Read - < 1 minute
ಶ್ರೀಹರಿಕೋಟಾ, ಸೆ.26: ಬಾಹ್ಯಾಕಾಶ ಕ್ಷೇತ್ರದಲ್ಲಿ ಈಗಾಗಲೇ ಇಡೀ ವಿಶ್ವವೇ ತಿರುಗಿ ನೋಡುವಂತೆ ಸಾಧನೆ ಮಾಡಿರುವ ಇಸ್ರೋ, ಇಂದು ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಮತ್ತೊಂದ ಐತಿಹಾಸಿಕ ಸಾಧನೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇಂದು ಬೆಳಗ್ಗೆ 9.12ಕ್ಕೆ ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿದೆ.
3 ಸ್ವದೇಶಿ ಹಾಗೂ 5 ವಿದೇಶಿ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಈ ಉಡಾವಣೆಯು ಇಸ್ರೋದ ಸುದೀರ್ಘಾವಧಿಯ ಕಾರ್ಯವಾಗಿದ್ದು, ಸುಮಾರು 2 ಗಂಟೆ, 15 ನಿಮಿಷಗಳ ಕಾಲ ಪ್ರಕ್ರಿಯೆ ನಡೆಯಲಿದೆ.
ಇದಲ್ಲದೇ ಬೆಂಗಳೂರಿನ ಪಿಇಎಸ್ ಯೂನಿವರ್ಸಿಟಿ ಸಹಭಾಗಿತ್ವದಲ್ಲಿ ನಿರ್ಮಿಸಿದ ಪಿಸ್ಯಾಟ್ ಉಪಗ್ರಹ ಕೂಡಾ ಕಕ್ಷೆಗೆ ಸೇರಿದೆ. ಉಳಿದ 7 ಉಪಗ್ರಹಗಳನ್ನು 689 ಕಿಮೀ ಧ್ರುವ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ. ಸ್ಕಾಟ್‌ಸ್ಯಾಟ್-1ನ್ನು 730 ಕಿಮೀ ಸೂರ್ಯ ಸಮಕಾಲಿಕ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತಿದೆ. ಬೆಳಗ್ಗೆ 11.25ರಿಂದ 11.28ರೊಳಗಿನ ಅವಧಿಯಲ್ಲಿ ಪಿಎಸ್‌ಎಲ್‌ವಿಯ ಎಂಜಿನ್ ಕೆಲ ಕ್ಷಣಗಳ ಕಾಲ ಸ್ಥಗಿತಗೊಂಡು ಮತ್ತೆ ಚಾಲನೆ ಪಡೆದಿದೆ. ಇದು ತುಂಬಾ ಕ್ಲಿಷ್ಟಕರ ಕಾರ್ಯವಾಗಿದ್ದು, ಒಂದು ಕಕ್ಷೆಗೆ ಉಪಗ್ರಹವನ್ನು ಸೇರಿಸಿದ ಬಳಿಕ ಪಿಎಸ್‌ಎಲ್‌ವಿ ರಾಕೆಟ್‌ನ ೪ನೆಯ ಸ್ಟೇಜ್ ಅಂದರೆ ಎಂಜಿನ್ ಅನ್ನು ಆಫ್ ಮಾಡಲಾಗುತ್ತದೆ. ಬಳಿಕ ಮತ್ತೆ ಎಂಜಿನ್ ಸ್ಟಾರ್ಟ್ ಮಾಡಿ ಮತ್ತೊಂದು ಕಕ್ಷೆಗೆ 7 ಉಪಗ್ರಹಗಳನ್ನು ಸೇರಿಸಲಾಗಿದೆ. ಹೀಗೆ ಭಾರೀ ಉಷ್ಣತೆ ಹೊಂದಿರುವ ರಾಕೆಟ್ ಅನ್ನು ಆಫ್ ಮಾಡಿ ಪುನಃ ಚಾಲೂ ಮಾಡುವುದು ಅತ್ಯಂತ ಕ್ಲಿಷ್ಟಕರ ಪ್ರಕ್ರಿಯೆಯಾಗಿತ್ತು.
*ಪಿಎಸ್‌ಎಲ್‌ವಿ ಪಕ್ಷೆಗೆ ಸ್ಕಾಟ್‌ಸ್ಯಾಟ್-1 ಉಪಗ್ರಹ
*ಸ್ಕಾಟ್‌ಸ್ಯಾಟ್-1ರ ತೂಕ 371 ಕೆಜಿ
*ಸ್ಕಾಟ್‌ಸ್ಯಾಟ್-1 ಓಶಿಯನ್ ಸ್ಯಾಟ್-2 ಯೋಜನೆಯ ಮುಂದುವರೆದ ಭಾಗ
*ಹವಾಮಾನ ವರದಿ, ಮನ್ಸೂಚನೆ, ಗಾಳಿಯ ದಿಕ್ಕು, ಚಲನೆ ಕುರಿತ ದತ್ತಾಂಶ ರವಾನೆ ಮಾಡಲಿದೆ
7 ಇತರೆ ಉಪಗ್ರಹಗಳೊಂದಿಗೆ ಭಾರತದ ಬಹುಪಯೋಗಿ ಸ್ಕಾಟ್ ಸ್ಯಾಟ್-1 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಎಲ್ಲ ವಿಜ್ಞಾನಿಗಳಿಗೆ ಅಭಿನಂಧನೆ ಸಲ್ಲಿಸುತ್ತೇನೆ.
-ಪ್ರಣವ್ ಮುಖರ್ಜಿ, ರಾಷ್ಟ್ರಪತಿ
ಪಿಎಸ್‌ಎಲ್‌ವಿ-ಸಿ35 ರಾಕೆಟ್ ಮೂಲಕ ಸ್ಕಾಟ್‌ಸ್ಯಾಟ್-1 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಸ್ರೋ ವಿಜ್ಞಾನಿಗಳು ಭಾರತದ ಗೌರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ವಿಜ್ಞಾನಿಗಳ ಈ ಮಹತ್ತರ ಸಾಧನೆ 125 ಕೋಟಿ ಭಾರತೀಯರ ಹೃದಯಗೆದ್ದಿದ್ದು, ವಿಶ್ವಮಟ್ಟದಲ್ಲಿ ಭಾರತೀಯ ಗೌರವ ಹೆಚ್ಚಿಸಿದೆ.
-ನರೇಂದ್ರ ಮೋದಿ, ಪ್ರಧಾನಿ..
Discussion about this post