ದೇಶದೆಲ್ಲೆಡೆ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಬೀದಿ ಬೀದಿಗಳಲ್ಲಿ ಹಿಂದೂ ಕಾರ್ಯಕರ್ತರು ಪೆಂಡಾಲ್ ಹಾಕಿ ಗಣೇಶನನ್ನು ಪ್ರತಿಷ್ಟಾಪಿಸಿ ಸಂಭ್ರಮಿಸಲಾಗುತ್ತಿದೆ. ಇಂತಹಸಂದರ್ಭದಲ್ಲಿ ಹಿಂದುತ್ವವನ್ನು ನರನಾಡಿಗಳನ್ನು ಪ್ರವಹಿಸುವಂತೆ ಪ್ರೇರೇಪಿಸುತ್ತಿದೆ ಒಂದು ಚಿತ್ರ. ಅದು ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಹನುಮಾನ್ ಸ್ಟಿಕ್ಕರ್.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲಿ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲೂ ಈ ಹನುಮಾನ್ ಸ್ಟಿಕ್ಕರ್ ರಾರಾಜಿಸುತ್ತಿದೆ. ಯಾವುದೇ ನಗರಗಳಲ್ಲಿ ನೋಡಿದರೂ ಕಾರು,ಬೈಕು, ಬಸ್, ಲಾರಿ, ಟೆಂಪೋ, ಅಂಗಡಿ ಮುಂಗಟ್ಟುಗಳಲ್ಲಿ ಕೇಸರಿ ಬಣ್ಣದ ಅರ್ಧ ಮುಖದ ಈ ಹನುಮಾನ್ ಸ್ಟಿಕ್ಕರ್. ಎಲ್ಲೆಡೆ ಸಂಚಲನ ಮೂಡಿಸಿ, ಕ್ರೇಜ್ ಕ್ರಿಯೇಟ್ ಮಾಡಿರುವ ಈಹನುಮಾನ್ ಸ್ಟಿಕ್ಕರ್ ರೂಪಿಸಿದವರು ಮಾತ್ರ ಯಾರು ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಅಪಾರ ಪ್ರತಿಭೆಯ ಆಗರವಾಗಿರುವ ಕಾಸರಗೋಡು ಮೂಲದ ಕರಣ್ ಆಚಾರ್ಯ ಈಹನುಮಾನ್ ಸ್ಟಿಕ್ಕರ್ ಸೃಷ್ಠಿಕರ್ತ.
ಹೌದು, ತಾವು ರೂಪಿಸಿರುವ ಈ ಸ್ಟಿಕ್ಕರ್ ಎಲ್ಲೆಡೆ ಹಿಂದೂಗಳ ಸ್ವಾಭಿಮಾನದ ಸಂಕೇತವಾಗಿ ರಾರಾಜಿಸುತ್ತಿದ್ದರೂ, ತಾವು ಮಾತ್ರ ತೆರೆಮರೆಯಲ್ಲೇ ಉಳಿದಿದ್ದಾರೆ ಕರಣ್. ಇಂತಹ ಅದ್ಬುತಪ್ರತಿಭೆಯ ಬಗ್ಗೆ ಸ್ವಲ್ಪ ತಿಳಿಯೋಣ.
ಯಾರು ಕರಣ್ ಆಚಾರ್ಯ?
ಕೇರಳದ ಕಾಸರಗೋಡು ಮೂಲದ ಕರಣ್ ಆಚಾರ್ಯ ಮೂಲತಃವಾಗಿ ಅಪಾರ ಪ್ರತಿಭೆ ಹೊಂದಿರುವ ಚಿತ್ರ ಕಲಾವಿದ. ಪಿ.ಯು ವಿದ್ಯಾಭ್ಯಾದ ನಂತರ ಫೈನ್ ಆರ್ಟ್ಸ ಕೋರ್ಸನ್ನು ಕೇರಳದಲ್ಲಿಪೂರೈಸಿದ ಕರಣ್, 2ಡಿ ಹಾಗೂ 3ಡಿ ಅನಿಮೇಶನ್ ನಲ್ಲಿ ಪ್ರಾವೀಣ್ಯತೆಯನ್ನು ಪಡೆದರು. ಚಿಕ್ಕಂದಿನಿಂದಲೇ ಚಿತ್ರಕಲೆ ಹಾಗೂ ಡಿಸೈನಿಂಗ್ ನಲ್ಲಿ ಆಸಕ್ತಿ ಹೊಂದಿದ್ದ ಕರಣ್ಗೆ ಪ್ರೋತ್ಸಾಹ ನೀಡಿನೀರೆರೆದು ಪೋಷಿಸಿದ್ದು ಅವರ ತಾಯಿ ಹಾಗೂ ಕುಟುಂಬಸ್ತರು.
ಫೈನ್ ಆರ್ಟ್ಸ ಮುಗಿಸಿದ ನಂತರ ಇದೇ ಕೆಲಸದಲ್ಲಿ ತೊಡಗಿಸಿಕೊಂಡ ಕರಣ್, ಪ್ರತಿದಿನ, ಪ್ರತಿಕ್ಷಣ ಹೊಸದನ್ನು ಏನಾದರೂ ರೂಪಿಸಬೇಕು ಎಂಬ ತುಡಿತ ಹೊಂದಿದ್ದರು. ಇದಕ್ಕಾಗಿ ಹಗಲುರಾತ್ರಿ ಕಷ್ಟಪಟ್ಟು ಇದರಲ್ಲಿ ಶ್ರಮವಹಿಸಿ, ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡರು.
ಹನುಮಾನ್ ಸ್ಟಿಕ್ಕರ್ ರೂಪಿತವಾಗಿದ್ದು ಹೀಗೆ…
ಕೇರಳದ ಕಾಸರಗೋಡಿನ ನಿವಾಸಿಯಾಗಿರುವ ಕರಣ್ ಗೆ ಅಲ್ಲಿ ಅಪಾರ ಸ್ನೇಹಿತರ ಬಳಗವಿದೆ. ಅಲ್ಲಿನ ಹಿಂದೂಪರ ಸಂಘಟನೆಯ ಯುವಕರು ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕುಎಂಬ ಹಿನ್ನೆಲೆಯಲ್ಲಿ ಹಾಗೂ ಹೊಸದೇನಾದರೂ ಲಾಂಛನದ ರೂಪದಲ್ಲಿ ಪ್ರಕಾಶಿಸಬೇಕು ಎಂಬ ಉದ್ದೇಶದಿಂದ ಕರಣ್ ಬಳಿ ವಿನ್ಯಾಸಕ್ಕಾಗಿ ಕೇಳುತ್ತಾರೆ. ಇದರ ಹಿನ್ನೆಲೆಯಲ್ಲಿ ರೂಪಿತವಾಗಿದ್ದೇಹನುಮಾನ್ ಸ್ಟಿಕ್ಕರ್.
ಕಾಸರಗೋಡಿನ ಕುಂಬ್ಳೆ ಪ್ರದೇಶದ ಹಿಂದೂ ಯುವಕರು ಗಣೇಶೋತ್ಸವ ಆಚರಿಸುವ ವೇಳೆ ಲಾಂಛನ ಅಥವಾ ಬಾವುಟದ ರೂಪದಲ್ಲಿ ಪ್ರದರ್ಶಿಸಲು ಕರಣ್ ರೂಪಿಸಿದ ಈ ಹನುಮಾನ್ ಸ್ಟಿಕ್ಕರ್, 2015ರ ನವೆಂಬರ್ 13ರಂದು ಮೊದಲ ಬಾರಿಗೆ ಕಾಸರಗೋಡಿನಲ್ಲಿ ರಾರಾಜಿಸಿತ್ತು. ವಿಭಿನ್ನ ಹಾಗೂ ವಿಶೇಷವಾಗಿ ಹನುಮಾನ್ ಚಿತ್ರವನ್ನು ರೂಪಿಸಬೇಕು ಎಂಬ ಚಿತ್ತದಿಂದ ಶ್ರಮ ವಹಿಸಿದಕರಣ್, ಮೊದಲ ಮುಖವನ್ನು ಮಾತ್ರ ರೂಪಿಸಿದರು. ಆನಂತರ ಹನುಮಾನ್ ದೇಹವನ್ನು ರೂಪಿಸಿದರು. ಅಲ್ಲಿನ ಯುವಕರಿಗೆ ಈ ಚಿತ್ರ ಎಷ್ಟು ಪ್ರಿಯವಾಯಿತು ಎಂದರೆ, ಇದನ್ನು ಫೇಸ್ ಬುಕ್ಹಾಗೂ ವಾಟ್ಸಪ್ ಗಳಲ್ಲಿ ಡಿಪಿ ಆಗಿ ಹಾಕಿಕೊಳ್ಳಲು ಮುಂದಾದರು. ಆದರೆ, ತಾಂತ್ರಿಕ ಕಾರಣದಿಂದ ಡಿಪಿಯಲ್ಲಿ ಪೂರ್ಣ ಕಾಣದ ಹಿನ್ನೆಲೆಯಲ್ಲಿ ಅರ್ಧಮುಖದ ಹನುಮಾನ್ ಚಿತ್ರವೇ ಎಲ್ಲೆಡೆಪಸರಿಸಲು ಆರಂಭವಾಯಿತು.
ನಂತರ ಒಬ್ಬರಿಂದ ಒಬ್ಬರಿಗೆ ಶೇರ್ ಆಗುತ್ತಾ ಹೋದ ಈ ಹನುಮಾನ್ ಚಿತ್ರ ಇಂದು ರಾಷ್ಟ್ರಮಟ್ಟದಲ್ಲಿ ಒಂದು ರೀತಿಯ ಐಕಾನ್ ಆಗುವಷ್ಟರ ಮಟ್ಟಿಗೆ ತನ್ನ ವ್ಯಾಪ್ತಿಯನ್ನು ರೂಪಿಸಿಕೊಂಡಿದೆ.ಎಲ್ಲೆಡೆ ರಾರಾಜಿಸುತ್ತಿರುವ ಈ ಚಿತ್ರ, ಹಿಂದೂ ಸಂಘಟನೆಗಳ ಪ್ರಮುಖ ಐಕಾನ್ ಆಗಿ ಬೆಳೆಯುತ್ತಿದೆ.
ಕರಣ್ ಬಗ್ಗೆ ಮತ್ತಷ್ಟು…
ಚಿತ್ರ ಕಲೆಯಲ್ಲಿ, 2ಡಿ, 3ಡಿ ಅನಿಮೇಶನ್, ಡಿಸೈನ್ ನಲ್ಲಿ ಅಪ್ರತಿಮ ಪ್ರತಿಭೆಯನ್ನು ಹೊಂದಿರುವ ಕರಣ್, ಸಾಕಷ್ಟು ಪಾಂಡಿತ್ಯವನ್ನು ಹೊಂದಿದ್ದರೂ ಹೆಚ್ಚಿನ ಪ್ರಚಾರಕ್ಕೆ ಬಂದಿಲ್ಲ ಎನ್ನುವುದುಕಲಾವಿದನಿಗೆ ಸಿಗುತ್ತಿರುವ ಬೆಲೆ ಕಡಿಮೆಯಾಗುತ್ತಿದೆಯಾ ಎಂಬ ಅನುಮಾನವನ್ನು ಹುಟ್ಟು ಹಾಕುತ್ತದೆ.
ಈ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲದಿಂದ ಹಗಲು ರಾತ್ರಿ ಶ್ರಮಿಸುತ್ತಿರುವ ಕರಣ್, ಪ್ರಸ್ತುತ ಮಂಗಳೂರಿನ ಕಂಪೆನಿಯೊಂದರಲ್ಲಿ ಇದೇ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.ಈಗಾಗಲೇ ಹಲವು ಕನ್ನಡ ಚಲನಚಿತ್ರಗಳಿಗೆ ಸ್ಟೋರಿ ಬೋರ್ಡ ಮಾಡಿರುವ ಇವರು, ಇನ್ನೂ ಏನನ್ನಾದರೂ ಸಾಧಿಸುವ ತುಡಿತದಲ್ಲಿದ್ದಾರೆ.
ಯಶಸ್ವಿ ಯುವ ಪ್ರತಿಭೆ ರಕ್ಷಿತ್ ಶೆಟ್ಟಿ ಅವರ ಚಿತ್ರಕ್ಕೆ ಕೆಲಸ ಮಾಡಿರುವ ಕರಣ್, ಬೆಂಗಳೂರಿನಲ್ಲಿ ನಡೆದ ಚಿತ್ರಸಂತೆಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಮಾತ್ರವಲ್ಲದೇ ಕುಡ್ಲಕಲಾಮೇಳದಲ್ಲೂ ಇವರ ಸಾಧನೆಗೆ ವೇದಿಕೆ ದೊರೆತಿತ್ತು.
ಚಿತ್ರಕಲೆ, 2ಡಿ, 3ಡಿ, ಪೆನ್ಸಿಲ್ ಸ್ಕೆಚ್, ಪೇಂಟಿಂಗ್, 3ಡಿ ಮಾಡಲಿಂಗ್ ನಲ್ಲಿ ಆಳವಾದ ಪ್ರತಿಭೆ ಹೊಂದಿರುವ ಕರಣ್, ಚಿತ್ರಕಲೆ ಹಾಗೂ ಚಿತ್ರವನ್ನೇ ಉಸಿರಾಗಿಸಿಕೊಂಡಿದ್ದಾರೆ.
ಹನುಮಾನ್ ಸ್ಟಿಕ್ಕರ್ ಬಗ್ಗೆ ಏನು ಹೇಳುತ್ತಾರೆ ಕರಣ್…..
ಭರತ್ ಹಾಗೂ ಪ್ರವೀಣ್ ಎಂಬ ಆಪ್ತ ಸ್ನೇಹಿತರ ಆಶಯಕ್ಕೆ ತಕ್ಕಂತೆ ನಮ್ಮೂರಿನಲ್ಲಿ ರಾರಾಜಿಸಲಿ ಎಂದು ಹನುಮಾನ್ ಚಿತ್ರವನ್ನು ರೂಪಿಸಿದೆ. ಗಣೇಶೋತ್ಸವಕ್ಕೆ ವಿಭಿನ್ನವಾಗಿರಲಿ ಎಂದುರೂಪಿಸಿದ ಈ ಚಿತ್ರ ಇಂದು ಎಲ್ಲೆಡೆ ರಾರಾಜಿಸುತ್ತಿದೆ ಎಂದರೆ, ಇದು ಕಲಾವಿದನೊಬ್ಬನ ಪ್ರತಿಭೆಗೆ ಸಂದ ಗೌರವ ಎಂದೇ ಭಾವಿಸುತ್ತೇನೆ. ನಾನು ರೂಪಿಸಿದ ಈ ಚಿತ್ರ ಇಷ್ಟರಮಟ್ಟಿಗೆ ಸೆನ್ಸೇಶನ್ಕ್ರಿಯೇಟ್ ಮಾಡಿ, ಟ್ರೆಂಡ್ ಆಗಿದೆ ಎಂದರೆ ನಿಜಕ್ಕೂ ಅತಿಹೆಚ್ಚು ಆನಂದ ಹಾಗೂ ಹೆಮ್ಮೆ ಪಡುತ್ತೇನೆ.
–ಕರಣ್ ಆಚಾರ್
ಪ್ರೋತ್ಸಾಹ ನೀಡಿ……
ಕರಣ್ ಆಚಾರ್ಯ ರೂಪಿಸಿರುವ ಈ ಹನುಮಾನ್ ಚಿತ್ರ ಇಂದು ಎಲ್ಲೆಡೆ ರಾರಾಜಿಸುತ್ತಿರುವಂತೆಯೇ ಇಂತಹ ಅದ್ಭುತ ಕಲಾವಿದನಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಬಜರಂಗ ದಳ,ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ನರನಾಡಿಗಳಲ್ಲಿ ಹಿಂದುತ್ವದ ವಿದ್ಯುತ್ ನ್ನು ಪ್ರವಹಿಸುತ್ತಿರುವ ಈ ಚಿತ್ರವನ್ನು ರೂಪಿಸಿದ ಕರಣ್ ಆಚಾರ್ಯರಿಗೆ ಇದೇ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಹೆಚ್ಚು ಬೆಳೆಯುವಂತೆ ಪ್ರೋತ್ಸಾಹಿಸಬೇಕಿದೆ. ಇದಕ್ಕಾಗಿ ಎಲ್ಲ ಸಂಘಟನೆಗಳು, ಚಿತ್ರರಂಗ ಮುಂದೆ ಬರಬೇಕಿದೆ.
ಕರಣ್ ಆಚಾರ್ಯ ಅವರನ್ನು ಅಭಿನಂದಿಸಲು ಇ-ಮೇಲ್ ಮಾಡಿ: karanacharya.kk@gmail.com
ಕರಣ್ ಆಚಾರ್ಯ ಪ್ರತಿಭೆಯಲ್ಲಿ ಮೂಡಿರುವ ಚಿತ್ರಗಳಿವು.
Discussion about this post