Read - 2 minutes
ಬೆಂಗಳೂರು, ಸೆ.6: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತಲೆಬಾಗಿರುವ ರಾಜ್ಯ ಸರ್ಕಾರ, ರೈತರು, ಪ್ರತಿಪಕ್ಷಗಳು, ಸಂಘಟನೆಗಳ ವಿರೋಧದ ನಡುವೆಯೂ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ.
ಇಂದು ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಮುಖಂಡರು, ಸದನ ನಾಯಕರು, ಕೇಂದ್ರ ಸಚಿವರು ಹಾಗೂ ಸಂಸದರ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸರಕಾರ ತೀರ್ಮಾನ ಕೈಗೊಂಡಿದೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕಾವೇರಿ ಮೇಲುಸ್ತುವಾರಿ ಸಮಿತಿಯ ಮುಂದೆ ತಕರಾರು ಸಲ್ಲಿಸುವುದು ಹಾಗೂ ಸೆ.5ರಂದು ನೀಡಲಾಗಿರುವ ತೀರ್ಪಿನ ಪರಿಷ್ಕರಣೆ ಮಾಡುವಂತೆ ಮೇಲ್ಮನವಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ.
ರಾಜ್ಯವು ತೀವ್ರ ಸಂಕಷ್ಟದಲ್ಲಿದ್ದರೂ ಭರವಾದ ಹೃದಯದಿಂದ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಾಗುತ್ತದೆ. ಕಾವೇರಿ ಕಣಿವೆಯ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ರೈತರ ಬೆಳೆಗಳಿಗೆ ನೀರು ಪೂರೈಸಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸರ್ವಪಕ್ಷಗಳ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾನ್ಯ ವರ್ಷದಲ್ಲಿ ತಮಿಳುನಾಡಿಗೆ ಜೂನ್ನಿಂದ ಆಗಸ್ಟ್ ಅಂತ್ಯದವರೆಗೆ 94 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಆದರೆ, ಈ ವರ್ಷ ನಮಗೆ ಅತ್ಯಂತ ಕಷ್ಟದಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ಅಂತ್ಯದವರೆಗೆ ಬಿಳಿಗುಂಡ್ಲು ಜಲಮಾಪನ ಕೇಂದ್ರಕ್ಕೆ 94 ಟಿಎಂಸಿ ಬದಲು ತಲುಪಿರುವುದು ಕೇವಲ 33 ಟಿಎಂಸಿ ಮಾತ್ರ ಎಂದರು.
ಇದೇ ರೀತಿಯ ಸನ್ನಿವೇಶ 1995, 2005 ಹಾಗೂ 2012-13ರಲ್ಲೂ ಬಂದಿತ್ತು. ಆಗ ಮುಖ್ಯಮಂತ್ರಿ ಯಾಗಿದ್ದ ಜಗದೀಶ್ ಶೆಟ್ಟರ್, ನಾರಿಮನ್ ಸಲಹೆಯಂತೆ 10 ಸಾವಿರ ಕ್ಯೂಸೆಕ್ಸ್ ನೀರು ಮಾನವೀಯ ನೆಲೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಪ್ರತಿಪಕ್ಷಗಳನ್ನು ಕರೆದು ಚರ್ಚೆ ಮಾಡಿರಲಿಲ್ಲ ಎಂದು ಅವರು ಹೇಳಿದರು.
ರಾಜ್ಯ ಸರಕಾರವು 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ, ಸುಪ್ರೀಂಕೋರ್ಟ್ 15 ಸಾವಿರ ಕ್ಯೂಸೆಕ್ಸ್ ನೀರನ್ನು 10 ದಿನಗಳವರೆಗೆ ಬಿಡುಗಡೆ ಮಾಡುವಂತೆ ಆದೇಶ ಮಾಡಿದೆ. ಸಂವಿಧಾನಾತ್ಮಕವಾಗಿ ಸುಪ್ರೀಂಕೋರ್ಟ್ ಆದೇಶವನ್ನು ಸರಾಸಗಟಾಗಿ ತಿರಸ್ಕರಿಸುವುದು ಕಷ್ಟದ ಕೆಲಸ ಎಂದು ಸಿದ್ದರಾಮಯ್ಯ ತಿಳಿಸಿದರು.
ಸುಪ್ರೀಂಕೋರ್ಟ್ ಎದುರು ನಾವು ಸಲ್ಲಿಕೆ ಮಾಡಿರುವ ಎಸ್ಎಲ್ಪಿ ಅ.18ರಂದು ವಿಚಾರಣೆಗೆ ಬರಲಿದೆ. ಆ ಸಂದರ್ಭದಲ್ಲಿ ನಮಗೆ ಅನುಕೂಲವಾಗಲು ಈಗ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕಿದೆ ಎಂದು ನಾರಿಮನ್ ಸಲಹೆ ನೀಡಿದ್ದರು ಎಂದು ಅವರು ಹೇಳಿದರು.
ಪ್ರತಿ ಪಕ್ಷದ ಮುಖಂಡರು, ಸಂಸದ ವೀರಪ್ಪಮೊಯ್ಲಿ ಸೇರಿದಂತೆ ಬಹುತೇಕ ಎಲ್ಲರೂ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನದಟ್ಟು ಮಾಡಲು ಮತ್ತೊಮ್ಮೆ ಸುಪ್ರೀಂಕೋರ್ಟ್ ಮೋರೆ ಹೋಗಬೇಕು. 10 ದಿನಗಳ ಕಾಲ ನೀರು ಬಿಡುವಂತೆ ನೀಡಿರುವ ಆದೇಶವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಕಷ್ಟವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕೆಂದು ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸುಪ್ರೀಂಕೋರ್ಟ್ ಎದುರು ಪುನರ್ಪರಿಶೀಲನಾ ಅರ್ಜಿ ಸಲ್ಲಿಸುವುದರ ಜೊತೆಗೆ ಕೇಂದ್ರ ಸರಕಾರದ ಮೇಲುಸ್ತುವಾರಿ ಸಮಿತಿ ಎದುರು ಅರ್ಜಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಆದುದರಿಂದ, ರೈತರು ಸಂಯಮ ಹಾಗೂ ಶಾಂತಿಯಿಂದ ವತರ್ಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ಕುಮಾರ್, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ವೈಎಸ್ವಿ ದತ್ತ, ಸಂಸದರಾದ ಎಂ.ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಬಿ.ಎಸ್.ಯಡಿಯೂರಪ್ಪ, ಪಿ.ಸಿ.ಮೋಹನ್, ಶಿವಕುಮಾರ್ ಉದಾಸಿ, ಸಿ.ಎಸ್.ಪುಟ್ಟರಾಜು, ರಾಜ್ಯಸಭಾ ಸದಸ್ಯರಾದ ಡಾ.ಕೆ.ರಹ್ಮಾನ್ಖಾನ್, ಕುಪೇಂದ್ರರೆಡ್ಡಿ, ರಾಜೀವ್ ಚಂದ್ರಶೇಖರ್, ಮಾಜಿ ಸಾಂಸದೆ ರಮ್ಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸರ್ವಪಕ್ಷ ಸಭೆಗೆ ಗೈರು ಹಾಜರಾಗಿದ್ದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ರಾಜ್ಯ ಸರಕಾರದ ನಿರ್ಧಾರದಿಂದಾಗಿ ಜೆಡಿಎಸ್ ಸದಸ್ಯರು ಸರ್ವಪಕ್ಷಗಳ ಮುಖಂಡರ ಸಭೆಯನ್ನು ಬಹಿಷ್ಕರಿಸಿದರೆ, ಬಿಜೆಪಿ ಮುಖಂಡರು ಮುಖ್ಯಮಂತ್ರಿ ತೀರ್ಮಾನ ಪ್ರಕಟಿಸುವ ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಿದರು.
ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದರೆ ಮುಂದಿನ ಕಾನೂನು ಹೋರಾಟಕ್ಕೆ ಅನುಕೂಲವಾಗುತ್ತದೆ. ನ್ಯಾಯಾಲಯದ ಆದೇಶ ಪಾಲನೆ ಮಾಡದಿದ್ದರೆ ಭವಿಷ್ಯದಲ್ಲಿ ಸಮಸ್ಯೆಯಾಗಬಹುದು ಎಂದು ಕಾನೂನು ತಂಡದ ಸದಸ್ಯರು ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Discussion about this post