ಚಂಡೀಘಡ್, ಆ.31: ಹರಿಯಾಣದಲ್ಲಿ ನಡೆದಿರುವ ಭಾರೀ ಭೂ ಒತ್ತುವರಿ ಹಾಗೂ ಹಗರಣ ಕುರಿತಂತೆ ವಿಚಾರಣೆಗಾಗಿ ನೇಮಕ ಮಾಡಲಾಗಿದ್ದ ಓರ್ವ ನ್ಯಾಯಾಧೀಶರ ಆಯೋಗ ಇಂದು ತನ್ನ ವರದಿಯನ್ನು ಸಂಪೂರ್ಣಗೊಳಿಸಿದ್ದು, ನ್ಯಾ.ಎಸ್.ಎನ್. ಧಿನಾಗರ್ ಅವರು ಹರಿಯಾಣ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಇಲ್ಲಿನ ಗುರ್ಗಾಂವ್ ಸೇರಿದಂತೆ ಹಲವೆಡೆ ಭಾರೀ ಪ್ರಮಾಣದಲ್ಲಿ ಭೂ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ಇದರಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಪ್ರಮುಖರು ಎಂದು ದೂರಲಾಗಿದೆ.
ಈ ಕುರಿತಂತೆ ಇಂದು 182 ಪುಟಗಳ ವರದಿಯಲ್ಲಿ ಆಯೋಗ ಸಲ್ಲಿಸಿದ್ದು, ಇದರಲ್ಲಿ ಅಂದಿನ ಮುಖ್ಯಮಂತ್ರಿ ಹೂಡಾ ಕಾನೂನಿಗೆ ವಿರುದ್ಧವಾಗಿ ಪರವಾನಗಿ ನೀಡಿದ್ದಾರೆ. ತಾತ್ಕಾಲಿಕ ಆಧಾರದಲ್ಲಿ ಪರವಾನಗಿ ನೀಡಲಾಗಿದ್ದು, ಇದರಲ್ಲಿ ರಾಜಕೀಯ ಪ್ರಭಾವವನ್ನು ಬಳಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಿಬಿಐ ತನಿಖೆ ನಡೆಸಬೇಕು ಎಂದು ನ್ಯಾ.ಧಿನಾಗರ್ ವರದಿಯಲ್ಲಿ ಒತ್ತಾಯಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಕುರಿತಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಅವರಿಗೆ ವರದಿ ಸಲ್ಲಿಸಿ ಮಾತನಾಡಿರುವ ಧಿನಾಗರ್, ಈ ವರದಿ ಕುರಿತು ಹೆಚ್ಚಿನ ವಿಚಾರವನ್ನು ಈಗಲೇ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ, ಭೂ ಪರವಾನಗಿ ನೀಡುವ ವೇಳೆ ಕಾನೂನು ಉಲ್ಲಂಘನೆಯಾಗಿದ್ದು, ಅಕ್ರಮ ನಡೆದಿರುವುದು ಸತ್ಯ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ಅಧಿಕಾರದಲ್ಲಿದ್ದ ಎಲ್ಲರೂ ಹೊಣೆಗಾರರು ಎಂದಿದ್ದಾರೆ. ಈ ವಿಚಾರದಲ್ಲಿ ಸರ್ಕಾರದ ಒಳಗಿದ್ದ ಹಾಗೂ ಖಾಸಗೀ ವ್ಯಕ್ತಿ ಮತ್ತು ಸಂಸ್ಥೆಗಳೂ ಸಹ ಇದರಲ್ಲಿ ಭಾಗೀದಾರರು ಎಂದಿದ್ದಾರೆ.
ಈ ಪ್ರಕರಣ ಕುರಿತಂತೆ ವಿಚಾರಣೆ ನಡೆಸಲು ಹರಿಯಾಣ ಸರ್ಕಾರ ಆಯೋಗ ರಚನೆ ಮಾಡಿತ್ತು. ಜೂನ್ 30ಕ್ಕೆ ಇದರ ಅವಧಿ ಮುಕ್ತಾಯವಾಗಿತ್ತು. ಆದರೆ, ೮ ವಾರಗಳ ಕಾಲವಕಾಶ ಕೋರಿದ್ದ ಆಯೋಗ ಇಂದು ತನ್ನ ವರದಿಯನ್ನು ಹರಿಯಾಣ ಸರ್ಕಾರಕ್ಕೆ ಸಲ್ಲಿಸಿದೆ.
ಹರಿಯಾಣದಲ್ಲಿ ನಡೆದಿರುವ ಎಲ್ಲ ಭೂ ಅಕ್ರಮಗಳ ಕುರಿತಂತೆ ತನಿಖೆ ನಡೆಸಲು ಈ ಆಯೋಗವನ್ನು ರಚಿಸಲಾಗಿತ್ತು. ಇದರಲ್ಲಿ ಪ್ರಮುಖವಾಗಿ ರಾಬರ್ಟ್ ವಾದ್ರಾ ನಡೆಸಿದ್ದಾರೆ ಎಂದು ಆರೋಪಿಸಲಾಗಿರುವ ಅಕ್ರಮಗಳ ಕುರಿತಾಗಿ ತನಿಖೆ ನಡೆಸುವುದು ಮುಖ್ಯವಾಗಿತ್ತು.
ಗುರ್ಗಾಂವ್‌ನ ಸೆಕ್ಟರ್ 83 ಸೇರಿದಂತೆ ಇತರೆ ಪ್ರಮುಖ ಸ್ಥಳಗಳಲ್ಲಿ ವಾಣಿಜ್ಯೀಕೃತ ಕಟ್ಟಡ ಹಾಗೂ ಬಡಾವಣೆ ಅಭಿವೃದ್ಧಿಗಾಗಿ ವಾದ್ರಾ ಅವರ ಕಂಪೆನಿಗೆ ಪರವಾನಿ ನೀಡಲಾಗಿತ್ತೆ, ನೀಡಲಾಗಿದ್ದರೆ ಅದು ಹೇಗೆ ಎಂಬ ಕುರಿತಾಗಿ ಆಯೋಗ ವಿಚಾರಣೆ ನಡೆಸಿದೆ.
Discussion about this post