ಪಣಜಿ, ಅ.15: ಇಂದಿನಿಂದ ಎರಡುದಿನಗಳ ಕಾಲ ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗ ಸಭೆಗೆ ಚಾಲನೆ ದೊರೆತಿದ್ದು, ಶೃಂಗಸಭೆಗೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ದ್ವಿಪಕ್ಷೀಯ ಮಾತುಕತೆ ಆರಂಭವಾಗಿದೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ಪುಟಿನ್ ಅವರು ಈಗಾಗಲೇ ಗೋವಾ ತಲುಪಿದ್ದು, ಪಣಜಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಯಿತು.
ಈ ನಡುವೆ ಭಾರತ-ರಷ್ಯಾ ಉಭಯ ನಯಕರ ನಡುವೆ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಸಜ್ಜುಗೊಂಡಿದ್ದು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ಆರಂಭಿಸಿದ್ದಾರೆ. ಈ ವೇಳೆ ಪಾಕ್ ಭಯೋತ್ಪಾದನೆ, ಜಾಗತಿಕ ಉಗ್ರವಾದ ಹಾಗೂ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ. ಇದೇ ವೇಳೆ, ರಷ್ಯಾ ಜತೆ ಮಹತ್ವದ ಕ್ಷಿಪಣಿ ಖರೀದಿ ಒಪ್ಪಂದ, ಕೂಡಂಕುಲಂ ಅಣುವಿದ್ಯುತ್ ಉತ್ಪಾದನಾ ಯೋಜನೆಗಳ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ ಹಾಕಲಿವೆ.
ಈ ಮಧ್ಯೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೋಬ್ ಜುಮಾ ಗೋವಾ ತಲುಪಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಜಾಕೋಬ್ ರಿಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್ ಭವ್ಯ ಸ್ವಾಗತ ಕೋರಿದರು. ಎರಡು ದಿನಗಳಕಾಲ ನಡೆಯಲಿರುವ 8ನೇ ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತ, ಬ್ರೆಜಿಲ್, ರಷ್ಯಾ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ಮುಖ್ಯಸ್ಥರು ಭಾಗಿಯಾಗುತ್ತಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಮೊದಲ ಬ್ರಿಕ್ಸ್ ಸಮ್ಮೇಳನ ಇದಾಗಿದ್ದು, ಜಾಗತಿಕವಾಗಿ ಗಮನ ಸೆಳೆದಿದೆ.
Discussion about this post