Read - 2 minutes
ಈಗ ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ. ವಿವಿಧ ರೀತಿಯ ಗಣಪನ ಮೂರ್ತಿಗಳು ಕಂಗೊಳಿಸುತ್ತಿವೆ. ಅಂಗೈ ಅಗಲದ ಪುಟ್ಟ ಮೂರ್ತಿಯಿಂದ ಹಿಡಿದು ಆಳೆತ್ತರದ ದೊಡ್ಡ ವಿಗ್ರಹಗಳು ಸಾಲುಸಾಲಾಗಿ ಮಾರಾಟಕ್ಕಿದೆ. ಬೇರೆ ಬೇರೆ ವರ್ಣಾಂಕಲಾರಗಳಲ್ಲಿ ರಾರಾಜಿಸುತ್ತಿರುವ ವಿನಾಯಕನ ಮೂರ್ತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ ಬಣ್ಣ ಬಣ್ಣದ ಗಣಪತಿ, ಪಟಗುಟ್ಟುವ ಪಟಾಕಿ ಖರೀದಿಯಲ್ಲಿ ಹಲವರು ಮಗ್ನರಾಗಿದ್ದಾರೆ. ಆದರೆ ಹಬ್ಬದ ಮೋಜು ತರುವ ಅಪಾಯಗಳ ಬಗ್ಗೆಯೂ ಎಚ್ಚರ ವಹಿಸುವುದು ಅಗತ್ಯ.
ರಂಗುರಂಗಿನ ಗಣಪನ ಮೂರ್ತಿಗೆ ಎಲ್ಲಿಲ್ಲದ ಬೇಡಿಕೆ. ನಮ್ಮಲ್ಲಿಂದ ವಿದೇಶಕ್ಕೂ ಇವು ರಫ್ತಾಗುತ್ತವೆ. ಬೇಡಿಕೆ ಹೆಚ್ಚಿರುವುದರಿಂದ ಕೈಯಿಂದ ಮೂರ್ತಿ ಮಾಡುವ ಬದಲು ಅಚ್ಚು ಉಪಯೋಗಿಸುತ್ತಾರೆ. ಹೀಗೆ ಅಚ್ಚಿನಿಂದ ತಯಾರಾದ ಗಣಪನಿಗೆ ಮೆಟಲ್ ಪೇಂಟ್ ಹಚ್ಚುತ್ತಾರೆ. ೧೦೦ ಗ್ರಾಂ ಸೀಸ ಇರುತ್ತದೆ. ಇದು ವಿಷಕಾರಕ ವಸ್ತು ಪರಿಸರ ಹಾಗೂ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಿಪ್ಸಂ, ಸಲ್ಪರ್, ಪಾಸ್ಪರಸ್ ಮತ್ತು ಮ್ಯಾಗ್ನಿಷಿಯಂ ಒಳಗೊಂಡ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳಂತೂ ಹಾನಿಕಾರಕ ಅಂಶಗಳ ಆಗರ.
ಇಂಥ ಬಣ್ಣ ಹಚ್ಚಿದ ಮೂರ್ತಿಗಳನ್ನು ಕೆರೆ ಅಥವಾ ನದಿಯಲ್ಲಿ ವಿಸರ್ಜಿಸಿದರೆ ಅಲ್ಲಿರುವ ಜಲಚರಗಳ ಗತಿ ಏನು? ಆ ನೀರು ಕುಡಿದರೆ ಮನುಷ್ಯನ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮವಾದೀತು ಎಂಬುದನ್ನು ಯೋಚಿಸಿದ್ದೀರಾ?
ಬಣ್ಣದಲ್ಲಿರುವ ಸೀಸದ ಅಂಶ ನೇರವಾಗಿ ನಮ್ಮ ದೇಹಕ್ಕೆ ಹೋಗದಿರಬಹುದು. ಆದರೆ ಉಸಿರಾಟದ ಮೂಲಕ ಅದರಲ್ಲಿರುವ ಹಾನಿಕಾರಕ ಅಂಶಗಳು ದೇಹದೊಳಗೆ ಸೇರಿಬಿಡುತ್ತವೆ.
ನೇರ ಪರಿಣಾಮ
ಸೀಸದ ವ್ಯತಿರಿಕ್ತ ಪರಿಣಾಮ ಮೊದಲು ಕಾಣಿಸಿಕೊಳ್ಳುವುದೇ ಮಕ್ಕಳಲ್ಲಿ ಅದರಲ್ಲೂ ಆರು ವರ್ಷದೊಳಗಿನ ಪುಟಾಣಿಗಳ ಮೇಲೆ ಇದರ ಪ್ರಭಾವ ಬಹುಬೇಗನೇ ಆಗುತ್ತದೆ. ಅವರ ಮಿದುಳು ಮತ್ತು ನರಮಂಡಲದ ಮೇಲೆ ಇದುನೇರ ಪರಿಣಾಮ ಬೀರುತ್ತದೆ. ಇದರ ಫಲವಾಗಿ ಗ್ರಹಣಶಕ್ತಿ ಕ್ಷೀಣಿಸಿವಿಕೆ, ಏಕಾಗ್ರತೆ ಕೊರತೆ, ಶಾರೀರಿಕ ಬೆಳವಣಿಗೆ ಕುಂಠಿತಗೊಳ್ಳುವುದು, ಬುದ್ಧಿಮಾಂದ್ಯತೆ ಮೊದಲಾದ ಸಮಸ್ಯೆಗಳು ತಲೆದೋರುತ್ತವೆ. ಇದಲ್ಲದೇ ಮೂತ್ರಪಿಂಡದ ತೊಂದರೆಗೂ ಕಾರಣವಾಗುತ್ತದೆ. ಜತೆಗೆ ಸಂತಾನಹೀನತೆ ಹಾಗೂ ಅಧಿಕ ರಕ್ತದೊತ್ತಡಕ್ಕೂ ದಾರಿ ಮಾಡಿಕೊಡುತ್ತದೆ.
ಗಣಪತಿ ಅಪ್ಪಟ ಮಣ್ಣಿನ ಮಗ-ಮಣ್ಣಲ್ಲಿ ಏನಿಲ್ಲ? ಎಲ್ಲಾ ಇದೆ. ರೋಗ-ರುಜಿನ ತರಬಲ್ಲ ರೋಗಾಣುಗಳಿವೆ. ಬಾತಿನ ತತ್ತಿಗಳಿವೆ, ಪರೋಪಕಾರಿ ಜೀವಿಗಳಿವೆ. ಇಂಥ ಮಣ್ಣನ್ನೇ ತಿದ್ದಿ ತೀಡಿ ಗಣಪತಿ ಮೂರ್ತಿಯನ್ನು ಕಲಾವಿದರು ತಯಾರಿಸುತ್ತಾರೆ. ಮನಮೋಹಕ ಬಣ್ಣ ಬಳಿಯುತ್ತಾರೆ. ಮಿಂಚು ಹೆಚ್ಚಲು ಸುನೇರಿ ಹಚ್ಚುತ್ತಾರೆ. ಭಕ್ತಿ-ಭಾವುಕತೆಗಳ ಗಡಿ ಮೀರಿ ವೈಜ್ಞಾನಿಕ ವಿಶ್ಲೇಷಣೆ ಮಾಡಿದಾಗ ವಿಷರಾಸಾಯನಿಕಗಳ ರಸಗಟ್ಟಿ.
ಕಲಾವಿದರು ಈ ವಿಷ ವಸ್ತುಗಳಿಗೆ ನೇರವಾಗಿ ಬಲಿಯಾಗುತ್ತಾರೆ. ಭಕ್ತ ಸಮೂಹ ಗಣಪತಿ ವಿಸರ್ಜಿಸಿದ ಬಾವಿ, ಹೆರೆ, ಹೊಂಡಗಳಲ್ಲಿಯ ನೀರು ಸೇವಿಸುವ ಮೂಲಕ ಹೊಟ್ಟೆ ತೊಳೆಸುವಿಕೆ, ವಾಂತಿ, ಭೇಧಿ, ಕಾಮಾಲೆ, ಟೈಫಾಯಿಡ್ ಹಾವಳಿಗೆ ಒಳಗಾಗಬೇಕಾಗುತ್ತದೆ.
ಪರಿಹಾರವೇನು?
ರಾಸಾಯನಿಕ ಬಣ್ಣ ಹಚ್ಚಿದ ಮೂರ್ತಿಗೆ ಬದಲು ಕೇವಲ ಮಣ್ಣಿನ ಮೂರ್ತಿಯನ್ನು ಖರೀದಿಸಿ ಅರಿಶಿನ, ಕುಂಕುಮ ಮತ್ತಿತರ ಸಾವಯವ ಬಣ್ಣ ಹಚ್ಚಿ ವರ್ಣ ವಿನ್ಯಾಸ ಮಾಡಬಹುದಲ್ಲ.
ನಗರದಲ್ಲಿನ ಒತ್ತಡದ ಬದುಕಿನಲ್ಲಿ ಇದಕ್ಕೆಲ್ಲ ಸಮಯ ಹೊಂದಿಸಿಕೊಳ್ಳುವುದು ಕಷ್ಟ. ಆದರೆ ಪೇಟೆಯಲ್ಲಿ ಸಾವಯವ ಬಣ್ಣದಿಂದ ಅಲಂಕರಿಸಿದ ಮೂರ್ತಿಗಳು ಸಿಗುತ್ತವೆ. ಕೆಲವು ಕಡೆ ವಿಚಾರಿಸಿ ಖರೀದಿ ಮಾಡಬೇಕು ಅಷ್ಟೆ.
ನಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುವ ಗಣಪ ಎಲ್ಲರಿಗೂ ಶುಭದಾಯಕವಾಗಬೇಕೆ ಹೊರತು ಇತರರಿಗೆ ಕಿರಿಕಿರಿಯುಂಟು ಮಾಡಬಾರದು. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ನೋಡಲು ಸುಂದರವಾಗಿರುತ್ತಾದರೂ, ನೀರಿನಲ್ಲಿ ಮುಳುಗದೆ ತ್ಯಾಜ್ಯವಾಗುತ್ತದೆ. ಕೆರೆಯ ಹೂಳಿನೊಂದಿಗೆ ಸೇರಿ ಮಾಲಿನ್ಯ ಸಮಸ್ಯೆಗೆ ತನ್ನ ಕೊಡುಗೆ ನೀಡುತ್ತದೆ. ಇದರಿಂದ ಯಾರಿಗೆ ಲಾಭ ಎಂಬುದನ್ನು ಮನಗಾಣಬೇಕು.
ಮೂರ್ತಿಗಳಿಗೆ ಹಚ್ಚುವ ಹಾನಿಕಾರಕ ಬಣ್ಣಗಳ ಬಗ್ಗೆ ದಶಕದ ಹಿಂದೆಯೇ ಕೆಲವರಲ್ಲಿ ಜಾಗೃತಿ ಮೂಡಿತ್ತು. ಅದು ಈಗ ಚಳುವಳಿ ರೂಪ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಹಲವು ಪರಿಸರಪ್ರಿಯ ಸಂಘಟನೆಗಳು ಹೆಗಲುಕೊಟ್ಟಿವೆ.
ನೀರಿಗೆ ಹಾನಿ ಉಂಟುಮಾಡದ ರಾಸಾಯನಿಕ ಬಣ್ಣ ಹೊಂದಿರುವ ಮೂರ್ತಿಗಳನ್ನು ಕೊಂಡು ಪೂಜಿಸಬೇಕು. ಪುಟ್ಟ ಮೂರ್ತಿಗಳನ್ನು ಮನೆಯ ತೊಟ್ಟಿ ಅಥವಾ ಹತ್ತಿರದ ಬಾವಿ-ಹೊಂಡಗಳಲ್ಲೇ ವಿಸರ್ಜಿಸಬಹುದು. ಇದರಿಂದ ನೀರು ಕೂಡ ಮಲಿನವಾಗುವುದಿಲ್ಲ. ಮೂರ್ತಿ ತಯಾರಕರಿಗೆ ಹಾಗೂ ಮಾರಾಟಗಾರರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಜತೆಗೆ ಇಂಥ ಬಣ್ಣಗಳನ್ನು ಬಳಸದಿರುವಂತೆ ಎಚ್ಚರಿಕೆ ನೀಡಬೇಕು.
ಸಾಮಾನ್ಯ ಪ್ರಜ್ಞೆಗೆ ನಿಲುಕವಂತಹ ವಿಷಯಗಳನ್ನು ಮಾರ್ಗ ಸೂಚಿ ಮೂಲಕ ಅರಿವು ಉಂಟುಮಾಡುವ ಸರ್ಕಾರದ ನಿರಂತರ ಯತ್ನ ನೀರಿನಲ್ಲಿ ಹೋಮ ಮಾಡಿದಷ್ಟೇ ನಿಷ್ಪ್ರಯೋಜಕವಾಗಿ, ನಮ್ಮ ದುರ್ನಡತೆ ಮೇಲುಗೈ ಸಾಧಿಸುತ್ತಲೆ ಇದೆ.
ಪರಿಸರಸ್ನೇಹಿ ಗಣಪನನ್ನು ಪೂಜಿಸಿ ಮಾಲಿನ್ಯಕ್ಕೆ ಕಡಿವಾಣ ಹಾಕೋಣ.
ಅಪ್ಪಟ ಮಣ್ಣಿನ ಮಗು-ಬೇಡ ಬಣ್ಣಗಳ ಬೆಡಗು
ಗೌರಿ-ಗಣೇಶ ಹಬ್ಬ ಸಮೃದ್ಧಿ ಹಾಗೂ ಸಹಬಾಳ್ವೆಯ ಸಂಕೇತವಾಗಿ ಆಚರಿಸಲಾಗುತ್ತದೆ. ಸಂಭ್ರಮಾಚರಣೆಯಿಂದ ಪರಿಸರಕ್ಕೆ ಹಾನಿಯುಂಟಾಗದಿರಲಿ. ಪರಿಸರ ಸಂರಕ್ಷಣೆ ಇಡೀ ಸಮುದಾಯದ ಜವಾಬ್ದಾರಿ – ಹಬ್ಬದ ಸಡಗರದೊಡನೆ ಈ ಅಂಶಗಳು ನಿಮ್ಮ ನೆನಪಲ್ಲಿರಲಿ.
*ಶ್ರದ್ಧಾ ಭಕ್ತಿಯೇ ಗಣೇಶೋತ್ಸವದ ತಿರುಳಾಗಬೇಕು, ಆಡಂಬರವಲ್ಲ.
*ಚೆಂದಕ್ಕೆ ಮಹತ್ವ ಕೊಡದೆ ಸತ್ವಕ್ಕೆ ಪ್ರಾಶಸ್ತ್ಯ ಕೊಟ್ಟು ಬಣ್ಣವಿರದ ಮಣ್ಣಿನ ಸಣ್ಣ ಮೂರ್ತಿ ತಂದು ಪೂಜಿಸಿ.
*ಪಾಲಿಕೆ ರೂಪಿಸಿರುವ ಮೊಬೈಲ್ ಟ್ಯಾಂಕ್‌ನಲ್ಲಿ ಅಥವಾ ನಿಮ್ಮ ಮನೆಯ ಬಕೆಟ್‌ಗಳಲ್ಲೇ ವಿಸರ್ಜಿಸಿ
* ಶಬ್ದ, ವಾಯುಮಾಲಿನ್ಯ ಮಾಡುವ ಪಟಾಕಿ ಸಿಡಿಸದೇ ಸಂಪದ್ಭರಿತ ಪರಿಸರ ಸಂರಕ್ಷಿಸಿ.
* ಗಣಪತಿ ನಿಸರ್ಗದ ಸೃಷ್ಠಿ: ಪ್ರಾಕೃತಿಕವಾಗಿ ದೊರೆಯುವ ವಸ್ತುಗಳಿಂದ ಆರಾಧಿಸಿ.
* ಉತ್ಸವಕ್ಕಾಗಿ ಪೆಂಡಾಲ್ ಹಾಕಲು ರಸ್ತೆ ಅಗೆಯಬೇಡಿ.
*ನೀರು ವಿದ್ಯುತ್ ಮಿತವಾಗಿ ಬಳಸಿ ಸ್ವಚ್ಛತೆ ಕಾಪಾಡಿ.
ಲೇಖಕರು: ಗುರುರಾಜ ಪೋಶೆಟ್ಟಿಹಳ್ಳಿ,
ಯುವ ಅಧ್ಯಾತ್ಮ ಚಿಂತಕರು,
ಬೆಂಗಳೂರು.
ಗಣೇಶನ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಇದೇ ಲೇಖಕರ ನೂತನ ಕೃತಿ – ವಿಶ್ವವಂದಿತ ವಿನಾಯಕ ನೋಡಬಹುದು.





Discussion about this post