ಕೂರ್ಗಳ್ಳಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ವೈಲ್ಡ್ ಅನಿಮಲ್ಸ್ ರೆಸ್ಕ್ಯೂ ಆ್ಯಂಡ್ ರೀ ಹ್ಯಾಬಿಲಿಟೇಶನ್ ಸೆಂಟರ್‌ಗೆ ಕರೆದುಕೊಂಡು ಹೋಗಿದ್ದರು. ಪಕ್ಷಿ ಧಾಮದಲ್ಲಿ ಹಲವು ರೀತಿಯ ದೇಶ-ವಿದೇಶದ ಹಕ್ಕಿ, ಮೊಸಳೆಗಳ ಜೀವನ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಅಂಗವಿಕಲ ಮತ್ತು ಗಾಯಾಳು ಪ್ರಾಣಿಗಳನ್ನು ರೆಸ್ಕ್ಯೂ ಸೆಂಟರ್‌ನಲ್ಲಿ ಕಂಡು ಅದ್ಭುತ ಎನಿಸಿತು. ಅವುಗಳ ಚಿಕಿತ್ಸಾ ಕ್ರಮ, ಕೂಗಾಟ, ಚೀರಾಟ ಕಂಡು ಕೊಂಚ ಭಯವೂ ಆಯಿತು.
ಶಿಬಿರದ ತಜ್ಞರು:
ಕೃಪಾಕರ-ಸೇನಾನಿ (ಕಾಡುನಾಯಿ ಪರಿಚಯ), ಶಿವಪ್ರಕಾಶ್ (ಪಕ್ಷಿ ವಿವರ), ಅರುಣ್ ಅರಸ್ (ಚಿಟ್ಟೆಗಳ ವಿಸ್ಮಯಲೋಕ), ಪವನ್ (ಇರುವೆ ಪ್ರಪಂಚ), ಎಂ ವಿಜಯ್ (ಹಣ್ಣು ತಿನ್ನುವ ಪಕ್ಷಿಗಳು), ಉಮರ್ (ಹಾವುಗಳ ಜೀವನ), ಸುಮಾ (ಕರಡಿ ಜಗತ್ತು) ರವಿಕುಮಾರ್ (ಕೆರೆ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರ), ಧನುಷ್ ಶೆಟ್ಟಿ (ಮೃಗಾಲಯದ ಕೆಲಸಕಾರ್ಯ), ಆಶಿತಾ ಗಣೇಶ್ (ಜೀವವೈವಿಧ್ಯ ಸಂರಕ್ಷಣೆ) ಡಾ. ಎಂ. ಕೆ. ಪ್ರಶಾಂತ್(ಮೃಗಾಲಯದ ಆಸ್ಪತ್ರೆ), ಸುಜೋಶ (ಜೂ ಉಗ್ರಾಣ ಪರಿಚಯ) ಮಾಡಿಕೊಟ್ಟರು.
ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳು ಪರಿಸರಪ್ರೇಮ ಬೆಳೆಸಿಕೊಳ್ಳಬೇಕೆಂದರು. ಮಕ್ಕಳಲ್ಲಿ ಪ್ರಾಣಿ ಪಕ್ಷಿ ಪ್ರೀತಿ ಬೆಳೆಸಲು ಮೃಗಾಲಯ 2ನೇ ತಂಡದ ಬೇಸಿಗೆ ಶಿಬಿರ ನಡೆಸಿದೆ. ಇದರ ಲಾಭ ಪಡೆದುಕೊಂಡು ಮಕ್ಕಳು ಪರಿಸರವನ್ನು ಉಳಿಸಲು ಬೆಂಬಲಿಸಬೇಕು. ಹುಟ್ಟು ಹಬ್ಬಗಳನ್ನು ಮಕ್ಕಳು ಮೃಗಾಲಯದಲ್ಲಿ ಆಚರಿಸಿಕೊಳ್ಳಬೇಕು. ಪ್ರಾಣಿ-ಪಕ್ಷಿಗಳಿಗೆ ಬೇಕಾಗುವ ಒಂದು ದಿನದ ಆಹಾರವನ್ನಾದರೂ ಕಾಣಿಕೆಯಾಗಿ ಅಂದು ನೀಡಬಹುದು ಎಂದರು.
ಶಿಬಿರದಲ್ಲಿ ಕಲಿತ ವಿಷಯಗಳಲ್ಲಿ ಒಂದು ಪ್ರಾಣಿ, ಪಕ್ಷಿ ಆರಿಸಿಕೊಂಡು ಅದರ ಬಗ್ಗೆ ಪ್ರಾಜೆಕ್ಟ್ ಮಾಡಿ ಮಂಡಿಸುವ ಕೆಲಸವನ್ನು ನಮಗೆ ಕೊಡಲಾಗಿತ್ತು. ಅದನ್ನು ಎಲ್ಲರೂ ಸೂಕ್ತವಾಗಿ ಮಾಡಿದೆವು. ಅತ್ಯುತ್ತಮವಾದವುಗಳನ್ನು ಆಯ್ಕೆ ಮಾಡಿ ಜೂ ಲೈಬ್ರರಿಯಲ್ಲಿ ಸಂಗ್ರಹ ಮಾಡಿದರು.
ಗಮನಿಸಿದ ಅಚ್ಚರಿ ಸಂಗತಿಗಳು:
- ಆಫ್ರಿಕನ್ ಆನೆಗಳಲ್ಲಿ ಗಂಡು- ಹೆಣ್ಣು ಎರಡಕ್ಕೂ ದಂತ ಇರುತ್ತದೆ.
- ನೀರು ಕುದುರೆ ಮೈಮೇಲೆ ರಕ್ತ ದ ಹನಿಗಳಿದ್ದವು. ಇದೇನೆಂದು ಕೇಳಿದಾಗ ಅದರ ಬೆವರ ಹನಿ ಬಣ್ಣವೇ ಹಾಗೆಂದು ತಿಳಿಯಿತು.
- ಮೇಸನ್ ಎಂಬ ಚಿಂಪಾಂಜಿ ದಿನಕ್ಕೆ 1
ಲೀ. ಟೀ ಕುಡಿಯುತ್ತದೆ. ಇದರೊಂದಿಗೆ ಕಾಲಕ್ಕೆ ತಕ್ಕಂತೆ ಊಟವನ್ನೂ ಸೇವಿಸುತ್ತದೆ. - ಆನೆಗೆ ಮದ ಬರುವ ಮುನ್ನ ಕಿವಿ ಮುಂಭಾಗದ ತೂತಿನಲ್ಲಿ ದ್ರವರೂಪದ ಅಂಟು ಹೊರ ಬರಲು ಆರಂಭವಾಗುತ್ತದೆ. ಆಗ ಕಿರಿಕಿರಿ ಆಗಿ ಅದರ ಕೋಪ ಹೆಚ್ಚುತ್ತದೆ.
- ಹಾವುಗಳಲ್ಲಿ ‘ಗೂಡು ಕಟ್ಟಿ’ ಮೊಟ್ಟೆ ಇಡುವುದು ನಾಗರಹಾವು ಮಾತ್ರ.
- ಪೈಥಾನ್ ಎಂಬ ಹಾವು ಮಾತ್ರ ನೇರವಾಗಿ ಮರಿ ಹಾಕುತ್ತದೆ. ಉಳಿದ ಹಾವುಗಳೆಲ್ಲವೂ ಮೊಟ್ಟೆ ಇಡುತ್ತವೆ.
- ಸಾರಸ್ ಕ್ರೇನ್ ಎಂಬ ಹಕ್ಕಿ ಸದಾ ಸಂಗಾತಿಯೊಂದರ ಜೊತೆಗೇ ಇರುತ್ತದೆ. ಅದರಲ್ಲಿ ಒಂದು ಮರಣ ಹೊಂದಿದರೂ ಇನ್ನೊಂದು ಹಕ್ಕಿ ಜೀವನಪೂರ್ತಿ ಒಂಟಿಯಾಗೇ ಇರುತ್ತದೆ.
- ಗ್ರೇ ಹಾರ್ನ್ ಬಿಲ್ ಹಕ್ಕಿಗೆ ಮೊಟ್ಟೆ ಇಡುವ ಮೊದಲು ರೆಕ್ಕೆಗಳು ಉದುರಿ ಹೋಗುತ್ತವೆ. ಅಷ್ಟರೊಳಗೆ ಅದು ಮರದ ಪೊಟರೆ ಸೇರಿಕೊಂಡಿರುತ್ತದೆ. ಗಂಡು ಹಕ್ಕಿ ಆಗ ಹಸಿ ಮಣ್ಣಿನಿಂದ ಗೂಡು ಮುಚ್ಚುತ್ತದೆ. ಮರಿಗಳು ಹುಟ್ಟಿದ ನಂತರ ಅದು ಮಣ್ಣಿನ ಗೋಡೆ ಒಡೆದು ಮರಿಗಳನ್ನು ಹೊರ ಕರೆದುಕೊಳ್ಳುತ್ತದೆ. ಬೇಟೆಗಾರರೇನಾದರೂ ಗಂಡು ಹಕ್ಕಿ ಕೊಂದರೆ ಇಡೀ ಕುಟುಂಬ ಗೂಡೊಳಗೇ ಸಾಯಬೇಕಾಗುತ್ತದೆ. ಹಾಗಾಗಿ ನಾವು ಯಾವುದೇ ಪ್ರಾಣಿ-ಪಕ್ಷಿಯನ್ನು ಬೇಟೆ ಆಡಬಾರದು.
ಎ.ಆರ್. ಅಪ್ರಮೇಯ, 9ನೆಯ ತರಗತಿ, ಕೇಂದ್ರೀಯ ವಿದ್ಯಾಲಯ, ಸಿದ್ಧಾರ್ಥ ನಗರ, ಮೈಸೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post