ಮೈಸೂರು, ಸೆ.28: ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ನಡೆಯುವ ಆಹಾರ ಮೇಳದಲ್ಲಿ ಗುಣಮಟ್ಟ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಜಿಪಂ ಸಿಇಒ ದಸರಾ ಉಪ ವಿಶೇಷಾಧಿಕಾರಿ ಮತ್ತು ಜಿಪಂ ಸಿಇಒ ಪಿ. ಶಿವಶಂಕರ್ ತಿಳಿಸಿದರು.
ಈ ಬಾರಿಯ ಆಹಾರ ಮೇಳ ಅ. 1 ರಿಂದ 9 ರವರೆಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯಲಿದ್ದು, ಒಂಬತ್ತು ದಿನಗಳಕಾಲ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೆ ಸಾರ್ವಜನಿಕರಿಗೆ ಆಹಾರ ಲಭ್ಯವಾಗಲಿದೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ. 1 ರಂದು ಮಧ್ಯಾಹ್ನ 1.30ಕ್ಕೆ ಆಹಾರ ಮೇಳಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಚಾಲನೆ ನೀಡಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪಾಲ್ಗೊಳ್ಳುವರು. ಆಹಾರ ಮೇಳದಲ್ಲಿ ಅನ್ನಭಾಗ್ಯ ವಿಚಾರಗೋಷ್ಠಿ, ಸಂವಾದ, ಅನ್ನಭಾಗ್ಯ ವಿಕಾಸದರ್ಶಿನಿ, ನಳಪಾಕ, ಸಿರಿಧಾನ್ಯ ಸ್ಪರ್ಧೆ, ಸವಿಭೋಜನ ಸ್ಪರ್ಧೆ, ಸಿರಿಧಾನ್ಯ, ಹಸಿರು ಆಹಾರ ದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬುಡಕಟ್ಟು ಆಹಾರವೂ ದೊರೆಯಲಿದೆ ಎಂದು ತಿಳಿಸಿದರು.
ಅ. 2 ರಿಂದ 8 ರವರೆಗೆ ಪ್ರತಿದಿನ ಸಂಜೆ 4 ರಿಂದ 6 ರವರೆಗೆ ತಜ್ಞರಿಂದ ವಿಚಾರ ಮಂಡನೆ ಮತ್ತು ವಿದ್ಯಾರ್ಥಿ- ಸಾರ್ವಜನಿಕರಿಂದ ಸಂವಾದ ಕಾರ್ಯಕ್ರಮ ಇರುತ್ತದೆ. ಅ. 2 ರಂದು ಅನ್ನಭಾಗ್ಯ ಯೋಜನೆ- ಹಸಿವು ಮುಕ್ತ ಕರ್ನಾಟಕ ಕನಸು ಕುರಿತು ಇಲಾಖೆಯ ಹಿರಿಯ ಉಪ ನಿರ್ದೇಶಕ ಎಂ.ಸಿ. ಗಂಗಾಧರ್ ಮಾತನಾಡುವರು. 3 ರಂದು ಪರಿಶುದ್ಧ ಆಹಾರ- ಪ್ರತಿಯೊಬ್ಬರ ಹಕ್ಕು ಕುರಿತು ಆಹಾರ ಗುಣಮಟ್ಟ ವಿಶ್ಲೇಷಣಾ ಘಟಕದ ಮುಖ್ಯಸ್ಥ ಡಾ. ಶೇಷಗಿರಿ, 4 ರಂದು ಮಕ್ಕಳ ಆಹಾರದಲ್ಲಿ ಮಹಿಳೆಯರ ಪಾತ್ರ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರಾಧಾ, 5 ರಂದು ಕ್ಷೀರಭಾಗ್ಯ ಮತ್ತು ಶಿಕ್ಷಣದ ಉನ್ನತಿ ಕುರಿತು ಶಿಕ್ಷಣಾಧಿಕಾರಿ ಎಸ್.ಪಿ. ನಾಗರಾಜ್, 6 ರಂದು ಜನಪದ ಆಹಾರ ಪದ್ಧತಿಗಳ ಪ್ರಸ್ತುತತೆ ಕುರಿತು ಆಯುರ್ವೇದ ಕಾಲೇಜಿನ ಡಾ. ಶಾಂತಲಾ ಪ್ರಿಯದರ್ಶಿನಿ, 7 ರಂದು ಪರಿಶುದ್ಧ ನೀರು ಕುರಿತು ಜಿಲ್ಲಾ ಮಲೇರಿಯಾ ನಿರ್ಮಾಲನಾಧಿಕಾರಿ ಡಾ. ಚಿದಂಬರ ಮತ್ತು ಸಮಕಾಲೀನ ಆಹಾರ ಅಭ್ಯಾಸ ಆಗು- ಹೋಗು ಕುರಿತು ಸರ್ಕಾರಿ ಆಯುರ್ವೇದ ಕಾಲೇಜಿನ ಡಾ. ವಿಜಯಲಕ್ಷ್ಮೀ ಮಾತನಾಡುವುದಾಗಿ ಅವರು ವಿವರಿಸಿದರು.
ಅ. 2 ರಿಂದ 6 ರವರೆಗೆ ಪ್ರತಿದಿನ ಮಧ್ಯಾಹ್ನ 3 ರಿಂದ 4 ರವರೆಗೆ ಆಹಾರ ಮೇಳದಲ್ಲಿ ನಾವು ಮತ್ತು ನಮ್ಮ ಆಹಾರ ಎಂಬ ಅಡುಗೆ ತಯಾರಿಕೆ ಮತ್ತು ಧಾನ್ಯಸಿರಿ ಸ್ಪರ್ಧೆ ಆಯೋಜಿಸಲಾಗಿದೆ. 2 ರಂದು ಸಂಸಾರ ಸಾಗರ ಅತ್ತೆ ಸೊಸೆ ವಿಭಾಗದಲ್ಲಿ ಜೋಳದ ರೊಟ್ಟಿ ಮತ್ತು ಬದನೆಕಾಯಿ ಎಣ್ಣೆಗಾಯಿ ತಯಾರಿಕೆ, 3 ರಂದು ನಳ ದಮಯಂತಿ ಗಂಡ ಹೆಂಡತಿ ವಿಭಾಗದಲ್ಲಿ ರಾಗಿ ರೊಟ್ಟಿ ಮತ್ತು ಹುಚ್ಚೇಳ್ ಚಟ್ನಿ, ಯುವದರ್ಶಿನಿಯ ಯುವಕರ ವಿಭಾಗದಲ್ಲಿ ಉಪ್ಪಿಟ್ಟು ಮತ್ತು ಕೇಸರಿಬಾತ್, ಯುವತಿಯರ ವಿಭಾಗದಲ್ಲಿ ತರಕಾರಿ ಪಲಾವ್ ಮತ್ತು ಕ್ಯಾರೆಟ್ ಹಲ್ವಾ ತಯಾರಿಕೆ, 5 ರಂದು ಧಾನ್ಯಸಿರಿ ಸಾರ್ವಜನಿಕರ ವಿಭಾಗದಲ್ಲಿ ಸಿರಿಧಾನ್ಯ ಗುರುತಿಸುವ ಸ್ಪರ್ಧೆ, 6 ರಂದು ಹಸಿರುಲೋಕ 12 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ತರಕಾರಿ ಗುರುತಿಸುವ ಸ್ಪರ್ಧೆ ಮತ್ತು ಹಣ್ಣು ಗುರುತಿಸುವ ಸ್ಪರ್ಧೆ ಹಾಗೂ ನಾಟಿ ಲೋಕದಲ್ಲಿ ಹೋಟೆಲ್, ಕೇಟರರ್ಸ ಮತ್ತು ಕುಟುಂಬ ವಿಭಾಗದವರು ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಯಾರಿಸಬೇಕು. ವಿಜೇತರಿಗೆ 3 ಸಾವಿರ ನಗದು ಬಹುಮಾನ ನೀಡುವುದಾಗಿ ಅವರು ತಿಳಿಸಿದರು.
ಸಿರಿಧಾನ್ಯ ಕುರಿತು ಅ. 2 ರಿಂದ 9 ರವರೆಗೆ ಪ್ರತಿದಿನ ಬೆಳಗ್ಗೆ 11 ರಿಂದ 1.30 ರವರೆಗೆ ಪ್ರತಿದಿನ ಒಂದೊಂದು ಸಿರಿಧಾನ್ಯದ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಅ. 2 ರಂದು ರಾಗಿ ಮತ್ತು ಸಜ್ಜೆ, 3 ರಂದು ಹಾರಕ, 4 ರಂದು ಜೋಳ, 5 ರಂದು ನವಣೆ, 6 ರಂದು ಸಾವೆ, 7 ರಂದು ಬರಗು, 8 ರಂದು ಕೊರಲೆ ಮತ್ತು 9 ರಂದು ಊದಲು ಪ್ರಾತ್ಯಕ್ಷಕೆ ಇರುತ್ತದೆ. ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಅ. 7 ಮತ್ತು 9 ರಂದು ಸವಿಭೋಜನ ಸ್ಪರ್ಧೆ ಇರುತ್ತದೆ. 7 ರಂದು ಮಧ್ಯಾಹ್ನ 3 ರಿಂದ 4 ರವರೆಗೆ ಪುರುಷರಿಗೆ ಮೊಟ್ಟೆ ತಿನ್ನುವ ಸ್ಪರ್ಧೆ, ಮಹಿಳೆಯರಿಗೆ ಇಡ್ಲಿ ತಿನ್ನುವ ಸ್ಪರ್ಧೆ, 8 ರಂದು ಕಾಲೇಜು ವಿದ್ಯಾರ್ಥಿನಿಯರಿಗೆ ಜಿಲೇಬಿ ತಿನ್ನುವ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಮೈಸೂರು ಪಾಕ್ ತಿನ್ನುವ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮಕ್ಕಳ ಆಹಾರಜ್ಞಾನ ಸ್ಪರ್ಧಿ, ಅ. 9 ರಂದು ಕುಟುಂಬದವರಿಗೆ ಆಹಾರ ರಸಲೋಕ ನಿಮ್ಮ ಕುಟುಂಬ- ನಮ್ಮ ಪ್ರಶ್ನೆ ಕಾರ್ಯಕ್ರಮ ಇರುತ್ತದೆ ಎಂದು ಅವರು ತಿಳಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ. ರಾಮೇಶ್ವರಪ್ಪ ಮಾತನಾಡಿ, ಶುಚಿ ಮತ್ತು ರುಚಿಯಾದ ಆಹಾರಕ್ಕೆ ಆದ್ಯತೆ ನೀಡಲಾಗಿದೆ. ಆಹಾರದ ಪ್ರಮಾಣ ಮತ್ತು ಬೆಲೆ ನಿಗದಿ ಪರಿಶೀಲನೆಗೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಅನಾರೋಗ್ಯಕರ ಸ್ಪರ್ಧೆ ಏರ್ಪದಿರುವ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಎಲ್ಲರೂ ಒಂದೇ ಬೆಲೆ ಮತ್ತು ನಿಗದಿತ ಆಹಾರವನ್ನೇ ಮಾರುವಂತೆ ಸೂಚಿಸಲಾಗಿದೆ. ವಿಐಪಿಗಳಿಗೆ ಮಾತ್ರ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಆಸುಪಾಸು, ಓವೆಲ್ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಆಹಾರ ಮೇಳದಲ್ಲಿ ಪಾಲ್ಗೊಳ್ಳುವವರಿಗೆ ಶುಚಿತ್ವ, ರುಚಿ ಮತ್ತು ಪ್ರಮಾಣದ ಕುರಿತು ತರಬೇತಿ ನೀಡಲಾಗಿದೆ. ಸೆ.30 ರಂದು ಕಡೆಯ ಸುತ್ತಿನ ತರಬೇತಿ ನೀಡಲಾಗುವುದು. ಸಸ್ಯಾಹಾರ ಮತ್ತು ಮಾಂಸಹಾರ ಮಳಿಗೆಯನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ. ಎಲ್ಲಾ ಶೈಲಿಯ ಊಟದ ವ್ಯವಸ್ಥೆ ಇರುತ್ತದೆ. ಕೇವಲ 149 ರೂಪಾಯಿಗೆ ಎಲ್ಲಾ ವಿಧದ ಮಾಂಸಾಹಾರ ದೊರೆಯುವಂತೆ ಥಾಲಿ ಇರುತ್ತದೆ. ಹಂದಿ ಮತ್ತು ದನದ ಮಾಂಸ ಅಡುಗೆ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.
ಬುಡಕಟ್ಟು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಡಾ.ಟಿ. ಬಸವನಗೌಡಪ್ಪ, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಕೃಷ್ಣಯ್ಯ ಇದ್ದರು.
Discussion about this post