Read - < 1 minute
ತಿರುವನಂತಪುರ, ಸೆ.7: ತಿರುವನಂತಪುರದ ಹೃದಯ ಭಾಗದಲ್ಲಿರುವ ಬಿಜೆಪಿ ಕಚೇರಿ ಮೇಲೆ ಬುಧವಾರ ಕಚ್ಚಾ ಬಾಂಬ್ವೊಂದನ್ನು ಎಸೆಯಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನು ಘಟನೆ ಹಿಂದೆ ಸಿಪಿಎಂ ಕೈವಾಡವಿರುವುದಾಗಿ ಬಿಜೆಪಿ ಆರೋಪಿಸಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಕುಮ್ಮನಮ್ ರಾಜಶೇಖರನ್ ಅವರು ಕಚೇರಿಯಿಂದ ತೆರಳಿದ ಕೆಲ ಸಮಯದ ಬಳಿಕ ಈ ಘಟನೆ ನಡೆದಿದೆ. ಈ ವೇಳೆ ನಾಲ್ವರು ಕಾರ್ಯಕರ್ತರು ಕಟ್ಟಡದಲ್ಲಿದ್ದರು. ಬಾಂಬ್ ಸ್ಫೋಟದಿಂದ ಬಾಗಿಲು ಕಿಟಕಿಗಳು ಸಂಪೂರ್ಣ ಹಾನಿಯಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸ್ಪರ್ಜನ್ ಕುಮಾರ್ ಹೇಳಿದ್ದಾರೆ.
ಅಂತೆಯೇ ಕಚ್ಚಾ ಬಾಂಬ್ ಸ್ಫೋಟಕ್ಕೂ ಕೆಲ ಸಮಯಗಳ ಮುನ್ನ ಸ್ಥಳಕ್ಕೆ ವ್ಯಕ್ತಿಯೋರ್ವ ಬೈಕ್ ನಲ್ಲಿ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಕಾರ್ಯಕಾರಿಣಿಗೆ ಆತಂಕ
ತಿರುವನಂತಪುರದಲ್ಲಿ ಇದೇ ಸೆ. 23ರಿಂದ 3ದಿನಗಳ ಕಾಲ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗಿಯಾಗಲಿದ್ದಾರೆ. ಇದರ ಬೆನ್ನಲ್ಲೆ ಈ ಘಟನೆ ನಡೆದಿದ್ದು, ಆತಂಕ ಸೃಷ್ಟಿಸಿದೆ.
ಕೇರಳದ ಉತ್ತರ ಕಣ್ಣೂರು ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಅಗ್ಗಾಗ್ಗೆ ಮಾರಾಮಾರಿ ನಡೆಯುತ್ತಿದೆ. ಈ ರೀತಿಯ ಘರ್ಷಣೆಯೊಂದರಲ್ಲಿ ಇತ್ತೀಚೆಗೆ ಓರ್ವ ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಲಾಗಿತ್ತು. ಇದೀಗ ಮತ್ತೆ ಬಿಜೆಪಿ ಮೇಲಿನ ದಾಳಿಯಿಂದ ಬಿಜೆಪಿ ಮುಖಂಡರು ಸಿಪಿಎಂ ವಿರುದ್ಧ ಹರಿಹಾಯ್ದಿದ್ದಾರೆ. ಪಕ್ಷವನ್ನು ಗುರಿಯಾಗಿಸಿಕೊಂಡು ಸಿಪಿಎಂ ಇಂತಹ ದುಷ್ಕೃತ್ಯಗಳನ್ನು ಎಸಗುತ್ತಿದೆ ಎಂದು ಬಿಜೆಪಿ ಮುಖಂಡರಾದ ಪಿ.ಕೆ. ಕೃಷ್ಣದಾಸ್, ಎಂ.ಟಿ. ರಮೇಶ್ ಹೇಳಿದ್ದಾರೆ. ಯೋಜನೆಗಳನ್ನು ರೂಪಿಸಿ , ಕಚ್ಚಾ ಬಾಂಬ್ ಸ್ಫೋಟಿಸಲಾಗಿದೆ. ಇದರಿಂದ ಕಚೇರಿ ಮುಂಭಾಗದಲ್ಲಿರುವ ಫ್ಲೆಕ್ಸ್ಗಳು ಸಂಪೂರ್ಣವಾಗಿ ಭಸ್ಮವಾಗಿವೆ ಎಂದು ಕೃಷ್ಣದಾಸ್ ಹೇಳಿದ್ದಾರೆ.
ನಮಗೂ ಘಟನೆಗೂ ಸಂಬಂಧವಿಲ್ಲ: ಸಿಪಿಎಂ
ಬಿಜೆಪಿ ಮುಖಂಡರ ಆರೋಪ ಸಂಬಂಧ ಪ್ರತಿಕ್ರಿಯಿಸಿರುವ ಸಿಪಿಎಂ ಮುಖಂಡರು ಬಿಜೆಪಿ ಆರೋಪ ಆಧಾರರಹಿತವಾದುದು, ಈ ಘಟನೆಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಈ ಘಟನೆ ಅತ್ಯಂತ ಖಂಡನೀಯವಾದುದು. ಆದಷ್ಟು ಶೀಘ್ರದಲ್ಲಿ ಘಟನೆಗೆ ಕಾರಣರಾದವರನ್ನು ಬಂಧಿಸಬೇಕೆಂದು ಸಿಪಿಎಂನ ತಿರುವನಂತಪುರಂನ ಜಿಲ್ಲಾ ಕಾರ್ಯದರ್ಶಿ ಅನಾವೂರ್ ನಾಗಪ್ಪನ್ ಹೇಳಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸಲಿ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರೇ ಗುರಿ
ಕೇರಳ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ಕುಮ್ಮಾನಮ್ ರಾಜಶೇಖರನ್ರನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟಿಸಲಾಗಿದೆ ಎಂದು ಬಿಜೆಪಿ ಆಪಾದಿಸಿದೆ.
ಅಂತೆಯೇ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸಿಪಿಎಂ ರಾಜ್ಯದಲ್ಲಿ ಹಿಂಸಾತ್ಮಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದೆ ಎಂದೂ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ
ರಾಜ್ಯದಲ್ಲಿ ಎಡಪಂಥೀಯ ಪಕ್ಷವಾದ ಸಿಪಿಎಂ ಅಧಿಕಾರಕ್ಕೆ ಬಂದ ನಂತರ ಇಂತಹ ಘಟನೆಗಳು ಸಂಭವಿಸುತ್ತಿವೆ. ಸಿಪಿಎಂನಿಂದ ಇಂತಹ ದುಷ್ಕೃತ್ಯಗಳಿಗೆ ಸಹಕಾರ ದೊರಕುತ್ತಿದೆ ಎಂದು ಹೇಳಿದ್ದಾರೆ. ಹಿಂಸಾಚಾರಕ್ಕೆ ಪರೋಕ್ಷವಾಗಿ ಸಹಕಾರ ನೀಡುತ್ತಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
Discussion about this post