ಬೆಂಗಳೂರು, ಸೆ.19: ಇದುವರೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದಿರುವ ದರಖಾಸ್ತು ಸಾಗುವಳಿದಾರರಿಗೆ ಮತ್ತೊಮ್ಮೆ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಗರ್ಹುಕುಂ ಸಮಿತಿ ಮುಂದೆ ಈಗಾಗಲೇ ಸುಮಾರು 4 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ಸಮಿತಿ ಅಧ್ಯಕ್ಷರಾದ ಸ್ಥಳೀಯ ಶಾಸಕರು ಬಾರದಿದ್ದರೂ ತಹಶೀಲ್ದಾರ್ ಅವರು ಕೋರಂ ಆಧಾರದ ಮೇಲೆ ಸಮಿತಿ ಸಭೆ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಲು ಸುತ್ತೋಲೆ ಹೊರಡಿಸಲಾಗಿದೆ ಎಂದರು.
ಪ್ರತಿ ವಾರ ಬಗರ್ ಹುಕುಂ ಸಮಿತಿ ಸಭೆ ಕರೆಯಬೇಕು, ವಿಲೇವಾರಿ ಆದ ಅರ್ಜಿಗಳ ವರದಿಯನ್ನು ಪ್ರತಿ ತಿಂಗಳು ತಾಲೂಕುವಾರು ನೀಡಬೇಕು, ಇಲ್ಲದಿದ್ದರೆ ತಹಶೀಲ್ದಾರ್ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ದರಖಾಸ್ತು ಭೂಮಿ ಸಾಗುವಳಿ ಮಾಡುತ್ತಿರುವ ಹಲವು ರೈತರು ಅರ್ಜಿ ಸಲ್ಲಿಸಲು ಸಾಧ್ಯವಾಗದಿರುವ ಬಗ್ಗೆ ಮನವಿ ಮಾಡಿದ್ದಾರೆ. ಇದನ್ನು ಪರಿಶೀಲಿಸಿ ಮತ್ತೊಮ್ಮೆ ದರಖಾಸ್ತು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಅರಣ್ಯ ಹಕ್ಕು ಸಮಿತಿ ಮೂಲಕ ಹಕ್ಕು ಪತ್ರ ನೀಡುವ ಬಗ್ಗೆ ಹೊಸದಾಗಿ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ರಾಜ್ಯದ ದಕ್ಷಿಣ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆ ಕೊರತೆ ಉಂಟಾಗಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಸೆ.28 ರಂದು ಬರಕ್ಕೆ ಸಂಬಂಧಿಸಿದಂತೆ ಸಂಪುಟ ಉಪಸಮಿತಿ ಸಭೆ ನಡೆಯಲಿದೆ. ಅದರಲ್ಲಿ ಬರಪೀಡಿತ ಪ್ರದೇಶಗಳ ಆಯ್ಕೆ ಮಾಡಿ ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಅಪೋಲೋ ಆಸ್ಪತ್ರೆ ಸರ್ಕಾರದ ವಶಕ್ಕೆ: ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಾಣವಾಗಿದ್ದ ಅಪೋಲೋ ಆಸ್ಪತ್ರೆಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಇದನ್ನು ಯಾರಿಗೆ ಹಸ್ತಾಂತರಿಸಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಬೇಕಿದೆ ಎಂದರು.
ಇದಕ್ಕೂ ಮುನ್ನ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಾಚನೂರು ಹಾಗೂ ಹುರುಗಾಲ ಜಂಬಗಿ ಗ್ರಾಮದ ರೈತ ಮಹಿಳೆಯರು, ರೈತರು ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಸಾಗುವಳಿ ಭೂಮಿ ಮಂಜೂರು ಮಾಡುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು ಮುಧೋಳ ತಹಶೀಲ್ದಾರರಿಗೆ ದೂರವಾಣಿ ಮೂಲಕ ಮಾತನಾಡಿ, ಎರಡೂ ಗ್ರಾಮದ ರೈತರ ಅರ್ಜಿ ಸ್ವೀಕರಿಸುವಂತೆ ಸೂಚಿಸಿದರು.
ಕಂದಾಯ ಇಲಾಖೆ ಹಾಗೂ ರೈತರ ಭೂಮಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.














