ಕಲ್ಪ ಮೀಡಿಯಾ ಹೌಸ್ | ತಂಜಾವೂರು |
ರಥಕ್ಕೆ ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿ ಮೂವರು ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ತಂಜಾವೂರು Thanjavur ಸಮೀಪದ ಕಾಳಿಮೇಡು ಗ್ರಾಮದಲ್ಲಿ ಬುಧವಾರ ನಡೆದಿದೆ.
ತಂಜಾವೂರಿನ ಅಪ್ಪರ ಸ್ವಾಮಿ ದೇವಾಲಯದ ರಥೋತ್ಸವದ ವೇಳೆ ಈ ದುರಂತ ಸಂಭವಿಸಿದ್ದು, ಅಲಂಕೃತಗೊಂಡಿದ್ದ ರಥವನ್ನು ಗ್ರಾಮದ ಬೀದಿಗಳಲ್ಲಿ ಎಳೆಯಲಾಗುತ್ತಿತ್ತು. ಈ ವೇಳೆ ರಥಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ 13 ಮಂದಿ ಗಾಯಗೊಂಡಿದು, ತಂಜಾವೂರಿನ ವೈದ್ಯಕೀಯ ಕಾಲೇಜಿನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಈಗಾಗಲೇ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ ಎಂದು ವಿ. ಬಾಲಕೃಷ್ಣನ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್ ಹೇಳಿದ್ದಾರೆ.
ಮೃತರನ್ನು ಎಂ ಮೋಹನ್ (22), ಕೆ ಪ್ರತಾಪ್ (36), ಎ ಅನ್ಬಳಗನ್ (60), ಅವರ ಪುತ್ರ ರಾಘವನ್ (24), ಆರ್ ಸಂತೋಷ್ (15), ಟಿ ಸೆಲ್ವಂ (56), ಎಂ ರಾಜ್‌ಕುಮಾರ್ (14), ಆರ್ ಸ್ವಾಮಿನಾಥನ್ (56), ಎ ಗೋವಿಂದರಾಜ್, ಎಸ್ ಭರಣಿ (13), ನಾಗರಾಜ್ (60) ಎಂದು ಗುರ್ತಿಸಲಾಗಿದೆ. ಎಲ್ಲರೂ ಕಾಳಿಮೇಡು ಗ್ರಾಮದವರಾಗಿದ್ದಾರೆಂದು ತಿಳಿಸಿದ್ದಾರೆ.
ಈ ನಡುವೆ ಜಿಲ್ಲಾಧಿಕಾರಿ ದಿನೇಶ್ ಪೊನ್ರಾಜ್ ಆಲಿವರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
Also read: ಗಮನಿಸಿ! ಏ.28ರಂದು ಶಿವಮೊಗ್ಗದ ದುರ್ಗಿಗುಡಿ, ಪಾರ್ಕ್‌ಬಡಾವಣೆ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ
ಪ್ರಧಾನಮಂತ್ರಿ, ಮುಖ್ಯಮಂತ್ರಿ ಸಂತಾಪ:
ಘಟನೆಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಸಂತಾಪ ಸೂಚಿಸಿದ್ದು, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಗಳ ಪರಿಹಾರ ಹಾಗೂ ಗಾಯಾಳುಗಳಿಗೆ ರೂ. 50,000 ನೀಡುವುದಾಗಿ ಪ್ರಕಟಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post