Read - < 1 minute
ಸದಾ ಪಾಕಿಸ್ಥಾನದ ಪರವಾಗಿ ವಕಾಲತ್ತು ವಹಿಸುತ್ತಾ ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಪ್ರತ್ಯೇಕತಾವಾದಿ ನಾಯಕರಿಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈ ನಾಯಕರು ಪಡೆಯುತ್ತಿರುವ ಎಲ್ಲ ರೀತಿಯ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಸಂಗತಿ.
ಜಮ್ಮು ಕಾಶ್ಮೀರದಲ್ಲಿ ನಿರಂತರವಾಗಿ ಶಾಂತಿ ಕದಡಲು ಪ್ರಮುಖ ಕಾರಣ ಈ ಪ್ರತ್ಯೇಕತಾವಾದಿಗಳು. ಪ್ರತ್ಯೇಕತಾವಾದದ ಹೆಸರಿನಲ್ಲಿ ಅಮಾಯಕರ ಜೀವಕ್ಕೆ ಕುತ್ತು ತರುತ್ತಿರುವ ಹಾಗೂ ಭಾರತದ ಮುಕುಟಮಣಿಯನ್ನೇ ಅಲುಗಾಡಿಸುವ ಪ್ರಯತ್ನ ಮಾಡುತ್ತಿರುವ ಈ ನಾಯಕರಿಗೆ ಸರ್ಕಾರಿ ಸೌಲಭ್ಯ ನೀಡುವುದೇ ಮೂಲತಃವಾಗಿ ತಪ್ಪು.
ವರದಿಯನ್ವಯ, ಕಾಶ್ಮೀರಕ್ಕೆ ಸ್ವಾಯತ್ತದೆ ನೀಡಬೇಕು ಎಂದು ಪಾಕ್ ಪ್ರೇರಣೆಯಿಂದ ಹೋರಾಡುತ್ತಿರುವ ಈ ನೀಚರಿಗೆ, ವಿದೇಶ ಪ್ರಯಾಣಕ್ಕೆ ವಿಮಾನ ಟಿಕೇಟ್, ಹೊಟೇಲ್ ವೆಚ್ಚ, ಟ್ಯಾಕ್ಸಿ ವೆಚ್ಚ, 481 ವ್ಯಕ್ತಿಗಳಿಗೆ 708 ವಾಹನಗಳ ವ್ಯವಸ್ಥೆ, 440 ಮುಖಂಡರಿಗೆ ಉಚಿತ ಹೊಟೇಲ್ ವ್ಯವಸ್ಥೆ ಸೇರಿದಂತೆ ಹಲವು ಸವಲತ್ತುಗಳನ್ನು ಭಾರತ ಸರ್ಕಾರದಿಂದ ನೀಡಲಾಗುತ್ತಿದೆ.
ಇದೊಂತರ ಹೇಗಾಗಿದೆ ಎಂದರೆ, ದೇಶ ವಿರೋಧಿ ಹೋರಾಟ ನಡೆಸಲು ದೇಶದಲ್ಲಿರುವ ಸರ್ಕಾರವೇ ಬೆಂಬಲ ನೀಡಿ, ಸವಲತ್ತು ಕಲ್ಪಿಸುವಂತಾಗಿದೆ. ನಮ್ಮ ಮನೆಗೆ ನಾವೇ ದುಡ್ಡು ಕೊಟ್ಟು ಬೆಂಕಿ ಹಚ್ಚಿಸಿಕೊಂಡಂತೆ.
ಭಾರತ ಸರ್ಕಾರದಿಂದ ಸವಲತ್ತು ಪಡೆಯುತ್ತಿರುವ 1472 ಮಂದಿ ಭಾರತದ ಪರವೇನೂ ಕೆಲಸ ಮಾಡುತ್ತಿಲ್ಲ. ನಮ್ಮ ಶತ್ರು ರಾಷ್ಟ್ರ ಪಾಕ್ ಪರ ಕೆಲಸ ಮಾಡುವುದು ಮಾತ್ರವಲ್ಲ ಉಗ್ರರಿಗೆ ಸಹಕಾರ ನೀಡುತ್ತಿದ್ದಾರೆ ಎನ್ನುವುದು ಈಗ ಕಾಶ್ಮೀರ ಹೊತ್ತಿ ಉರಿಯುತ್ತಿರುವುದೇ ಸಾಕ್ಷಿ.
ಇವರು ಒಂದು ರೀತಿಯಲ್ಲಿ ದೇಶದ್ರೋಹಿಗಳೇ. ಇಂತಹ ದೇಶದ್ರೋಹಿಗಳಿಗೆ ಭಾರತ ಸರ್ಕಾರ 100 ಕೋಟಿಗೂ ಅಧಿಕ ಹಣ ವ್ಯಯಿಸಿ, ಭದ್ರತೆಗಾಗಿ 900 ಮಂದಿಯನ್ನು ನಿಯೋಜಿಸಲಾಗಿದೆ ಎಂದರೆ ಅದಕ್ಕೆ ಅರ್ಥವಿದೆಯೇ? ಇಷ್ಟೆಲ್ಲಾ ಸವಲತ್ತು ಭಾರತದಿಂದ ಪಡೆದ ಈ ನೀಚರು ದೇಶ ವಿರೋಧಿ ಕಾರ್ಯ ಮಾಡುವುದರ ಜೊತೆ, ಭಾರತದಿಂದ ಕಾಶ್ಮೀರವನ್ನೇ ಪ್ರತ್ಯೇಕಿಸುವ ಕಾರ್ಯ ಮಾಡಲು ಹೊರಟಿದ್ದಾರೆ.
ಇಂತಹ ದೇಶದ್ರೋಹಿಗಳಿಗೆ ನೀಡುವ ಈ ಸವಲತ್ತನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನಿಜಕ್ಕೂ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಲೇಬೇಕು.
ದೇಶದ ಹಣವನ್ನು ತಿಂದು ದೇಶದ ವಿರುದ್ಧ ಕೆಲಸ ಮಾಡುವ ಇಂತಹ ಪ್ರತ್ಯೇಕತಾವಾದಿಗಳು ಮಾತ್ರವಲ್ಲ, ಆಜಾದಿ ಹೆಸರಿನಲ್ಲಿ ದೇಶ ವಿರೋಧಿ ಘೋಷಣೆ ಕೂಗುವುದು, ದೇಶ ವಿರೋಧಿ ಚಟುವಟಿಕೆ ನಡೆಸುವುದು, ಜೀವವನ್ನೇ ಪಣಕ್ಕಿಟ್ಟಿರುವ ಭಾರತೀಯ ಸೇನಾ ಯೋಧರ ವಿರುದ್ಧ ಹೇಳಿಕೆ ನೀಡುವುದು ಹಾಗೂ ಶತ್ರು ರಾಷ್ಟ್ರದ ಪರ ಹೇಳಿಕೆ ನೀಡುವುದೂ ಸಹ ಒಂದು ರೀತಿಯ ದೇಶದ್ರೋಹ. ಹೀಗಾಗಿ, ದೇಶದ ಒಳಗಿರುವ ಇಂತಹ ವ್ಯಕ್ತಿ ಹಾಗೂ ಸಂಘಟನೆಗಳ ವಿರುದ್ಧವೂ ಕ್ರಮಕೈಗೊಳ್ಳಬೇಕಾದ ಅಗತ್ಯವಿದ್ದು, ಇವರುಗಳಿಗ ಸರ್ಕಾರದಿಂದ ನೀಡುವ ಸವಲತ್ತುಗಳನ್ನೂ ಸಹ ಸ್ಥಗಿತಗೊಳಿಸಬೇಕು.
ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ದೇಶ ವಿರೋಧ ಹೇಳಿಕೆ ನೀಡುವುದು ಒಂದು ರೀತಿಯ ಫ್ಯಾಶನ್ ಆಗಿದೆ. ಆದರೆ, ಇದೊಂದು ರೀತಿಯ ಕಾಡುತ್ತಿರುವ ಕೊಳಕು ಮಂಡಲವಾಗಿದ್ದು, ಇದು ಇಡಿಯ ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತದೆ. ಹೀಗಾಗಿ, ಪ್ರತ್ಯೇಕತಾವಾದಿಗಳ ಸವಲತ್ತು ಸ್ಥಗಿತಗೊಳಿಸುವುದು ಎಷ್ಟು ಮುಖ್ಯವೋ, ದೇಶದ ಒಳಗಿರುವ ದೇಶವಿರೋಧಿಗಳಿಗೆ ನೀಡುವ ಸವಲತ್ತುಗಳನ್ನೂ ಸಹ ಕಡಿತಗೊಳಿಸಬೇಕು ಹಾಗೂ ಇಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
ಯಾಕೆಂದರೆ, ದೇಶವಾಸಿಗಳ ತೆರಿಗೆ ಹಣ ದೇಶದ್ರೋಹಿಗಳ ಅಬ್ಬರಕ್ಕೆ ಅಡಿಗಲ್ಲಾಗುವುದು ಬೇಡ.
Discussion about this post