Read - 2 minutes
ಇದನ್ನು ರಾಜ್ಯದ ಪಾಲಿನ ದುರಂತ ಎನ್ನದೇ ಬೇರೆ ವಿಧಿಯಿಲ್ಲ. ನದಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜ್ಯಕ್ಕೆ ನೆರೆ ರಾಜ್ಯಗಳಿಂದ, ಕೇಂದ್ರ ಸರ್ಕಾರದಿಂದ ಹಾಗೂ ನ್ಯಾಯಾಲಯಗಳಿಂದ ಮೇಲಿಂದ ಮೇಲೆ ಅನ್ಯಾಯವಾಗುತ್ತಲೇ ಇವೆ.
ಮೊನ್ನೆ ಮೊನ್ನೆ ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಹದಾಯಿ ನ್ಯಾಯಾಧೀಕರಣದಿಂದ ರಾಜ್ಯಕ್ಕೆ ಅನ್ಯಾಯವಾದ ಬೆನ್ನಲ್ಲೇ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೊಮ್ಮೆ ಅನ್ಯಾಯವಾಗಿದೆ. ಈ ಕುರಿತಂತೆ ನಿನ್ನೆ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಪ್ರತಿದಿನ ೧೫ ಸಾವಿರ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡಬೇಕು ಎಂದು ಆದೇಶ ನೀಡಿದೆ. ಇಲ್ಲಿ, ಸುಪ್ರೀಂ ಆದೇಶ ನೀಡಿದ ನಂತರ ಅದರ ಪಾಲನೆ ಕರ್ತವ್ಯವಾಗುತ್ತದೆ ಎನ್ನುವುದು ಸತ್ಯ.
ಆದರೆ, ಕಾವೇರಿ ವಿಚಾರದಲ್ಲಿ ವಾಸ್ತವ ಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದು ಸುಪ್ರೀಂ ಆದೇಶದಿಂದ ಸಾಬೀತಾಗಿದೆ.
ಪ್ರಮುಖವಾಗಿ, ಕಾವೇರಿ ವಿಚಾರ ನದಿ ನೀರಿನ ವಿಚಾರ ಮಾತ್ರವಲ್ಲದೇ, ಭಾವನಾತ್ಮಕ ವಿಚಾರವಾಗಿ ಪರಿವರ್ತಿತವಾಗಿ ಬಹಳ ಕಾಲವೇ ಕಳೆದಿದೆ. ಹೀಗಾಗಿ, ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಬೆಣ್ಣೆಯಲ್ಲಿ ಕೂದಲು ತೆಗೆಯುವ ರೀತಿಯಲ್ಲಿ ಕೆಲಸ ಸಾಧಿಸಬೇಕು.
ಈ ಬಾರಿ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯದ ಜಲಾಶಯಗಳು ಈಗಾಗಲೇ ಬಣಗುಡಲು ಆರಂಭಿಸಿವೆ. ಕಾವೇರಿ ಕೊಳ್ಳವೂ ಇದಕ್ಕೆ ಹೊರತಲ್ಲ. ಹೀಗಿರುವಾಗ, ಕಾವೇರಿ ಕೊಳ್ಳ ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದೇ ಒಂದು ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯಿದ್ದಾಗ್ಯೂ, ವಾಸ್ತವ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯದ ಪರ ವಾದ ಮಾಡಿರುವ ಹಿರಿಯ ವಕೀಲ ಫಾಲಿ ನಾರಿಮನ್ ಸಂಪೂರ್ಣ ವಿಫಲರಾಗಿದ್ದಾರೆ ಎನ್ನುವುದು ಸತ್ಯ.
ಇಲ್ಲೊಂದು ಪ್ರಶ್ನೆ ಉದ್ಬವವಾಗುತ್ತದೆ. ರಾಜ್ಯದ ಹಿತ ಕಾಯುವ ಪ್ರಕರಣದಲ್ಲಿ ರಾಜ್ಯದ ಪರ ವಾದ ಮಾಡಲು ರಾಜ್ಯದವರೇ ಆದ ಯಾವುದೇ ಬುದ್ದಿವಂತ ವಕೀಲರಿಲ್ಲವೇ? ಕಾವೇರಿ ವಿಚಾರದಲ್ಲಿ ಕಳೆದ ೨೦ ವರ್ಷಗಳಿಂದ ವಾದ ಮಾಡುತ್ತಿರುವ ನಾರಿಮನ್, ಸರ್ಕಾರದಿಂದ ಕೋಟ್ಯಂತರ ರೂ. ಶುಲ್ಕ ತೆಗೆದುಕೊಂಡಿದ್ದು ಬಿಟ್ಟರೆ ರಾಜ್ಯದ ಪರವಾಗಿ ಯಾವ ಯಶಸ್ಸನ್ನು ತಂದುಕೊಟ್ಟಿದ್ದಾರೆ? ರಾಜ್ಯದ ಪರವಾಗಿ ವಾದ ಮಾಡಿ ಗೆಲ್ಲುವಲ್ಲಿ ನಾರಿಮನ್ ಪ್ರತಿಬಾರಿಯೂ ಸೋತಿದ್ದಾರೆ. ಹೀಗಿರುವಾಗ, ಇಂತಹ ವ್ಯಕ್ತಿಯ ಅನಿವಾರ್ಯತೆ ರಾಜ್ಯಕ್ಕೆ ಏನಿದೆ?
ರಾಜ್ಯದಲ್ಲಿ ಲಾಯರ್‌ಗಳಿಲ್ಲವೇ?
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ವತಃ ವಕೀಲರಾಗಿದ್ದವರು. ಇನ್ನು, ಕಾನೂನು ಮಂತ್ರಿ ಜಯಚಂದ್ರ ಕಾನೂನು ಬಲ್ಲವರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹ ವಕೀಲರು. ಇದಲ್ಲದೇ ರಾಜ್ಯದವರೇ ಆದ, ಹನುಮಂತರಾಯರು, ಮೋಹನ್ ಕಾತರಿಕಿ, ನಾಣಯ್ಯ ಅವರಂತಹ ಪ್ರಖಾಂಡ ಪಂಡಿತ ವಕೀಲರ ದಂಡು ರಾಜ್ಯದಲ್ಲಿದೆ. ಹೀಗಿರುವಾಗ, ರಾಜ್ಯದವರೇ ಅಲ್ಲದ ನಾರಿಮನ್‌ರನ್ನು ವಕೀಲರನ್ನಾಗಿ ಮುಂದುವರೆಸುವ ಅಗತ್ಯವೇನಿದೆ, ಅದೂ ೨೦ ವರ್ಷಗಳಲ್ಲಿ ಕಾವೇರಿ ವಿಚಾರದಲ್ಲಿ ಅವರ ಸಾಧನೆ ಶೂನ್ಯ ಎಂದಾದ ನಂತರವೂ.
ನಾರಿಮನ್ ಹಿರಿಯ ವಕೀಲರೇ ಆಗಿರಬಹುದು, ಕಾನೂನನ್ನು ಅರೆದು ಕುಡಿದಿರಬಹುದು. ಆದರೆ, ಅವರ ವಾದ ಹಾಗೂ ಪಾಂಡಿತ್ಯ ನಮ್ಮ ರಾಜ್ಯಕ್ಕೆ ಉಪಯೋಗವಾಗಲಿಲ್ಲ ಎಂದರೆ ಅಂತಹ ವ್ಯಕ್ತಿಯ ಅಗತ್ಯತೆ ರಾಜ್ಯಕ್ಕೆ ಇಲ್ಲ ಎನ್ನುವುದನ್ನು ರಾಜ್ಯ ಸರ್ಕಾರ ಇನ್ನಾದರೂ ಅರಿಯಬೇಕಿದೆ.
ಈ ಬಾರಿಯ ಮಳೆ ಕೊರತೆಯಿಂದಾಗಿ ಕೆಆರ್‌ಎಸ್‌ನಲ್ಲಿ ಈಗಿರುವ ನೀರಿನ ಪ್ರಮಾಣದಿಂದ ಹಳೆ ಮೈಸೂರು ಭಾಗ ಸೇರಿದಂತೆ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವುದೇ ಒಂದು ಸವಾಲಿನ ಕಾರ್ಯವಾಗಿದೆ. ಜೊತೆಯಲ್ಲಿ ನಮ್ಮ ರಾಜ್ಯದ ರೈತರಿಗೆ ಮೊದಲನೆ ಬೆಳೆಗೆ ನೀರು ಕೊಡದೇ ಇರುವಾಗ, ತಮಿಳುನಾಡಿನ ಕುರುವೈ ಹಾಗೂ ಸಾಂಬಾ ಬೆಳೆಗಳಿಗೆ ನೀರು ಹರಿಸುವುದು ಎಂದರೆ ಅದು ನಿಜಕ್ಕೂ ಆಘಾತಕಾರಿಯೇ ಹೌದು.
ನಾರಿಮನ್‌ಗೆ ಈಗ ವಯಸ್ಸಾಗಿಲ್ಲವೇ?
ಸಿದ್ಧರಾಮಯ್ಯ ಪ್ರತಿಪಕ್ಷದಲ್ಲಿದ್ದಾಗ ಕಾವೇರಿ ವಿಚಾರದಲ್ಲಿ ರಾಜ್ಯದ ಪರ ವಾದ ಮಂಡಿಸುವ ನಾರಿಮನ್ ವಿರುದ್ಧ ಹರಿಹಾಯ್ದಿದ್ದರು. ಈಗ ನಾರಿಮನ್ ಅವರೊಂದಿಗೆ ಗಳಸ್ಯ ಕಂಠಸ್ಯ ಆಗಿರುವುದು ಚರ್ಚಾರ್ಹ.
ಅಂದು ಸದನದಲ್ಲಿ ರೋಷಾವೇಶದಿಂದ ಕೂಗಾಡಿದ್ದ ಸಿದ್ಧರಾಮಯ್ಯ, ನಾರಿಮನ್‌ಗೆ ವಯಸ್ಸಾಗಿದೆ, ಅವರು ರಾಜ್ಯದ ಸಂಬಂಧ ಸಮರ್ಥ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ನಾರಿಮನ್‌ರನ್ನು ಬದಲಿಸಿ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಆದರೆ, ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ನಾರಿಮನ್ ಅವರಿಂದಾಗಿ ರಾಜ್ಯಕ್ಕೆ ಸೋಲು ಎರಗುತ್ತಿದ್ದರೂ ಅವರನ್ನು ಬದಲಿಸುವಲ್ಲಿ ಸಿದ್ಧರಾಮಯ್ಯ ಅಸಕ್ತಿ ತೋರದೇ ಇರುವುದು ಅವರ ಬದ್ಧತೆಯ ಬೂಟಾಟಿಕೆಯನ್ನು ತೋರಿಸುತ್ತದೆ.
ವಾದದಲ್ಲಿ ನಿಜ ನ್ಯಾಯದ ಕಣ್ಮರೆ
ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಹೊರಡಿಸಿರುವ ಆದೇಶದ ಪ್ರತಿಯನ್ನು ಗಮನಿಸಿದರೆ, ಕಾನೂನಾತ್ಮಕವಾಗಿ ನ್ಯಾಯ ಒದಗಿಸಲು ಪ್ರಯತ್ನಗಳು ನಡೆದಿವೆಯೇ ಹೊರತು, ರಾಜ್ಯದ ಹಿತ ಇದರಲ್ಲಿ ಕಾಣೆಯಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತದೆ.
ರಾಜ್ಯದಲ್ಲಿರುವ ಜಲಾಶಯಗಳ ನೀರು ಸಂಗ್ರಹ ಎಷ್ಟಿದೆ, ಅದರಲ್ಲಿ ಉಪಯುಕ್ತ, ಅನುಪಯುಕ್ತ ಎಂಬ ಕುರಿತಾಗಿ ಸರಿಯಾದ ಮಾಹಿತಿ ಒದಗಿಸಿದಂತೆ ಕಾಣುತ್ತಿಲ್ಲ. ಅಲ್ಲದೇ, ರಾಜ್ಯದಿಂದ ಈಗಾಗಲೇ ಹರಿಸಿರುವ ನೀರು ಎಷ್ಟು ಪ್ರಮಾಣದಲ್ಲಿ ಸಮುದ್ರದ ಪಾಲಾಗಿ ವ್ಯರ್ಥವಾಗಿದೆ ಎಂಬ ಪ್ರಮುಖ ಅಂಶವಿಲ್ಲ.
ಇದರೊಂದಿಗೆ, ಕಾವೇರಿ ನದಿ, ಉಪನದಿ ವ್ಯಾಪ್ತಿಯಲ್ಲಿ ಈ ಬಾರಿ ಎಷ್ಟು ಮಳೆಯಾಗಿದೆ, ವಾಡಿಕೆ ಮಳೆ, ಈ ಬಾರಿಯ ಮಳೆ ಪ್ರಮಾಣದ ದಾಖಲೆ ಒದಗಿಸಬೇಕಿತ್ತು. ಆದರೆ, ಸಮರ್ಥ ವಾದ ಮಂಡಿಸದ ಹಾಗೂ ವಾಸ್ತವ ಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಹಾಗೂ ಫಾಲಿ ನಾರಿಮನ್ ಎಡವಿದ್ದು, ರಾಜ್ಯದ ಹಿತವನ್ನು ಬಲಿ ನೀಡಿದ್ದಾರೆ.
Discussion about this post