Read - 2 minutes
ಉಡುಪಿ -ಅ:30: ಆರೋಗ್ಯದಂತಹ ಸೇವೆಗಳನ್ನು ನೀಡುವುದಕ್ಕೂ ಸರಕಾರದ ಬೊಕ್ಕಸದಲ್ಲಿ ಬೇಕಾದಷ್ಟು ಹಣ ಇಲ್ಲ, ಆದ್ದರಿಂದ ಖಾಸಗಿ ಅವರ ಸಹಭಾಗಿತ್ವದಲ್ಲಿ ಇಂತಹ ಸೇವೆಗಳನ್ನು ನೀಡುವುದಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಸ್ವತಃ ಆರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಹೇಳಿದ್ದಾರೆ.
ಅವರು ಭಾನುವಾರ ಉಡುಪಿ ಜಿಲ್ಲಾ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಬೆಂಗಳೂರಿನ ಬಿ.ಆರ್.ಶೆಟ್ಟಿ ಸ್ವಾಸ್ಥ್ಯ ಮತ್ತು ಸಂಶೋಧನಾ ಸಂಸ್ಥೆಯ ಸಹಭಾಗಿತ್ವದ ಕರ್ನಾಟಕ ಸರ್ಕಾರಿ ಕೂಸಮ್ಮ ಶಂಭು ಶೆಟ್ಟಿ, ಹಾಜಿ ಅಬ್ದುಲ್ಲಾ ಮೆಮೋರಿಯಲ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಉಡುಪಿಯ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯ ೩.೮೮ ಎಕ್ರೆ ಭೂಮಿಯಲ್ಲಿ ೬೦ ವರ್ಷಗಳ ಗುತ್ತಿಗೆಗೆ ಚಾರಿಟಿ ಮತ್ತು ಸೂಪರ್ ಸ್ಪೆಷಾಸಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಒಪ್ಪಂದ ಮಾಡಿಕೊಂಡಿರುವುದನ್ನು ಮುಖ್ಯಮಂತ್ರಿಗಳು ಬಲವಾಗಿ ಸಮರ್ಥಿಸಿಕೊಂಡರು.
ಸರ್ಕಾರಿ ಆಸ್ಪತ್ರೆಯೊಂದನ್ನು ನಿರ್ವಹಿಸಲು ಶಕ್ತಿ ಸರ್ಕಾರಕ್ಕೆ ಇಲ್ಲವೇ ಎಂದು ಪತ್ರಕರ್ತರು ಕೇಳುತ್ತಿದ್ದಾರೆ, ಆದರೇ ಸರ್ಕಾರದ ಬಳಿ ಶಕ್ತಿ ಇದೆ. ಆದರೇ ಎಲ್ಲವನ್ನೂ ಸರ್ಕಾರವೇ ಮಾಡುವುದಕ್ಕಾಗುವುದಿಲ್ಲ, ಕೆಲವೊಂದನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಬೇಕಾಗುತ್ತದೆ ಎಂದ ಮುಖ್ಯಮಂತ್ರಿಗಳು ಪರೋಕ್ಷವಾಗಿ ಅನುದಾನದ ಕೊರತೆಯ ಬಗ್ಗೆ ಸೂಚ್ಯವಾಗಿ ಹೇಳಿದರು.
ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟಿ ಅವರಿಗೆ ನೀಡುತ್ತಿಲ್ಲ ಅಥವಾ ಅದನ್ನು ಖಾಸಗೀಕರಣವನ್ನೂ ಮಾಡುತ್ತಿಲ್ಲ. ಅದನ್ನು ಬಿ.ಆರ್.ಶೆಟ್ಟಿ ಅವರ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಇದನ್ನು ವಿರೋಧಿಸುವವರೂ ಕೂಡ ಸರ್ಕಾರದೊಂದಿಗೆ ಸಹಭಾಗಿತ್ವದಲ್ಲಿ ಇಂತಹ ಯೋಜನೆಗಳಿಗೆ ಮುಂದೆ ಬಂದರೇ ಅದಕ್ಕೂ ಅವರ ಅಪ್ಪನ ಹೆಸರನ್ನೇ ಇಡೋಣ ಎಂದು ಲೇವಡಿ ಮಾಡಿದ ಮುಖ್ಯಮಂತ್ರಿ ಅವರು, ಒಂದು ಬಾರಿ ಈ ಆಸ್ಪತ್ರೆ ಪೂರ್ಣಗೊಂಡು ಕಾರ್ಯಾಚರಿಸಲಿ, ಆಗ ವಿರೋಧಿಸುವವರು ವಿರೋಧ ಕೂಡ ತಾನಾಗಿಯೇ ನಿಲ್ಲುತ್ತದೆ ಎಂದರು.
ಹಣ ಕಾಲುವೆಯಲ್ಲಿ ಬರುವುದಿಲ್ಲ
ಇದೇ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್, ಉಡುಪಿಯ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯನ್ನು ನಡೆಸುವುದಕ್ಕೆ ಸರ್ಕಾರಕ್ಕೆ ಶಕ್ತಿ ಇಲ್ಲಾ ಎಂದಲ್ಲ, ಆದರೇ ಹಣದ ಕೊರತೆ ಇದೆ. ಸರ್ಕಾರದ ಬೊಕ್ಕಸಕ್ಕೆ ಹಣ ಏನು ಕಾವೇರಿ ನೀರಿನಂತೆ ಕಾಲುವೆಯಲ್ಲಿ ಹರಿದು ಬರುವುದಿಲ್ಲ. ಆದ್ದರಿಂದ ಅದನ್ನು ನಿರ್ಮಿಸಲು ಬಿ.ಆರ್.ಶೆಟ್ಟಿ ಅವರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಡೊಂಗಿ ರಾಜಕೀಯ ಬರೋಲ್ಲ
ತಮಗೆ ಡೊಂಗಿ ರಾಜಕೀಯ ಮಾಡುವುದಕ್ಕೆ ಬರುವುದಿಲ್ಲ, ಮಠಕ್ಕೆ ಹೋಗಿ ಅಡ್ಡ ಬೀಳೋದು, ಹೊರಗೆ ಬಂದು ಪ್ರಗತಿಪರರಂತೆ ಮಾತನಾಡುವುದು ಗೊತ್ತಿಲ್ಲ (ಇದೇ ಸಚಿವರ ಅನೇಕ ಸಹದ್ಯೋಗಿ ಸಚಿವರು ಕೃಷ್ಣ ಮಠಕ್ಕೆ ಬಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದಾರೆ). ಸರ್ಕಾರದ ಆಸ್ತಿಯನ್ನು ಖಾಸಗಿಯವರಿಗೆ ನೀಡುವಂತಹ ಪರಿಸ್ಥಿತಿ ಏನಾದರೂ ಬಂದರೇ ಆಕ್ಷಣದಿಂದ ತಾನು ಅಧಿಕಾರದಲ್ಲಿ ಇರುವುದಿಲ್ಲ ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಧ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಉದ್ಯಮಿ ಬಿ.ಆರ್.ಶೆಟ್ಟಿ ಮಾತನಾಡಿದರು.
ವೇದಿಕೆಯಲ್ಲಿ ಶಾಸಕಾದ ಅಭಯಚಂದ್ರ ಜೈನ್, ಐವನ್ ಡಿಸೋಜ, ಗೋಪಾಲ ಪೂಜಾರಿ ಪ್ರತಾಪಚಂದ್ರ ಶೆಟ್ಟಿ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನರಸಿಂಹಮೂರ್ತಿ, ಆರೋಗ್ಯ ಇಲಾಖೆಯ ಪ್ರ.ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು ಮುಂತಾದವರಿದ್ದರು.
Discussion about this post