Read - < 1 minute
ಕೊವುರೌ, ಅ.೬: ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-೧೮ನ್ನು ಇಂದು ಬೆಳಗಿನ ಜಾವ ೨ ಗಂಟೆ ಸುಮಾರಿನಲ್ಲಿ ದಕ್ಷಿಣ ಅಮೆರಿಕಾದ ಫ್ರೆಂಚ್ ಗಯಾನಾದ ಕೊವುರೌನಲ್ಲಿರುವ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಭಾರತಿಯ ಕಾಲಮಾನದಂತೆ ಬುಧವಾರ ಬೆಳಗಿನ ಜಾವ ೨ ಗಂಟೆಗೆ ಜಿಸ್ಯಾಟ್ ಉಪಗ್ರಹವನ್ನು ಉಡಾವಣೆ ಮಾಡಬೇಕಿತ್ತು. ಆದರೆ ಉಡಾವಣಾ ಪ್ರದೇಶದಲ್ಲಿ ವ್ಯತಿರಿಕ್ತ ವಾತಾವರಣವಿದ್ದುದರಿಂದ ಹಾಗೂ ಭಾರೀ ಗಾಳಿ ಬೀಸುತ್ತಿದ್ದ ಕಾರಣ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿತ್ತು. ಅದರಂತೆ ಇಂದು ನಿಗದಿತ ಸಮಯಕ್ಕೆ ಸರಿಯಾಗಿ ಜಿಸ್ಯಾಟ್-೧೮ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಜಿಸ್ಯಾಟ್-೧೮ ಸುಮಾರು ೩,೪೦೪ ಕೆಜಿ ತೂಕ ಹೊಂದಿದ್ದು, ಈ ಉಪಗ್ರಹವನ್ನು ಹೊತ್ತ ಏರಿಯಾನ್-೫ ವಿಎ-೨೩೧ ರಾಕೆಟ್ ಅಗಸಕ್ಕೆ ಚಿಮ್ಮಿತು. ಬಳಿಕ ೩೨ ನಿಮಿಷಗಳಲ್ಲಿ ರಾಕೆಟ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಇಸ್ರೋ ತಜ್ಞರ ಪ್ರಕಾರ ಪ್ರಸ್ತುತ ಉಡಾವಣೆಯಾಗಿರುವ ಜಿಸ್ಯಾಟ್-೧೮ ಭಾರಿ ಗಾತ್ರದ ಉಪಗ್ರಹವಾಗಿದ್ದು, ತನ್ನಲ್ಲಿರುವ ರಾಕೆಟ್‌ಗಳ ಮೂಲಕ ಇದನ್ನು ಉಡಾವಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ವಿದೇಶಿ ರಾಕೆಟ್ ಅನ್ನು ಬಳಕೆ ಮಾಡಲಾಯಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ಶೀಘ್ರದಲ್ಲಿಯೇ ಇಸ್ರೋ ಇದಕ್ಕೂ ಪರಿಹಾರ ಕಂಡುಕೊಳ್ಳಲ್ಲಿದ್ದು, ಇಸ್ರೊ ಜಿಎಸ್‌ಎಲ್‌ವಿ ಎಂಕೆ೩ ರಾಕೆಟ್ ಅಭಿವೃದ್ಧಿ ಪಡಿಸಿದ ನಂತರ ಭಾರೀ ಗಾತ್ರದ ಉಪಗ್ರಹಗಳನ್ನೂ ಸಹ ಭಾರತವೇ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಲಿದೆ.
ಜಿಸ್ಯಾಟ್-೧೮ ಉಪಗ್ರಹವನ್ನು ಕರ್ನಾಟಕದಿಂದ ನಿಯಂತ್ರಿಣ ಮಾಡಲಾಗುತ್ತದೆ. ಕರ್ನಾಟಕದ ಹಾಸನ ಮತ್ತು ಬೆಂಗಳೂರಿನಲ್ಲಿರುವ ನಿಯಂತ್ರಣ ಕೇಂದ್ರಗಳಲ್ಲಿ ಉಪಗ್ರಹ ನಿಯಂತ್ರಣ ಮಾಡಲಾಗುತ್ತದೆ.
ಇನ್ನು ಭಾರತದ ಉಪಗ್ರಹವನ್ನು ಹೊತ್ತು ಸಾಗಿದ ಏರಿಯಾನ್-೫ ರಾಕೆಟ್ ಪಾಲಿಗೆ ಇದು ೭೪ನೇ ಉಡಾವಣೆಯಾಗಿದೆ.
Discussion about this post