Read - < 1 minute
ಬೆಂಗಳೂರು: ಸೆ:26: ಕರ್ನಾಟಕ-ತಮಿಳುನಾಡು ನಡುವಿನ ಕಾವೇರಿ ನೀರಿನ ವಿವಾದವನ್ನು ಇಂದು (ಸೆಪ್ಟಂಬರ್ 27) ಸರ್ವೋಚ್ಚ ನ್ಯಾಯಾಲಯವು ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜಾಗೃತ ಕರ್ನಾಟಕ ಭಾರತ ಸಂಘಟನೆಯು ಈ ಪ್ರಕರಣದಲ್ಲಿ ವಿಚಾರಣೆ ವೇಳೆ ಕಂಡು ಬಂದಿರುವ ಕೆಲವು ಪ್ರಮುಖ ವಿಷಯಗಳನ್ನು ಸಾರ್ವಜನಿಕರ ಮಾಹಿತಿಗಾಗಿ ನೀಡಿದೆ.
ಅಲ್ಲದೆ ಈ ವಿಷಯವನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದ ಗಮನಕ್ಕೂ ತಂದಿದೆ. ಈ ಬಗ್ಗೆ ಇದೇ ಸೆ.17, ಸೆ.23 ಹಾಗೂ ಸೆ.25ರಂದು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಿರುವ ಅರ್ಜಿಗಳಲ್ಲಿ ಮನವರಿಕೆ ಮಾಡಿಕೊಟ್ಟಿದೆ. 1956ರ ಕಾವೇರಿ ಜಲವಿವಾದದ ಪ್ರಕಾರ ಅಂತಾರಾಜ್ಯಗಳ ನಡುವಿನ ವಿವಾದಗಳ ಬಗ್ಗೆ ನೀಡಿರುವ ಮಾಹಿತಿಗಳು ಅಸಮರ್ಪಕವಾಗಿದ್ದು, ಕರ್ನಾಟಕದ ಹಿತಾಸಕ್ತಿಗೆ ಸಂಪೂರ್ಣ ಧಕ್ಕೆ ಉಂಟಾಗಿದೆ.
ವಿಚಾರಣೆ ನಡೆಸಿದ ನ್ಯಾಯಾಲಯ ಸೆ.5 ರಂದು ಕರ್ನಾಟಕಕ್ಕೆ ನೀಡಿದ ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶದಿಂದ ಕರ್ನಾಟಕ ಅಸಹಾಯಕ ಸ್ಥಿತಿಗೆ ತಲುಪಿದೆ.
ಈ ಹಿಂದೆ ಕಾವೇರಿ ನದಿ ನೀರು ನ್ಯಾಯಾಧಿಕರಣವು ನೀರಿನ ವಿವಾದದ ಬಗ್ಗೆ ಎರಡೂ ರಾಜ್ಯಗಳ ನಡುವೆ ಒಪ್ಪಂದಗಳ ಕುರಿತಂತೆ ಆದೇಶಗಳನ್ನು ನೀಡಿದೆ. ಆದರೆ ಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ತೀರ್ಪು ನೀಡುವಂತಿಲ್ಲ. ನ್ಯಾಯಾಧಿಕರಣದ ಕಾರ್ಯಕಲಾಪದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡಬಾರದಾಗಿತ್ತು. ಆದರೆ ಕರ್ನಾಟಕ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿಗಳು ಈ ವಿಷಯವನ್ನು ಪೀಠದ ಗಮನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಅಧ್ಯಕ್ಷ ಕೆ.ಎನ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡನೆಯದಾಗಿ, ಕಾವೇರಿ ನದಿಯ ನೀರಿನ ಹಂಚಿಕೆಯ ಅಡಿ ಬರುವ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿಗಳ ಪೈಕಿ ಕರ್ನಾಟಕ, ತಮಿಳುನಾಡು ಪ್ರಮುಖ ಪಾಲುದಾರ ರಾಜ್ಯಗಳು. ಆದರೆ ತಮಿಳುನಾಡಿಗೆ ಸಂದಾಯವಾಗಬೇಕಾದ ನೀರಿನ ಪ್ರಮಾಣದ ಪಟ್ಟಿಯನ್ನು ಮಾತ್ರವೇ ಉಲ್ಲೇಖಿಸಿದ್ದು, ಕರ್ನಾಟಕದ ಪಾಲು ಹಾಗೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದ ನೀರಿನ ಪ್ರಮಾಣಗಳ ಉಲ್ಲೇಖವಿಲ್ಲ.
ವಿಶೇಷವಾಗಿ ಪ್ರತಿ ತಿಂಗಳೂ ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣ ಕುರಿತಂತೆ ಹೇಳಿದ್ದು, ಕರ್ನಾಟಕದ ಕೆಆರ್ಎಸ್, ಕಬಿನಿ, ಹಾರಂಗಿ ಸೇರಿದಂತೆ ನಾಲ್ಕು ಜಲಾಶಯಗಳಲ್ಲಿ ಸಂಗ್ರಹವಾದ ನೀರಿನ ಪ್ರಮಾಣದ ಬಗ್ಗೆಯೂ ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತೀರ್ಪು ನೀಡುವ ಸಂದರ್ಭ ಸಾಂವಿಧಾನಿಕ ಕಾಯ್ದೆಗಳ ಬಗ್ಗೆ ಗಮನ ಹರಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಪ್ರಸ್ತುತ ತಮಿಳುನಾಡಿನ ಮೆಟ್ಟರೂ ಜಲಾಶಯದಲ್ಲಿ 45 ಟಿಎಂಸಿ ನೀರಿನ ಸಂಗ್ರಹವಿದ್ದು, ಈ ಬಗ್ಗೆ ಕಾವೇರಿ ಸತ್ಯಶೋಧನಾ ಸಮಿತಿಯು ಸ್ಪಷ್ಟ ವರದಿ ನೀಡಿದೆ. ಹಾಗಾಗಿ ನ್ಯಾಯಾಲಯವು ಮೆಟ್ಟೂರು ಡ್ಯಾಂನಿಂದ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಸಮಿತಿಯ ವರದಿಯನ್ನು ಈಗಾಗಲೇ ನ್ಯಾಯಾಧಿಕರಣವು ಸ್ವೀಕರಿಸಿದೆ. ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಕುಡಿಯಲೂ ನೀರಿಲ್ಲದಂತಾಗಿದೆ. ಇದನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.
Discussion about this post