Read - 2 minutes
ಮೈಸೂರು, ಸೆ.7: ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿಯಿಂದ ರಾಜ್ಯದಿಂದ ಕಾವೇರಿ ಹರಿಯಲು ಆರಂಭಿಸಿದ್ದು, ವಿಶೇಷವೆಂದರೆ, ಕೇಳಿದ್ದಕ್ಕಿಂತಲೂ ಮೂರು ಸಾವಿರ ಕ್ಯೂಸೆಕ್ಸ್ ಹೆಚ್ಚು ನೀರನ್ನು ಹರಿಸಲಾಗಿದೆ.
ನಿನ್ನೆ ಮಧ್ಯರಾತ್ರಿಯಿಂದ ನೀರು ಹರಿಸಲು ಆರಂಭಿಸಲಾಗಿದೆ. ಕೆಆರ್‌ಎಸ್‌ನಿಂದ ೧೧ ಸಾವಿರ ಕ್ಯೂಸೆಕ್ಸ್, ಹಾರಂಗಿಯಿಂದ ೨ ಸಾವಿರ ಕ್ಯೂಸೆಕ್ಸ್ ಹಾಗೂ ಕಬಿನಿಯಿಂದ ೫ ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.
ಭುಗಿಲೆದ್ದ ಆಕ್ರೋಶ
ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಮಂಡ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದು, ರಾತ್ರಿಯಿಂದಲೇ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನು ಇಂದು ಬೆಳಗ್ಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ಇರುವ ವೆಲ್ಲೆಸಿ ಸೇತುವೆ ಬಳಿ ರೈತರು ನದಿಗಿಳಿದು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿದ್ದಾರೆ.
ಹೆದ್ದಾರಿ ಬಂದ್
ಇದೇ ವೇಳೆ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಮಳವಳ್ಳಿ ತಾಲೂಕಿನ ಉಪ್ಪಿನ ಕೆರೆ ಗ್ರಾಮಸ್ಥರು ವ್ಯಾಪಕ ಪ್ರತಿಭಟನೆ ನಡೆಸಿದ್ದು, ಬೆಳಗ್ಗೆ ೬ ಗಂಟೆಯಿಂದಲೇ ಹೆದ್ದಾರಿ ತಡೆ ನಡೆಸಿದ್ದಾರೆ. ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ರಸ್ತೆಯಲ್ಲೇ ಕುಳಿತು ಗ್ರಾಮಸ್ಥರು ಧರಣಿ ನಡೆಸಿದ್ದು, ಈ ಮಾರ್ಗದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು.
ನೀರು ಬಿಡುತ್ತಿರುವ ಕ್ರಮವನ್ನು ವಿರೋಧಿಸಿ ಮಂಡ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮಧ್ಯಾಹ್ನದ ವೇಳೆಗೆ ಹಿಂಸಾ ಸ್ವರೂಪ ಪಡೆದುಕೊಂಡಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಾಗೂ ತಮಿಳುನಾಡಿಗೆ ನೀರು ಹರಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂದು ಮಧ್ಯಾಹ್ನ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ವೇಳೆ ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನೆ ಹಿಂಸಾಸ್ವರೂಪವನ್ನು ಪಡೆದುಕೊಂಡಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ರೈತರ ಆಕ್ರೋಶ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಮೂರೂ ಜಲಾಶಯಗಳಿಗೆ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿದೆ.
ಹೆಚ್ಚುವರಿ ನೀರು ಯಾಕೆ?
ಕರ್ನಾಟಕದಿಂದ ಎಷ್ಟು ನೀರು ಬಿಡಲಾಗಿದೆ ಎಂಬುದನ್ನು ಲೆಕ್ಕ ಹಾಕುವುದು ಗಡಿ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ. ಕೆಆರ್‌ಎಸ್‌ನಿಂದ ಬಿಳಿಗುಂಡ್ಲುವರೆಗೆ ಸುಮಾರು ೨೦೦ ಕಿಮೀ ದೂರದವರೆಗೆ ನೀರು ಹರಿದುಹೋಗಬೇಕು. ಈ ವೇಳೆ ಸಾಕಷ್ಟು ನೀರು ಬಿಸಿಲಿಗೆ ಆವಿಯಾಗುವುದು. ಭೂಮಿಗೆ ಹಿಂಗುವುದು, ಅಲ್ಲಲ್ಲಿ ಗ್ರಾಮಸ್ಥರ ಬಳಕೆಗೆ ವ್ಯಯವಾಗುತ್ತದೆ. ಹೀಗಾಗಿ, ನಿಗದಿಗಿಂತ ಹೆಚ್ಚು ನೀರನ್ನು ಬಿಡುಗಡೆ ಮಾಡುವುದು ಅನಿವಾರ್ಯವಾಗುತ್ತದೆ.
ನೀರು ನಿಲ್ಲಿಸಿ, ಇಲ್ಲವೇ ರಾಜೀನಾಮೆ ನೀಡಿ: ಮಾದೇಗೌಡ
ತೀವ್ರ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕಟುವಾಗಿ ಖಂಡಿಸಿರುವ ಕಾವೇರಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಜಿ. ಮಾದೇಗೌಡ, ತಕ್ಷಣವೇ ನೀರು ನಿಲ್ಲಿಸಿ, ಇಲ್ಲವೇ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ಸರ್ವಪಕ್ಷ ಸಭೆ ನಡೆಸಿ ನಿರ್ಧಾರ ಮಾಡುವ ಮೂಲಕ ಸಿದ್ದರಾಮಯ್ಯ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಬಂದ್‌ಗೆ ೧೨೦೦ ಸಂಘಟನೆಗಳ ಬೆಂಬಲ
ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಆದೇಶಿಸಿರುವ ಹಿನ್ನೆಲೆಯಲ್ಲಿ ಸೆ.೯ರ ಶುಕ್ರವಾರ ಕರೆ ನೀಡಲಾಗಿರುವ ರಾಜ್ಯ ಬಂದ್‌ಗೆ ೧೨೦೦ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಈ ತೀರ್ಪು ಖಂಡಿಸಿ ಬಂದ್ ಕರೆ ನೀಡಲಾಗಿದೆ. ಬಂದ್ ದಿನ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ನಡೆಸುವುದಿಲ್ಲ, ಲಾರಿ, ಆಟೋ, ಟ್ಯಾಕ್ಸಿಗಳು ಸಂಚರಿಸುವುದಿಲ್ಲ. ಹೋಟೆಲ್, ಚಿತ್ರಮಂದಿರ ಬಾಗಿಲು ತೆರೆಯುವುದಿಲ್ಲ ಎಂದರು.
Discussion about this post