ಸುಪ್ರೀಂ ಕೋರ್ಟಿನ ವಿಚಾರ. ಘನವೆತ್ತ ನ್ಯಾಯಾಧೀಶರಿಗೆ ಕಾನೂನು, ಸಂವಿಧಾನದ ಪಾಠ ಹೇಳಬೇಕಾಗಿಲ್ಲ. ಆದರೆ ವಸ್ತು ಸ್ಥಿತಿಯ ವಿಶ್ಲೇಷಣೆ, ನೀರಿನ ಲಭ್ಯತೆ, ಅದರಿಂದ ಮುಂಬರುವ ದಿನಗಳಲ್ಲಿ ಆಗುವ ಪರಿಣಾಮ ಜಲತಜ್ಞರಿಗಷ್ಟೇ ಗೊತ್ತು. ರಾಜ್ಯದ ಜಲಾಶಯಗಳಿಂದ ಈ ಸಮಯದಲ್ಲಿ ನೀರು ಬಿಟ್ಟರೆ ಇನ್ನು ತುಂಬಿಕೊಳ್ಳುವುದು ಬರುವ ವರ್ಷ ಮಾನ್ಸೂನ್ ಸಮಯದಲ್ಲಿ ಮಾತ್ರ ಎಂಬುವುದು ಅವರಿಗೆ ತಿಳಿದಿಲ್ಲವೇ?
ಲೇಖಕರು: ಆಶಾಢ
ಬೆಂಗಳೂರು ಅಕ್ಷರಶಃ ಹೊತ್ತಿ ಉರಿಯಿತು. ಒಂದು ಕಾಲದಲ್ಲಿ ಪ್ರಶಾಂತ, ತಂಪು, ಉದ್ಯಾನನಗರಿ ಎಂದು ಪ್ರಶಂಸಿಸಲ್ಪಟ್ಟ ಕೆಂಪೇಗೌಡರ ರಾಜಧಾನಿ ಈ ವಾರ ಅಕ್ಷರಶಃ ರಣರಂಗವಾಗಿತ್ತು. ಎಲ್ಲಿ ನೋಡಿದರೂ ಕೈಯಲ್ಲಿ ಬಡಿಗೆ ಹಿಡಿದು, ಕಲ್ಲು ತೂರಾಟ ಮಾಡುತ್ತ ರಕ್ಕಸರಂತೆ ಕೇಕೇ ಹಾಕುವ ಯುವಜನತೆ. ಇನ್ನೊಂದೆಡೆ ನೋಡಿಯೂ ನೋಡದವರಂತೆ, ಕೈಲಾಗದವರಂತೆ ನಿಂತು ನಿಟ್ಟುಸಿರು ಬಿಡುವ ಪೊಲೀಸ್ ವ್ಯವಸ್ಥೆ. ಇವರ ಆಟಾಟೋಪಕ್ಕೆ ಹೊತ್ತಿ ಉರಿಯುತ್ತಿರುವ ತಮಿಳು ನಾಡಿನ ವಾಹನಗಳು. ಇದರ ಹಿಂದೆ ಅದೃಶ್ಯ ರಾಜಕೀಯ ಕೈವಾಡವಿದೆ. ಜನರನ್ನು ಪ್ರಚೋದಿಸಿ, ಅರಾಜಕತೆಯನ್ನು ಉಂಟು ಮಾಡಿ ಮೀಸೆಯಡಿ ನಗುವ ಹಾಗೂ ಅದರಿಂದ ಲಾಭ ಪಡೆಯುವ ಹುನ್ನಾರವೂ ನಡೆದಿದೆ.
ಬೆಳಗ್ಗಿನಿಂದ ಉರಿಯಲು ಪ್ರಾರಂಭವಾದ ಬೆಂಗಳೂರು ರಾತ್ರಿ ವರೆಗೂ ಹೊತ್ತಿ ಉರಿಯುತ್ತಲೇ ಇತ್ತು. ಅದಕ್ಕೆ ಪುಷ್ಟಿ ಕೊಡುವಂತೆ ದೃಶ್ಯ ಮಾಧ್ಯಮಗಳು ಸುದ್ದಿ ಚಿತ್ರಣಗಳನ್ನು ಯಥಾವತ್ತಾಗಿ ಮೇಲಿಂದ ಮೇಲೆ ಮಸಾಲೆಯುಕ್ತವಾಗಿ ಪ್ರಸಾರ ಮಾಡುತ್ತಿದ್ದವು.
ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಹರಿದು ತಮಿಳು ನಾಡು, ಪುದುಚೇರಿ ಹಾದು ಬಂಗಾಳಕೊಲ್ಲಿ ಸೇರುವ ಕಾವೇರಿ ನದಿಯ ನೀರಿನ ಮೇಲಿನ ಹಕ್ಕಿನ ಕಲಹ ಇಂದು ನಿನ್ನೆಯದ್ದಲ್ಲ. ೧೯೩೫ ರಲ್ಲಿ ಕನ್ನಂಬಾಡಿ ಆಣೆಕಟ್ಟು ಕಟ್ಟಿದ ದಿನದಿಂದ ತಮಿಳು ನಾಡು ತಕರಾರು ತೆಗೆದಿತ್ತು. ನಮ್ಮ ರಾಜ್ಯದಲ್ಲಿ ಹುಟ್ಟಿದ ನದಿಯ ನೀರನ್ನು ಬಳಸುವ ಪ್ರಥಮ ಹಕ್ಕು ನಮಗಲ್ಲವೇ? ಆಣೆಕಟ್ಟು ಕಟ್ಟಿದರೂ ಎಷ್ಟು ನೀರು ಸಂಗ್ರಹಿಸಬಹುದು? ಮಿಕ್ಕಿ ಹರಿದ ನೀರು ವರ್ಷವಿಡೀ ಅವರಿಗೆ ದೊರಕುತ್ತಿಲ್ಲವೇ? ಮಟ್ಟೂರು ಬಳಿ ಕಟ್ಟೆ ಕಟ್ಟಿ ಅವರು ನೀರು ಸಂಗ್ರಹಿಸುದಿಲ್ಲವೇ? ಇಂದು ಪ್ರಾಕೃತಿಕವಾಗಿ ನೀರಿನ ಅಭಾವ ತಲೆದೋರಿದಾಗ ಹಂಚಿ ಬಳಸುವ ಪರಿಜ್ಞಾನ ಎರದೂ ರಾಜ್ಯದವರಿಗೂ ಇರಬೇಕು.
ನೀರಿನ ಹಂಚಿಕೆಯ ವಿಷಯದಲ್ಲಿ ರಾಜಕೀಯ ಮಾಡಿ, ಉದ್ವಿಗ್ನತೆ ಸೃಷ್ಟಿಸಿ ಗಲಭೆ ಉಂಟು ಮಾಡಿದರೆ ತೊಂದರೆಗೀಡಾಗುವವರು ಜನಸಾಮಾನ್ಯರೇ. ಬಂಗಲೆಯಲ್ಲಿ ವಾಸಿಸುವ ರಾಜಕಾರಣಿಗಳಲ್ಲ. ಬೆಂಕಿಯಲ್ಲಿ ಉರಿದುಹೋದ ತಮಿಳು ನಾಡಿನ ಲಾರಿಗಳಲ್ಲಿ ಇದ್ದ ವಸ್ತುಗಳು ಕನ್ನಡಿಗರಿಗೆ ಸೇರಿದ್ದಾಗಿತ್ತು. ಇಪ್ಪತ್ತೊಂದು ಟನ್ ಅಕ್ಕಿ ಉರಿದು ನಷ್ಟವಾದರೆ ಆ ಕನ್ನಡಿಗನಿಗಾದ ನಷ್ಟ ತುಂಬಿ ಕೊಡುವವರು ಯಾರು? ಇದು ಜಲ ವಿವಾದ ಬಗೆಹರಿಸುವ ರೀತಿಯೇ?
ಅದು ಹಾಗಿರಲಿ. ಬೆಂಗಳೂರು ಹೊತ್ತಿ ಉರಿಯುತ್ತಿರುವಾಗ ವಿಶ್ವದ ಕಣ್ಣು ಬೆಂಗಳೂರಿನತ್ತ ತಿರುಗಿದೆ. ಅಮೆರಿಕಾದ ಪ್ರಜೆಗಳಿಗೆ ಅವರ ಸಚಿವಾಲಯದಿಂದ ಮನೆಯೊಳಗೇ ಉಳಿಯುವಂತೆ ಸೂಚನೆ ಬಂದಿದೆ. ಐಟಿ-ಬಿಟಿ ಕಂಪನಿಗಳು ಅನಿರ್ಧಿಷ್ಟಾವಧಿವರೆಗೆ ತಮ್ಮ ವ್ಯವಹಾರಗಳನ್ನು ಮೊಟಕುಗೊಳಿಸಿವೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೂ ವಿಪರೀತ ಪರಿಣಾಮಗಳಾಗುವ ಸಂಭವವಿದೆ. ನಮ್ಮ ಬೆಂಗಳೂರಿನ ಜನಸಂಖ್ಯೆ ಕೋಟಿಯ ಲೆಕ್ಕದಲ್ಲಿದ್ದರೂ, ಕೆಲವೇ ನೂರು ಸಂಖ್ಯೆಯ ಪುಂಡರು ನಗರವನ್ನು ಅಲ್ಲೋಲಕಲ್ಲೋಲ ಮಾಡುತ್ತಿದ್ದಾರೆ. ಜನರು ಸಂಕಷ್ಟದಲ್ಲಿರುವಾಗ ನಮ್ಮ ಘನ ಸರಕಾರವು ಶಾಂತಿ ಕಾಪಾಡಲು ಮನವಿ ಮಾಡುತ್ತಿದೆ.
ಮನವಿ ಮಾಡಲು ಇದು ಚುನಾವಣೆ ಭಾಷಣ ಅಲ್ಲ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವುದು ಸರಕಾರದ ಕರ್ತವ್ಯ. ಅದಕ್ಕಾಗಿ ಪೊಲೀಸ್ ಹಾಗೂ ಇನ್ನಿತರ ರಕ್ಷಣಾ ಪಡೆಗಳ ಬಲವಿದೆ. ಬೇಕಿದ್ದರೆ ಕೇಂದ್ರ ಸರಕಾರದಿಂದಲೂ ಹೆಚ್ಚಿನ ಬಲವನ್ನೂ ತರಿಸಿಕೊಳ್ಳಬಹುದು. ಆದರೆ ರಾಜ್ಯ ಹೊತ್ತಿ ಉರಿಯುತ್ತಿರುವಾಗ ಸರಕಾರದ ಮೃದುದೋರಣೆ ಮನೆಹೊಕ್ಕ ಕಳ್ಳನಲ್ಲಿ ಯಾಚನೆ ಮಾಡಿದಂತಾಗುವುದಿಲ್ಲವೇ? ಚಾಣಕ್ಯ ನೀತಿ ಪ್ರಕಾರ ರಾಜನಲ್ಲಿರಬೇಕಾದ ಯಾವುದೇ ಗುಣಗಳು ಈ ಸರಕಾರದಲ್ಲಿಲ್ಲ. ಇದು ಆಳುವ ಹಕ್ಕನ್ನು ಕಳೆದುಕೊಂಡಿದೆ.
ದಂಗೆಯ ಬಗ್ಗೆ ವಿಶ್ಲೇಷಿಸುವುದಾದರೆ ಜನರ ಸೇಡು ತೀರಿಸಿಕೊಳ್ಳುವ ಉನ್ಮಾದಕರ ಮನೋಸ್ಥಿತಿಯಂತೆ ತೋರುತ್ತಿತ್ತು. ತಮಿಳರ ಮೇಲಿನ ಕೋಪ ರಾಜ್ಯದಲ್ಲಿ ವಾಸಿಸುವ ಅನ್ಯ ಭಾಷಿಗರ ಆಸ್ತಿ ಪಾಸ್ತಿ ಧ್ವಂಸಗೊಳಿಸುವ ಅತಿರೇಕಕ್ಕೆ ಹೋಗಿತ್ತು. ಇಂತಹ ನೆಪದಿಂದ ಸಮಾಜದ ಸ್ವಾಸ್ಥ್ಯ ಕೆಡಿಸುವ ಸಮಾಜಘಾತುಕ ದುಷ್ಟಶಕ್ತಿಗಳನ್ನು ಮಟ್ಟ ಹಾಕಲೇ ಬೇಕು. ಮೊಟ್ಟಮೊದಲು ತಮಿಳು ನಾಡಿನಲ್ಲಿ ಕನ್ನಡಿಗರ ಹೋಟೆಲ್ ಮೇಲೆ ಧಾಳಿ ನಡೆದಿತ್ತು. ಇದರ ಪ್ರತಿಕಾರವೆಂಬಂತೆ ಬೆಂಗಳೂರಿನಲ್ಲಿ ಶುರುವಾದ ಕಿಚ್ಚು, ಮಂಡ್ಯ, ಮದ್ದೂರು, ಮೈಸೂರಿನತ್ತ ಹೊರಳಿದೆ.
ಇಂದು ದೇಶದಲ್ಲಿ ಜಲವಿವಾದ, ಗಡಿತಕರಾರು, ಭಾಷಾವಾರು, ಪ್ರಾಂತ್ಯ ರಚನೆಯಿಂದಾಗಿ ತಮ್ಮ ತಮ್ಮ ಜನರನ್ನು ಮೆಚ್ಚಿಸಲು, ನಾಯಕ ಚೂಡಾಮಣಿಗಳು ವಿವಿಧ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಜಯಲಲಿತಾರ ಮನೋಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ತಮ್ಮಲ್ಲಿ ಸಾಕಷ್ಟು ನೀರು ದಾಸ್ತಾನು ಇದ್ದರೂ ಮುಂಬರುವ ತಿಂಗಳುಗಳಲ್ಲಿ ಮಾನ್ಸೂನ್ ಮಳೆ ಪ್ರಾರಂಭವಾಗಿ ಹೆಚ್ಚಿನ ಪ್ರಮಾಣದ ನೀರು ಲಭಿಸುವ ಸಾಧ್ಯತೆ ಹೊಂದಿದ್ದರೂ, ರೈತರ ಬಗ್ಗೆ ತನಗಿರುವ ಕಾಳಜಿ ತೋರಿಸಲು ಎಂಬಂತೆ ಪುನಃ ಪುನಃ ನೀರಿನ ಖ್ಯಾತೆ ತೆಗೆಯುತ್ತಿದ್ದಾರೆ.
ಇನ್ನು ಸುಪ್ರೀಂ ಕೋರ್ಟಿನ ವಿಚಾರ. ಘನವೆತ್ತ ನ್ಯಾಯಾಧೀಶರಿಗೆ ಕಾನೂನು, ಸಂವಿಧಾನದ ಪಾಠ ಹೇಳಬೇಕಾಗಿಲ್ಲ. ಆದರೆ ವಸ್ತು ಸ್ಥಿತಿಯ ವಿಶ್ಲೇಷಣೆ, ನೀರಿನ ಲಭ್ಯತೆ, ಅದರಿಂದ ಮುಂಬರುವ ದಿನಗಳಲ್ಲಿ ಆಗುವ ಪರಿಣಾಮ ಜಲತಜ್ಞರಿಗಷ್ಟೇ ಗೊತ್ತು. ರಾಜ್ಯದ ಜಲಾಶಯಗಳಿಂದ ಈ ಸಮಯದಲ್ಲಿ ನೀರು ಬಿಟ್ಟರೆ ಇನ್ನು ತುಂಬಿಕೊಳ್ಳುವುದು ಬರುವ ವರ್ಷ ಮಾನ್ಸೂನ್ ಸಮಯದಲ್ಲಿ ಮಾತ್ರ ಎಂಬುವುದು ಅವರಿಗೆ ತಿಳಿದಿಲ್ಲವೇ?
ಈಗ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಒಂದು ಕಿವಿಮಾತು. ರಾಜ್ಯದ ಎಲ್ಲ ಪಕ್ಷಗಳ ಒಮ್ಮತದ ಸಹಕಾರದಿಂದ ಸುಪ್ರೀಂ ಕೋರ್ಟಿನ ಆದೇಶವನ್ನು ಧಿಕ್ಕರಿಸಿ ನಮ್ಮ ಜನರ ಒಳಿತಿಗಾಗಿ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಘೋಷಿಸಿರಿ. ಇದರಿಂದಾಗಿ ಅಧಿಕಾರ ಕಳೆದುಕೊಂಡರೂ ಪರವಾಗಿಲ್ಲ. ಸರಕಾರ ವಿಸರ್ಜಿಸಿದರೂ ಮುಂಬರುವ ಚುನಾವಣೆವರೆಗೆ ನೀವೇ ಅಧಿಕಾರದಲ್ಲಿದ್ದುಕೊಂಡು ಜನರ ಸಹಾನುಭೂಯುತಿಯನ್ನು ಪಡೆಯುತ್ತೀರಿ. ಇತಿಹಾಸದಲ್ಲಿ ಜನರ ಆಶೋತ್ತರಗಳನ್ನು ಈಡೇರಿಸಲು ಸರಕಾರವನ್ನೇ ತ್ಯಾಗ ಮಾಡಿದ ನಾಯಕನೆಂದು ಬಿಂಬಿಸಿಕೊಳ್ಳಿ. ಆದರೆ ಅಂತಹ ಅವಕಾಶವನ್ನು ಸಿದ್ಧರಾಮಯ್ಛ ಬಹುತೇಕ ಕಳೆದುಕೊಂಡಿದ್ದಾರೆ ಎಂದೇ ಹೇಳಬೇಕು.
Discussion about this post