ಉಡುಪಿ, ಸೆ.9: ಕಾವೇರಿ ನೀರಿನ ಹಂಚಿಕೆಯ ವಿವಾದದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಡೆದ ಬಂದ್ ಗೆ ಉಡುಪಿಯಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಆದರೇ ಸರ್ಕಾರ ಮುಂಜಾಗರೂಕ ಕ್ರಮವಾಗಿ ರಾಜ್ಯಾದ್ಯಂತ ರಜೆ ಸಾರಿದ್ದರಿಂದ ಉಡುಪಿ ಜಿಲ್ಲೆಯಲ್ಲಿಯೂ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಿದ್ದು, ವಿದ್ಯಾರ್ಥಿಗಳಿಗೆ ಪುಕ್ಕಟೆ ಒಂದು ದಿನದ ರಜೆ ಸಿಕ್ಕಿದಂತಾಯಿತು.
ಜಿಲ್ಲಾ ಬಿ.ಜೆ.ಪಿ. ವತಿಯಿಂದ ರಾಜ್ಯ ಸರ್ಕಾರವು ತಮಿಳುನಾಡಿಗೆ ನೀರು ಬಿಟ್ಟಿದ್ದರ ವಿರುದ್ಧ ಮೆರವಣಿಗೆ, ಪ್ರತಿಭಟನೆ, ಸಾಂಕೇತಿಕ ರಸ್ತೆ ತಡೆ ನಡೆಸಿತು.
ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಕಾರ್ಮಿಕ ವೇದಿಕೆಗಳು ಕೂಡ ಪಾದಯಾತ್ರೆ ನಡೆಸಿ ಜಿಲ್ಲೆಯಲ್ಲಿ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಿದವು.
ಉಳಿದಂತೆ ಜಿಲ್ಲೆಯಾದ್ಯಂತ ಬಸ್ಸು ಸಂಚಾರ ಅಬಾದಿತವಾಗಿತ್ತು, ಆಟೋ, ಟ್ಯಾಕ್ಸಿಗಳು, ಅಂಗಡಿ, ಹೊಟೇಲು ಇತ್ಯಾದಿಗಳ ವ್ಯವಹಾರಗಳ ಮೇಲೆ ಬಂದ್ ನಿಂದ ಯಾವುದೇ ರೀತಿಯ ಪ್ರಭಾವ ಆಗಿಲ್ಲ.
ಬಂದ್ ಗೆ ಸಿನೆಮಾ ರಂಗವೂ ಬೆಂಬಲ ವ್ಯಕ್ತಪಡಿಸಿ, ಬಂದ್ ನಡೆದ ರಾಜ್ಯದ ಬೇರೆ ಜಿಲ್ಲೆಗಳ ಥಿಯೇಟರ್ ಮಾಲಕರು ಶುಕ್ರವಾರ ಸಿನೆಮಾ ಪ್ರದರ್ಶನ ನಡೆಸಲಿಲ್ಲವಾದರೂ, ಉಡುಪಿ ಜಿಲ್ಲೆಯ ಎಲ್ಲಾ 8 ಥಿಯೇಟರ್ ಗಳಲ್ಲಿ ಎಂದಿನಂತೆ ಸಿನೆಮಾ ಪ್ರದರ್ಶನ ನಡೆಯಿತು.
ಸರ್ಕಾರವೇ ಶಾಲಾ ಕಾಲೇಜುಗಳಿಗೆ ರಜೆ ಸಾರಿದ್ದರೂ, ಥಿಯೇಟರ್ ಗಳಲ್ಲಿ ಶಾಲಾ ಕಾಲೇಜು ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳೇ ತುಂಬಿದ್ದರು. ಪುಕ್ಕಟೆಯಾಗಿ ಸಿಕ್ಕಿದ ರಜೆಯನ್ನು ವಿದ್ಯಾರ್ಥಿಗಳು ಸಿನೆಮಾ ನೋಡಿ ಕಳೆದರು.
Discussion about this post