Read - < 1 minute
ವಾಷಿಂಗ್ಟನ್, ಸೆ.21: ಪಾಕಿಸ್ಥಾನದ ಹೇಯ ಕೃತ್ಯಗಳಿಗೆ ವಿಶ್ವದ ಪ್ರಮುಖ ರಾಷ್ಟ್ರಗಳ ಖಂಡನೆ ವ್ಯಕ್ತಪಡಿಸುತ್ತಿದ್ದು, ಈ ನಿಟ್ಟಿನಲ್ಲಿ ಅಮೆರಿಕಾ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಪಾಕಿಸ್ಥಾನಕ್ಕೆ ಭಾರೀ ದೊಡ್ಡ ಹೊಡೆತ ಎನ್ನುವ ರೀತಿಯಲ್ಲಿ ಅಮೆರಿಕಾದ ಪ್ರತಿನಿಧಿ ಸಭೆಯಲ್ಲಿ ಪಾಕಿಸ್ಥಾನವನ್ನು ಭಯೋತ್ಪಾದನೆ ಪ್ರವರ್ತಿಸುವ ದೇಶವೆಂದು ಪರಿಗಣಿಸುವ ಮಸೂದೆಯನ್ನು ಉಭಯ ಪಕ್ಷಗಳ ಎರಡು ಪ್ರಬಲ ಗುಂಪಿನ ಅಮೆರಿಕನ್ ಸಾಂಸದರು ಮಂಡಿಸಿದ್ದಾರೆ.
ಪಾಕಿಸ್ಥಾನ ನಮಗೆ ಬಗೆದಿರುವ ದ್ರೋಹಕ್ಕೆ ನಾವಿನ್ನೂ ಹಣ ತೆರುವುದನ್ನು ನಿಲ್ಲಿಸಬೇಕು. ಭಯೋತ್ಪಾದನೆಯನ್ನು ಪ್ರವರ್ತಿಸುವ ಪಾಕಿಸ್ಥಾನದ ನಿಜ ರೂಪ ಏನಿದೆಯೋ ಆ ಪ್ರಕಾರ ಅದಕ್ಕೆ ಹಣೆಪಟ್ಟಿ ಹಚ್ಚಬೇಕಾಗಿದೆ ಎಂದು ಭಯೋತ್ಪಾದನೆ ಸಂಬಂಧಿತ ಸದನ ಉಪ ಸಮಿತಿಯ ಅಧ್ಯಕ್ಷ ಸಾಂಸದ ಟೆಡ್ ಪೋ ಹೇಳಿದ್ದಾರೆ.
ಈ ಕುರಿತಂತೆ ಪ್ರಮುಖ ಹೆಜ್ಜೆಯನ್ನಿಟ್ಟಿರುವ ರಿಪಬ್ಲಿಕನ್ ಟೆಡ್ ಪೋ ಮತ್ತು ಡೆಮೊಕ್ರಾಟಿಕ್ ಪಕ್ಷದ ಸಂಸದ ಡ್ಯಾನಾ ರೋರಾಬೇಶರ್, ಪಾಕಿಸ್ಥಾನ್ ಸ್ಟೇಟ್ ಸ್ಪಾನ್ಸರ್ ಆಫ್ ಟೆರರಿಸಂ ಡೆಸಿಗ್ನೇಶನ್ ಆ್ಯಕ್ಟ್ ಅನ್ನು ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ಮಂಡಿಸಿದ್ದಾರೆ.
ಪಾಕಿಸ್ಥಾನ ಒಂದು ವಿಶ್ವಾರ್ಸಾಹವಲ್ಲದ ಮಿತ್ರ ದೇಶವಾಗಿದ್ದು ಇಸ್ಲಾಮಾಬಾದ್ ಕಳೆದ ಅನೇಕ ವರ್ಷಗಳಿಂದ ಅಮೆರಿಕದ ಶತ್ರುಗಳಿಗೆ ಕುಮ್ಮಕ್ಕು ನೀಡುತ್ತಾ ಬಂದಿದೆ ಎಂದು ಪೋ ಹೇಳಿದ್ದಾರೆ.
ಹಕಾನಿ ಉಗ್ರ ಜಾಲದೊಂದಿಗಿನ ಸಂಬಂಧ ಹೊಂದಿರುವ ಕಾರಣಕ್ಕೆ ಪಾಕಿಸ್ಥಾನವು ಉಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿಕೊಂಡು ಬಂದಿತ್ತು. ಭೀತಿವಾದದ ವಿರುದ್ದದ ಸಮರದಲ್ಲಿ ಪಾಕಿಸ್ಥಾನವು ಯಾರೊಂದಿಗೆ ಇದೆ ಎಂಬುದಕ್ಕೆ ನಮ್ಮ ಬಳಿ ಬೇಕಾದಷ್ಟು ಸಾಕ್ಷ್ಯಗಳು ಇವೆ ಎಂದು ಪೋ ಆರೋಪಿಸಿದರು.
ಒಬಾಮಾ ಆಡಳಿತವು ಪಾಕ್ ಕುರಿತಾದ ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಈ ಮಸೂದೆಯು ಅಪೇಕ್ಷಿಸುತ್ತದೆ. ಅಂತೆಯೇ ಪಾಕಿಸ್ಥಾನವು ಅಂತರ‌್ರಾಷ್ಟ್ರೀಯ ಭಯೋತ್ಪಾದನೆಗೆ ಬೆಂಬಲ ನೀಡಿದೆಯೇ ಇಲ್ಲವೇ ಎಂಬ ಬಗ್ಗೆ ಮುಂದಿನ 90 ದಿನಗಳ ಒಳಗೆ ಅಧ್ಯಕ್ಷರು ವರದಿಯನ್ನು ನೀಡಬೇಕಾಗುವುದು.
-ಟೆಡ್ ಪೋ
Discussion about this post