ಕಾರ್ತಿಕ ಮಾಸ ಬಂತೆಂದರೆ ಪ್ರಕೃತಿಯಲ್ಲಿ ಎಲ್ಲೆಡೆಯೂ ಸಂಭ್ರಮವೇ. ಭೂಮಿ ತಾಯಿ ಹಸಿರುಟ್ಟು ನಿಂತು ಕಣ್ಣು ಹರಿಸಿದತ್ತಲೆಲ್ಲ ಸಮೃದ್ಧಿಯೇ ರೈತಾಪಿ ಜನ ತಮ್ಮ ಎಂದಿನ ಕೆಲಸಗಳನ್ನೆಲ್ಲಾ ಬದಿಗೊತ್ತಿ ದೀಪಗಳ ಹಬ್ಬ ದೀಪಾವಳಿಯನ್ನು ಬರಮಾಡಿಕೊಳ್ಳಲು ಇನ್ನಿಲ್ಲದ ಸಡಗರದಿಂದ ಓಡಾಡುವ ಕಾಲ ಗ್ರಾಮೀಣರ ಬದುಕಿನಲ್ಲಿ ಮೂರ‌್ನಾಲ್ಕು ದಿನ ನಿರಂತರವಾಗಿ ನಡೆಯುವ ಹಬ್ಬಕ್ಕೆ ಇನ್ನಿಲ್ಲದಷ್ಟು ಮಹತ್ವ ತೋರಣದ ತಳಿರಲ್ಲಿ, ಹೊಸಿದ ಹಣತೆಗಳಲ್ಲಿ, ಬಾಣ ಬಿರುಸುಗಳಲ್ಲಿ ನಲಿವು ಮೂಡಿ ಕತ್ತಲೆಯ ಪುಟಗಳಲ್ಲಿ ಬೆಳಕಿನಕ್ಷರಗಳಲ್ಲಿ, ದೀಪಗಳ ಸಂದೇಶ ಸಾರುವ ಈ ಹಬ್ಬದ ಆಚರಣೆಗಳು ನಾಡಿನ ಒಂದೊಂದು ಕಡೆ, ಒಂದೊಂದು ವಿಶಿಷ್ಟ ಆಚರನೆಯನ್ನು ಹೊಂದಿದೆ. ಈ ಆಚರಣೆಗಳು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆಗಟ್ಟುತ್ತವೆ. ನಮ್ಮ ಮಲೆನಾಡು ಪ್ರಾಂತ್ಯದ ಅಂತಹ ಒಂದು ವಿಶಿಷ್ಟ ಜಾನಪದ ಆಚರಣೆಯೇ ಅಂಟಿಗೆ-ಪಂಟಿಗೆ.
ಮಲೆನಾಡಿನಲ್ಲಿ ದೀಪಾವಳಿ ಬಂತೆದರೆ ಸಾಕು ಅಲ್ಲಲ್ಲಿ ಅಂಟಿಗೆ- ಪಂಟಿಗೆಯ ಏರುದನಿಯ ಹಾಡುಗಳು ಕಿವಿಗೆ ಬೀಳಲಾರಂಭಿಸುತ್ತವೆ.
ಮೂಳ್ಳಾಗೇ ಕಲ್ಲಾಗೇ ಬಂದೇವಯ್ಯ
ತಂದೇವಿ ದೀಪಾನ ಕೊಳ್ಳೀರಯ್ಯ
ಕತ್ತಲು ಹಾದ್ಯಾಗೆ ಬಂದೇವಯ್ಯ
ತಂದೇವಿ ದೀಪಾನ ಕೊಳ್ಳೀರಯ್ಯ!!
ಈ ಕಲೆಯಲ್ಲಿ ಕುಣಿತಕ್ಕಿಂತ ಹೆಚ್ಚಾಗಿ ಹಾಡುಗಳನ್ನು ಕಾಣಬಹುದು. ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಭಾಗಗಳಲ್ಲಿ ಈ ಆಚರಣೆಯು ಹೆಚ್ಚು ಪ್ರಚಲಿತ ಅಂಟಿಗೆ-ಪಂಟಿಕೆ ಹಬ್ಬ ಹಾಡುವುದು, ಜ್ಯೋತಿಕೊಡುವುದು ಅಡೀ-ಪಿಡೀ, ದೀಪ ನೀಡುವುದು, ಅವ್ಯಂಟಿಗ್ಯೊ- ಪವಂಟಿಗ್ಯೊ ಅಂಟಿ-ಸುಂಟಿ, ಬಿಂಗಿಪದ್ಯ ಬಲ್ಲಾಳಿ ಪದ್ಯ ಮುಂತಾದ ಹೆಸರುಗಳಿಂದ ಪ್ರಾದೇಶಿಕವಾಗಿ ಕರೆಯುತ್ತಾರೆ.
ಒಂದೇ ಸೀಮೆಯ ಅಂದರೆ ನಾಲ್ಕೆದು ಗ್ರಾಮದ ಯುವಕರೆಲ್ಲ ಸೇರಿ ತಂಡವನ್ನು ರಚಿಸುತ್ತಾರೆ. ಗ್ರಾಮದಲ್ಲಿರುವ ಮನೆಗಳಿಗನುಸಾರವಾಗಿ 10 ರಿಂದ 15 ಜನರ ತಂಡವನ್ನು ಕಟ್ಟೆ, ರಾತ್ರಿಯ ಹೊತ್ತು ಗ್ರಾಮದ ಗುಡಿಯಲ್ಲಿ ಪೂಜೆಯನ್ನು ಮಾಡಿ ದೇವರ ಮುಂದಿನ ದೀಪದಿಂದ ತಮ್ಮ ಹಣತೆಯ ದೀಪವನ್ನು ಹೆಣತ್ತಿಸಿಕೊಂಡು ಎಲ್ಲಾ ಗುಂಪುಗಳು ಒಟ್ಟಾಗಿ ಮೊದಲೇ ನಿರ್ಧರಿಸಿದಂತೆ ದೀಪ್- ದೀಪೋಳ್ಗೆ ಎಂದು ಕೂಗುತ್ತಾ ಗ್ರಾಮದ ಹಾದಿ ಹಿಡಿಯುತ್ತಾರೆ. ಈ ಗುಂಪಿನಲ್ಲಿ ಹಿಮ್ಮೇಳ ಮುಮ್ಮೇಳದ ಹಾಡುಗಾರರು, ಪರ ಊರಿನ ಹಾದಿ ತಿಳಿದವರು, ಸಂಭಾವನೆಯವರು, ದೀವಟಿಗೆ ಹಿಡಿಯುವವರು, ಮತ್ತು ಎಲ್ಲಾ ವಯೋಮಾನದವರು ಸೇರಿರುತ್ತಾರೆ. ದೀವರು, ಲಿಂಗಾಯತರು, ಗೌಡರು, ಬಂಟರು, ಹೆಚ್ಚಾಗಿ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.
ಅಂಟಿಗೆ-ಪಂಟಿಗೆಯ ಹಾಡುಗಳನ್ನು ಗಂಡಸರು ಮಾತ್ರವೇ ಹಾಡುತ್ತಾರೆ. ವೀರ, ಶೃಂಗಾರ, ಹಾಸ್ಯ ಕರುಣ, ನವರಸಭರಿತವಾದ ಈ ಹಾಡುಗಳು ಸರಳವಾದ ನಿರೂಪಣೆಗಳಿಂದ ಕೂಡಿರುತ್ತದೆ. ಮೇಳದವರೆಲ್ಲರೂ ಒಕ್ಕೊರಲಿನಿಂದ ಹಾಡುವುದರಿಂದ ಕೇಳುಗರಿಗೆ ಹೊಸತೆನಿಸುತ್ತದೆ.
ಪ್ರತಿ ಗುಂಪು ದೀಪ್- ದೀಪೋಳ್ಗೆ ಎಂದು ಪ್ರತಿ ಮನೆಯ ಮುಂದೆ ನಿಂತು ಕೂಗಿ ಹಾಡಿ ಮನೆಯ ಬಾಗಿಲನ್ನು ತೆರೆಸುತ್ತದೆ. ಬಾಗಿಲನ್ನು ತೆರೆದ ಮನೆಯವರು ಸಂಭ್ರಮದಿಂದ ದೀಪವನ್ನು ಹೊತ್ತಿಸಿಕೊಂಡು ಅದನ್ನು ದೇವರ ಮನೆಯಲ್ಲಿಟ್ಟು, ನಂತರ ಅಂಟಿಗೆ-ಪಂಟಿಗೆಯವರು ತಂದ ದೀಪಕ್ಕೆ ಎಣ್ಣೆಯನ್ನು ಹಾಕಿ ಕಾಣಿಕೆಯ ರೂಪದಲ್ಲಿ ದವಸ-ಧಾನ್ಯಗಳನ್ನು ಹಬ್ಬದ ಸಿಹಿ ತಿಂಡಿಯನ್ನು ಹಣವನ್ನು ನೀಡುವರು, ಗುಂಪಿನ ಯಜಮಾನ ಆ ಮನೆಯ ಜನ- ಜಾನುವಾರು, ಬೆಳೆ-ಬೇಸಾಯ, ಸಮೃದ್ಧವಾಗಿರಲೆಂದು ಹಾರೈಸಿ ಮನೆಯ ಹೊಸ್ತಿಲ ಬಾಗಿಲಿಗೆ ವಂದಿಸಿ ಮುಂದಿನ ಮನೆಗೆ ದೀಪವನ್ನು ನೀಡಲು ಹೊರಡುತ್ತಾರೆ. ಪ್ರತಿ ಮನೆಗೂ ಬೆಳಕನ್ನು ನೀಡುವ ಈ ಆಚರಣೆಯು ಒಂದು ವಿಶಿಷ್ಟವಾಗಿದೆ.
ಹೀಗೆ ಅಂಟಿಗೆ-ಪಂಟಿಗೆಯವರು ಮೂರು ರಾತ್ರಿ ಹಾಡುತ್ತಾರೆ. ಮೂರು ದಿನವಾದ ಮೇಲೆ ಆ ಬತ್ತಿಯನ್ನು ಹಣತೆಯಿಂದ ತೆಗೆದು ಹಲಸಿನ ಮರದ ಕೊಂಬೆಯ ಮೇಲಿಟ್ಟು ಅದಕ್ಕೆ ಕೈ ಮುಗಿಯುತ್ತಾರೆ.
ಗ್ರಾಮಸ್ಥರು ನೀಡಿದ ಹಣವನ್ನು ಸಂಗ್ರಹಿಸಿ ಅಂಟಿಗೆ-ಪಂಟಿಗೆ ಯುವಕರು ವನಭೋಜನವನ್ನು ಏರ್ಪಡಿಸುತ್ತಾರೆ. ಹೀಗೆ ಈ ಒಂದು ವಿಶಿಷ್ಟ ಆಚರಣೆ ಮುಕ್ತಾಯವಾಗುತ್ತದೆ. ಇಂದು ಈ ಆಚರಣೆ ಕೂಡ ಕಣ್ಮರೆಯಾಗುತ್ತಿದೆ.
ನಗರದ ಯಾಂತ್ರಿಕ ಬದುಕಿನಲ್ಲಿ ನಮ್ಮೆಲ್ಲರ ಮನೆಗೂ ಅಂಟಿಗೆ-ಪಂಟಿಗೆ ತಂಡ ಬಂದರೆ ಹೇಗಿರುತ್ತೆ? ನಗರದ ಯಾಂತ್ರಿಕ ಬದುಕಿನಲ್ಲಿ ಸಡಗರವಿಲ್ಲದೆ ಹಬ್ಬವನ್ನು ಮಾಡುತ್ತಿದ್ದೇವೆ. ಇಂದಿನ ದೀಪಾವಳಿಯನ್ನು ನೀವು ಕೂಡ ಸಡಗರ ಸಂಭ್ರಮದಿಂದ ಆಚರಿಸಬಹುದು. ಏಕೆಂದರೆ ನಗರದಲ್ಲೂ ಕೂಡ ಅಂಟಿಗೆ-ಪಂಟಿಗೆಯ ಎರಡು ತಂಡಗಳು ಊರಾಡುತ್ತವೆ. ಶ್ರೀ ಎಚ್.ಎಲ್. ನಾಗೇಗೌಡರ ಕನಸಿನ ಕೂಸಾದ ಜಾನಪದ ಪರಿಷತ್ತಿನ ಜಿಲ್ಲಾ ಶಾಖೆಯಾದ ಜಾನಪದ ಪರಿಷತ್ತು ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾಮಠ ಶಿವಮೊಗ್ಗ ಹಾಗೂ ಸಾಂಸ್ಕೃತಿಕ ವೇದಿಕೆ ಶಿವಮೊಗ್ಗ ಇವರೆಲ್ಲರ ಸಹಯೋಗದಿಂದ ನಗರವಾಸಿಗಳಿಗೆ ಸಂಭ್ರಮ ಸಡಗರ ಲಭ್ಯವಾಗಲಿದೆ. ಅಂಟಿಗೆ-ಪಂಟಿಗೆಯವರು ನಿಮ್ಮ ಮನೆಗಳಿಗೂ ಬರಲಿದ್ದಾರೆ. ನೀವು ಈ ವಿಶಿಷ್ಟ ಆಚರಣೆಯಲ್ಲಿ ಪಾಲ್ಗೊಳ್ಳಿ.
ಬೆಳಕು ಬಾಳುತಿರಲಿ ಬಾಳು ಬೆಳಕಾಗಿರಲಿ
ಹೂವು ಮುಂಜಾವು ತೆರನಾಗಿ-ಬಾಳಿರಲಿ
ಬೆಳಕಿಗರಳುವ ಹಣವಾಗಿ
ದೀಪೋಳಿ ದೀಪೋಳ್ಗ್ಳೋ…..( ದೀಪೋಳಿ ದೀಪೋಳ್ಗ್ಳೋ)
ಲೇಖಕರು: ಕವಿತಾ ಸಾಗರ














