Read - 2 minutes
ಮೈಸೂರು, ಸೆ.30: ಅಕ್ಟೋಬರ್ 1 ರಿಂದ ದಸರಾ ಮಹೋತ್ಸವ ಆರಂಬವಾಗಲಿದ್ದು, ಸಾಂಸ್ಕೃತಿಕ ನಗರಿ ಮೈಸೂರು ನಗರ ನವಧುವಿನಂತೆ ಸಿಂಗಾರಗೊಂಡಿದೆ.
ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಜಗಮಗಿಸುವ ವಿದ್ಯುತ್ ದೀಪಗಳೂ ಅಳವಡಿಸಲಾಗಿದ್ದು , ಹಾಗೆಯೇ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಜಗಮಗಿಸುವ ವಿದ್ಯುತ್ ದೀಪಗಳ ಅಳವಡಿಸಲಾಗಿದ್ದು, ಹಾಗೆಯೇ ಪ್ರಮುಖ ರಸ್ತೆಯ ಗಿಡಮರ ಹಾಕಲಾಗಿರುವ ವಿದ್ಯುತ್ ದೀಪಗಳು ಆಕರ್ಷಣೀಯವಾಗಿವೆ.
ದಸರಾ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟ, ಮೈಸೂರು ಅರಮನೆ, ಫಲಪುಷ್ಪ ಪ್ರದರ್ಶನ ದಸರಾ ವಸ್ತು ಪ್ರದರ್ಶನ ಇವೆಲ್ಲವೂ ದಸರಾಗೆ ಜನರನ್ನು ಆಕರ್ಷಿಸಲು ಸಜ್ಜಾಗಿದೆ.
ನಾಳೆ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ 11.40ಕ್ಕೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ನಾಡೋಜ ಡಾ.ಚನ್ನವೀರ ಕಣವಿ ಅವರು ಈ ಬಾರಿಯ ಮೈಸೂರು ದಸರಾಕ್ಕೆ ಚಾಲನೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಸಚಿವರು, ಶಾಸಕರು ಉಪಸ್ಥಿತರಿರುವರು.
ಇದೇ ದಿನ ಸಂಜೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭವೂ ಮೈಸೂರು ಅರಮನೆ ಆವರಣದಲ್ಲಿ ಹಾಕಲಾಗಿರುವ ವಿಶೇಷ ವೇದಿಕೆಯಲ್ಲಿ ನೆರವೇರಲಿದ್ದು , ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ನಾಳೆ ಮಧ್ಯಾಹ್ನ 12.30ಕ್ಕೆ ಚಾಮುಂಡಿ ಬೆಟ್ಟದಲ್ಲಿ ಗೃಹ ಸಚಿವ ಡಾ.ಪರಮೇಶ್ವರ್ ಪೊಲೀಸ್ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸುವರು. ಚಾಮುಂಡಿ ಬೆಟ್ಟದಲ್ಲಿ ಕ್ರೀಡಾ ಖಾತೆ ನೀಡಿದ ಪ್ರಮೋದ್ ಮಧ್ವರಾಜ್ ದಸರಾ ಕ್ರೀಡಾಜ್ಯೋತಿಯನ್ನು ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ 1ಗಂಟೆಗೆ ನಗರದ ಕಲಾಮಂದಿರದಲ್ಲಿ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರು ಚಲನ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. 1.15ಕ್ಕೆ ವರುಣಾಕೆರೆಗಳ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಸಾಹಸ ಕ್ರೀಡೋತ್ಸವಕ್ಕೆ ಚಾಲನೆ ನೀಡುವರು.
ನಗರದ ಜೆ.ಕೆ ಮೈದಾನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಉದ್ಘಾಟಿಸಿ 1.30ಕ್ಕೆ ಮಹಿಳಾ ದಸರಾಕ್ಕೆ ಚಾಲನೆ ನೀಡುವರು.
ಆಹಾರ ಮೇಳವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಹಾರ ಇಲಾಖೆ ಖಾತೆ ಸಚಿವ ಯು.ಟಿ. ಖಾದರ್ 1.30ಕ್ಕೆ ಚಾಲನೆ ನೀಡಲಿದ್ದು , ಕುಸ್ತಿ ಪಂದ್ಯಾವಳಿಯನ್ನು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ದೇವರಾಜ್ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಉದ್ಘಾಟಿಸುವರು.
ಖಾಡಾ ಕಚೇರಿ ಆವರಣದಲ್ಲಿ ಮಧ್ಯಾಹ್ನ 3.30ಕ್ಕೆ ದಸರಾ ಪುಸ್ತಕ ಮೇಳವನ್ನು ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದು, 4 ಗಂಟೆಗೆ ರಾಜ್ಯ ದಸರಾ ಕ್ರೀಡಾಕೂಟಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸಚಿವ ಪ್ರಮೋದ ಮಧ್ವರಾಜ್ ಚಾಲನೆ ನೀಡುವರು.
ಕುಪ್ಪಣ್ಣ ಪಾರ್ಕ್ ನಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಸಂಜೆ 4 ಗಂಟೆಗೆ ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ ಉದ್ಘಾಟಿಸಲಿದ್ದು, ಸಹಕಾರ ಸಚಿವ ಮಹದೇವ ಪ್ರಸಾದ್ ರಂಗಾಯಣದಲ್ಲಿ ನಡೆಯುವ ರಂಗಾಯಣ ನಾಟಕೋತ್ಸವಕ್ಕೆ ಚಾಲನೆ ನೀಡುವರು.
ದಸರಾ ವಸ್ತು ಪ್ರದರ್ಶನವನ್ನು ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ ಖರ್ಗೆ 4.30ಕ್ಕೆ ಉದ್ಘಾಟಿಸುವರು. ದಸರಾ ದೀಪಾಲಂಕಾರವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು.
ಬಿಗಿಭದ್ರತೆ:
ಮೈಸೂರು ದಸರಾ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ಅಕ್ಟೋಬರ್ 1ರಂದು ಚಾಮುಂಡಿ ಬೆಟ್ಟದಲ್ಲಿ ದಸರಾಗೆ ಅಧಿಕೃತ ಚಾಲನೆ ದೊರೆಯಲಿದ್ದು 10ರಂದು ನಡೆಯಲಿರುವ ಜಂಬು ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಹಾಗಾಗಿ ಅ.1ರಿಂದ 11ರವರೆಗೆ ಚಾಮುಂಡಿ ಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ ಎಂದರು.
ಅಕ್ಟೋಬರ್ 11ರಂದು ಬನ್ನಿ ಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಈ ಬಾರಿ ಸಿಡಿಮದ್ದಿನ ಪ್ರದರ್ಶನ ಇರುವುದಿಲ್ಲ ಎಂದು ಹೇಳಿದರು.
ನಗರದ ಪ್ರಮುಖ ಸ್ಥಳಗಳಲ್ಲಿ 47 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. 4,814 ಮಂದಿ ಪೊಲೀಸರು , 1400 ಹೋಮ್ ಗಾರ್ಡ್, ಎಂಟು ಕಮಾಂಡೋ ಪಡೆಗಳು, 46 ಸಿಆರ್ ಪಿ ಮತ್ತು ಕೆಎಸ್ಆರ್ ಪಿ ಪಡೆಗಳು ಮತ್ತು 49 ಭದ್ರತಾ ಪಡೆಗಳು ಹಾಗೂ ಬಾಂಬ್ ತಪಾಸಣಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಮೆಟಲ್ ಡೆಟೆಕ್ಟಿವ್ ಯಂತ್ರಗಳನ್ನು ಅಳವಡಿಸುವುದರೊಂದಿಗೆ ನಗರಾದ್ಯಂತ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದರು.
ಉಸ್ತುವಾರಿ ಸಚಿವರಿಂದ ಭೇಟಿ:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಉದ್ಘಾಟಕರಾದ ಹಿರಿಯ ಸಾಹಿತಿ ಚೆನ್ನವೀರ ಕಣವಿ ಯವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಕಣವಿ, ಕಾವೇರಿ ವಿಚಾರದಲ್ಲಿ ಪ್ರಧಾನಿಗಳು ಮಧ್ಯೆ ಪ್ರವೇಶಿಸಬೇಕು. ಎರಡೂ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
Discussion about this post