ಕಲಾಂ ಅನ್ನುವ ಹೆಸರೇ ನಮ್ಮ ಹೃದಯ ದಲ್ಲಿ ಹೊಸ ಸ್ಫೂರ್ತಿಯನ್ನು ತುಂಬುತ್ತದೆ. ಇದಕ್ಕೆ ಕಾರಣವೇನೆಂದು ನಾವು ಪ್ರತ್ಯೇಕವಾಗಿ ಯೋಚಿಸಬೇಕಾಗಿಲ್ಲ. ಏಕೆಂದರೆ ಆ ವ್ಯಕ್ತಿ ಬದುಕಿದ್ದೇ ಹಾಗೆ. ೭ ಮಕ್ಕಳಿದ್ದ ತುಂಬು ಸಂಸಾರದಲ್ಲಿ ಕೊನೆಯವರಾಗಿ ಜನಿಸಿದ್ದ ಕಲಾಂ ಪ್ರತಿಷ್ಠಿತ ಮನೆತನದವರೇನೂ ಅಲ್ಲ. ತಮಿಳುನಾಡಿನ ದೈವಭೂಮಿ ಎಂದು ಕರೆಸಿಕೊಳ್ಳುವ ರಾಮೇಶ್ವರಂ ನ ಒಂದು ಪುಟ್ಟ ಗ್ರಾಮ ದ ಗುಡಿಸಲೊಂದರಲ್ಲಿ ಕಲಾಂ ಹುಟ್ಟಿದರು. ಕಲಾಂ ತಂದೆ ಜನರನ್ನು ಸಾಗಿಸುವ ದೋಣಿಯನ್ನು ನಿರ್ವಹಿಸುವ ಕೆಲಸ ಮಾಡುತ್ತಿದ್ದರು. ಅಷ್ಟು ದೊಡ್ಡ ಸಂಸಾರಕ್ಕೆ ಅದೊಂದೇ ಆದಾಯದ ಆಸರೆಯಾಗಿತ್ತು.
ಹೌದು! ಕಲಾಂ ಬದುಕಿನಲ್ಲಿ ಬಡತನವಿತ್ತು. ಅದು ಬರಿಯ ಗರಿಗರಿ ನೋಟುಗಳಿಗೆ ಮಾತ್ರ. ಅವರ ಹೃದಯ ವೈಶಾಲ್ಯತೆ ಹಾಗೂ ಬುದ್ದಿಮತ್ತೆಗೆ ಅಪಾರ ಶ್ರೀಮಂತಿಕೆಯಿತ್ತು. ಸಿನೆಮಾಗಳಲ್ಲಿ ನಾವು ಬಹಳಷ್ಟು ನೋಡುವಂತೆ ಸರಿಯಾದ ಮೂಲಸೌಕರ್ಯ ವೂ ಇಲ್ಲದ ಪುಟ್ಟ ಗ್ರಾಮ ವೊಂದರಲ್ಲಿ ಶುರುವಾದ ಕಲಾಂ ಎಂಬ ಹುಡುಗನ ಜೀವನ ಪ್ರಯಾಣ ರಾಷ್ಟ್ರಪತಿ ಭವನದವರೆಗೂ ತಲುಪಿದ್ದು ಒಂದು ರೋಮಾಂಚನಕಾರಿ ಕಥೆ. ಅದು ಅದೃಷ್ಟ ಲಕ್ಷ್ಮೀ ಯ ಧನಲಕ್ಷ್ಮಿಯ ವರವೂ ಇರಲಿಲ್ಲ. ಅವರ ಜೊತೆಗಿದ್ದದ್ದು ಬರೀ ಸರಸ್ವತಿ ಮಾತ್ರ.
ಸಾಮಾನ್ಯ ವಾಗಿ ನಮಗೆ ಪರಿಸ್ಥಿತಿ ಗಳು ವಿರುದ್ದವಾದಾಗ, ಅದೃಷ್ಟ ಕೈಕೊಟ್ಟಾಗ ಹತಾಶರಾಗಿ ಕುಳಿತುಬಿಡುತ್ತೇವೆ. ಇಂದಿನ ಯುವಮನಸ್ಸುಗಳು ಆತ್ಮಹತ್ಯೆ ಯಂತಹ ನಿರ್ಧಾರ ಕ್ಕೂ ಬರುತ್ತವೆ. ಇಂತಹ ಮನಸ್ಥಿತಿ ಯವರಿಗೆಲ್ಲ ಕಲಾಂರ ಬದುಕೇ ಒಂದು ಪಾಠ. ತಾನಿರುವುದು ಗುಡಿಸಲಿನಲ್ಲಿ ಎಂದು ಆತ ಎಂದೂ ಚಿಂತಿಸಲಿಲ್ಲ, ಬದಲಾಗಿ ಬಾನಲ್ಲಿ ಸ್ವಚ್ಛವಾಗಿ ಹಾರುತ್ತಿದ್ದ ಹಕ್ಕಿಗಳನ್ನು ಕಂಡು ತಾನೂ ಹಾಗೇ ಹಾರಬೇಕೆಂಬ ಕನಸು ಕಂಡ. ಮನೆಯಲ್ಲಿ ಹಣಕಾಸಿನ ಸಮಸ್ಯೆ ಯಿದೆ, ಓದು ಹೇಗೆ ಮುಂದುವರಿಸಲಿ ಎಂದು ಕುಸಿಯಲಿಲ್ಲ, ಬದಲಾಗಿ ಅಪ್ಪನಿಗೆ ಸಹಕಾರಿ ಯಾವ ಉತ್ತರ ನೆ ಎಂದುಕೊಂಡು ಮನೆಮನೆಗೆ ಪೇಪರ್ ಹಾಕುವ ಕೆಲಸ ಮಾಡಿದ.
ಕಲಾಂ ಆಶಾವಾದಿ ಮಾತ್ರವಲ್ಲ ಪರಿಶ್ರಮಿ ಮತ್ತು ಛಲವಾದಿಯೂ ಆಗಿದ್ದರು.ಕಾಲೇಜಿನ ಶಿಕ್ಷಣ ವನ್ನೆಲ್ಲ ಕಲಾಂ ತಮಗೆ ಸಿಗುತ್ತಿದ್ದ ವಿದ್ಯಾರ್ಥಿ ವಿದ್ಯಾರ್ಥಿವೇತನ ದಿಂದಲೇ ಪೊರೈಸಿದ್ದರು. ಕಾಲೇಜು ದಿನಗಳಲ್ಲಿ ಒಮ್ಮೆ ಪ್ರಾಜೆಕ್ಟ್ ಸರಿಯಾದ ಸಮಯಕ್ಕೆ ಒಪ್ಪಿಸಲು ಅಸಾಧ್ಯವಾದಾಗ ಅವರ ಪ್ರೊಫೆಸರ್ ಅವರನ್ನು ಕರೆದು ಗದರಿದ್ದರು. ಇನ್ನು ೩ ದಿನಗಳಲ್ಲಿ ನೀನಿದನ್ನು ಪೂರ್ಣಗೊಳಿಸದೇ ಇದ್ದಲ್ಲಿ ನಿನ್ನ ವಿದ್ಯಾರ್ಥಿ ವಿದ್ಯಾರ್ಥಿವೇತನ ಕಡಿತಮಾಡುತ್ತೇವೆ ಅಂದುಬಿಟ್ಟರು. ಕಲಾಂ ಗೀಗ ಅಗ್ನಿಪರೀಕ್ಷೆ, ಈ ಕೆಲಸ ಪೂರ್ಣಗೊಳಿಸದೇ ಇದ್ದಲ್ಲಿ ತನ್ನ ತನ್ನ ವಿದ್ಯಾರ್ಥಿವೇತನದ ಜೊತೆಗೆ ಓದು ಕೂಡ ನಿಂತು ಹೋಗುತ್ತದೆ. ಪರೀಕ್ಷೆ ಬರೆದು ಫಲಿತಾಂಶ ಬರುವ ಮುನ್ನವೇ ಖಿನ್ನತೆ ಗೊಳಗಾಗುವ ಇಂದಿನ ವಿದ್ಯಾರ್ಥಿಗಳು ಈ ಘಟನೆಯನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಊಟ ನಿದ್ದೆ ಎಲ್ಲ ಮರೆತು ಕಲಾಂ ಕೆಲಸ ಶುರುವಿಟ್ಟುಕೊಂಡರು. ಸತತ ಮೂರು ದಿನಗಳು ಕಲಾಂ ಡ್ರಾಯಿಂಗ್ ರೂಮ್ ಬಿಟ್ಟು ಕದಲಲಿಲ್ಲ. ಕೊನೆಗೂ ಕ್ಲಪ್ತ ಸಮಯಕ್ಕೆ ಕೆಲಸ ಮುಗಿಸಿದ ಕಲಾಂ ಅದನ್ನು ಪ್ರೊಫೆಸರ್ ಗೆ ಒಪ್ಪಿಸಿದರು.
ಡ್ರಾಯಿಂಗ್ ಕಂಡು ಸಂತೋಷದಿಂದ ಬೀಗಿದ ಪ್ರೊಫೆಸರ್ ಶ್ರೀನಿವಾಸನ್ ಸರ್ ಕಲಾಂ ರನ್ನು ಮನದುಂಬಿ ಹರಸಿದರು. ” ನನಗೂ ಗೊತ್ತಿತ್ತು, ನಾನು ನಿನಗೆ ವಹಿಸಿರುವುದು ಬಲು ಕಷ್ಟ ಸಾಧ್ಯವಾದ ಕೆಲಸ. ಅಂತಹ ಒತ್ತಡದಲ್ಲೂ ಅತ್ಯುತ್ತಮ ನಿರ್ವಹಣೆ ತೋರಿದ್ದೀಯ. ನಿನಗೆ ಉಜ್ವಲವಾದ ಭವಿಷ್ಯ ವಿದೆ. ಎಂದು ಬೆನ್ನುತಟ್ಟಿದರು.
ಕಲಾಂ ಇಚ್ಚಾಶಕ್ತಿ ಹಾಗೂ ಆಸಕ್ತಿಗಳು ಸದಾ ಗುರಿಯನ್ನು ಸೇರುವಲ್ಲಿಯವರೆಗೆ ಚಿಂತಿಸುತ್ತಿತ್ತಾ ಇದ್ದುದರಿಂದ, ಯಾವ ಸಮಸ್ಯಗಳಿಗೂ ಅವರ ಕನಸನ್ನು ಕಿತ್ತುಕೊಳ್ಲುವ ತಾಕತ್ತಿರಲಿಲ್ಲ. ಹೈಸ್ಕೂಲ್ ಶಿಕ್ಷಣ ದ ಬಳಿಕ ೫೩ಕಿಮೀ. ದೂರದ ಸೈಂಟ್ ಜೋಸೆಫ್ ಕಾಲೇಜು ಸೇರಿ ಬಿಎಸ್ಸಿ ಅಧ್ಯಯನ ಮುಂದುವರಿಸಿದರು. ಅದರೂ ಅವರ ಮನಸ್ಸು ಇಂಜಿನಿಯರಿಂಗ್ ಕಡೆಗೆ ಸೆಳೆಯುತ್ತಿತ್ತು. ಬಹಳ ವಿಚಾರ ಮಾಡಿದ ನಂತರ ತಾವು ವೈಮಾನಿಕ ಅಧ್ಯಯನ ದಲ್ಲಿ ಮುಂದುವರಿಯುವುದೆಂದು ನಿರ್ಧರಿಸಿ, ಮದರಾಸು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗೆ ಸೇರಿಕೊಂಡರು. ವಿದ್ಯಾರ್ಥಿವೇತನ ದೊರೆಯುತ್ತಿದ್ದರೂ ಅದು ಅವರ ಶಿಕ್ಷಣಕ್ಕೆ ಸಾಲುತ್ತಿರಲಿಲ್ಲ. ಇದಕ್ಕಾಗಿ ಹಣ ಹೊಂದಿಸಲು ಬಹಳ ಕಷ್ಟ ಪಟ್ಟರು. ಇದನ್ನು ಕಂಡ ಅವರ ಅಕ್ಕ ಜೊಹರಾ ತಮ್ಮ ಚಿನ್ನದ ಸರ, ಉಂಗುರವನ್ನು ಬ್ಯಾಂಕಿನಲ್ಲಿ ಅಡವಿಟ್ಟು ಹಣ ಹೊಂದಿಸಿ ಕೊಟ್ಟರು. ಆಕೆಯ ಈ ಉದಾರ ಮನಸ್ಸೇ ಮುಂದೆ ಕಲಾಂ ಸಾಧನೆಯ ಶಿಖರವೇರಲು ಸಹಕಾರಿಯಾಯಿತು.
ಕಾಲೇಜಿನಿಂದ ಹೊರಬಂದ ಕಲಾಂ ಎಚ್ಎಲ್ ಗೆ ಸೇರಿಕೊಂಡರು. ಸಾಗಿ ಬಂದ ದಾರಿ ಮರೆಯದ ಕಲಾಂ, ಅಡವಿಟ್ಟಿದ್ದ ತನ್ನ ಅಕ್ಕನ ಚಿನ್ನವನ್ನು ಬಿಡಿಸಿಕೊಟ್ಟು ಕರ್ತವ್ಯಪ್ರಜ್ಞೆ ಮೆರೆದರು. ಮುಂದಿನದೆಲ್ಲ ಇತಿಹಾಸ,
ಎಚ್ಎಲ್ ಬಳಿಕ ರಕ್ಷಣಾ ಸಚಿವಾಲಯದಲ್ಲಿ ಸೀನಿಯರ್ ಅಸಿಸ್ಟೆಂಟ್ ಆಗಿ, ಡಿ.ಆರ್.ಡಿ.ಓ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದರು. ಭಾರತದ ಬಾಹ್ಯಾಕಾಶ ಉಪಗ್ರಹ ಉಡಾವಣೆ ಮತ್ತು ರಾಕೆಟ್ ತಯಾರಿಯಲ್ಲಿ ಇವರ ಕೊಡುಗೆ ಅನನ್ಯವಾದುದು. ೯ ವರ್ಷಗಳ ಕಾಲ ಭಾರತದ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಪೋಖ್ರಾನ್ ಅಣುಪರೀಕ್ಷೆಯಲ್ಲಿ ಕಲಾಂ ಪಾತ್ರ ಬಹಳ ದೊಡ್ಡದು. ಇವರ ಅದ್ಭುತ ಸೇವೆಗಾಗಿ ಪದ್ಮ ಪ್ರಶಸ್ತಿ ಪುರಸ್ಕಾರಗಳು, ೩೦ ವಿಶ್ವ ವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಗಳು ಸಂದವು. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯುವ ಮೂಲಕ “ಭಾರತದ ಕ್ಷಿಪಣಿ ಜನಕ ” ಅನ್ನುವ ಅಭಿದಾನಕ್ಕೆ ಪಾತ್ರರಾದರು. ಇವರು ದೇಶಕ್ಕೆ ಕೊಟ್ಟ ಅತ್ಯುನ್ನತ ಕೊಡುಗೆಗಾಗಿ ದೇಶದ ಶ್ರೇಷ್ಟ ನಾಗರಿಕ ಪುರಸ್ಕಾರ “ಭಾರತ ರತ್ನ” ಒಲಿದು ಬಂತು.
ಭಾರತ ರತ್ನ ಪ್ರಶಸ್ತಿ ಸ್ವೀಕರಿಸುವಾಗ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡ ಒಂದು ಘಟನೆ ನಮ್ಮೆಲ್ಲರ ಚಿಂತನೆಯ ದಿಕ್ಕನ್ನೇ ಬದಲಿಸುವಂತದ್ದು. ಕಲಾಂ ಶಾಲಾ ದಿನಗಳಲ್ಲಿ ರಾಮನಾಥನೆಮಬ ಸ್ನೇಹಿತ ನಿದ್ದ. ಹೊಸದಾಗಿ ಬಂದ ಶಿಕ್ಷಕರೊಬ್ಬರು ಒಟ್ಟೊಟ್ಟಿಗೇ ಕುಳಿತಿದ್ದ ಪುರೋಹಿತರ ಮಗ ರಾಮನಾಥ ಹಾಗೂ ಕಲಾಂ ನನ್ನು ಕಂಡು ಗಾಬರಿಗೊಂಡು ಕಲಾಂ ನನ್ನು ಗದರಿ ಬೇರೆಡೆ ಕುಳ್ಳಿರಿಸಿದರು. ಇಬ್ಬರು ಬಾಲಕರ ಕಣ್ಣುಗಳೂ ತುಂಬಿ ಬಂದಿದ್ದವು.ನಂತರ ಘಟನೆ ಬಗ್ಗೆ ತಿಳಿದ ರಾಮನಾಥನ ಪುರೋಹಿತ ತಂದೆ ಆ ಶಿಕ್ಷಕನನ್ನು ಗದರಿದರು. ಕ್ಷಮೆ ಕೇಳಬೇಕು ಇಲ್ಲವೇ ಊರು ತೊರೆಯಬೇಕೆಂದರು. ಕೊನೆಗೂ ಆ ಶಿಕ್ಷಕ ಕ್ಷಮೆ ಕೇಳಬೇಕಾಯಿತು.
“ರಾಮನಾಥನ ಅಂದಿನ ಕಣ್ಣೀರು ತುಂಬಿದ್ದ ಕಣ್ಣುಗಳು ಇಂದಿಗೂ ನನ್ನ ಕಣ್ಣ ಮುಂದಿವೆ. ಇಂದಿಗೂ ಅದೇ ನೆನಪಿನಲ್ಲಿ ಬದುಕುತ್ತಿದ್ದೇನೆ. ನಮ್ಮೆಲ್ಲರಿಗೂ ಭಗವದ್ಗೀತೆ-ಕುರಾನ್ ಬಹಳ ದೊಡ್ಡದು, ಆದರೆ ಹಿಂದೂಸ್ತಾನ ಅದಕ್ಕಿಂತ ಮಿಗಿಲು.” ಎನ್ನುವ ಸಂದೇಶ ಕೊಟ್ಟಿದ್ದರು.
ಹೀಗೆ ಬದುಕಿದ್ದಾಗಲೇ ದಂತಕಥೆಯಾಗಿ, ಶಾಲಾ ಮಕ್ಕಳಿಗೆ ಪಾಠವಾಗಿ, ನಮ್ಮೆಲ್ಲರ ನೆಚ್ಚಿನ ಮೇಸ್ಟ್ರೂ ಆಗಿ, ಜನರ ಅಧ್ಯಕ್ಷ ರಾಗಿ ಮೆರೆದ ಕಲಾಂ ಪಂಚಭೂತಗಳಲ್ಲಿ ಲೀನರಾಗಿ ವರುಷ ಕಳೆದರೂ ಅವರ ನೆನಪು ಎದೆಯಾಳದಲ್ಲಿ ಹಸಿರಾಗಿದೆ.
ನಿಜಕ್ಕೂ ಕಲಾಂ ಅಂದರೆ….. ಅದ್ಭುತ ಕನಸುಗಾರ, ಸ್ಫೂರ್ತಿಯ ಕಿರಣ, ಸರಸ್ವತೀ ಪುತ್ರ, ಸರಳತೆಯ ಮೂರ್ತಿ, ಅಪ್ಪಟ ದೇಶಪ್ರೇಮಿ, ಉತ್ಸಾದ ಗಣಿ, ಎಲ್ಲರೊಳಗೊಂದಾಗುವ ಕಲಾಂ ಮೇಷ್ಟ್ರು… ಸರ್.., ನೀವು ನಮ್ಮನ್ನು ಅಗಲಿ ಹೋಗಿಲ್ಲ, ಏಕೆಂದರೆ ನನ್ನ ದೇಶದ ಪ್ರತೀ ಕನಸಿನಲ್ಲಿ ಪ್ರತೀ ಮನಸಿನಲ್ಲಿ ನೀವಿದ್ದೀರಿ. ಆದರೂ ದೇಶಭಕ್ತಿಯ, ಇಚ್ಚಾಶಕ್ತಿಯ ಪಾಠ ಹೇಳಲು ಮತ್ತೊಮ್ಮೆ ಹುಟ್ಟಿ ಬರುವಿರಾ..?
—–>
ಲೇಖಕರು: ಅಕ್ಷತಾ ಬಜಪೆ
Discussion about this post