Read - < 1 minute
ನವದೆಹಲಿ:ಸೆ-25-ಉರಿ ಉಗ್ರರ ದಾಳಿಗೆ ಸಂಬಂಧಿಸಿದಂತೆ ಭಾರತದ 18 ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಭಾರತದಲ್ಲಿ ನಡೆದ ಪ್ರತಿ ಉಗ್ರರ ದಾಳಿಯನ್ನು ಚುಕ್ತಾಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೇರಳದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯ ಸಂದೇಶ ನೀಡಿದ್ದರು. ಇದರ ಬೆನ್ನಲ್ಲೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ತನ್ನ ಉಗ್ರರ ಕ್ಯಾಂಪ್ ಗಳನ್ನು ಸ್ಥಳಾಂತರ ಮಾಡಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಭಾರತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಕುರಿತು ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ, ಎಚ್ಚೆತ್ತಿರುವ ಪಾಕಿಸ್ತಾನ ತನ್ನ ವಶದಲ್ಲಿರುವ ಕಾಶ್ಮೀರದಲ್ಲಿನ ಉಗ್ರ ನೆಲೆಗಳನ್ನು ಸ್ಥಳಾಂತರ ಮಾಡಿದೆ ಎಂದು ಹೇಳಲಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸುಮಾರು 15 ಪ್ರಮುಖ ಉಗ್ರ ಕ್ಯಾಂಪ್ ಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಅಲ್ಲದೇ ಭಾರತಕ್ಕೆ 200 ಉಗ್ರರನ್ನು ಕಳುಹಿಸುವ ತನ್ನ ಯೋಜನೆಯನ್ನು ಕೂಡ ಪಾಕ್ ಮುಂದಕ್ಕೆ ಹಾಕಿದೆ ಎಂದು ತಿಳಿದುಬಂದಿದೆ. ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಪ್ರದೇಶದಲ್ಲಿದ್ದ ಸುಮಾರು 20 ಉಗ್ರ ಶಿಬಿರಗಳನ್ನು ಉರಿ ದಾಳಿ ಬಳಿಕ ಪಾಕಿಸ್ತಾನಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನು ಕೆಲವು ಶಿಬಿರಗಳನ್ನು ಮುಚ್ಚಲಾಗಿದೆ.
ಉಗ್ರರಿದ್ದ ಸ್ಥಳಗಳಲ್ಲಿ ಪಾಕ್ ಗಡಿಭದ್ರತಾ ಪಡೆ ಯೋಧರನ್ನು ನಿಯೋಜಿಸಲಾಗಿದೆ. ಜತೆಗೆ ಗಡಿ ಕಾಯುತ್ತಿರುವ ಎಲ್ಲ ಸೈನಿಕರಿಗೆ ಪಾಕಿಸ್ತಾನ ರಜೆ ರದ್ದು ಮಾಡಿದೆ ಎಂದು ಗುಪ್ತಚರ ಅಧಿಕಾರಿಗಳು ಕೇಂದ್ರ ಗೃಹಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಈ ನಡುವೆ ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿಯ ಎಲ್ಲಾ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಸೈನಿಕರಿಗೆ ಸೂಚಿಸಲಾಗಿದ್ದು, ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
Discussion about this post