Read - 2 minutes
ಬೆಂಗಳೂರು, ಅ.4: ಕಾವೇರಿ ಸಂಘರ್ಷದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಭಾರೀ ಸರಕು-ಸಾಗಾಣಿಕೆ ವಾಹನಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಬರೋಬ್ಬರಿ 1 ಲಕ್ಷ ಕೋಟಿ ವಹಿವಾಟು ಸ್ಥಗಿತಗೊಂಡಿದ್ದು, 16 ಸಾವಿರ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಂತಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಅತಂತ್ರರಾಗಿದ್ದಾರೆ.
ಎರಡೂ ರಾಜ್ಯಗಳಿಗೆ ಪ್ರತಿದಿನ ಬರುತ್ತಿದ್ದ ನೂರಾರು ಕೋಟಿ ರೂ.ತೆರಿಗೆ ನಷ್ಟವಾಗಿದೆ. ಸರಕು-ಸಾಗಾಣಿಕೆ ಅವಲಂಬಿತರ ಬದುಕು ಬೀದಿ ಪಾಲಾಗಿದೆ. 27 ದಿನಗಳಿಂದ ಗಡಿ ಭಾಗದಲ್ಲಿ ವಾಹನಗಳ ಸಂಚಾರ ಸ್ಥಗಿತವಾಗಿರುವುದರಿಂದ ವಹಿವಾಟಿನಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
ಪ್ರತಿದಿನ ತಮಿಳುನಾಡಿನಿಂದ ಕರ್ನಾಟಕದ ಮೂಲಕ 16 ಸಾವಿರ ಲಾರಿಗಳು ಸಂಚರಿಸಬೇಕು. ಪಟಾಕಿ, ಹತ್ತಿ, ಕಲ್ಲಿಟ್ಟು , ಬಟ್ಟೆ, ಉಪ್ಪು, ವುಡ್, ಯಂತ್ರೋಪಕರಣಗಳು ಸೇರಿದಂತೆ ವಿವಿಧ ಸರಕುಗಳನ್ನು ಹೊತ್ತು ಲಾರಿಗಳು ರಾಜ್ಯದ ಮೂಲಕ ಸಾಗಬೇಕು.
ತಮಿಳುನಾಡಿನಿಂದ ಕರ್ನಾಟಕಕ್ಕೆ ಪ್ರತಿದಿನ 4 ಸಾವಿರ ಲಾರಿಗಳು ವಿವಿಧ ಸರಕುಗಳನ್ನು ಹೊತ್ತು ಬಂದು ಇಲ್ಲಿ ಅನ್ ಲೋಡ್ ಆಗುತ್ತವೆ. ಈ ಎಲ್ಲವೂ ಕಳೆದ 27 ದಿನಗಳಿಂದ ನಿಂತಿವೆ ಎಂದರೆ ಎಷ್ಟು ಜನರ ಬದುಕು ಬರ್ಬಾದ್ ಆಗಿದೆ ಎಂಬುದು ಊಹಿಸಲು ಅಸಾಧ್ಯ.
ಅತ್ತಿಬೆಲೆ, ಸತ್ಯಮಂಗಲ ಗಡಿ ಭಾಗಗಳಲ್ಲಿ ಲಾರಿಗಳನ್ನು ಬಂದ್ ಮಾಡಿರುವುದರಿಂದ ಈ ಪ್ರದೇಶ ವಾಘಾ ಗಡಿಯಂತೆ ಆಗಿದೆ.
ವಾಣಿಜ್ಯ ವಹಿವಾಟು ತಾರುಮಾರು:
ತಮಿಳುನಾಡಿನಿಂದ ಪ್ರತಿದಿನ 1.5 ಕೋಳಿಗಳು ಬರುತ್ತವೆ. 350 ಲೋಡ್ ಬಿಇಎಲ್, ಬಿಎಚ್ಇಎಲ್, ಅಶೋಕ್ ಲೈಲ್ಯಾಂಡ್ ಮುಂತಾದ ಕಂಪೆನಿಗಳಿಗೆ ಮಿಷನರಿ ಸಾಮಾನುಗಳು ಬರುತ್ತವೆ. ಇದಲ್ಲದೆ, ಮಲೇಷಿಯಾದಿಂದ ಹಾರ್ಬರ್ ಮೂಲಕ ಬರ್ಮಾಟೀಕ್ ಮರದ ದಿಮ್ಮಿಗಳ ನೂರಾರು ಲೋಡ್ ಬರುತ್ತದೆ. ಪ್ರತಿದಿನ 400 ಲೋಡ್ ಉಪ್ಪು ಬರುತ್ತದೆ.ಕೊಯಮತ್ತೂರು, ತಿರುಚ್ಚಿ ಮುಂತಾದ ಕಡೆಯಿಂದ ಬಟ್ಟೆ, ಬನಿಯನ್, ಟವೆಲ್ ಮುಂತಾದವುಗಳು ರಾಜ್ಯಕ್ಕೆ ಬರುವುದಲ್ಲದೆ ರಾಜ್ಯದ ಮೂಲಕ ಹೊರರಾಜ್ಯಗಳಿಗೂ ಹೋಗುತ್ತವೆ. ಮೊಟ್ಟೆ ಕೋಳಿಗಳು ಕೂಡ ಅಲ್ಲಿಂದಲೇ ಬರುತ್ತವೆ.
ಇನ್ನು ರಾಜ್ಯದಿಂದ ತಮಿಳುನಾಡಿಗೂ ಸಾವಿರಾರು ಲೋಡು ಲಾರಿ ಸರಕುಗಳು ಸಾಗಾಟವಾಗುತ್ತವೆ. ಪ್ರತಿದಿನ ಯಶವಂತಪುರ ಎಪಿಎಂಸಿಯಿಂದ 400 ಲೋಡ್ ಈರುಳ್ಳಿ ತಮಿಳುನಾಡಿಗೆ ಹೋಗುತ್ತಿರುವುದು ನಿಂತಿದೆ.ಅದೇ ರೀತಿ 500 ಲೋಡ್ ತರಕಾರಿ ಅಂದರೆ ಆಲೂಗಡ್ಡೆ, ಕೋಸು, ಸೀಮೆ ಬದನೆಕಾಯಿ, ಹೂಕೋಸು, ಬದನೆಕಾಯಿ, ಸೊಪ್ಪು ಸೇರಿದಂತೆ ಎಲ್ಲ ತರಕಾರಿಗಳೂ ಹೋಗುತ್ತಿದ್ದವು. ಇವೆಲ್ಲವೂ ಸಾರಾಸಗಟಾಗಿ ಸ್ಥಗಿತಗೊಂಡಿವೆ.
ಹಾವೇರಿ, ಚಿತ್ರದುರ್ಗ, ರಾಣೆಬೆನ್ನೂರು ಮುಂತಾದ ಕಡೆಯಿಂದ ತಮಿಳುನಾಡಿನಲ್ಲಿ ಸಾಕಾಣಿಕೆ ಮಾಡುವ ಕೋಳಿಗಳಿಗೆ ಮೆಕ್ಕೆಜೋಳದ 300 ಲೋಡ್ ಫುಡ್ ಕಳುಹಿಸಿಕೊಡಲಾಗುತ್ತಿತ್ತು. ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ಸದ್ಯ ಅದು ಸ್ಥಗಿತಗೊಂಡಿದೆ.
ಉತ್ತರ ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲಿ 400 ಬೇಳೆ ಮಿಲ್ಗಳಿವೆ. ಈ ಮಿಲ್ ಗಳಿಂದ ಪ್ರತಿದಿನ 300 ಲೋಡ್ ವಿವಿಧ ಬೇಳೆಕಾಳುಗಳು ತಮಿಳುನಾಡಿಗೆ ಲಾರಿಗಳ ಮೂಲಕ ಸರಬರಾಜಾಗುತ್ತಿದ್ದುದು ಕಳೆದ 27 ದಿನಗಳಿಂದ ಸಂಪೂರ್ಣವಾಗಿ ನಿಂತಿದೆ.
ಇದಲ್ಲದೆ, ಎಪಿಎಂಸಿಯಿಂದ ರಾಗಿ, ಜೋಳ, ಕುಸುವಲಕ್ಕಿ, ಗೋಧಿಹಿಟ್ಟು ಪೂರೈಕೆಯಾಗುತ್ತಿದ್ದುದು ಸ್ಥಗಿತಗೊಂಡಿದೆ. ತುಮಕೂರಿನಿಂದ ತಮಿಳುನಾಡಿಗೆ ಅಡುಗೆ ಎಣ್ಣೆ ಸರಬರಾಜಾಗುತ್ತಿತ್ತು. ಅದೂ ಕೂಡ ನಿಂತಿದೆ.ಅದಲ್ಲದೆ, ಮಂಗಳೂರಿನಿಂದ ಕಲ್ಲಿದ್ದಲು ಪೂರೈಸಲಾಗುತ್ತಿತ್ತು. ಕಾವೇರಿ ಗಲಭೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ.
ಸರಕು ಸಾಗಾಣಿಕೆ ಸ್ಥಗಿತದಿಂದ ಎರಡೂ ರಾಜ್ಯಗಳ ರೈತರಿಗೆ, ಉತ್ಪಾದಕರಿಗೆ, ಕಾರ್ಮಿಕರಿಗೆ, ವರ್ತಕರಿಗೆ, ದಲ್ಲಾಳಿಗಳಿಗೆ, ಸರಬರಾಜುದಾರರಿಗೆ, ಲಾರಿ ಮಾಲೀಕರಿಗೆ, ಚಾಲಕರಿಗೆ ಭಾರೀ ಹೊಡೆತ ಬಿದ್ದಿದೆ. ಪ್ರತಿದಿನ ಸರ್ಕಾಕ್ಕೆ ಬರುವ ಬರೋಬ್ಬರಿ 400 ಕೋಟಿ ರೂ.ತೆರಿಗೆ ನಷ್ಟವಾಗುತ್ತಿದೆ.
ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ ಮುಂತಾದ ಕಡೆ ತಮಿಳುನಾಡಿನಿಂದ ಸರಕು ಹೊತ್ತು ಬರುವ ಲಾರಿಗಳು ಕರ್ನಾಟಕದ ಮೂಲಕವೇ ಹೋಗಬೇಕು. ಕಾವೇರಿ ಗಲಭೆ ಹಿನ್ನೆಲೆಯಲ್ಲಿ ಈ ಎಲ್ಲವೂ ನಿಂತಿರುವುದರಿಂದ ಎಲ್ಲ ರಾಜ್ಯಗಳಲ್ಲೂ ವಹಿವಾಟು ಸ್ಥಗಿತಗೊಂಡಿದೆ.
ಆದರೂ ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಲವು ಸರಕುಗಳನ್ನು ಸಾಗಾಟ ಮಾಡಲಾಗುತ್ತಿದೆ. ಸುಮಾರು 300ಕ್ಕೂ ಹೆಚ್ಚು ಕಿಲೋ ಮೀಟರ್ ದೂರ ಕ್ರಮಿಸಿ ಸರಕುಗಳನ್ನು ತರುವುದು, ಕಳುಹಿಸುವುದು ಮಾಡಲಾಗುತ್ತಿದೆ. ಇದರಿಂದ ರೈತರಿಗೆ, ಉತ್ಪಾದಕರಿಗೆ, ಲಾರಿ ಮಾಲೀಕರಿಗೆ ಹೆಚ್ಚು ಹೊರೆಯಾಗುತ್ತಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಸೆಪ್ಟೆಂಬರ್ 12ರಂದು ಕಾವೇರಿ ಗಲಭೆ ಸಂಭವಿಸಿತು. ಈ ಸಂದರ್ಭದಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ನಂತರ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಘಟನೆಗಳು ಈವರೆಗೆ ನಡೆದಿಲ್ಲ. ಎರಡೂ ರಾಜ್ಯಗಳ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸೆ.12 ರಿಂದ ಈವರೆಗೆ ಎಲ್ಲಿಯೂ ಕೂಡ ಸಣ್ಣಪುಟ್ಟ ಘಟನೆಗಳೂ ಸಂಭವಿಸಿಲ್ಲ. ಹೀಗಿದ್ದರೂ ಎರಡೂ ರಾಜ್ಯಗಳ ನಡುವೆ ಸರಕು-ಸಾಗಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ಲಾರಿ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರುತ್ತಿರುವುದಲ್ಲದೆ, ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ.
ಸರಕು ಸಾಗಾಟದ ವಹಿವಾಟು ಸ್ಥಗಿತಗೊಂಡಿದೆ. ಉತ್ಪಾದನೆ ಮೇಲೆ ಭಾರೀ ಹೊಡೆತ ಬಿದ್ದಿದೆ. ಎರಡೂ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಲಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಷಣ್ಮುಗಪ್ಪ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯದ ಪೊಲೀಸರು ಈ ಸಂಬಂಧ ಕ್ರಮ ಕೈಗೊಂಡು ಸೂಕ್ತ ರಕ್ಷಣೆ ನೀಡಲು ಒಪ್ಪಿದ್ದಾರೆ. ಆದರೆ, ಈವರೆಗೆ ತಮಿಳುನಾಡು ಪೊಲೀಸರು ಒಪ್ಪಿಗೆ ಸೂಚಿಸಿಲ್ಲ. ಹಾಗಾಗಿ ಲಾರಿ ಓಡಾಟ ಸ್ಥಗಿತಗೊಂಡಿರುವುದು ಇನ್ನೂ ಮುಂದುವರಿದಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಕೂಡ ಮನವಿ ಸಲ್ಲಿಸಿದ್ದಾರೆ. ಈಗ ಪರಿಸ್ಥಿತಿ ತಿಳಿಗೊಂಡಿದೆ. ಜನ ಉದ್ವೇಗಕ್ಕೆ ಒಳಗಾಗದೆ ವಾಸ್ತವ ಪರಿಸ್ಥಿತಿ ಅರಿಯಬೇಕು. ಹಿಂಸಾಚಾರ, ಗಲಭೆ, ವಾಹನಗಳಿಗೆ ಬೆಂಕಿ ಇಡುವುದರಿಂದ ಜನಸಾಮಾನ್ಯರಿಗೆ ಕಷ್ಟವಾಗುತ್ತದೆಯೇ ಹೊರತು ಬೇರೆ ಯಾರಿಗೂ ಕಷ್ಟವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸರಕು-ಸಾಗಾಟ ಸ್ಥಗಿತಗೊಂಡಿರುವುದರಿಂದ ನೇರ ಪರಿಣಾಮ ರೈತರ ಮೇಲೆ ಬೀರುತ್ತದೆ. ಕಾವೇರಿ ನೀರಿನ ಸಂಕಟ ಒಂದೆಡೆಯಾದರೆ, ಸರಕು-ಸಾಗಾಟದ ವಹಿವಾಟು ಸ್ಥಗಿತಗೊಂಡಿದ್ದರಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮದ ಸ್ಥಿತಿ ಮತ್ತೊಂದೆಡೆಯಾಗುತ್ತದೆ. ಸರ್ಕಾರ ಈಗಲಾದರೂ ನಮ್ಮ ನೆರವಿಗೆ ಬರಬೇಕು. ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
Discussion about this post