Read - 3 minutes
ಮೈಸೂರು, ಅ.9: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಪೂರ್ಣಗೊಳಿಸಿದೆ. ದಸರಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಬರುವ ಹಿನ್ನೆಲೆಯಲ್ಲಿ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆಗೆ ಸಿದ್ಧತೆ ಮಾಡಲಾಗಿದೆ.
ಅರಮನೆ ಆವರಣದಲ್ಲಿ ವಿಐಪಿ ಹಾಗೂ ಇನ್ನಿತರ ಪಾಸ್ ಗಳನ್ನು ಹೊಂದಿರುವ 20 ಸಾವಿರ ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು ಬಿಸಿಲು ನಿಯಂತ್ರಣಕ್ಕೆ ಬೃಹತ್ ಶಾಮಿಯಾನ ಹಾಕಲಾಗಿದೆ. ಜಂಬೂ ಸವಾರಿಯ ಚಾಮುಂಡೇಶ್ವರಿ ವಿಗ್ರಹದ ಅಂಬಾರಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡಲು ವೇದಿಕೆ ಮಾಡಲಾಗಿದೆ. ಅರಮನೆ ಆವರಣದ ಮುಂಭಾಗದ ಅಕ್ಕಪಕ್ಕದಲ್ಲಿ ಶಾಮಿಯಾನದ ಜೊತೆಗೆ 15 ಸಾವಿರಕ್ಕೂ ಹೆಚ್ಚು ಆಸನಗಳನ್ನು ಹಾಕಲಾಗಿದೆ. ಇಲ್ಲಿ ಕುಳಿತು ಜಂಬೂ ಸವಾರಿ ಮೆರವಣಿಗೆಯನ್ನು ವೀಕ್ಷಿಸಬಹುದಾಗಿದೆ.
ಸಯ್ಯಾಜಿರಾವ್ ರಸ್ತೆ ಅಕ್ಕಪಕ್ಕದಲ್ಲಿ ಪ್ರೇಕ್ಷಕರು ನಿಂತುಕೊಂಡು ಮೆರವಣಿಗೆ ವೀಕ್ಷಿಸಲು ಬಿದಿರು ಬೊಂಬಿನ ಬ್ಯಾರಿಕೇಡ್ ಗಳನ್ನು ನಿರ್ಮಿಸಲಾಗಿದ್ದು ಬನ್ನಿಮಂಟಪದವರೆಗೂ ಅವಕಾಶ ಕಲ್ಪಿಸಲಾಗಿದೆ. ವಿಜಯದಶಮಿ ದಿನದಂದು ಬನ್ನಿಮಂಟಪದ ಕವಾಯಿತು ಮೈದಾನದಲ್ಲಿ ನಡೆಯುವ ಆಕರ್ಷಕ ಪಂಜಿನ ಕವಾಯಿತು ವೀಕ್ಷಣೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಿಸಲು ಸಾರ್ವಜನಿಕರಿಗೆ ಪಾಸ್ ಗಳನ್ನು ವಿತರಿಸಲಾಗಿದೆ.
ಅರಮನೆ ಆವರಣದ ನಾಲ್ಕು ಗೇಟ್ ಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು ಪಾಸ್ ಪಡೆದವರಿಗೆ ಮಾತ್ರ ಪ್ರವೇಶವಿದೆ. ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯಿತು ಪ್ರದರ್ಶನ ವೀಕ್ಷಿಸಲು ವಿವಿಧ ಗೇಟ್ ಗಳ ಮೂಲಕ ಅವಕಾಶ ಕಲ್ಪಿಸಲಾಗಿದೆ.
ಅಕ್ಟೋಬರ್ 1 ರಿಂದ ಆರಂಭವಾಗಿರುವ ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಚಲನಚಿತ್ರೋತ್ಸವ, ಯುವ ದಸರೆ, ಕುಸ್ತಿ ಪಂದ್ಯಾವಳಿ, ಅರಮನೆ ವಿವಿದೆಡೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಲಕ್ಷಾಂತರ ಪ್ರವಾಸಿಗರ ಮನಸೂರೆಗೊಳಿಸಿವೆ. ನಾಳೆ ಬಹುತೇಕ ಎಲ್ಲಾ ಕಾರ್ಯಕ್ರಮಗಳಿಗೂ ತೆರೆ ಬೀಳಲಿದೆ.
ಖಾಸಗಿ ದಸರಾ
ರಾಜವಂಶಸ್ಥರು ಐತಿಹಾಸಿಕ ಪರಂಪರೆಗಳನುಗುಣವಾಗಿ ಅಕ್ಟೋಬರ್ 1 ರಿಂದಲೇ ಅರಮನೆ ಒಳಾಂಗಣದಲ್ಲಿ ಶರನ್ನವರಾತ್ರಿಯ ವಿಶೇಷ ಪೂಜೆಗಳನ್ನು ನಡೆಸುತ್ತಿದ್ದಾರೆ. ನಾಳೆ ಆಯುಧಪೂಜೆ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ನಡೆಯಲಿದ್ದು, ವಿಜಯದಶಮಿ ದಿನದಂದು ಕರಿಕಲ್ಲು ತೊಟ್ಟಿಯಲ್ಲಿ ಜಗಜೆಟ್ಟಿಗಳಿಂದ ವಜ್ರಮುಷ್ಟಿ ಕಾಳಗ ನಡೆಯಲಿದೆ. ಇಬ್ಬರು ಜಟ್ಟಿಗಳು ಕಾದಾಡುವ ಸಮಯದಲ್ಲಿ ಅವರ ತಲೆಯಿಂದ ರಕ್ತ ಹೊರ ಬಂದ ತಕ್ಷಣ ಕಾಳಗವನ್ನು ನಿಲ್ಲಿಸಲಾಗುವುದು. ನಂತರ ಸಂಪ್ರದಾಯದಂತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಯದುವೀರ್ ಅರಮನೆ ಆವರಣದಲ್ಲಿರುವ ದೇವಾಲಯಗಳಿಗೆ ಮೆರವಣಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಎಲ್ಲಾ ಧಾಮರ್ಿಕ ಕಾರ್ಯಕ್ರಮಗಳು ಕೊನೆಯಾಗಲಿದೆ. ನಂತರ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪೋಲಿಸ್ ಬಂದೋಬಸ್ತ್
ವಿಶ್ವ ವಿಖ್ಯಾತ ಜಂಬೂ ಸವಾರಿ ವೀಕ್ಷಿಸಲು ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ 4 ಸಾವಿರಕ್ಕೂ ಹೆಚ್ಚು ಸೂಕ್ತ ಪೋಲಿಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಾಂಬ್ ಸ್ಕ್ವಾಡ್, ಶ್ವಾನ ದಳ ಸೇರಿದಂತೆ ಗುಪ್ತಚರ ಪೋಲಿಸರು ಕಟ್ಟೆಚ್ಚರ ವಹಿಸಿದ್ದಾರೆ. ಆಯಾ ಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವಿಜಯದಶಮಿ ದಿನದಂದು ಪೋಲಿಸರು ಹದ್ದಿನ ಕಣ್ಣಿರಿಸಿದ್ದು ಎಂತಹ ಸವಾಲು ಎದುರಿಸಲು ಸನ್ನದ್ದರಾಗಿದ್ದಾರೆ.
ಗಣ್ಯರ ಆಗಮನ: ವಿಜಯದಶಮಿ ದಿನದಂದು ಜಂಬೂ ಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ 2-16 ನಿಮಿಷದ ಮಕರ ಲಗ್ನದಲ್ಲಿ ನಂದಿ ದ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡುವರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ, ಶಿಕ್ಷಣ ಸಚಿವ ತನ್ವೀರ್ ಸೇಟ್, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ಸಹಕಾರ ಸಚಿವ ಮಹದೇವ್ ಪ್ರಸಾದ್, ಮೇಯರ್ ಭೈರಪ್ಪ, ಉಪಮೇಯರ್ ವನಿತಾ ಪ್ರಸನ್ನ, ಜಿ ಪಂ ಅಧ್ಯಕ್ಷೆ ನಯೀಮಾ ಸುಲ್ತಾನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು.
ನಂತರ ಸಂಜೆ 8 ಗಂಟೆಗೆ ಬನ್ನಿಮಂಟಪದ ಕವಾಯಿತು ಮೈದಾನದಲ್ಲಿ ನಡೆಯುವ ಅತ್ಯಾಕರ್ಷಕ ಟಾರ್ಚಲೈಟ್ ಪರೇಡ್ ನಲ್ಲಿ ರಾಜ್ಯಪಾಲ ವಜುಬಾಯಿ ರೂಡಬಾಯಿವಾಲಾ ಗೌರವ ವಂದನೆ ಸ್ವೀಕರಿಸುವರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ, ಶಿಕ್ಷಣ ಸಚಿವ ತನ್ವೀರ್ ಸೇಠ್, ಸಹಕಾರ ಸಚಿವ ಮಹದೇವ್ ಪ್ರಸಾದ್, ಸೇರಿದಂತೆ ರಾಜ್ಯ ಸಕರ್ಾರದ ಹಲವಾರು ಮಂತ್ರಿಗಳು, ಮೇಯರ್ ಭೈರಪ್ಪ, ಉಪಮೇಯರ್ ವನಿತಾ ಪ್ರಸನ್ನ, ಜಿ ಪಂ ಅಧ್ಯಕ್ಷೆ ನಯೀಮಾ ಸುಲ್ತಾನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು.
ಜಂಬೂ ಸವಾರಿಲ್ಲಿ ಏನೇನಿದೆ: ನಾಡಹಬ್ಬ ದಸರಾ ಮಹೋತ್ಸವದ ಕೇಂದ್ರ ಬಿಂಧುವಾದ ಜಂಬೂ ಸವಾರಿಯಲ್ಲಿ ಈ ಬಾರಿ ನಾಡು, ನುಡಿ, ಭಾರತದ ಸಂಸ್ಕೃತಿಯ ಪ್ರತೀಕವಾಗಿರುವ ಒಟ್ಟು 62 ಜಾನಪದ ಕಲಾ ಪ್ರಕಾರಗಳು, 41 ಸ್ಥಭ್ದ ಚಿತ್ರಗಳು ನೋಡುಗರ ಲಕ್ಷಾಂತ ಮಂದಿಯ ಗಮನೆಳೆಯಲಿದೆ.
ನಂದೀದ್ವಜ, ವೀರಗಾಸೆ, ನಾದಸ್ವರ, ಹಾಲಕ್ಕಿ ಸುಗ್ಗಿ ಕುಣಿತ, ಕತ್ತಿವರೆಸೆ, ಸಮ್ಮಾನಮೇಳ, ಮಲೆನಾಡ ಸುಗ್ಗಿ ಕುಣಿತ, ಗಾರಡಿ ಗೊಂಬೆ ಕೀಲು ಕುದುರೆ, ತಮಟೆಮೇಳ. ಚಂಡೆ ವಾದನ, ಹುಲಿವೇಶ, ಝಾಂಜ್ಪಥಕ್, ಡಮಾಯಿ ನೃತ್ಯ, ಬೀಸು ಕಂಸಾಳೆ ಸೇರಿದಂತೆ ಇನ್ನು ಅಲವಾರು ಜಾನಪದ ಕಲಾತಂಡಗಳ ಭಾಹವಹಿಸಲಿದೆ, ಜೋತೆಗೆ ರಾಜ್ಯ ಸರ್ಕಾರದ ವಿವಿದ ಇಲಾಖೆಗಳನ್ನು ಸಾರುವ, ಹಾಗೂ ವಿವಿದ ಜಿಲ್ಲೆಯ ಮಾಹಿತಿ ನೀಡುವ 41 ಸ್ತಬ್ಧ ಚಿತ್ರಗಳನ್ನು ನಿರ್ಮಿಸಲಾಗಿದೆ.
Discussion about this post