ತುಮಕೂರು: ಅ:8; ರಾತ್ರೋರಾತ್ರಿ 52 ಮಂದಿ ರೈತರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಗುಬ್ಬಿ ವೃತ್ತ ನಿರೀಕ್ಷಕರ ಕಚೇರಿ ಮುಂದೆ ತುರುವೇಕೆರೆ ಕ್ಷೇತ್ರದ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಿನ್ನೆಯಿಂದ ತುಮಕೂರಿಗೆ ಹೇಮಾವತಿ ನೀರನ್ನು ಹರಿಸಲಾಗುತ್ತಿದೆ. ಕೊಡುತ್ತಿರುವುದು ಸ್ವಲ್ಪ ನೀರು. ಹಾಗಾಗಿ ಆತಂಕಗೊಂಡಿದ್ದ ರೈತರು ಶಾಸಕ ಕೃಷ್ಣಪ್ಪ ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿ 11 ಗಂಟೆ ಸಮಯದಲ್ಲಿ ನಾಲೆಗಳ ಗೇಟುಗಳನ್ನು ತೆರೆದು ಕೆರೆಗಳಿಗೆ ನೀರು ಹರಿಯಲು ಅನುವು ಮಾಡಿದರು.
ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಎಂ.ಟಿ.ಕೃಷ್ಣಪ್ಪ ಮನೆಗೆ ತೆರಳಿದರು. ಇತ್ತ ಗುಬ್ಬಿ, ತುರುವೇಕೆರೆ ಪೊಲೀಸರು 52 ರೈತರನ್ನು ವಶಕ್ಕೆ ಪಡೆದು ಶಿರಾ ತಾಲ್ಲೂಕಿನ ತಾವರೆಕೆರೆ ಪೊಲೀಸ್ ಠಾಣೆ ಹಾಗೂ ಕಳ್ಳಂಬೆಳಗ್ಗೆ ಠಾಣೆ, ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ.
ಈ ವಿಷಯ ಬೆಳಗ್ಗೆ ಹರಡುತ್ತಿದ್ದಂತೆ ಶಾಸಕ ಎಂ.ಟಿ.ಕೃಷ್ಣಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಸೀಲ್ದಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ರೈತರೇನಾದರು ದರೋಡೆ ಮಾಡಿದ್ದಾರಾ, ಕೊಲೆ ಮಾಡಿದ್ದಾರಾ, ಜಾನುವಾರುಗಳಿಗಾಗಿ ನೀರು ಬಿಟ್ಟುಕೊಂಡಿದ್ದಾರೆ. ಅದಕ್ಕೆ ಅವರನ್ನೆಲ್ಲ ಠಾಣಗಳಲ್ಲಿ ಕೂಡಿಡಬೇಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ವಶಕ್ಕೆ ಪಡೆದ ರೈತರನ್ನು ಗುಬ್ಬಿ ಠಾಣೆಯಲ್ಲಿ ಇಡಬೇಕಿತ್ತು. ಆದರೆ ಶಿರಾ ತಾಲ್ಲೂಕಿನ ಠಾಣೆಗಳಲ್ಲಿಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಕೂಡಲೇ ಭೇಷರತ್ತಾಗಿ ರೈತರನ್ನು ಬಿಡುಗಡೆ ಮಾಡಬೇಕೆಂದು ಕೃಷ್ಣಪ್ಪ ಆಗ್ರಹಿಸಿದರು.
Discussion about this post