ನ್ಯೂಯಾರ್ಕ್, ಅ.29: ವಿಶ್ವಸಂಸ್ಥೆಯ ನಡೆ ವ್ಯಾಪಕವಾದ ಅಣ್ವಸ್ತ್ರ ನಿಶಸ್ತ್ರೀಕರಣಕ್ಕೆ ಪೂರಕವಾಗುವ ಬಗ್ಗೆ ಭಾರತ ಸಂದೇಹ ವ್ಯಕ್ತಪಡಿಸಿದ್ದು, ವಿಶ್ವಸಂಸ್ಥೆಯ ಪ್ರಸ್ತಾವನೆಯಿಂದ ಸದ್ಯಕ್ಕೆ ಅಂತರ ಕಾಯ್ದುಕೊಂಡಿದೆ.
ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ನಿಷೇಧಿಸುವ ವಿಷಯದ ಬಗ್ಗೆ ಸದಸ್ಯ ರಾಷ್ಟ್ರಗಳ ನಡುವೆ ಮಾತುಕತೆ ಪ್ರಾರಂಭಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಮಿತಿ ನಿರ್ಣಯ ಅಂಗೀಕರಿಸಿದೆ. ವಿಶ್ವಸಂಸ್ಥೆಯ ಸಮಿತಿ ಅಣ್ವಸ್ತ್ರ ನಿಷೇಧದ ಬಗ್ಗೆ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ನಡುವೆ ಚರ್ಚೆಯನ್ನು ಪ್ರಾರಂಭಿಸಲು ನಿರ್ಣಯ ಕೈಗೊಂಡಿದ್ದು, ವಿಶ್ವವನ್ನು ಸಂಪೂರ್ಣ ಅಣ್ವಸ್ತ್ರ ಮುಕ್ತವನ್ನಾಗಿಸಬೇಕು ಎಂಬ ಉದ್ದೇಶವನ್ನು ಹೊಂದಿದೆ. ಈ ಕುರಿತಂತೆ ನಿನ್ನೆ ನಿರ್ಣಯವನ್ನು ಕೈಗೊಂಡಿದೆ.
ಈ ಕುರಿತಂತೆ ಮಾತನಾಡಿರುವ ಭಾರತದ ಕಾಯಂ ಪ್ರತಿನಿಧಿ ಡಿ.ಬಿ. ವೆಂಕಟೇಶ್ ವರ್ಮಾ, ನಿರ್ಣಯದ ಬಗ್ಗೆ ದೂರ ಉಳಿರುವುದನ್ನು ಭಾರತ ಪರಿಶೀಲನೆ ನಡೆಸಲಿದ್ದು, ಸಮ್ಮೇಳನ ಅಣ್ವಸ್ತ್ರ ನಿಶಸ್ತ್ರೀಕರಣಕ್ಕೆ ಪೂರಕವಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೂ ಸಹ ಈ ನಿಟ್ಟಿನಲ್ಲಿ ಮಾತುಕತೆ ನಡೆಸುವುದು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
೨೦೧೭ ರಲ್ಲಿ ವಿಶ್ವಸಂಸ್ಥೆ ಈ ಕುರಿತು ಸದಸ್ಯ ರಾಷ್ಟ್ರಗಳ ಸಮ್ಮೇಳನವನ್ನು ಆಯೋಜಿಸಲು ಉದ್ದೇಶಿಸಿದ್ದು, ವಿಶ್ವಸಂಸ್ಥೆಯ ಪ್ರಸ್ತಾವನೆ ಪರವಾಗಿ ೧೨೩ ರಾಷ್ಟ್ರಗಳು ಮತ ಹಾಕಿದ್ದರೆ, ೩೮ ರಾಷ್ಟ್ರಗಳು ವಿರುದ್ಧವಾಗಿ ಮತಚಲಾವಣೆ ಮಾಡಿದ್ದು ೧೬ ರಾಷ್ಟ್ರಗಳ ಸದಸ್ಯರು ಗೈರು ಹಾಜರಾಗಿದ್ದರು.















