Read - 1 minute
ಹೊಸ ಪ್ಯಾರಾ ಮೆಡಿಕಲ್ ಸಂಸ್ಥೆಗಳ ಸ್ಥಾಪನೆಗೆ ಮಂಜೂರಾತಿ
ಬೆಂಗಳೂರು, ಆ.31: ರಾಜ್ಯದಲ್ಲಿ ಹೊಸ ಪ್ಯಾರಾ ಮೆಡಿಕಲ್ ಸಂಸ್ಥೆಗಳ ಸ್ಥಾಪನೆಗೆ ಮಂಜೂರಾತಿ, ಕರ್ನಾಟಕ ವೈಮಾನಿಕ ನೀತಿ ಹಾಗೂ ಕೈಗಾರಿಕಾ ನೀತಿಗಳಿಗೆ ತಿದ್ದುಪಡಿ ತರಲು ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಹೊಸದಾಗಿ ಪ್ಯಾರಾ ಮೆಡಿಕಲ್ ಸಂಸ್ಥೆಗಳನ್ನು ಪ್ರಾರಂಭ ಮಾಡಲು ಸಂಪುಟ ಸಭೆ ಮಂಜೂರಾತಿ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕರ್ನಾಟಕ ವೈಮಾನಿಕ ನೀತಿ 2013-2023ಕ್ಕೆ ತಿದ್ದುಪಡಿ ತರಲು ಕೂಡ ಸಮ್ಮತಿ ನೀಡಿದೆ. ಕರ್ನಾಟಕ ಕೈಗಾರಿಕಾ ನೀತಿ 2014-19ಕ್ಕೆ ತಿದ್ದುಪಡಿ ತರಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಪೊಲೀಸ್ ಇಲಾಖೆಗೆ 50 ಬಸ್, 200 ಹೊಯ್ಸಳ ಅಥವಾ ಗರುಡ ಮಾದರಿಯ ವಾಹನಗಳನ್ನು ಖರೀದಿಸಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಜುಮ್ನಾಳ್ ಮತ್ತು ವಿಜಯಪುರ ರೈಲ್ವೆ ಸ್ಟೇಷನ್ ನಡುವೆ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಹೊಸ ವಿಧಾನಗಳ ಮೂಲಕ ಮೂಲ ಸೌಕರ್ಯ ಅಳವಡಿಸಲು ಆರ್ಥಿಕ ವ್ಯವಸ್ಥೆಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕರ್ನಾಟಕ ವೈಮಾನಿಕ ತಿದ್ದುಪಡಿಗೆ ಅನುಮೋದನೆ
ರಾಜ್ಯದಲ್ಲಿ ವೈಮಾನಿಕ ಉದ್ದಿಮೆಗಳನ್ನು ಆಕರ್ಷಿಸುವ ಉದ್ದೇಶದಿಂದ ಕರ್ನಾಟಕ ವೈಮಾನಿಕ ನೀತಿ 2013-23ಕ್ಕೆ ತಿದ್ದುಪಡಿ ತರುವ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ರಾಜ್ಯದಲ್ಲಿ ಒಟ್ಟು 14,520 ಕೋಟಿ ರೂ. ಬಂಡವಾಳ ಹೂಡಿಕೆಯ 33 ಪ್ರಸ್ತಾವನೆಗಳಿಗೆ ಅನುಮತಿ ದೊರೆತಿದೆ. ಇದರಿಂದ 10,584 ಉದ್ಯೋಗಗಳ ಸೃಷ್ಟಿಯಾಗಲಿದೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಚಂದ್ರ, ಜಾಗತಿಕ ಮಟ್ಟದಲ್ಲಿ ವೈಮಾನಿಕ ಉದ್ದಿಮೆಗಳನ್ನು ಆಕರ್ಷಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಇದಕ್ಕಾಗಿ ಹಾಲಿ ಇರುವ ನೀತಿಗೆ ತಿದ್ದುಪಡಿ ತರಲಾಗುವುದು. ಕೈಗಾರಿಕಾ ನೀತಿಯಲ್ಲಿ ಉದ್ದಿಮೆಗಳಿಗೆ ದೊರೆಯುವ ಎಲ್ಲ ಸೌಲಭ್ಯಗಳು, ರಿಯಾಯ್ತಿಗಳು ವೈಮಾನಿಕ ಉದ್ದಿಮೆಗೂ ದೊರೆಯಲಿವೆ ಎಂದು ಸಚಿವರು ತಿಳಿಸಿದರು.
ವೈಮಾನಿಕ ಉದ್ದಿಮೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ವಿಮಾನ ಮತ್ತು ಹೆಲಿಕಾಪ್ಟರ್ ಬಿಡಿ ಭಾಗಗಳ ನಿರ್ಮಾಣ ಕರ್ನಾಟಕದಲ್ಲಿ ಹೆಚ್ಚಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಅದೇ ರೀತಿ ಏಷ್ಯಾದಲ್ಲಿ ಏರೋಸ್ಪೇಸ್ ಹಬ್ ಶಾಶ್ವತವಾಗಿ ನೆಲೆಯೂರಬೇಕು. ಅದಕ್ಕಾಗಿ ಅಗತ್ಯ ತಿದ್ದುಪಡಿ ತರಲಾಗುವುದು ಮತ್ತು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ನ್ಯಾಯಾಂಗ ಸದಸ್ಯತ್ವಕ್ಕೆ ನೇಮಕ
ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎ.ವಿ.ಚಂದ್ರಶೇಖರ್ ಅವರನ್ನು ರಾಜ್ಯ ಆಡಳಿತ ನ್ಯಾಯ ಮಂಡಳಿಯ ನ್ಯಾಯಾಂಗ ಸದಸ್ಯ ಸ್ಥಾನಕ್ಕೆ ನೇಮಕ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ರಾಷ್ಟ್ರಪತಿಗಳ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಹೈಕೋರ್ಟ್ ಶಿಫಾರಸ್ಸಿನ ಮೇರೆಗೆ ನ್ಯಾಯಮೂರ್ತಿ ಚಂದ್ರಶೇಖರ್ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಯಿತು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕೆ.ರಾಮಶೆಟ್ಟಿ ಅವರನ್ನು ಸೇವೆಯಿಂದ ವಜಾ ಮಾಡಲು ತೀರ್ಮಾನಿಸಲಾಗಿದೆ. ಹತ್ತು ಸಾವಿರ ಲಂಚ ಪಡೆದ ಆರೋಪದಲ್ಲಿ ಇವರು ಸಿಕ್ಕಿಬಿದ್ದಿದ್ದರು. ಉಪಲೋಕಾಯುಕ್ತರು ರಾಮಶೆಟ್ಟಿಯವರನ್ನು ಸೇವೆಯಿಂದ ವಜಾಗೊಳಿಸುವಂತೆ ಶಿಫಾರಸ್ಸು ಮಾಡಿದ್ದರು ಎಂದು ತಿಳಿಸಿದರು.
Discussion about this post