ಬೆಂಗಳೂರು, ಸೆ.1: ಇಂದು ಗೋವನ್ನು ಮೃತ್ಯುವಿನೊಂದಿಗೆ ಜೋಡಿಸಿರುವುದೇ ಸಮಸ್ಯೆಗಳಿಗೆ ಕಾರಣವಾಗಿದ್ದು, ನಮ್ಮ ಜೀವನದೊಂದಿಗೆ ಗೋವನ್ನು ಜೋಡಿಸುವುದೇ ಪರಿಹಾರವಾಗಿದೆ. ಗೋವು ತನ್ನ ಜೀವಿತಾವಧಿಯಲ್ಲಿ ಪ್ರೀತಿಯಿಂದ ನೀಡುವ ವಸ್ತುಗಳನ್ನು ಬಳಸಿಕೊಂಡರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಗವ್ಯಾಧಾರಿತ ಕ್ಯಾನ್ಸರ್ ಚಿಕಿತ್ಸೆಯ ಕುರಿತು ಮಾತನಾಡಿದ ಶ್ರೀಗಳು, ಗೋವಿನ ಮೂತ್ರದಲ್ಲಿ ಚಿನ್ನವಿದೆ ಎಂದು ಸಂಶೋಧನೆ ಹೇಳಿದೆ, ಆದರೆ ಅಷ್ಟು ಮಾತ್ರವಲ್ಲದೆ, ಅಮೂಲ್ಯವಾದ ಜೀವವನ್ನು ಉಳಿಸುವ ಶಕ್ತಿಯೂ ಗೋಮೂತ್ರಕ್ಕಿದೆ. ಆಧುನಿಕ ಚಿಕಿತ್ಸಾಪದ್ಧತಿಗೆ ಹೋಲಿಸಿದರೆ ಗವ್ಯಾಧಾರಿತ ಕ್ಯಾನ್ಸರ್ ಚಿಕಿತ್ಸೆ ಎಲ್ಲರೀತಿಯಿಂದಲೂ ಉತ್ತಮ ಆಯ್ಕೆಯಾಗಿದೆ. ಕ್ಯಾನ್ಸರಿನಂತಹ ರೋಗ ಎದುರಾದಾಗಲೂ ನಮ್ಮ ಜೀವ ಉಳಿಸುವ ಶಕ್ತಿ ಉಳ್ಳ ಗೋವಿನ ಜೀವವನ್ನು ತೆಗೆಯುತ್ತಿರುವುದು ಮೂರ್ಖತನದ ಕಾರ್ಯ ಎಂದರು.
ಗೋವಿನ ಕುರಿತಾದ ಅಜ್ಞಾನವೇ ಗೋಹತ್ಯೆಗೆ ಕಾರಣವಾಗಿದೆ. ಗೋವಿನಿಂದ ಲಾಭವಿದೆ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಬೇಕಾದ ಕಾರ್ಯವಾಗಬೇಕಿದೆ. ಗೋವನ್ನು ನಾವು ಸಾಕುವುದಲ್ಲ, ಗವ್ಯೋತ್ಪನ್ನಗಳನ್ನು ಸರಿಯಾಗಿ ಬಳಸಿದರೆ ಗೋವೇ ನಮ್ಮನ್ನು ಸಾಕುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಮ.ನಿ.ಪ್ರ. ಶಿವಾನಂದ ಸ್ವಾಮಿಗಳು ಸಂತಸಂದೇಶ ನೀಡಿ, ಮೊದಲು ಗೋವಿನ ಕುರಿತಾಗಿ ಕಾಳಜಿಯನ್ನು ಬೆಳಸಿಕೊಳ್ಳಬೇಕು ಎಂದ ಶ್ರೀಗಳು ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಗೋಜಾಗೃತಿಯ ಆಂದೋಲನಕ್ಕೆ ನಮ್ಮ ಸಹಕಾರವಿದೆ ಎಂದು ಹೇಳಿದರು.
ವೃತ್ತಿಯಲ್ಲಿ ಲೆಕ್ಕಪರಿಶೋಧಕರಾದರೂ ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ವಿ. ಸುಧೀಂದ್ರನಾಥ ಹಾಗೂ ಕಾಸರಗೋಡಿನ ರಂಜಿತ್ ಪೆರಿಯಾ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಅವರುಗಳು ಗೋವುಗಳೋಂದಿಗೆ ತಮ್ಮ ಒಡನಾಟವನ್ನು ಹಂಚಿಕೊಂಡರು. ಶ್ರೀಭಾರತೀಪ್ರಕಾಶನವು ಹೊರತಂದ ಗೋಕಥಾ – ದೃಶ್ಯಮುದ್ರಿಕೆ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸಾನ್ನಿಧ್ಯವಹಿಸಿದ್ದ ಶ್ರೀಗಳು ಲೋಕಾರ್ಪಣೆ ಮಾಡಿದರು. ವಿಧಾನಸಭಾ ಸದಸ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ರೀಗಳಿಂದ ಆಶೀರ್ವಾದ ಪಡೆದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ರಾಗ – ಭಾವ – ತರಂಗ ಸಂಗೀತ ಕಾರ್ಯಕ್ರಮ ನಡೆಯಿತು.
ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಸ್ ಜಿ ಹೆಗಡೆ ಹಾಗೂ ವಿನಾಯಕ ಶಾಸ್ತ್ರಿಗಳು ಕಾರ್ಯಕ್ರಮವನ್ನು ನಿರೂಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
Discussion about this post