Read - < 1 minute
ಅಡಿಸ್ ಅಬಾಬಾ, ಅ.4: ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಆಶ್ರುವಾಯು ಪ್ರಯೋಗಿಸಿ ರಬ್ಬರ್ ಬುಲೆಟ್ ಗಳನ್ನು ಸಿಡಿಸಿದ ನಂತರ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಿಂದ 50ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿರುವ ಘಟನೆ ನಿನ್ನೆ ಇಥಿಯೋಪಿಯಾದಲ್ಲಿ ನಡೆದಿದೆ.
ಇಥಿಯೋಪಿಯಾ ರಾಜಧಾನಿ ಅಡಿಸ್ ಅಬಾಬಾದಿಂದ 40 ಕಿ.ಮೀ.ದೂರದಲ್ಲಿರುವ ಬಿಶೋಫ್ಟು ಪಟ್ಟಣದಲ್ಲಿ ವಾರ್ಷಿಕ ಓರೋಮಿಯಾ ಧಾರ್ಮಿಕ ಉತ್ಸವದಲ್ಲಿ ಸುಮಾರು 20 ಲಕ್ಷ ಮಂದಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಒಂದು ಗುಂಪು ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿತು. ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ 50ಕ್ಕೂ ಹೆಚ್ಚು ಜನರು ಬಲಿಯಾದರು. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂದು ವಿರೋಧ ಪಕ್ಷದ ಮುಖಂಡರು ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಕೆಲವರು ನಿಷೇಧಿತ ಉಗ್ರಗಾಮಿ ಸಂಘಟನೆ ಓರೋಮೊ ಲಿಬರೇಷನ್ ಫ್ರಂಟ್ (ಓಎಲ್ಎಫ್) ಧ್ವಜಗಳನ್ನು ಹಿಡಿದಿದ್ದರು.ಇದೇ ವೇಳೆ ಪೊಲೀಸರತ್ತ ಕಲ್ಲುಗಳು ಮತ್ತು ಪಾಸ್ಟಿಕ್ ಬಾಟಲ್ ಗಳನ್ನು ತೂರಿ ಹಿಂಸಾಚಾರಕ್ಕೆ ಮುಂದಾದಾಗ ಟಿಯರ್ ಗ್ಯಾಸ್ ಶೆಲ್ ಮತ್ತು ರಬ್ಬರ್ ಬುಲೆಟ್ ಗಳನ್ನು ಪ್ರಯೋಗಿಸಲಾಯಿತು.ಇದು ಭಾರೀ ನೂಕುನುಗ್ಗಲು ಮತ್ತು ಕಾಲ್ತುಳಿತಕ್ಕೆ ಅನೇಕರು ಸಾವಿಗೀಡಾದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ದುರ್ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.
Discussion about this post