Read - < 1 minute
ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ಥಾನದ ನೀಚತನ ಹಾಗೂ ಕುತಂತ್ರದ ನಡೆ ಮತ್ತೊಮ್ಮೆ ಸಾಬೀತಾಗಿದೆ. ಭಾರತದಲ್ಲಿರುವ ಪಾಕ್ ದೂತ ವಾಸ ಕಚೇರಿ ಅಧಿಕಾರಿಗಳೂ ಸೇರಿದಂತೆ ಹಲವು ಭಾರತದ ಒಳಗೇ ಮಾಹಿತಿ ಕದಿಯುವ ಕೆಲಸ ಮಾಡುತ್ತಿದ್ದುದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಇದನ್ನು ಸಾಬೀತು ಮಾಡಿದೆ.
ಉರಿ ಸೆಕ್ಟರ್ ಮೇಲೆ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತಿ ಯಾಗಿ ಎಲ್‌ಒಸಿಯಲ್ಲಿ ನುಗ್ಗಿ ಭಾರತೀಯ ಯೋಧರು ಉಗ್ರರನ್ನು ಬೇಟೆ ಯಾಡಿದ ನಂತರ ಪಾಕಿಸ್ಥಾನ ಹಾಗೂ ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಭಾರತದ ದಾಳಿ ಉಗ್ರರ ವಿರುದ್ಧವೇ ಹೊರತು ಪಾಕ್ ವಿರುದ್ಧವಲ್ಲ ಎಂದು ಭಾರತ ಸ್ಪಷ್ಟ ಪಡಿಸಿದ ನಂತರವೂ ಪಾಕ್ ಅದನ್ನು ತನ್ನ ಮೇಲೆ ನಡೆದ ದಾಳಿ ಎಂದು ತಿಳಿಯಿತು ಎಂದರೆ, ದಾಳಿಗೆ ಒಳಗಾದ ಉಗ್ರರ ನೆಲೆಗಳು ಪಾಕ್ ಕೃಪಾಪೋಷಿತವಾದವು ಎನ್ನುವುದನ್ನು ಸಾಬೀತು ಮಾಡಿತು. ಈ ಎಲ್ಲಾ ಬೆಳವಣಿಗೆಯ ನಡುವೆಯೇ, ಭಾರತದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಕದಿಯುವ ಕಾರ್ಯವನ್ನು ಪಾಕ್‌ನ ಅಧಿಕಾರಿಗಳು ಮಾಡುತ್ತಿದ್ದರು ಎಂದರೆ, ಪಾಕ್‌ನ ಕುತಂತ್ರ ಜಾಲ ಭಾರತದಲ್ಲಿ ಬೇರು ಬಿಟ್ಟಿದೆ ಎಂದಾಯಿತು.
ಸೇನೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಕದಿಯಲಾಗಿದೆ ಎಂದರೆ, ಇದು ಸೇನೆಯ ಒಳಗಿರುವ ಅಧಿಕಾರಿಗಳ ಸಹಕಾರವಿಲ್ಲದೇ ಆಗಿರಲು ಸಾಧ್ಯವೇ ಇಲ್ಲ. ಈ ವಿಚಾರದಲ್ಲಿ ಒಂದೋ ಸೇನೆಯ ಅಧಿಕಾರಿಗಳು ಶಾಮೀಲು ಆಗಿರಬೇಕು. ಇಲ್ಲವೇ ಗೌಪ್ಯ ಮಾಹಿತಿಯ ಭದ್ರತಾ ಲೋಪ ವಾಗಿರಬೇಕು. ಎರಡರಲ್ಲಿ ಯಾವುದೇ ಆಗಿದ್ದರೂ ಅದು ಭಾರತೀಯ ಸೇನೆಯೊಳಗಿನ ಲೋಪ ಎಂದೇ ಹೇಳಬೇಕು.
ಇನ್ನು, ಪ್ರಕರಣದಲ್ಲಿ ಬಂಧಿತನಾಗಿರುವ ಮೆಹ್‌ಮೂದ್ ತಾನು ಭಾರ ತೀಯ ನಾಗರಿಕನೆಂದು ಆಧಾರ್ ಕಾರ್ಡ್ ತೋರಿಸಿದ್ದಾನೆ. ಆದರೆ, ಈತ ಭಾರತೀಯನಲ್ಲ ಎಂಬುದು ಈಗ ಸಾಬೀತಾಗಿದೆ. ಅಂದರೆ, ಭಾರತೀಯ ನಾಗರಿಕರಿಗೆ ಮಾತ್ರ ರೂಪಿಸಲಾಗಿರುವ ಆಧಾರ್ ಕಾರ್ಡ್ ಈತನ ಬಳಿ ಇದೆ ಎಂದಾದರೆ, ಆಧಾರ್ ಕಾರ್ಡ್ ವ್ಯವಸ್ಥೆಯಲ್ಲಿಯೂ ಲೋಪವಿದೆ ಎಂದಾಯಿತು. ಭಾರತೀಯರಿಗೆ ಅಧಿಕೃತ ಮಾನ್ಯತೆ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಧಾರ್ ಕಾರ್ಡ್ ವ್ಯವಸ್ಥೆಯಲ್ಲಿ ಲೋಪವಿದೆ ಎಂದರೆ, ಇದು ದೇಶದ ಆಂತರಿಕ ಭದ್ರತೆಗೆ ಪ್ರಮುಖ ಸವಾಲಾಗಿದೆ ಎನ್ನುವ ವಿಚಾರ ದೃಢಪಡುತ್ತದೆ.
ಆಧಾರ್ ಕಾರ್ಡ್ ನಕಲು ಮಾಡಲಾಗಿದೆ ಎಂದರೆ, ದೇಶದ ನಾಗರಿಕರಿಗೆ ನೀಡಲಾಗುವ ಅಧಿಕೃತ ಮಾನ್ಯತಾ ಪತ್ರದಲ್ಲೇ ಲೋಪವಾಗಿದೆ. ಇದು ದೇಶದ ಭದ್ರತೆಯ ಮೂಲಕ್ಕೇ ನೀಡುವ ಕೊಡಲಿ ಪೆಟ್ಟಾಗಿದೆ. ಜೊತೆಗೆ ಆಧಾರ್ ಕಾರ್ಡ್ ವ್ಯವಸ್ಥೆ ಹಾಗೂ ಇದನ್ನು ನಿರ್ವಹಣೆ ಮಾಡುವ ಏಜೆನ್ಸಿಗಳಲ್ಲಿ ಲೋಪವಿದ್ದು, ಅಧಿಕಾರಿಗಳೂ ಶಾಮೀಲಾಗಿರುವ ಸಾಧ್ಯತೆಯಿದೆ.
ಈ ಎರಡೂ ವಿಚಾರಗಳನ್ನು ನೋಡುವುದಾದರೆ, ದೇಶಕ್ಕೆ ಹೊರಗಿನಿಂದ ಭದ್ರತೆಯನ್ನು ಒದಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಒಳಗಿನಿಂದ ಅಂದರೆ ಆಂತರಿಕ ಭದ್ರತೆಗೆ ಶತ್ರುಗಳು ಧಕ್ಕೆ ತರುತಿದ್ದಾರೆ ಎನ್ನುವುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕೂಡಲೆ ಎಚ್ಚೆತ್ತು ಆಂತರಿಕ ಮಾಹಿತಿ ಸೋರಿಕೆಯಾಗದಂತೆ ಹಾಗೂ ಒಳಗಿನ ಭದ್ರತೆಗೆ ಹೆಚ್ಚಿನ ಒತ್ತು ನೀಡಬೇಕಿದೆ.
Discussion about this post