Read - < 1 minute
ಸಾಗರ, ಸೆ.೧೦: ಕಾವೇರಿ ಕೊಳ್ಳ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಮರುಪರಶೀಲಿಸುವಂತೆ ಸರ್ಕಾರದಿಂದ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಪಡಿತರ ಹಂಚಿಕೆಗಾಗಿ ಟೋಕನ್ ವಿತರಣೆ ಮಾಡುವ ಪ್ರಾಂಚ್ಯೆಸಿಗೆ ದಿಢೀರ್ ಭೇಟಿ ನೀಡಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ನಮ್ಮ ಭಾಗದ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಕುರಿತು ನ್ಯಾಯಾಲಯದ ಗಮನಕ್ಕೆ ತರಲಾಗುತ್ತದೆ . ನದಿ ನೀರು ಹಂಚಿಕೆ ಸಂದರ್ಭದಲ್ಲಿ ಅಳವಡಿಸಬೇಕಾದ ಸಂಕಷ್ಟ ಸೂತ್ರವನ್ನು ಚರ್ಚಿಸುವ ಸಂಬಂಧ ನನ್ನ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಭೆಯಲ್ಲಿ ಕಾವೇರಿ ನದಿಕೊಳ್ಳದ ಸಮಸ್ಯೆ ಕುರಿತು ಚರ್ಚೆ ನಡೆಸಿ, ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.
ರಾಜ್ಯದ ೬೩ ತಾಲೂಕಿನಲ್ಲಿ ಶೇ. ೩೦ರಷ್ಟು ಮಳೆ ಕೊರತೆ ಉಂಟಾಗಿದ್ದು, ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವಷ್ಟು ತಾಲೂಕುಗಳಲ್ಲಿ ಇದೇ ಪರಿಸ್ಥಿತಿ ಇದೆ ಎನ್ನುವ ಮಾಹಿತಿ ಇದೆ. ಈಗಾಗಲೆ ನನ್ನ ನೇತೃತ್ವದ ಸಮಿತಿಯು ಸಭೆ ಸೇರಿ ಒಂದು ಹಂತದಲ್ಲಿ ಚರ್ಚೆ ನಡೆಸಲಾಗಿದೆ. ಸೆ. ೧೫ರಂದು ಮತ್ತೆ ಸಭೆ ಕರೆಯಲಾಗಿದೆ. ಯಾವ ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಅರಣ್ಯಹಕ್ಕು ಕಾಯ್ದೆ ಬಗ್ಗೆ ಅಧಿಕಾರಿಗಳಿಗೆ ಇನ್ನು ಸರಿಯಾದ ತಿಳಿವಳಿಕೆ ಮೂಡಿಲ್ಲ. ಇದರಿಂದ ಹೊಸ ಸುತ್ತೋಲೆ ಹೊರಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಯಾವುದೆ ಕಾರಣಕ್ಕೂ ಒತ್ತುವರಿದಾರರು ಯೋಜನೆ ದುರುಪಯೋಗ ಮಾಡಿಕೊಳ್ಳಲು ಬಿಡುವುದಿಲ್ಲ. ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ವಿಶೇಷ ಭೂಸ್ವಾಧೀನ ಪ್ರಕ್ರಿಯೆಗಳ ಬಗ್ಗೆ ತೀರ್ಮಾನ ಕೊಡುವ ನ್ಯಾಯಾಲಯದ ಆಗುಹೋಗುಗಳ ಬಗ್ಗೆ ಇನ್ನಷ್ಟೆ ಚರ್ಚೆ ನಡೆಯಬೇಕಾಗಿದೆ. ಇಲ್ಲಿನ ತೀರ್ಮಾನದಿಂದ ಗ್ರಾಮೀಣ ಪ್ರದೇಶಗಳಿಗೆ ತೊಂದರೆಯಾಗುವ ಸಾಧ್ಯತೆ ಇದ್ದು, ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ತಾಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ, ನಗರ ಬ್ಲಾಕ್ ಅಧ್ಯಕ್ಷ ಮಕ್ಬೂಲ್ ಅಹ್ಮದ್, ನಾಗರಾಜ ಗುಡ್ಡೆಮನೆ ಇನ್ನಿತರರು ಹಾಜರಿದ್ದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಮಳೆ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ೨ ತಿಂಗಳಿನಲ್ಲಿ ೧೦೫೦ ಸರ್ವೇಯರ್, ಅಗತ್ಯವುಳ್ಳ ಕಡೆಯಲ್ಲಿ ತಹಶೀಲ್ದಾರ್ ನೇಮಕಕ್ಕೂ ಕ್ರಮ ಕೈಗೊಳ್ಳಲಾಗಿದೆ. ಪಡಿತರ ಪಡೆಯಲು ಟೋಕನ್ ವ್ಯವಸ್ಥೆ ಅಳವಡಿಸಿರುವ ಬಗ್ಗೆ ದೂರುಗಳು ಬಂದಿದೆ. ಕಾರ್ಡ್‌ದಾರರಿಗೆ ಆಗುತ್ತಿರುವ ತೊಂದರೆ ಕುರಿತು ಸಂಬಂಧಪಟ್ಟವರ ಗಮನಕ್ಕೆ ತರಲಾಗುತ್ತದೆ.
– ಕಾಗೋಡು ತಿಮ್ಮಪ್ಪ
Discussion about this post